ದಾವಣಗೆರೆ: ಪವನ ವಿದ್ಯುತ್ ಉತ್ಪಾದನೆಯಲ್ಲಿ ತೊಡಗಿರುವ ಕಂಪನಿಗಳು ಪರಿಸರ ನಾಶ ಮಾಡುತ್ತಿದ್ದು, ಆ ಕಂಪನಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಬುಧವಾರ ನಗರದಲ್ಲಿ ಮೆರವಣಿಗೆ ನಡೆಸಿದರು.
ಜಯದೇವ ವೃತ್ತದಿಂದ ಮೆರವಣಿಗೆ ಆರಂಭಿಸಿದ ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿ ತೆರಳಿ ಮನವಿ ಸಲ್ಲಿಸಿ, ಪವನ ವಿದ್ಯುತ್ ಉತ್ಪಾದಿಸುವ ಕಂಪನಿಗಳು ಗುಡ್ಡಗಳಲ್ಲಿನ ಮರಗಳ ಮಾರಣ ಹೋಮ ಮಾಡುತ್ತಿವೆ.ಕಾನೂನು ಉಲ್ಲಂಘಿಸುತ್ತಿದ್ದು, ತಕ್ಷಣ ಕ್ರಮ ವಹಿಸಿ ಎಂದು ಆಗ್ರಹಿಸಿದರು.
ಇದಕ್ಕೂ ಮುನ್ನ ಜಯದೇವ ವೃತ್ತದಲ್ಲಿ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದ ಹಸಿರು ಸೇನೆ ರಾಜ್ಯಾಧ್ಯಕ್ಷ ಎಚ್.ಎಂ. ಮಹೇಶ್ವರ ಸ್ವಾಮಿ, ಹರಪನಹಳ್ಳಿ ತಾಲೂಕಿನ ಅನೇಕ ಕಡೆ ಪವನ ವಿದ್ಯುತ್ ಉತ್ಪಾದನೆಗೆ ವಿವಿಧ ಕಂಪನಿಗಳಿಗೆ ಷರತ್ತು ವಿಧಿಸಿ ಪರವಾನಗಿ ನೀಡಲಾಗಿದೆ. ಯಾವುದೇ ಕಂಪನಿ ಷರತ್ತು ಅನುಸರಿಸುತ್ತಿಲ್ಲ.
ಈ ಕಂಪನಿಗಳು ಗ್ರಾಪಂಗೆ ಯಾವುದೇ ತೆರಿಗೆ ಕಟ್ಟುವುದಿಲ್ಲ. ಗುಡ್ಡದ ಮೇಲಿನ ಮರಗಳನ್ನು ಕಡಿದುಹಾಕಿ, ತಮಗೆ ಬೇಕಾದ ರೀತಿ ರಸ್ತೆ ನಿರ್ಮಿಸಿಕೊಳ್ಳುತ್ತಿವೆ. ಈ ಬಗ್ಗೆ ಪ್ರಶ್ನಿಸಿದರೆ, ನಮಗೆ ಅನುಮತಿ ಇದೆ ಎಂದೇಳುತ್ತಾರೆ ಎಂದು ಆರೋಪಿಸಿದರು. ಮೊದಲೇ ಪ್ರಕೃತಿಯಲ್ಲಿನ ಏರುಪೇರನಿಂದಾಗಿ ಮಳೆ ಕೊರತೆ ಉಂಟಾಗುತ್ತಿದೆ.
ಇದನ್ನು ನಿಯಂತ್ರಿಸಲು ಸಮತೋಲಿತ ಪ್ರಕೃತಿ ಕಾಪಾಡಿಕೊಳ್ಳಬೇಕು. ಈ ಕಂಪನಿಗಳಿಂದ ಇಂದು ಪ್ರಕೃತಿ ನಾಶವಾಗಿದೆ. ಸರ್ಕಾರ ಈ ಕಂಪನಿಗಳಿಗೆ ದಂಡ ವಿಧಿಸಿ, ಅನುಮತಿ ರದ್ದುಮಾಡಬೇಕು ಎಂದು ಅವರು ಆಗ್ರಹಿಸಿದರು. ಮಲ್ಲಾಪುರ ದೇವರಾಜ, ಬೂದಿಹಾಳ ಸಿದ್ದೇಶ, ಮರಡಿ ನಾಗಣ್ಣ, ಕಲ್ಲಹಳ್ಳಿ ಗೋಣೆಪ್ಪ, ಶμàವುಲ್ಲಾ, ಮರುಳಸಿದ್ಧಪ್ಪ, ಕುಲುಮಿ ಚಂದ್ರಪ್ಪ ಈ ಸಂದರ್ಭದಲ್ಲಿದ್ದರು.