ಹಾಸನ: ಕೇಂದ್ರದ ಎನ್‌ಡಿಎ ಸರ್ಕಾರ ಕಾರ್ಮಿಕರ ವಿರೋಧಿ ನೀತಿ ಅನುಸರಿಸುತ್ತಿದ್ದು ಬಂಡವಾಳಶಾಹಿ ವ್ಯವಸ್ಥೆಯಿಂದ ಬೆಲೆ ಏರಿಕೆಯಾಗಿ ಜನಸಾಮಾನ್ಯರ ಕೊಳ್ಳುವ ಶಕ್ತಿ ಕಡಿಮೆಯಾಗಿದೆ ಎಂದು ಎಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಜಯ ಭಾಸ್ಕರ್ ದೂರಿದರು. ನಗರದ ಸ್ವಾಭಿಮಾನಿ ಭವನದಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆಯಿಂದ ಆಯೋಜಿಸಿದ್ದ ಜಿಲ್ಲಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ವಿನಾಯ್ತಿ ಏಕೆ?: ದೊಡ್ಡ ಕಂಪನಿಗಳು ಗುತ್ತಿಗೆ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳುತ್ತಿವೆ. ಪ್ರತಿ ವರ್ಷ ನಿರುದ್ಯೋಗ ಹೆಚ್ಚಾಗುತ್ತಿದ್ದು 15 ಲಕ್ಷಕ್ಕೂ ಹೆಚ್ಚು ನಿರುದ್ಯೋಗಿಗಳಿದ್ದಾರೆ. ಉದ್ಯೋಗ ಸೃಷ್ಟಿಗೆ ಈ ಸರ್ಕಾರ ಗಮನ ಹರಿಸುತ್ತಿಲ್ಲ. ನರೇಗಾ ಯೋಜನೆಯಲ್ಲಿ ಉದ್ಯೋಗ ಕಡಿತ ಮಾಡಲಾಗುತ್ತಿದೆ. ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗುತ್ತಿಲ್ಲ. ಜನಸಾಮಾನ್ಯರ ತೆರಿಗೆ ಹಣವನ್ನು ಕೇಂದ್ರ ಸರ್ಕಾರ ಕಾರ್ಪೊರೆಟ್ ಕಂಪನಿಗಳಿಗೆ ತೆರಿಗೆ ವಿನಾಯ್ತಿ ರೂಪದಲ್ಲಿ ನೀಡುತ್ತಿದೆ ಎಂದು ಆರೋಪಿಸಿದರು.
ಬೆಂಬಲ ನೀಡಿ: ಲಾಭದಾಯಕ ಉದ್ದಿಮೆಗಳನ್ನು ಖಾಸಗೀಕರಣ ಮಾಡುತ್ತಿದ್ದು, ಕೆಲಸದ ಭದ್ರತೆ ಇಲ್ಲದೆ ಜನ ಬೀದಿಪಾಲಾಗುತ್ತಿದ್ದಾರೆ. 7 ಸಾವಿರ ಕೋಟಿ ಕಟ್ಟಡ ನಿರ್ಮಾಣ ಕ್ಷೇಮಾಭಿವೃದ್ಧಿ ಹಣವನ್ನು ಷೇರು ಮಾರುಕಟ್ಟೆಗೆ ಹಾಕುತ್ತಿದ್ದಾರೆ. ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ನೇರ ಬಂಡವಾಳಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಚಿಲ್ಲರೆ ವ್ಯಾಪಾರಿಗಳು ಬೀದಿಪಾಲಾಗುವಂತಾಗಿದೆ. ಆದ್ದರಿಂದ ಜ. 8 ರ ಬೃಹತ್ ಹೋರಾಟಕ್ಕೆ ಚಿಲ್ಲರೆ ವ್ಯಾಪಾರಿಗಳು ಬೆಂಬಲ ಕೊಡಬೇಕೆಂದು ಮನವಿ ಮಾಡಿದರು.
ಮುಖ್ಯ ಅತಿಥಿ ಸಿಐಟಿಯು ರಾಜ್ಯ ಕಾರ್ಯದರ್ಶಿ ಧರ್ಮೇಶ್ ಮಾತನಾಡಿ, ಕೇಂದ್ರದ ಎನ್‌ಡಿಎ ಸರ್ಕಾರ ಕಾರ್ಮಿಕರಿಗೆ ದಿನಭತ್ಯೆ, ಕನಿಷ್ಠ ಕೂಲಿ 178 ರೂ. ನಿಗದಿ ಮಾಡಿದೆ. ಇದರಿಂದ ರೈತರು ಮತ್ತು ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಬಿಎಸ್‌ಎನ್‌ಎಲ್ ನಲ್ಲಿ 95 ಸಾವಿರ ನೌಕರರು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಸಾಮಾನ್ಯ ಜನರಿಗೆ ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ದೊರಕುತ್ತಿಲ್ಲ. ಇದರಿಂದಾಗಿ ಖಾಸಗಿ ಫೈನಾನ್ಸ್ ಕಂಪನಿಗಳೂ ಬಲಿಷ್ಟವಾಗುತ್ತಿವೆ. ಕಾರ್ಮಿಕರ ಬದುಕಿನಲ್ಲಿ ಯಾವುದೇ ಬದಲಾವಣೆ ಕಾಣುತ್ತಿಲ್ಲ ಎಂದರು.
ಮುಷ್ಕರ ಯಶಸ್ವಿಯಾಗಿಸಿ: ಕಾರ್ಪೊರೇಟರ್‌ಗಳ ಆಸ್ತಿಯಲ್ಲಿ 20 ಸಾವಿರ ಕೋಟಿ ಹೆಚ್ಚಳವಾಗಿದೆ. ಜನಸಾಮಾನ್ಯರ, ರೈತ-ಕಾರ್ಮಿಕರ ನಷ್ಟ – ಕಾರ್ಪೊರೆಟ್ ಸಂಸ್ಥೆಗಳಿಗೆ ಲಾಭ. ಕೇಂದ್ರ ಸರ್ಕಾರದ ಜನ ವಿರೋಧಿ, ರೈತ-ಕಾರ್ಮಿಕರ ವಿರೋಧಿ, ವಿದ್ಯಾರ್ಥಿ ಯುವಜನರ ವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸಲು ರಾಷ್ಟ್ರಾದ್ಯಂತ ನಡೆಯುವ ಜ. 8ರ ಸಾರ್ವತ್ರಿಕ ಮುಷ್ಕರಕ್ಕೆ ಚಿಲ್ಲರೆ ವ್ಯಾಪಾರಿಗಳು, ಕಟ್ಟಡ ಕಾರ್ಮಿಕರು, ಹಮಾಲಿ ಕೂಲಿ ಕಾರ್ಮಿಕರು ಮುಷ್ಕರ ಯಶಸ್ವಿಯಾಗಲು ಶ್ರಮಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಗುಣಶೇಖರ್, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಷ್ಪಾ, ಎಲ್‌ಐಸಿ ಮಂಜುನಾಥ್, ಅಧ್ಯಕ್ಷತೆ ವಹಿಸಿದ್ದ ಜಿ.ಪಿ.ಸತ್ಯನಾರಾಯಣ ಮಾತನಾಡಿದರು.