1980ರ ದಶಕದಲ್ಲಿ ಉತ್ತರ ಕರ್ನಾಟಕದಲ್ಲಿ ನಡೆದ ನರಗುಂದ ರೈತ ಹೋರಾಟ ಅನೇಕರಿಗೆ ನೆನಪಿರಬಹುದು. ಇಂದಿಗೂ ಆಗಾಗ್ಗೆ ರಾಜಕೀಯದಲ್ಲಿ ಚರ್ಚೆಗೆ ಬರುವ, ರೈತ ಹೋರಾಟದ ಕಿಚ್ಚಿಗೆ ಉದಾಹರಣೆಯಾಗಿ ನೀಡುವಂಥ ನರಗುಂದ ಹೋರಾಟ ಇದೀಗ ಚಿತ್ರರೂಪದಲ್ಲಿ “ನರಗುಂದ ಬಂಡಾಯ’ ಎನ್ನುವ ಹೆಸರಿನಲ್ಲೇ ತೆರೆಗೆ ಬರುತ್ತಿದೆ. ಸುಮಾರು ಎರಡು ವರ್ಷಗಳ ಹಿಂದೆ ಸೆಟ್ಟೇರಿದ್ದ ಈ ಚಿತ್ರ ಅಂತಿಮವಾಗಿ ತನ್ನ ಕೆಲಸ-ಕಾರ್ಯಗಳನ್ನು ಪೂರೈಸಿ, ಈ ವಾರ ಪ್ರೇಕ್ಷಕರ ಮುಂದೆ ಬರುತ್ತಿದೆ. “ನರಗುಂದ ಬಂಡಾಯ’ದ ಬಿಡುಗಡೆಗೂ ಮುನ್ನ ಮಾಧ್ಯಮಗಳ ಮುಂದೆ ಬಂದಿದ್ದ ಚಿತ್ರತಂಡ, ಚಿತ್ರದ ಬಗ್ಗೆ ಒಂದಷ್ಟು ಮಾತನಾಡಿತು.
ಕನ್ನಡದಲ್ಲಿ ಈಗಾಗಲೇ “ಹನಿಮೂನ್ ಎಕ್ಸ್ ಪ್ರಸ್’, “ನೀ ಟಾಟಾ, ನಾ ಬಿರ್ಲಾ’, “ಹೋರಿ’, “ತೆನಾಲಿ ರಾಮ’ ಹೀಗೆ ಹಲವು ಚಿತ್ರಗಳನ್ನು ನಿರ್ದೇಶಿಸಿರುವ ನಾಗೇಂದ್ರ ಮಾಗಡಿ “ನರಗುಂದ ಬಂಡಾಯ’ ಚಿತ್ರಕ್ಕೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ನಾಗೇಂದ್ರ ಮಾಗಡಿ, “ಇದು ನನ್ನ ನಿರ್ದೇಶನದ 12ನೇ ಚಿತ್ರ. ಇಲ್ಲಿಯವರೆಗೆ ಎಲ್ಲಾ ಶೈಲಿಯ ಸಿನಿಮಾಗಳನ್ನು ಮಾಡಿದ್ದೇನೆ. ಇಲ್ಲಿಯವರೆಗೆ ಮಾಡಿದ ಸಿನಿಮಾಗಳದ್ದು ಒಂದು ತೂಕವಾದರೆ, ಈ ಸಿನಿಮಾದ್ದು ಮತ್ತೂಂದು ತೂಕ. ನಾನು 3ನೇ ತರಗತಿಯಲ್ಲಿದ್ದಾಗ ನಮ್ಮೂರಿನಲ್ಲಿ ನಡೆದ ನೈಜ ಘಟನೆ ಇದಾಗಿದ್ದು, ಇದನ್ನೇ ಈಗ ಸಿನಿಮಾವಾಗಿ ತೆರೆಮೇಲೆ ತರುವ ಅವಕಾಶ ನನಗೆ ಬಂದಿದೆ. ಎಲ್ಲರ ಸಹಕಾರದಿಂದ ಇಂಥದ್ದೊದು ಸಿನಿಮಾ ಮಾಡೋದಕ್ಕೆ ಸಾಧ್ಯವಾಯಿತು’ ಎಂದು ಚಿತ್ರ ನಡೆದು ಬಂದ ಹಾದಿಯನ್ನು ತೆರೆದಿಟ್ಟರು.
“ನರಗುಂದ ಬಂಡಾಯ’ ಚಿತ್ರದಲ್ಲಿ ಕಿರುತೆರೆಯ “ಪುಟ್ಟಗೌರಿಯ ಮದುವೆ’ ಧಾರಾವಾಹಿಯ ಖ್ಯಾತಿಯ ರಕ್ಷ್ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಬಗ್ಗೆ ಮತ್ತು ತಮ್ಮ ಪಾತ್ರದ ಬಗ್ಗೆ ಮಾತನಾಡಿದ ರಕ್ಷ್, “ಈ ಸಿನಿಮಾದಲ್ಲಿ ನನ್ನದು ಸಾಹಸಿ ರೈತನ ಪಾತ್ರ. ಆರಂಭದಲ್ಲಿ ನಿರ್ದೇಶಕರು 15 ನಿಮಿಷ ಕಥೆ ಹೇಳಿದಾಗಲೇ ಆ ಪಾತ್ರದಲ್ಲಿ ನನ್ನನ್ನು ನಾನು ಕಾಣುತ್ತ ಹೋದೆ. ತುಂಬ ದೊಡ್ಡ ಹೀರೋ ಮಾಡುವಂಥ ಪಾತ್ರ ನನಗೆ ಈ ಸಿನಿಮಾದಲ್ಲಿ ಸಿಕ್ಕಿದೆ. ತುಂಬ ಗಟ್ಟಿಯಾಗಿರುವಂಥ ಪಾತ್ರ ಹುಡುಕುತ್ತಿದ್ದಾಗ ಸಿಕ್ಕ ಸಿನಿಮಾ ಇದು. ಧಾರಾವಾಹಿಗಳ ಶೂಟಿಂಗ್ ಮಧ್ಯೆ ಬಿಡುವು ಮಾಡಿಕೊಂಡು ಈ ಸಿನಿಮಾ ಮಾಡಬೇಕಾಯ್ತು. ಪಾತ್ರಕ್ಕಾಗಿ ತೂಕ ಇಳಿಸಿಕೊಂಡಿದ್ದೇನೆ. ಶ್ರಮವಿಟ್ಟು ಮಾಡಿದ ಪಾತ್ರ. ಸುಮಾರು 5-6 ಫೈಟ್ಸ್, ಒಳ್ಳೆಯ ಸಾಂಗ್ಸ್ ಎಲ್ಲವೂ ಈ ಸಿನಿಮಾದಲ್ಲಿದೆ. ಈ ವರ್ಷದ ಶ್ರೇಷ್ಟ ಸಿನಿಮಾವಾಗಲಿದೆ’ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ನಾಯಕಿ ಶುಭ ಪೂಂಜಾ ಮಾತನಾಡಿ, “ತುಂಬಾ ವರ್ಷದ ನಂತರ ಒಂದೊಳ್ಳೆ ಪಾತ್ರ ಮಾಡಿದ್ದೇನೆ. ಚಿತ್ರದ ಕಥೆ ಮತ್ತು ಪಾತ್ರ ತುಂಬ ಖುಷಿಕೊಟ್ಟಿದೆ. ಈಗಾಗಲೇ ಉತ್ತರ ಕರ್ನಾಟಕದಲ್ಲಿ ಪ್ರಚಾರ ಮಾಡಿದ್ದೇವೆ. ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಬಿಡುಗಡೆಯನ್ನು ಎದುರು ನೋಡುತ್ತಿದ್ದೇನೆ’ ಎಂದರು.
ಚಿತ್ರದ ಬಗ್ಗೆ ಮಾತನಾಡಿದ ಖಳನಟ ರವಿಚೇತನ್, “ಈ ಸಿನಿಮಾದಲ್ಲಿ ನನ್ನದು ನೆಗೆಟಿವ್ ಶೇಡ್ ಇರುವಂಥ ಪಾತ್ರ. ಬಡ್ಡಿ ಕೊಟ್ಟು ಜನರನ್ನು ಸುಲಿಗೆ ಮಾಡುವಂಥ ಪಾತ್ರ ಮಾಡಿದ್ದೇನೆ. ರೈತರ ನೈಜ ಕಥೆ ಇಟ್ಟುಕೊಂಡು ಮಾಡಿರುವ ಮನರಂಜನಾತ್ಮಕ ಸಿನಿಮಾ ಇದು. ಈ ಥರದ ಸಿನಿಮಾಗಳನ್ನು ಮತ್ತೆ ಮತ್ತೆ ಮಾಡಲಾಗುವುದಿಲ್ಲ. ಸಿನಿಮಾ ತೃಪ್ತಿಕೊಟ್ಟಿದೆ’ ಎಂದರು.
“ಓಂಕಾರ ಫಿಲಂಸ್’ ಲಾಂಛನದಲ್ಲಿ ಶೇಖರ್ ಯಲುವಿಗಿ ಮತ್ತು ಎಸ್. ಜಿ (ಸಿದ್ದೇಶ) ವಿರಕ್ತಮಠ ಕಥೆ ಬರೆದು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರಕ್ಕೆ ಆರ್. ಗಿರಿ, ಆನಂದ ಎಸ್.ಪಿ ಛಾಯಾಗ್ರಹಣ, ಲಕ್ಷ್ಮೀ ನಾರಾಯಣ ಸಂಕಲನವಿದೆ. ಚಿತ್ರದ ಹಾಡುಗಳಿಗೆ ಯಶೋವರ್ಧನ ಸಂಗೀತವಿದೆ. ಚಿತ್ರದಲ್ಲಿ ರಕ್ಷ್, ಶುಭಾ ಪೂಂಜಾ, ರವಿಚೇತನ್ ಅವರೊಂದಿಗೆ ಸಾಧುಕೋಕಿಲ, ನೀನಾಸಂ ಅಶ್ವತ್, ಟೆನ್ನಿಸ್ ಕೃಷ್ಣ, ಮೈಸೂರು ರಮಾನಂದ್ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಹಾವೇರಿ, ಗದಗ, ಹುಬ್ಬಳ್ಳಿ, ಮೇಲುಕೋಟೆ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಒಟ್ಟಾರೆ ನೈಜ ಘಟನೆಯ ಕಥೆಯ ಜೊತೆಗೆ, ಕಮರ್ಶಿಯಲ್ ಎಂಟರ್‌ಟೈನ್ಮೆಂಟ್ ಅಂಶಗಳನ್ನು ತಯಾರಾಗಿರುವ “ನರಗುಂದ ಬಂಡಾಯ’ ಈ ವಾರ ಸುಮಾರು 100 ಕ್ಕೂ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.