Advertisement

ಆ್ಯಪಲ್‌ ಬಾರಿ ರೈತ ಬೆಳೆದ “ಭಾರಿ’

01:04 PM Jan 02, 2020 | Suhan S |

ನರಗುಂದ: ಸಕಾಲಕ್ಕೆ ಮಳೆಯಿಲ್ಲದೇ ರೈತರು ಕೃಷಿಯಿಂದ ವಿಮುಖವಾಗುತ್ತಿರುವ ಬೆನ್ನಲ್ಲೇ ಇಲ್ಲೊಬ್ಬ ಯುವ ರೈತ ಬಯಲು ಸೀಮೆಗೆ ಅಪರೂಪವೆನಿಸಿದ “ಆ್ಯಪಲ್‌ ಬಾರಿ’ ಬೆಳೆದು ಕೃಷಿಕರಿಗೆ ಮಾದರಿಯಾಗಿದ್ದಾನೆ.

Advertisement

ತಾಲೂಕಿನ ಸಂಕದಾಳ ಗ್ರಾಮದ ಬಿಎ ಪದವೀಧರ, ಯುವ ರೈತ ರುದ್ರಗೌಡ ಹನಮಂತಗೌಡ ಲಿಂಗನಗೌಡ್ರ ಅವರು, ಗ್ರಾಮದ ಮುಳ್ಳೂರ ಒಳರಸ್ತೆಗೆ ಹೊಂದಿಕೊಂಡ ಜಮೀನಿನ 1 ಎಕರೆ ಪ್ರದೇಶದಲ್ಲಿ ಆ್ಯಪಲ್‌ ಬಾರಿ ಬೆಳೆದು ಗಮನ ಸೆಳೆದಿದ್ದಾನೆ. ಕೃಷಿಹೊಂಡದಿಂದ ಹನಿ ನೀರಾವರಿ ಮಾಡುವ ಮೂಲಕ ಬೆಳೆಗೆ ನೀರುಣಿಸಿದ್ದಾನೆ. ಶೆಗಣಿ ಗೊಬ್ಬರ(ಸಾವಯವ) ಬಳಸಿದ್ದಾನೆ. ನವಲಗುಂದ ತಾಲೂಕು ಮಣಕವಾಡದ ಚಿಕ್ಕಪ್ಪ ಬಿ.ಸಿ. ಭರಮಗೌಡ್ರ ಅವರ ಪ್ರೇರಣೆ ಹಾಗೂ ಕೃಷಿ, ತೋಟಗಾರಿಕೆ ಅಧಿಕಾರಿಗಳ ಸಲಹೆ ಪಡೆದಿರುವ ರುದ್ರಗೌಡ ಅವರು 2018ರಲ್ಲಿ ಬೆಳಗಾವಿ ಜಿಲ್ಲೆ ಕಾಗವಾಡದ ಮಿರಾಕಲ್‌ ಅಗ್ರಿ ಟೆಕ್‌ ನರ್ಸರಿಯಿಂದ 40 ರೂ.ಗೆ ಒಂದರಂತೆ 300 ಸಸಿ ತಂದು ನಾಟಿ ಮಾಡಿದ್ದಾರೆ. 40ರಿಂದ 45 ಸಾವಿರ ರೂ. ಖರ್ಚು ಮಾಡಿ ಬೆಳೆಸಿದ ಆ್ಯಪಲ್‌ ಬಾರಿ(ದೊಡ್ಡ ಗಾತ್ರದ ಹಣ್ಣು) ಒಂದೂವರೆ ವರ್ಷದಲ್ಲಿ ಉತ್ತಮ ಫಲ ತಂದು ಕೊಡುತ್ತಿದೆ.

ವಿಶಿಷ್ಟ ಗಾತ್ರದ ಹಣ್ಣು : ಪ್ರತಿ ಹಣ್ಣು 120 ಗ್ರಾಂ ತೂಕ ಹೊಂದುತ್ತದೆ. ಈ ಬಾರಿ ಹ್ಣು ಸಣ್ಣ ಸೇಬು ಮಾದರಿಯಲ್ಲಿ ಇದ್ದುದರಿಂದ “ಆ್ಯಪಲ್‌ ಬಾರಿ’ ಎಂದೇ ಕರೆಯಲಾಗುತ್ತಿದೆ. ಆರಂಭದಲ್ಲಿ ರಾಸಾಯನಿಕ ಗೊಬ್ಬರ ಬಳಸಿದ್ದರಿಂದ 100 ಸಸಿ ಕಳೆದುಕೊಂಡೆ. ಬಳಿಕ ಉಳಿದ 200 ಸಸಿ ಸೆಗಣಿ ಗೊಬ್ಬರದಿಂದಲೇ ಬೆಳೆಸಲಾಗಿದ್ದು ಎನ್ನುತ್ತಾರೆ ರುದ್ರಗೌಡರು.

ಕೃಷಿಹೊಂಡದಲ್ಲೇ ಮೀನು ಸಾಕಾಣಿಕೆ: ಕೃಷಿಯಲ್ಲಿ ಹಲವಾರು ವಿಧಗಳನ್ನು ಅಳವಡಿಸಿಕೊಂಡ ರುದ್ರಗೌಡ ಅವರು ಕೃಷಿ ಹೊಂಡದಲ್ಲಿ ಮೀನು ಸಾಕಾಣಿಕೆ ಮಾಡಿದ್ದಾರೆ.ಸವದತ್ತಿ ಮೀನುಗಾರಿಕೆ ಇಲಾಖೆ ಉಚಿತ ನೀಡಿದ ಸಾಮಾನ್ಯ ಗೆಂಡೆ ತಳಿಯ 2 ಸಾವಿರ ಮೀನು ಮರಿಗಳನ್ನು ಸಾಕಿದ್ದಾರೆ.

ಕೃಷಿ, ತೋಟಗಾರಿಕೆ ಇಲಾಖೆ ನೆರವು: ಕೃಷಿ ಇಲಾಖೆ 10 ಫ್ರುಟ್ಸ್ ಟ್ಸ್ಟ್ರ್ಯಾಪ್ , 1 ಸೋಲಾರ ಟ್ಸ್ಟ್ರ್ಯಾಪ್ , ತೋಟಗಾರಿಕೆ ಇಲಾಖೆ 2 ಲಕ್ಷ ರೂ.ಸಹಾಯ ಧನದಲ್ಲಿ ನಿರ್ಮಿಸಿದ ಪ್ಯಾಕ್‌ ಹೌಸ್‌, 86 ಸಾವಿರ ರೂ. ವೆಚ್ಚದಲ್ಲಿ ನಿರ್ಮಿಸಿದ ಈರುಳ್ಳಿ ಸಂಸ್ಕರಣಾ ಘಟಕ ರೈತನಿಗೆ ನೆರವಾಗಿದೆ. ಕೈಸೇರಿದ ಆರು ಕ್ವಿಂಟಲ್‌ ಫಸಲು :  ಈಗಾಗಲೇ ಆರೂವರೆ ಕ್ವಿಂಟಲ್‌ ಆ್ಯಪಲ್‌ ಬಾರಿ ಉತ್ಪಾದಿಸಿದ ರುದ್ರಗೌಡರು ಕ್ವಿಂಟಲ್‌ಗೆ 3 ಸಾವಿರ ರೂ. ಮೊತ್ತದಲ್ಲಿ ಲಾಭ ಗಿಟ್ಟಿಸಿದ್ದಾರೆ. ಇನ್ನೂ 5, 6 ಕ್ವಿಂಟಲ್‌ ಬಾರಿ ದೊರೆಯುವ ನಿರೀಕ್ಷೆಯಲ್ಲಿದ್ದಾರೆ.ಜತೆಗೆ 1.16 ಎಕರೆ ಹೊಲದಲ್ಲಿ ಬೆಳೆಸಿದ 330 ಪೇರಲ ಗಿಡಗಳು ಫಲ ನೀಡುವ ಹಂತಕ್ಕೆ ಬಂದಿವೆ. ಕಡಿಮೆ ಪ್ರದೇಶದಲ್ಲಿ ಲಾಭದಾಯಕ ಕೃಷಿ ಮಾಡಲು ತೋಟಗಾರಿಕೆ ಸಹಾಯಕ ನಿರ್ದೇಶಕ ಆನಂದ ನರಸನ್ನವರ, ಸಹಾಯಕ ಕೃಷಿ ನಿರ್ದೇಶಕ ಚನ್ನಪ್ಪ ಅಂಗಡಿ ಮುಂತಾದವರುಸಹಕಾರ ನೀಡಿದ್ದಾರೆಂದು ರೈತ ರುದ್ರಗೌಡ ಲಿಂಗನಗೌಡ್ರ ಸ್ಮರಿಸುತ್ತಾರೆ.

Advertisement

ಮಿಶ್ರ ತಳಿ ಬೆಳೆ:  ಬಾರಿ ಹಣ್ಣು ತೋಟದಲ್ಲೇ ಮಿಶ್ರತಳಿ ಬೆಳೆಸಿದ ರುದ್ರಗೌಡರು ಒಂದು ಎಕರೆ ಪ್ರದೇಶದಲ್ಲೇ 200 ನುಗ್ಗೆ, 200 ಕರಿಬೇವು, 25 ಹುಣಸಿ, 20 ಸೀತಾ ಪೇರಲ, 200 ರಕ್ತ ಚಂದನ, ಔಷಧಿಯುಕ್ತ ರಾಮಫಲ, ಲಕ್ಷ್ಮಣಫಲ, ಹನುಮಫಲ ತಲಾ 5 ಸಸಿಗಳನ್ನೂ ಬೆಳೆಸಿದ್ದಾರೆ.

ಚಿಕ್ಕಪ್ಪನ ಪ್ರೇರಣೆಯಿಂದ ಬೆಳೆದಿರುವ ಆ್ಯಪಲ್‌ ಬಾರಿಗೆ ಬೇಡಿಕೆಯಿದೆ. ಈಗಾಗಲೇ ಫಸಲು ದೊರೆಯುತ್ತಿದೆ. ಅತಿ ಕಡಿಮೆ ಪ್ರದೇಶದಲ್ಲಿ ಲಾಭದಾಯಕ ಬೆಳೆ ತೆಗೆಯುವ ಉದ್ದೇಶ ಹೊಂದಿದ್ದೇನೆ. ಕೃಷಿ, ತೋಟಗಾರಿಕೆ ಅಧಿಕಾರಿಗಳ ಸಹಕಾರ ದೊಡ್ಡದು.-ರುದ್ರಗೌಡ ಲಿಂಗನಗೌಡ್ರ, ಯುವ ರೈತ

 

-ಸಿದ್ಧಲಿಂಗಯ್ಯ ಮಣ್ಣೂರಮಠ

 

Advertisement

Udayavani is now on Telegram. Click here to join our channel and stay updated with the latest news.

Next