Advertisement

ಬೆಳೆದ ಬಾಳೆಗೆ ಸಿಗದ ಬೆಲೆ: ಉಚಿತವಾಗಿ ಹಂಚಿದ ಎಂ.ಬಿ.ಪಾಟೀಲ ಅಭಿಮಾನಿ ರೈತ

11:03 AM May 31, 2021 | Team Udayavani |

ವಿಜಯಪುರ: ಕೋವಿಡ್ ಸಂಕಷ್ಟದ ಕಾರಣಕ್ಕೆ ತಾವು ಬೆಳೆದ ಬಾಳೆಗೆ ಮಾರುಕಟ್ಟೆ ಸಿಗದಿದ್ದಾಗ ತಿಪ್ಪೆಗೆ ಸುರಿಯದೇ, ಹಣ್ಣನ್ನು ಹಳ್ಳಿಗಳಲ್ಲಿ ಹಂಚುವ ಮೂಲಕ ತಮ್ಮ ಕ್ಷೇತ್ರದ ಶಾಸಕರ ಸೇವೆಗೆ ಕೃತಜ್ಞತೆ ಸಲ್ಲಿಸಿ ರೈತರೊಬ್ಬರು ಮಾದರಿ ಆಗಿದ್ದಾರೆ.

Advertisement

ಬಬಲೇಶ್ವರ ತಾಲೂಕಿನ ಸಂಗಾಪುರ ಎಸ್.ಎಚ್ ಗ್ರಾಮದ ರೈತ ಬಸವರಾಜ ಕಾತ್ರಾಳ ಕ್ಷೇತ್ರದ ಶಾಸಕರಾದ ಎಂ.ಬಿ.ಪಾಟೀಲ ಅವರ ಅಪ್ಪಟ ಅಭಿಮಾನಿ. ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ತಾವು ಲಕ್ಷಾಂತರ ರೂ. ಬಂಡವಾಳ ಹಾಕಿ, ಶ್ರಮ ವಹಿಸಿ 3 ಎಕರೆ ಜಮೀನಿನಲ್ಲಿ ಬೆಳೆದ 5 ಸಾವಿರ ಬಾಳೆ ಹಣ್ಣು ಬೆಳೆಗೆ ಕೋವಿಡ್ ಲಾಕ್‍ಡೌನ್ ಮಾರುಕಟ್ಟೆ ಕಿತ್ತುಕೊಂಡಿದೆ.

ಅದರೆ ಎಂ.ಬಿ.ಪಾಟೀಲ ಅಭಿಮಾನಿ ರೈತ, ಬಸವರಾಜ ಕಾತ್ರಾಳ ತಾವು ಬಂಡವಾಳ, ಶ್ರಮ ಹಾಕಿ ಬೆಳೆದ ಬಾಳೆಹಣ್ಣನ್ನು ಮಾರುಕಟ್ಟೆ ಸಿಗದಿದ್ದರೂ ಹತಾಶರಾಗದೇ ತಮ್ಮ‌ ಗ್ರಾಮದ ಹಳ್ಳಿಗರಿಗೆ ಉಚಿತವಾಗಿ ಹಂಚಿ, ತಮ್ಮ ಕ್ಷೇತ್ರದ ಶಾಸಕ ಎಂ.ಬಿ.ಪಾಟೀಲ ಅವರು ಮಾಡಿದ ನೀರಾವರಿ ಕ್ರಾಂತಿ, ಕೋವಿಡ್ ಸೇವೆಗೆ ಸಮರ್ಪಿಸುವುದಾಗಿ ತಮ್ಮ ಕಷ್ಟದಲ್ಲೂ ಅಭಿಮಾನದಿಂದ ಹೇಳುತ್ತಿದ್ದಾರೆ.

ಎಂ.ಬಿ.ಪಾಟೀಲ ಅವರು ನೀರಾವರಿ ಸಚಿವರಾಗಿ ಬಬಲೇಶ್ವರ ಕ್ಷೇತ್ರವನ್ನು ಮಾತ್ರವಲ್ಲ ವಿಜಯಪುರ ಜಿಲ್ಲೆಯನ್ನೇ ಸಮಗ್ರ ನೀರಾವರಿ ಮಾಡಿದ್ದಾರೆ. ಅವರ ರೈತ ಪರ ಪ್ರಾಮಾಣಿಕ ಕಾಳಜಿ, ಬದ್ಧತೆಯಿಂದಲೇ ಕುಡಿಯಲು ನೀರು ಸಿಗದ ಬರಪೀಡಿತ ವಿಜಯಪುರ ಜಿಲ್ಲೆಯ ರೈತರು ಸಮೃದ್ಧ ನೀರಾವರಿ ಮೂಲಕ ಸಮೃದ್ಧಿ ಪಡೆಯುವಂತೆ ಮಾಡಿದ್ದಾರೆ. ಹೀಗಾಗಿ ಪ್ರಕೃತಿ ಸೃಷ್ಡಿಸಿದ ಸಂಕಷ್ಟದಿಂದ ಆತ್ಮವಿಶ್ವಾಸ ಕಳೆದುಕೊಂಡು ಬೆಳೆದ ಬೆಳೆಯನ್ನು ತಿಪ್ಪೆಗೆ ಚೆಲ್ಲದೇ, ಎಂ.ಬಿ.ಪಾಟೀಲ್ ಅವರ ಸೇವಾ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸಲು ಜನರಿಗೆ ಉಚಿತವಾಗಿ ಬಾಳೆಹಣ್ಣು ಹಂಚಿ ವಿಶಿಷ್ಟ ಅಭಿಮಾನ ಮೆರೆದಿದ್ದಾರೆ.

Advertisement

ಕೋವಿಡ್ ಮಾರಕ ರೋಗ ಮನುಕುಲದ ಶರೀರದಲ್ಲಿ ತೊಂದರೆ ಮಾಡಿದೆ. ರೈತರಾಗಿರುವ ನಾವು ನಮ್ಮ ತೋಟದಲ್ಲಿ ಬಂದು ಪ್ರತ್ಯೇಕವಾಗಿ ಬದುಕಲು ಸಾಧ್ಯವಾಗಿದ್ದು ಕೂಡ ಎಂ.ಬಿ.ಪಾಟೀಲ ಅವರು ನೀರಾವರಿ ಸೌಲಭ್ಯ ಕಲ್ಪಿಸಿದ್ದರಿಂದಲೇ ಆಗಿದೆ ಎಂದು ಶೇಗುಣಿಸಿ, ಹಲಗಣಿ, ಬಬಲೇಶ್ವರ, ನಿಡೋಣಿ, ನಾಗರಾಳ, ಯಕ್ಕುಂಡಿ, ಹೊಕ್ಕುಂಡಿ ಹಾಗೂ ಅರ್ಜುನಗಿ ಭಾಗದ ಹಳ್ಳಿಗಳಲ್ಲಿ ಬಾಳೆ ಹಣ್ಣು ಹಂಚುತ್ತಿದ್ದಾರೆ.

ಈ ಬಾರಿ ಉತ್ತಮ ಫಸಲು ಬಂದರೂ ಲಾಕ್‍ಡೌನ್ ಕಾರಣದಿಂದ ಕೈಗೆಬಂದ ತುತ್ತು ಬಾಯಿಗೆ ಬರಲಿಲ್ಲ. ಅದರೆ ಶಾಸಕ ಎಂ.ಬಿ. ಪಾಟೀಲ ಅವರ ಸೇವೆ ನಮಗೆ ಮಾದರಿ ಆಗಲಿ. ಈ ಬಾರಿ ಹಾನಿ ಅನುಭವಿಸಿದರೂ, ಮುಂದಿನ ಬಾರಿ ಮತ್ತೆ ನಾನು ಉತ್ತಮ ಬೆಳೆ ಬೆಳೆಯುತ್ತೇನೆ. ಈ ಬಾರಿಯ ಕಷ್ಟ ಮುಂದೆ ಪರಿಹಾರವಾಗಲಿದೆ ಎಂದು ಬಸವರಾಜ ಕಾತ್ರಾಳ ಅಭಿಮಾನ, ಆತ್ಮವಿಶ್ವಾಸದಿಂದ ಹೇಳುತ್ತಿದ್ದಾರೆ.

ಕೋವಿಡ್ ಕಾರಣಕ್ಕೆ ಮಾರುಕಟ್ಟೆ ಸಿಗದೇ ಉಚಿತವಾಗಿ ಹಣ್ಣು ಹಂಚುತ್ತಿರುವ ರೈತನ ಕಷ್ಟದ ವಿಷಯ ಅರಿತ ಮಾಜಿ ಸಚಿವರಾದ ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ ಅವರು ನಷ್ಟಕ್ಕೆ ಸಿಲುಕಿರುವ ರೈತನಿಗೆ ಅಗತ್ಯ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವಂತೆ ಬಬಲೇಶ್ವರ ತಹಶೀಲ್ದಾರ್, ತಾಲೂಕಾ ತೋಟಗಾರಿಕೆ ಅಧಿಕಾರಿಗಳಿಗೆ ಮೊಬೈಲ್ ಮೂಲಕ ಸೂಚನೆ ನೀಡಿದ್ದಾರೆ. ರೈತ ಬಸವರಾಜ ಕಾತ್ರಾಳ ಅವರೊಂದಿಗೂ ಮಾತನಾಡಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next