Advertisement

ರೈತಪರ ಕೃಷಿ ಸಂಶೋಧನೆ ಹೆಚ್ಚಲಿ: ಡಾ|ಮಹಾಪಾತ್ರ

07:16 AM Jun 18, 2019 | Suhan S |

ಧಾರವಾಡ: ಹಳ್ಳಿಯಲ್ಲಿರುವ ಸಣ್ಣ ರೈತರಿಗೆ ಅನುಕೂಲವಾಗುವ ಕೃಷಿ ಸಂಶೋಧನೆಗಳನ್ನು ನಡೆಸುವ ಮೂಲಕ ಕೃಷಿ ವಿಜ್ಞಾನಿಗಳು ಮತ್ತು ಪದವೀಧರರು ರೈತರ ಬೆಳವಣಿಗೆಗೆ ಶ್ರಮಿಸಬೇಕು ಎಂದು ಭಾರತ ಸರ್ಕಾರದ ಕೃಷಿ ಸಂಶೋಧನೆ ಹಾಗೂ ಶಿಕ್ಷಣ ವಿಭಾಗದ ಕಾರ್ಯದರ್ಶಿ ಮತ್ತು ದೆಹಲಿಯ ಕೃಷಿ ಅನುಸಂಧಾನ ಪರಿಷತ್‌ ಮಹಾನಿರ್ದೇಶಕ ಡಾ|ತ್ರಿಲೋಚನ ಮಹಾಪಾತ್ರ ಹೇಳಿದರು.

Advertisement

ಇಲ್ಲಿನ ಕೃಷಿ ವಿವಿ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಸೋಮವಾರ ನಡೆದ 32ನೇ ಘಟಿಕೋತ್ಸವದಲ್ಲಿ ಘಟಿಕೋತ್ಸವ ಭಾಷಣ ಮಾಡಿದ ಅವರು, ಕೃಷಿಯಲ್ಲಿ ಪಡೆದ ಉತ್ತಮ ಶಿಕ್ಷಣದಿಂದ ಪ್ರತಿಭಾವಂತರು ದೇಶಕ್ಕೆ, ಜಗತ್ತಿಗೆ ಹೊಸ ಕೃಷಿ ತಳಿಗಳನ್ನು ಸಂಶೋಧಿಸಿ ಪರಿಚಯಿಸಬೇಕು. 2017ರಲ್ಲಿ ಧಾರವಾಡ ಕೃಷಿ ವಿವಿಗೆ ದೇಶದ ಉತ್ತಮ ಕೃಷಿ ವಿವಿ ಎಂಬ ಪ್ರಶಸ್ತಿ ಬಂದಿದೆ. ಇಂತಹ ಪ್ರತಿಷ್ಠಿತ ಸಂಸ್ಥೆಯಲ್ಲಿ ದೇಶದ ರೈತರಿಗೆ ಒಳಿತು ಮಾಡುವ ಸಂಶೋಧನೆಗಳು ಪರಿಣಾಮಕಾರಿಯಾಗಿ ನಡೆಯಬೇಕು ಎಂದು ಹೇಳಿದರು.

ಎಲ್ಲ ಕೃಷಿ ವಿಜ್ಞಾನಿಗಳು ಒಗ್ಗಟ್ಟಿನಿಂದ ವೈವಿಧ್ಯಮಯ ಆಹಾರ ಸಂಸ್ಕೃತಿಯನ್ನು ಉತ್ತಮ ಪಡಿಸಬೇಕು. ಅವುಗಳಲ್ಲಿ ಮಾರುಕಟ್ಟೆಗಳ ವ್ಯವಸ್ಥೆ ಹೆಚ್ಚಾಗಬೇಕು. ನಮ್ಮಲ್ಲಿ ಸಾಕಷ್ಟು ಮಾನವ ಸಂಪನ್ಮೂಲಗಳಿವೆ. ಕೊಯ್ಲೋತ್ತರ ಕೃಷಿ ಚಟುವಟಿಕೆಗಳಿಗೆ ಪರಿಸರ ಸ್ನೇಹಿ ತಂತ್ರಜ್ಞಾನವನ್ನು ಕೂಡ ಅಳವಡಿಸಿಕೊಳ್ಳಬೇಕೆಂದರು.

ಸರ್ಕಾರ ರೈತರ ಬೆನ್ನಿಗಿದೆ: ಬರಗಾಲ, ಅಂತರ್ಜಲ ಕುಸಿತ ರೈತ ಸಮುದಾಯದಲ್ಲಿ ತಳಮಳ ಸೃಷ್ಟಿಸಿದೆ. ಇದೆಲ್ಲವನ್ನು ಪರಿಗಣಿಸಿಯೇ ಭಾರತ ಸರ್ಕಾರ ರೈತರಿಗೆ ಅನೇಕ ಯೋಜನೆಗಳ ಮೂಲಕ ಅವರ ಆದಾಯವನ್ನು 2022ರ ಒಳಗಾಗಿ ದ್ವಿಗುಣಗೊಳ್ಳುವಂತೆ ಯೋಜಿಸಿದೆ. ಕೃಷಿಯಲ್ಲಿ ಕಡಿಮೆ ಜಾಗದಲ್ಲಿ ಹೆಚ್ಚಿನ ಇಳುವರಿ ಬರುವ ತಳಿಗಳು ಮತ್ತು ತಂತ್ರಜ್ಞಾನಗಳನ್ನು ಕೃಷಿ ವಿಜ್ಞಾನಿಗಳು ಕೊಡುಗೆಯಾಗಿ ನೀಡಬೇಕಿದೆ ಎಂದು ಮಹಾಪಾತ್ರ ಹೇಳಿದರು.

ನೀರಿನ ಮಿತಬಳಕೆ ಅಗತ್ಯ: ಹನಿ ಹನಿ ನೀರು ಕೂಡ ಮುಖ್ಯ ಎನಿಸುತ್ತಿದೆ. ಹೀಗಾಗಿ ಕೃಷಿಯಲ್ಲಿ ಹನಿ ನೀರಾವರಿ ಮತ್ತು ಅದರ ಬಳಕೆ ತಂತ್ರಗಳಲ್ಲಿ ಸಾಕಷ್ಟು ಅನ್ವೇಷಣೆಗಳು ನಡೆಯಬೇಕಿದೆ. 2050ಕ್ಕೆ ಕೃಷಿಗೆ ಪೂರೈಕೆಯಾಗುತ್ತಿರುವ ನೀರಿನ ಪ್ರಮಾಣದಲ್ಲಿ ಸಾಕಷ್ಟು ಕುಸಿತ ಉಂಟಾಗಲಿದ್ದು, ರೈತರು ಈಗಿನಿಂದಲೇ ಎಚ್ಚರಿಕೆ ವಹಿಸಬೇಕಿದೆ. ಸದ್ಯಕ್ಕೆ ಕೈಗಾರಿಕೆ, ನಗರಗಳು ಮತ್ತು ಕೊಳಚೆ ಪ್ರದೇಶಗಳಿಂದ ಹೊರಬರುವ ಕೊಳಚೆ ನೀರನ್ನೇ ಶುದ್ಧೀಕರಿಸಿ ಮರುಬಳಕೆ ಮಾಡಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಇದನ್ನು ಪರಿಪೂರ್ಣವಾಗಿ ಬಳಸಿಕೊಂಡಲ್ಲಿ ಕೃಷಿಯ ಶೇ.30 ಭೂಮಿಗೆ ಇದೇ ನೀರನ್ನು ಬಳಸಿಕೊಳ್ಳಲು ಸಾಧ್ಯವಿದೆ ಎಂದು ಡಾ| ಮಹಾಪಾತ್ರ ಸಲಹೆ ನೀಡಿದರು.

Advertisement

ಕೃಷಿ ಸಚಿವ ಎನ್‌.ಎಚ್. ಶಿವಶಂಕರರೆಡ್ಡಿ ಅವರು ಪದವೀಧರರಿಗೆ ಪ್ರತಿಜ್ಞಾವಿಧಿ ಬೋಧಿಸಿ, ಪದವಿಗಳ ಘನತೆಗೆ ತಕ್ಕಂತೆ ವರ್ತಿಸುವ ಸಲಹೆ ನೀಡಿದರು. ವಿವಿ ಕುಲಪತಿ ಡಾ| ಮಹದೇವ ಬಿ. ಚೆಟ್ಟಿ ವಾರ್ಷಿಕ ವರದಿ ವಾಚಿಸಿ, ವಿವಿಯ ಸಾಧನೆಗಳನ್ನು ವಿವರಿಸಿದರು. ಶಾಸಕ ಪ್ರಸಾದ ಅಬ್ಬಯ್ಯ, ಕುಲಸಚಿವ ಪಿ.ಯು. ಕೃಷ್ಣರಾಜ, ಸಂಶೋಧನಾ ನಿರ್ದೇಶಕ ಡಾ| ಎಚ್.ಎಲ್. ನದಾಫ್‌, ವಿಸ್ತರಣಾ ನಿರ್ದೇಶಕ ಎಚ್. ವೆಂಕಟೇಶ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು, ವಿವಿಧ ನಿಖಾಯಗಳ ಡೀನ್‌ಗಳು ವೇದಿಕೆಯಲ್ಲಿದ್ದರು.

ಪಶ್ಚಿಮಘಟ್ಟ ಆಧರಿಸಿ ಕೃಷಿ ಸಂಶೋಧನೆ ನಡೆಸಿ:

ಅಪೌಷ್ಟಿಕತೆ ಹೋಗಲಾಡಿಸಲು ಉತ್ತಮ ತಳಿಯ ಬೆಳೆಗಳು ಹೊರಬರಬೇಕು. ಕಿರುಧಾನ್ಯ ಸಿರಿಧಾನ್ಯ ಬೆಳೆಗಳಿಗೆ ಒತ್ತು ನೀಡಬೇಕು. ಹೆಚ್ಚು ಇಳುವರಿ ಮತ್ತು ಕಡಿಮೆ ನೀರಿನಲ್ಲಿ ಬೆಳೆಯುವ ಬೆಳೆಗಳ ಅನ್ವೇಷನೆಯಾಗಬೇಕು. ಸೋಲಾರ್‌ ಆಧಾರಿತ ಕೃಷಿ ತಂತ್ರಜ್ಞಾನ ಹೆಚ್ಚಬೇಕು. ಗ್ರಾಪಂ ಮಟ್ಟದಲ್ಲಿ ಕೃಷಿ ಪದವೀಧರರು ಹೋಗಿ ಕೆಲಸ ಮಾಡಬೇಕು. ಕರ್ನಾಟಕದ ದೃಷ್ಟಿಯಿಂದ ಕೃಷಿಗೆ ಪಶ್ಚಿಮ ಘಟ್ಟಗಳ ಕೊಡುಗೆ ಅನನ್ಯವಾಗಿದೆ. ಪಶ್ಚಿಮಘಟ್ಟ ಮತ್ತು ಕೃಷಿ ಎರಡನ್ನೂ ಇಟ್ಟುಕೊಂಡು ಹೆಚ್ಚಿನ ಸಂಶೋಧನೆಗಳೂ ನಡೆದರೆ ಕೃಷಿ ಉತ್ಪಾದನೆ ಹೆಚ್ಚಿಸಲು ಸಾಧ್ಯವಿದೆ ಎಂದು ಡಾ| ಮಹಾಪಾತ್ರ ಹೇಳಿದರು.
Advertisement

Udayavani is now on Telegram. Click here to join our channel and stay updated with the latest news.

Next