Advertisement

ಕೃಷಿ ಮೇಳ ಬದಲಿಗೆ ರೈತ ಸಮ್ಮೇಳನ

10:25 AM Jan 28, 2019 | Team Udayavani |

ರಾಯಚೂರು: ಪ್ರತಿ ವರ್ಷ ಕೃಷಿಮೇಳದ ಹೆಸರಿನಲ್ಲಿ ಮೂರು ದಿನ ವೈಭವದ ಕಾರ್ಯಕ್ರಮ ನಡೆಸುತ್ತಿದ್ದ ಕೃಷಿ ವಿಶ್ವವಿದ್ಯಾಲಯವು ಈ ಬಾರಿ ಬರದ ಕಾರಣಕ್ಕೆ ಎರಡು ದಿನಗಳ ರೈತ ಸಮ್ಮೇಳನ ಆಯೋಜಿಸುವ ಮೂಲಕ ಸರಳವಾಗಿ ಆಚರಿಸಿದೆ. ‘ಬದಲಾಗುತ್ತಿರುವ ಹವಾಮಾನದಲ್ಲಿ ಸುಭದ್ರ ಕೃಷಿ ಮತ್ತು ಸಾವಯವ ಸಂತೆ’ ಶೀರ್ಷಿಕೆಯಡಿ ಕೃಷಿ ವಿವಿಯ ಪ್ರೇಕ್ಷಾಗೃಹದಲ್ಲಿ ಕೃಷಿ ಮತ್ತು ಕೃಷಿಗೆ ಸಂಬಂಧಿತ ಇಲಾಖೆಗಳ ಸಹಯೋಗದಲ್ಲಿ ರೈತ ಸಮ್ಮೇಳನಕ್ಕೆ ರವಿವಾರ ಚಾಲನೆ ನೀಡಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್‌ ನಾಡಗೌಡರು ಬೆಳಗ್ಗೆ 11:30ಕ್ಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಬೇಕಿತ್ತು. ಆದರೆ, ಸಚಿವರು ಸಂಜೆ 4:30ಕ್ಕೆ ಬಂದು ಸಮಾರಂಭ ಉದ್ಘಾಟಿಸಿದರು. ಹೀಗಾಗಿ ಉದ್ಘಾಟನೆಗೆ ಮುಂಚೆಯೇ ಕೃಷಿ ತಜ್ಞರಿಂದ ನೇರವಾಗಿ ಉಪನ್ಯಾಸ ಆರಂಭಿಸಲಾಯಿತು.

Advertisement

ಕೃಷಿಯಲ್ಲಿ ಎದುರಾಗುತ್ತಿರುವ ಸವಾಲುಗಳು, ರೈತರ ಸಮಸ್ಯೆಗಳು, ಮಾರುಕಟ್ಟೆ ಯಲ್ಲಾಗುವ ತೊಂದರೆ, ಸರ್ಕಾರದ ಸೌಲಭ್ಯಗಳು, ರಾಸಾಯನಿಕ ಬಳಕೆಯಿಂದ ಆಗುತ್ತಿರುವ ದುಷ್ಪರಿಣಾಮಗಳು ಸೇರಿ ಹಲವು ವಿಚಾರಗಳ ಬಗ್ಗೆ ಕೃಷಿ ತಜ್ಞರಾದ ಶಿವಾನಂದ ಕಳವೆ, ಎಸ್‌.ಎ. ಪಾಟೀಲ, ಶಿವಕುಮಾರ ಸ್ವಾಮೀಜಿ, ಅಯ್ಯಪ್ಪ ಮಸ್ಗಿ, ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ ಸೇರಿ ಅನೇಕರು ಮಾತನಾಡಿದರು.

ಏಕ ಬೆಳೆ ಪದ್ಧತಿಗೆ ಒಗ್ಗಿಕೊಳ್ಳುತ್ತಿರುವ ರೈತರು, ನಷ್ಟ ಎದುರಿಸುತ್ತಿದ್ದಾರೆ. ರಾಸಾಯನಿಕಗಳ ಅತಿಯಾದ ಬಳಕೆ ಭೂ ಫಲವತ್ತತೆಗೆ ಮಾರಕ ಎಂಬುದನ್ನು ಮನಗಾಣಬೇಕು. ಸಾವಯವ ಕೃಷಿಗೂ ಹೆಚ್ಚಿನ ಉತ್ತೇಜನ ನೀಡಬೇಕಿದೆ. ಬಹು ಬೆಳೆ ಪದ್ಧತಿಯಿಂದ ರೈತರು ನಷ್ಟದಿಂದ ಪಾರಾಗಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟರು.

ಸರ್ಕಾರ ಖರೀದಿ ಕೇಂದ್ರಗಳ ಮೂಲಕ ಧಾನ್ಯ ಖರೀದಿಸುತ್ತಿದ್ದು, ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ. ಇದರಿಂದ ರೈತರಿಗೆ ನಷ್ಟ ಆಗುತ್ತಿದೆ, ಜತೆಗೆ ಮಾರುಕಟ್ಟೆ ಸಮಸ್ಯೆ ರೈತರನ್ನು ಕಾಡುತ್ತಿದೆ. ಸರ್ಕಾರದ ಸೌಲಭ್ಯಗಳು ಸಮರ್ಪಕವಾಗಿ ಬಳಕೆಯಾಗಬೇಕು ಎಂದು ರೈತ ಮುಖಂಡರು ಹೇಳಿದರು.

ಈ ಬಾರಿ ತೀರ ಚಿಕ್ಕ ಪ್ರಮಾಣದ ಮೇಳ ಆಯೋಜಿಸಿದ್ದರಿಂದ ಜನರು ಕೂಡ ನಿರೀಕ್ಷಿತ ಮಟ್ಟದಲ್ಲಿ ಬಂದಿರಲಿಲ್ಲ. ಆದರೆ, ವಿವಿಧ ಇಲಾಖೆಗಳಿಂದ ಯೋಜನೆಗಳ ಪ್ರಚಾರಾರ್ಥ 20ಕ್ಕೂ ಹೆಚ್ಚು ಮಳಿಗೆಗಳನ್ನು ಹಾಕಲಾಗಿತ್ತು. ರೈತರು ತಮ್ಮ ಉತ್ಪಾದನೆಗಳನ್ನು ಪ್ರದರ್ಶನಕ್ಕೆ ತಂದಿದ್ದರು. ಸಾವಯವ ಕೃಷಿಗೆ ಸಂಬಂಧಿಸಿದ ಉತ್ಪಾದನೆಗಳು, ಸಿರಿ ಧಾನ್ಯಗಳು, ಕೃಷಿ ವಿವಿಯಿಂದ ಅಭಿವೃದ್ಧಿಪಡಿಸಿದ ತಳಿಗಳು ಹಾಗೂ ಕೆಲ ರೈತರು ಬೆಳೆದ ವಿಶೇಷ ವಸ್ತುಗಳ ಪ್ರದರ್ಶನ ಗಮನ ಸೆಳೆದವು. ರೈತರು ಬೆಳೆದ ವಿವಿಧ ಹಣ್ಣುಗಳು, ಹೂವಿನ ಗಿಡಗಳು, ಸಿರಿಧಾನ್ಯಗಳಿಂದ ತಯಾರಿಸಿದ ವಿವಿಧ ಖಾದ್ಯಗಳನ್ನು ಜನ ಖರೀದಿಸುತ್ತಿದ್ದದ್ದು ಕಂಡು ಬಂತು.

Advertisement

ಬೃಹತ್‌ ಡ್ರೋಣ್‌: ಈಚೆಗೆ ಡ್ರೋಣ್‌ ಮೂಲಕ ಕ್ರಿಮಿನಾಶಕ ಸಿಂಪರಣೆಗೆ ಯಂತ್ರ ಕಂಡು ಹಿಡಿದಿದ್ದ ಕೃಷಿ ವಿವಿ ಯಂತ್ರೋಪಕರಣಗಳ ವಿಭಾಗದ ವಿದ್ಯಾರ್ಥಿಗಳು ಈ ಬಾರಿ ದೊಡ್ಡ ಪ್ರಮಾಣದ ಡ್ರೋಣ್‌ ಪರಿಚಯಿಸಿದರು. ಸುಮಾರು 1.17 ಹೆಕ್ಟೇರ್‌ ಪ್ರದೇಶಕ್ಕೆ ಕ್ರಿಮಿನಾಶಕ ಸಿಂಪರಣೆಗೆ ಸಾಮರ್ಥ್ಯ ಹೊಂದಿದ ಯಂತ್ರ ಇದಾಗಿದ್ದು, ಸುಮಾರು ನಾಲ್ಕು ಗಂಟೆ ಚಾರ್ಜ್‌ ಮಾಡಿದರೆ 40 ನಿಮಿಷ ಸಿಂಪರಣೆ ಮಾಡಬಹುದಾಗಿದೆ. ಮಾನವರು ಹೋಗಲಾಗದ ಪ್ರದೇಶಗಳಲ್ಲಿ ಈ ಯಂತ್ರದ ಮೂಲಕ ರಾಸಾಯನಿಕ ಸಿಂಪರಣೆ ಮಾಡಬಹುದೆಂದು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next