ಬೆಳಗಾವಿ: ಜಿಲ್ಲೆಯ ಎರಡು ಸಕ್ಕರೆ ಕಾರ್ಖಾನೆಗಳಿಂದ ಬಾಕಿ ಹಣ ಬರದೆ ಜೀವನ ಕಷ್ಟಕರವಾಗಿದೆ. ಕಾರ್ಖಾನೆಯ ಆಡಳಿತ ಮಂಡಳಿಯವರು ಹಣ ನೀಡದೆ ಸತಾಯಿಸುತ್ತಿರುವುದರಿಂದ ಬಹಳ ನೊಂದಿದ್ದು, ಕುಟುಂಬದ ಸದಸ್ಯರಿಗೆ ದಯಾಮರಣಕ್ಕೆ ಅವಕಾಶ ನೀಡಬೇಕು ಎಂದು ಕೋರಿ ಪ್ರಧಾನಿ ಹಾಗೂ ಮುಖ್ಯಮಂತ್ರಿಗೆ ಪತ್ರ ಬರೆದಿದ್ದ ಖಾನಾಪುರದ ಲಿಂಗನಮಕ್ಕಿ ಗ್ರಾಮದ ಕಬ್ಬು ಬೆಳೆಗಾರ ಶಂಕರ ಮಾಟೊಳ್ಳಿ ಭಾನುವಾರ ವಿಧಿವಶರಾಗಿದ್ದಾರೆ.
ತೀವ್ರ ಅನಾರೋಗ್ಯಕ್ಕೀಡಾಗಿದ್ದ ಅವರು ಹಾಸಿಗೆ ಹಿಡಿದಿದ್ದು ಮನೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಪತ್ನಿಯ ಆರೋಗ್ಯವೂ ತೀವ್ರವಾಗಿ ಹದಗೆಟ್ಟಿದೆ.
ಮಾಟೋಳ್ಳಿ ಮೇ 10ರಂದು ರಿಜಿಸ್ಟರ್ ಅಂಚೆ ಮೂಲಕ ಅವರು ಪ್ರಧಾನಿ ಹಾಗೂ ಮುಖ್ಯಮಂತ್ರಿಗಳಿಗೆ ಈ ಪತ್ರ ಕಳಿಸಿದ್ದರು.ಸಚಿವ ರಮೇಶ ಜಾರಕಿಹೊಳಿ ಒಡೆತನದ ಗೋಕಾಕ ತಾಲೂಕಿನ ಹಿರೇನಂದಿ ಸಕ್ಕರೆ ಕಾರ್ಖಾನೆಗೆ ಕಬ್ಬು ಕಳಿಸಲಾಗಿತ್ತು. ಗಾಡಿ ಬಾಡಿಗೆ ಹಾಗೂ ಕಟಾವ್ ಸೇರಿ 80 ಸಾವಿರದಿಂದ ಲಕ್ಷದವರೆಗೆ ಹಣ ಬರಬೇಕಿದೆ.ಕಾರ್ಖಾನೆಯ ಅಧಿಕಾರಿಗಳು ಹಣ ನೀಡದೆ ಸತಾಯಿಸುತ್ತಿದ್ದಾರೆ ಎಂದು ಶಂಕರ ಮಾಟೊಳ್ಳಿ ಅವರ ಪುತ್ರ ಬಾಳಪ್ಪ “ಉದಯವಾಣಿ’ಗೆ ತಿಳಿಸಿದ್ದರು.
ರಾಮದುರ್ಗ ತಾಲೂಕಿನಲ್ಲಿರುವ ಶಿವಸಾಗರ ಸಕ್ಕರೆ ಕಾರ್ಖಾನೆಯಿಂದ ಸುಮಾರು 50 ಸಾವಿರ ಬರಬೇಕಿದೆ. ಆಗ ಕಾರ್ಖಾನೆಯವರು ಟನ್ ಕಬ್ಬಿಗೆ 2,500 ರೂ. ದರ ಹೇಳಿ ನಂತರ 1,300 ರೂ. ನೀಡಿ ಮೋಸ ಮಾಡಿದ್ದಾರೆ. ಈ ಹಣವೂ ಪೂರ್ಣವಾಗಿ ಪಾವತಿಯಾಗಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ. 4 ಎಕರೆ ಜಮೀನಿನಲ್ಲಿ ಕಬ್ಬು ಬೆಳೆದು ಕಾರ್ಖಾನೆಗೆ ಕಳಿಸುತ್ತಿ ದ್ದೇವೆ. ಬ್ಯಾಂಕಿನಲ್ಲಿ 7.5 ಲಕ್ಷ ರೂ. ಸಾಲ ಮಾಡಲಾಗಿದೆ. ತಂದೆ, ತಾಯಿಯ ಚಿಕಿತ್ಸೆ ಹಾಗೂ ಸಾಲ ತೀರಿಸಲು ಇದ್ದ ಲಾರಿಯನ್ನೂ ಮಾರಾಟ ಮಾಡಿದ್ದೇವೆ ಎಂದು ಅವರು ಪತ್ರದಲ್ಲಿ ಅಳಲು ತೋಡಿಕೊಂಡಿದ್ದರು.