Advertisement

ರೈತ, ಶಿಕ್ಷಕರ ಸೇವೆ ಸಮಾಜಕ್ಕೆ ಅಗತ್ಯ

04:53 PM Sep 17, 2019 | Suhan S |

ರಾಮನಗರ: ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠವಾದದ್ದು, ರೈತ ಅಹಾರ ಬೆಳೆದು ಕೊಡುತ್ತಾನೆ. ಶಿಕ್ಷಕರು ಅಕ್ಷರ ಜ್ಞಾನ ತುಂಬುತ್ತಾರೆ. ಇಬ್ಬರ ಸೇವೆಯೂ ಸಮಾಜಕ್ಕೆ ಅಗತ್ಯವಿದೆ ಎಂದು ಶಾಸಕಿ ಅನಿತಾ ಹೇಳಿದರು.

Advertisement

ನಗರದ ಮಂಜುನಾಥ ಕನ್ವೆಷನ್‌ ಹಾಲ್ನಲ್ಲಿ ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆ-ರಾಮನಗರ ತಾಲೂಕು ಸಂಯುಕ್ತವಾಗಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿ, ಡಾ.ರಾಧಾಕೃಷ್ಣನ್‌ ಜನ್ಮದಿನದಂದೇ ಶಿಕ್ಷಕರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗುತ್ತಿದೆ. ಡಾ.ರಾಧಾಕೃಷ್ಣನ್‌ ಒಬ್ಬ ಶ್ರೇಷ್ಠ ಶಿಕ್ಷಕರಾಗಿದ್ದರು. ನಂತರ ಅವರು ರಾಷ್ಟಾಪತಿಯಾಗಿದ್ದರು. ಶಿಕ್ಷಕರಾಗಿ ಅವರ ಸೇವೆ ಅಪಾರ, ಅವರ ಸೇವೆ, ನಡವಳಿಕೆ ಶಿಕ್ಷಕರಿಗೆ ಮಾರ್ಗದರ್ಶಕವಾಗಿದೆ ಎಂದರು.

ಬಳಪ, ಸ್ಲೇಟು ಕಾಲ ಹೋಯ್ತು: ಬಳಪ ಸ್ಲೇಟು ಬಳಸುತ್ತಿದ್ದ ಕಾಲ ಹೋಯ್ತು, ಈಗೇನಿದ್ದರು ಮೌಸ್‌, ಕೀಬೋರ್ಡ್‌ನ ಕಾಲ. ತಂತ್ರಜ್ಞಾನ ದಿನೇ ದಿನೆ ಅಭಿವೃದ್ಧಿಯಾಗುತ್ತಿದೆ. ಆಧುನಿಕ ಜಗತ್ತಿಗೆ ತಕ್ಕಂತೆ ವಿದ್ಯಾರ್ಥಿಗಳನ್ನು ರೂಪಿಸುವ ಹೊಣೆ ಶಿಕ್ಷಕರದ್ದಾಗಿದೆ. ಕನ್ನಡ ಭಾಷೆಗೆ ಅಗ್ರಸ್ಥಾನ ಕೊಡಿ, ವ್ಯವಹಾರಕ್ಕೆ ಇಂದು ಇಂಗ್ಲಿಷ್‌ ಭಾಷೆಯ ಅರಿವು ಬೇಕಾಗಿದೆ. ಹೀಗಾಗಿ ಇಂಗ್ಲೀಷನ್ನು ಕಲಿಸಿ ಎಂದು ಶಿಕ್ಷಕರಿಗೆ ಸಲಹೆ ನೀಡಿದರು.

ಶಿಕ್ಷಕರ ಸಮಸ್ಯೆ ಪರಿಹಾರಕ್ಕೆ ಸಿಎಂಗೆ ಪತ್ರ: ಎಚ್.ಡಿ.ಕುಮಾರಸ್ವಾಮಿ ಅವರು ಸಿಎಂ ಆಗಿದ್ದ ವೇಳೆ ಶಿಕ್ಷಣ ಕ್ಷೇತ್ರದ ಸಾಕಷ್ಟು ಅಭಿವೃದ್ಧಿ ತಂದಿದ್ದಾರೆ. ರಾಮನಗರ ಕ್ಷೇತ್ರದಲ್ಲಿಯೂ ಅನೇಕ ಶಾಲಾ, ಕಾಲೇಜುಗಳನ್ನು ಮಂಜೂರು ಮಾಡಿದ್ದಾರೆ. ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು ಸಹ ಸ್ಥಾಪನೆಯಾಗಿದೆ. ಅವರ ಹಾದಿಯಲ್ಲೇ ತಾವು ಸಾಗುತ್ತಿರುವುದಾಗಿ, ಶಿಕ್ಷಣ ಕ್ಷೇತ್ರದ ಬಗ್ಗೆ ಕಾಳಜಿ ಇದೆ. ಶಿಕ್ಷಕರ ಸಮಸ್ಯೆಗಳ ಬಗ್ಗೆಯೂ ತಮಗೆ ಅರಿವಿದೆ. ಸಮಸ್ಯೆಗಳ ಪರಿಹಾರಕ್ಕೆ ತಾವು ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವುದಾಗಿ ಭರವಸೆ ನೀಡಿದರು.

ಪದವೀಧರ ಶಿಕ್ಷಕರಿಗೆ ಬಡ್ತಿ: ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಎಂಎಲ್ಸಿ ಅ.ದೇವೇಗೌಡ ಮಾತನಾಡಿ, ಕತ್ತಲೆಯಿಂದ ಬೆಳಕಿನಡೆಗೆ ಕರೆದೊಯ್ಯುವವರೇ ಶಿಕ್ಷಕರು. ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು. ನಾಗರಿಕರ ಸಮಾಜಕ್ಕೆ ಶಿಕ್ಷಕರ ಅಗತ್ಯವಿದೆ. ಪದವೀಧರ ಶಿಕ್ಷಕರಿಗೆ ಬಡ್ತಿ ನೀಡುವಂತೆ ತಾವು ಈಗಾಗಲೆ ಮುಖ್ಯ ಮಂತ್ರಿಗಳು ಮತ್ತು ಸಂಬಂಧಿಸಿದ ಸಚಿವರ ಗಮನ ಸೆಳೆದಿರುವುದಾಗಿ ತಿಳಿಸಿದರು.

Advertisement

ತಾವು ಪದವೀಧರರ ಕ್ಷೇತ್ರದಿಂದ ಆರಿಸಿ ಬಂದಿದ್ದರೂ, ಶಿಕ್ಷಕರ ಸಮಸ್ಯೆಗಳ ಬಗ್ಗೆ ಅರಿವಿದೆ. ತಾವೂ ಸಹ ಶಿಕ್ಷಕರಾಗಿ ನಂತರ ಬಂಗಾರಪ್ಪ ಸಿಎಂ ಆಗಿದ್ದ ಸಂದರ್ಭದಲ್ಲಿ ತಾವು ವಿಧಾನಸೌಧದಲ್ಲಿ ನೌಕರಿಗಿದಿದ್ದಾಗಿ, ಈ ವೇಳೆ ಶಿಕ್ಷಕರ ಸಮಸ್ಯೆಗಳ ಬಗ್ಗೆ ಅರ್ಥ ಮಾಡಿಕೊಂಡಿದ್ದೇವೆ. ವೈಯಕ್ತಿಕವಾಗಿ ತಾವು ಅನೇಕ ನಿರುದ್ಯೋಗಿ ಪದವೀಧರರಿಗೆ ತರಬೇತಿಯನ್ನು ಕೊಟ್ಟು ಉದ್ಯೋಗವನ್ನು ಕೊಡಿಸಿದ್ದೇವೆ. ಪದವೀಧರ ಕ್ಷೇತ್ರದಿಂದ ಆಯ್ಕೆಯಾಗಿದ್ದಕ್ಕೆ ಋಣ ತೀರಿಸಿರುವುದಾಗಿ ಹೇಳಿದರು.

ಶಿಕ್ಷಕರಿಗೆ ಗೌರವ: ನಿವೃತ್ತ ಶಿಕ್ಷಕರು, ಉತ್ತಮ ಸೇವೆ ಸಲ್ಲಿಸುತ್ತಿರುವ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಶಿಕ್ಷಕರನ್ನು ಮಾಗಡಿ ಶಾಸಕ ಎ.ಮಂಜುನಾಥ ಇಲಾಖೆಯ ಪರವಾಗಿ ಗೌರವಿಸಿದರು. ತಾಪಂ ಅಧ್ಯಕ್ಷ ಗಾಣಕಲ್ ನಟರಾಜು ಮಾತನಾಡಿದರು.

ಜಿಪಂ ಉಪಾಧ್ಯಕ್ಷೆ ಜಿ.ಡಿ.ವೀಣಾಕುಮಾರಿ, ತಾಪಂ ಉಪಾಧ್ಯಕ್ಷೆ ರಮಾಮಣಿ, ಡಿಡಿಪಿಐ ಗಂಗಮಾರೇಗೌಡ, ಜೆಡಿಸ್‌ ಪ್ರಮುಖರಾದ ರಾಜಶೇಖರ್‌, ಬಿ.ಉಮೆಶ್‌, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್‌.ಕೆ.ಬೈರಲಿಂಗಯ್ಯ, ಕ್ಷೇತ್ರ ಸಮನ್ವಯಾಧಿಕಾರಿಗಳಾದ ಸಂಪತ್‌ ಕುಮಾರ್‌, ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಿ ವೈ.ಟಿ.ಪ್ರಸನ್ನಕುಮಾರ್‌ ಉಪಸ್ಥಿತರಿದ್ದರು. ಬಿಇಒ ಮರೀಗೌಡ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next