ಗೌರಿಬಿದನೂರು: ಬರದ ಪರಿಸ್ಥಿತಿ, ಪ್ರವಾಹ ವಿಕೋಪದಿಂದ ರಾಜ್ಯದಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದರೂ ಆಡಳಿತ ಪಕ್ಷಗಳು ಮೂಕ ಪ್ರೇಕ್ಷಕರಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದರು. ತಾಲೂಕಿನ ನಗರಗೆರೆ ಹೋಬಳಿ ವಾಟದ ಹೊಸಹಳ್ಳಿಯಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಆಯೋಜಿಸಿದ್ದ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ರಾಜ್ಯದ ಉತ್ತರ ಕರ್ನಾಟಕದಲ್ಲಿ ಮಳೆ ತೀವ್ರತೆಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದೆ, ಆದರೆ, ದಕ್ಷಿಣ ಭಾಗದಲ್ಲಿ ಮಳೆಯಿಲ್ಲದೆ ಬರದ ಸ್ಥಿತಿ ನಿರ್ಮಾಣವಾಗಿ ರೈತ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಇದರ ನಡುವೆ ಮೈಕ್ರೋ ಫೈನಾನ್ಸ್ ಕಂಪನಿಗಳ ಹಾವಳಿಯಿಂದ ಗ್ರಾಮೀಣ ಭಾಗದ ರೈತರ ಕಣ್ಣೀರನ್ನು ಒರೆಸಬೇಕಾದ ಸರ್ಕಾರಗಳು ಮಾತ್ರ ಬದ್ಧತೆ ತೋರುತ್ತಿಲ್ಲ ಎಂದು ದೂರಿದರು.
ಮೂರ್ಖರನ್ನಾಗಿಸಿದ್ದಾರೆ: ಯಾವುದೇ ರಾಜಕೀಯ ಪಕ್ಷದಿಂದಾಗಲೀ, ಜಾತಿಯ ಪ್ರಭಾವದಿಂದಾಗಲಿ ರೈತರು ಈ ಸಮಾವೇಶಕ್ಕೆ ಬಂದಿಲ್ಲ. ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡಿರುವ ನಾಯಕರ ಕೈಯಲ್ಲಿ ಅಧಿಕಾರ ಕೊಟ್ಟು ಜನ ಮೂರ್ಖರನ್ನಾಗಿ ಮಾಡಿದೆ. ಇದೇ ನಾಯಕರನ್ನು ಮುಂದಿನ ಚುನಾವಣೆಯಲ್ಲಿ ಆಯ್ಕೆ ಮಾಡಲು ಮುಂದಾಗುವ ಪರಿಸ್ಥಿತಿ ಬರಬಾರದು ಎಂದರು.
ರೈತ ಸಂಘಟನೆ ಪದಾಧಿಕಾರಿಗಳೇ ಆಡಳಿತ ಮಾಡಲು ಮುಂದಾಗಬೇಕು, ಇದರಿಂದ ರಾಜ್ಯದ ರೈತಾಪಿ ವರ್ಗದವರಲ್ಲಿ ನೆಮ್ಮದಿ ಜೀವನ ಕಾಣಬಹುದಾಗಿದೆ. ರಾಜ್ಯ-ಕೇಂದ್ರ ಸರ್ಕಾರ ರೈತರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡುತ್ತಿವೆ ಎಂದು ಆರೋಪಿಸಿದರು.
ರೈತರ ಬಗ್ಗೆ ಚಿಂತನೆ ಇಲ್ಲ: ಹಸಿರು ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ, ರಾಜ್ಯದಲ್ಲಿ ರೈತರ ಪರಿಸ್ಥಿತಿ ದುಸ್ತರವಾಗಿದ್ದರೂ ಸರ್ಕಾರಗಳು ಅಧಿಕಾರಕ್ಕಾಗಿ ಪರಿತಪಿಸುತ್ತಿವೆಯೇ ಹೊರತು ರಾಜ್ಯದ ರೈತರ ಬಗ್ಗೆ ಚಿಂತನೆ ಇಲ್ಲದಂತೆ ಆಗಿದೆ. ಬಯಲು ಸೀಮೆ ಭಾಗದಲ್ಲಿ ಅಂತರ್ಜಲದ ಮಟ್ಟ ಕುಸಿದಿದ್ದು ರೈತರು ವ್ಯವಸಾಯಕ್ಕೆ ಮತ್ತು ಕುಡಿಯುವ ನೀರಿಲ್ಲದೆ ಚಿಂತಿಸಬೇಕಾಗಿದೆ. ಈ ನಿಟ್ಟಿನಲ್ಲಿ ರೈತಾಪಿ ಜನ ಒಗ್ಗಟ್ಟಾಗಿ ಸಂಘಟನೆ ಮಾಡಿ ಹೋರಾಟ ಮಾಡಬೇಕೆಂದರು.
ಶಾಶ್ವತ ನೀರು ಅವಶ್ಯ: ರೈತ ಸಂಘದ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ಮಾಳಪ್ಪ ಮಾತನಾಡಿ, ಕೃಷಿ ಮತ್ತು ಹೈನುಗಾರಿಕೆಯನ್ನೇ ಮೂಲ ಕಸುಬನ್ನಾಗಿಸಿಕೊಂಡು ಬದುಕುತ್ತಿರುವ ರೈತರಿಗೆ ಶಾಶ್ವತ ನೀರನ್ನು ತರುವ ಅವಶ್ಯಕತೆ ಇದೆ. ಕೇವಲ ಅಧಿಕಾರ ಆಸೆಗಾಗಿ ಜನಪ್ರತಿನಿಧಿಗಳು ಜನರನ್ನು ಬಳಸಿಕೊಂಡು ಮತ್ತೆ ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದ ನಾವುಗಳು ಎಚ್ಚೆತ್ತುಕೊಳ್ಳುವ ಅನಿರ್ವಾಯತೆ ಇದೆ ಎಂದರು.
ಸಂಘದ ಗೌರವಾಧ್ಯಕ್ಷ ಎದ್ದಲುರೆಡ್ಡಿ , ಮಂಜುನಾಥ್, ಅಧ್ಯಕ್ಷ ಚಾಂದ್ ಬಾಷಾ, ನಾರಾಯಣರೆಡ್ಡಿ, ಎ.ಗಂಗಾಧರ್ (ವಕೀಲರು), ರಾಮಕೃಷ್ಣ, ನಾರಾಯಣಸ್ವಾಮಿ, ಹಸಿರು ಸೇನೆ ನವೀನ್ ಕುಮಾರ್, ಬಂಡೆಪ್ಪ ಶ್ರೀನಿವಾಸ್ ರವಿಕುಮಾರ್, ರಂಗನಾಥ್, ಮಹಿಳಾ ಘಟಕದ ಗಂಗಮ್ಮ, ಲಲಿತಮ್ಮ, ಶಶಿಕಲಾ ಮತ್ತಿತರರು ಇದ್ದರು.