Advertisement
ಖುದ್ದು ಪ್ರಧಾನಿಯವರೇ ಸಂಸತ್ ಸೇರಿದಂತೆ ಹಲವು ಸಂದರ್ಭಗಳಲ್ಲಿ ಮೂರು ರೈತ ಕಾಯ್ದೆಗಳಾಗಿರುವ ಕೃಷಿ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ ಕಾಯ್ದೆ 2020, ರೈತರ (ಸಶಕ್ತೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಒಪ್ಪಂದ ಕಾಯ್ದೆ 2020, ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳನ್ನು ಹಲವು ಬಾರಿ ಸಮರ್ಥಿಸಿಕೊಂಡಿದ್ದರು. ಹಾಗಿದ್ದರೆ ರೈತಪರ ಎಂದು ಪ್ರಧಾನಿ ಯವರಿಂದಲೇ ಬಣ್ಣಿತವಾದ ಕಾಯ್ದೆಗಳಿಗೆ ರದ್ದು ಎಂಬ ಮುದ್ರೆ ಯನ್ನು ಸದ್ಯಕ್ಕೆ ಒತ್ತಿದ್ದೇಕೆ ಎನ್ನುವ ಪ್ರಶ್ನೆ ಸಹಜವೇ.
Advertisement
ಉತ್ತರ ಪ್ರದೇಶದ ಪಶ್ಚಿಮ ಭಾಗದ ಜಿಲ್ಲೆಗಳಾಗಿರುವ ಮೀರತ್, ಬುಲಂದ್‌ಶಹರ್, ಗೌತಮ ಬುದ್ಧನಗರ, ಘಾಝಿಯಾ ಬಾದ್, ಹಾಪುರ್, ಭಾಗ³ತ್, ಸಹರಾನ್ಪುರ್, ಮುಝಾಫರ್‌ನಗರ್, ಶಾಮ್ಲಿ, ಮೊರಾದಾಬಾದ್, ಬಿಜೂ°ರ್, ರಾಮ್‌ಪುರ್, ಅನ್ರೋಹಾ, ಸಂಭಾಲ್, ಬರೇಲಿ, ಬದೌನ್, ಫಿಲಿಭಿತ್, ಶಹಜ ಹಾನ್ಪುರ್, ಆಗ್ರಾ, ಫಿರೋಜಾಬಾದ್, ಮೈನ್‌ಪುರಿ, ಮಥುರಾ, ಅಲಿಗಢ, ಎಟಾ, ಹತ್ರಾಸ್, ಎಟಾವಾ, ಅರಾರಿಯಾ, ಫರೂಕಾಬಾದ್‌ಗಳಲ್ಲಿ ಕೃಷಿಯೇ ಪ್ರಧಾನ ಜೀವನಾಧಾರ. ಅಲ್ಲಿ ರಾಮಜನ್ಮಭೂಮಿ ರಾಜಕೀಯದ ಪ್ರಧಾನ ಅಸ್ತ್ರವಾಗುವ ಮೊದಲು ರೈತರ ವಿಚಾರಗಳೇ ರಾಜಕೀಯದ ಅಸ್ತ್ರ-ಪ್ರತ್ಯಸ್ತ್ರಗ ಳಾಗಿದ್ದವು. ಎಸ್‌ಪಿ, ಬಿಎಸ್ಪಿ, ಬಿಜೆಪಿಗಳ ನಡುವೆ 1990ರಲ್ಲಿ ರೈತ ಮುಖಂಡ ಮಹೇಂದ್ರ ಸಿಂಗ್ ಟಿಕಾಯತ್ ಅವರ ಭಾರತೀಯ ಕಿಸಾನ್ ಯೂನಿಯನ್ ರೈತರ ಹೋರಾಟಕ್ಕೆ ಇಂಬು ಕೊಟ್ಟಿತ್ತು. 2013ರಲ್ಲಿ ಮುಝಾಫರ್‌ನಗರದಲ್ಲಿ ಉಂಟಾದ ದಂಗೆ ರೈತರ ಒಗ್ಗಟ್ಟನ್ನು ಮುರಿಯಿತು. ಅದರ ಲಾಭ ಬಿಜೆಪಿಗೆ ಆಯಿತು.
ಇದನ್ನೂ ಓದಿ:ಮರೆಗುಳಿ ಕಾಯಿಲೆ ಮೂಲ ಪತ್ತೆ; ಐಐಟಿ ಮಂಡಿ ಸಂಶೋಧಕರಿಂದ ಮಹತ್ವದ ಸಂಶೋಧನೆ
ಮತ್ತೊಂದು ಗಮನಾರ್ಹ ಅಂಶವೆಂದರೆ ಈ ಜಿಲ್ಲೆಗಳ ಪೈಕಿ 16ರಲ್ಲಿ ಒಟ್ಟು 136 ವಿಧಾನಸಭಾ ಕ್ಷೇತ್ರಗಳಿವೆ. ಜತೆಗೆ ಈ ಜಿಲ್ಲೆಗಳಲ್ಲಿ ಜಾಟರೇ ಪ್ರಭಾವಿಗಳು ಮತ್ತು ಈ ಭಾಗದಲ್ಲಿ ರೈತ ಸಮುದಾಯದ ಹೋರಾಟದ ನೇತೃತ್ವವೂ ಅವರದ್ದೇ. ಹೀಗಾಗಿ ಕಾಯ್ದೆಗಳಿಂದ ಕ್ರುದ್ಧಗೊಂಡಿರುವ ಅವರು ಬಿಜೆಪಿ ವಿರುದ್ಧ ನಡೆದರೆ ಪೆಟ್ಟು. ಅದನ್ನು ತಪ್ಪಿಸುವುದೂ ಬಿಜೆಪಿಗೆ ಬೇಕಾಗಿದೆ. ಹೀಗಾಗಿ ಬ್ರಜ್ ಪ್ರದೇಶ (ಮಥುರಾ, ಅಲಿಗಢ, ಹತ್ರಾಸ್, ಜಲ್ಸೇರ್- ಇಟಾವಾ ಜಿಲ್ಲೆಯ ಉಪ-ವಿಭಾಗ)ದಲ್ಲಿ ಬಿಜೆಪಿಯ ಮತಗಳು ಮತ್ತು ಕ್ಷೇತ್ರಗಳನ್ನು ಹಿಡಿತದಲ್ಲಿರಿಸಲು ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನೇ ನಿಯೋಜಿಸಲಾಗಿದೆ. ಈ ಪ್ರದೇಶದಲ್ಲಿ ಕಳೆದ ಚುನಾವಣೆಯಲ್ಲಿ 115 ಕ್ಷೇತ್ರಗಳಲ್ಲಿ ಗೆದ್ದಿದೆ. 2019ರ ಲೋಕಸಭೆ ಚುನಾವಣೆಯಲ್ಲಿ 27 ಕ್ಷೇತ್ರಗಳ ಪೈಕಿ 24ರಲ್ಲಿ ಗೆದ್ದಿತ್ತು. ಬಹುಮತಕ್ಕೆ ಒಂದೊಂದು ಸ್ಥಾನವೂ ಪ್ರಧಾನವಾಗಿರುವ ಹಿನ್ನೆಲೆಯಲ್ಲಿ 2017ರ ಹಿಡಿತವನ್ನೇ ಮುಂದುವರಿಯಲು ಬಿಜೆಪಿ ಸಿದ್ಧತೆಯಲ್ಲಿದೆ. ಈ ಪ್ರದೇಶದ ಬಿಜೆಪಿಯ ಮುಖಂಡರೊಬ್ಬರೇ ಹೇಳಿರುವಂತೆ “ಉ.ಪ್ರ.ದ ಪಶ್ಚಿಮ ಭಾಗವನ್ನು ಕಳೆದುಕೊಂಡರೆ, ಆಡಳಿತವನ್ನೇ ಕಳೆದುಕೊಂಡಂತೆ. ಏಕೆಂದರೆ, ದೇಶದ ರಾಜಧಾನಿ ಹೊಸದಿಲ್ಲಿಗೆ ಸಂಪರ್ಕ ಇದೇ ಭಾಗದ ಮೂಲಕ ಆಗಬೇಕು’. ಈ ಮಾತಿನಲ್ಲಿರುವ ಸೂಕ್ಷ್ಮತೆಯನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಾಗಿದೆ.
ಪಂಜಾಬ್‌ನಲ್ಲಿ ಅಧಿಕಾರಕ್ಕೆ ಏರಬೇಕು ಎನ್ನುವುದು ಬಿಜೆಪಿಯ ಕನಸು. ಸದ್ಯ ಆ ರಾಜ್ಯದ ಒಟ್ಟು ಸ್ಥಾನಗಳ ಸಂಖ್ಯೆ 117 ಪೈಕಿ ಬಿಜೆಪಿಯ ಮೂವರು ಶಾಸಕರು ಇದ್ದಾರೆ. ಹೀಗಾಗಿ ಅಲ್ಲಿ ಅಧಿಕಾರಕ್ಕೆ ಬರಲು ಏನಾದರೂ ಒಂದು ಸೂತ್ರ ಬೇಕು. ಸಂಸತ್‌ನಲ್ಲಿ ಮೂರು ಕಾಯ್ದೆ ಗಳನ್ನು ಅಧ್ಯಾದೇಶ ಮೂಲಕ ಜಾರಿಗೆ ತಂದು ಅನುಮೋದನೆ ಪಡೆಯುವ ಲ್ಲಿಯ ವರೆಗೆ ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಮತ್ತು ಬಿಜೆಪಿ ಪಂಜಾಬ್‌ನಲ್ಲಿ ಮೈತ್ರಿ ಮಾಡಿಕೊಂಡಿದ್ದವು. 2017ರ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಂಡಿದ್ದ ಅಕಾಲಿ ದಳ ಕಾಯ್ದೆ ನೆಪವೊಡ್ಡಿ ಬಿಜೆಪಿ ಜತೆಗಿನ ಮೈತ್ರಿ ಕಡಿದುಕೊಂಡಿತ್ತು. ಇತ್ತೀಚೆಗೆ ಪ್ರಕಟಗೊಂಡಿರುವ ಚುನಾವಣ ಪೂರ್ವ ಸಮೀಕ್ಷೆಗಳ ಪ್ರಕಾರ ಅಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳಲಿದೆಯಂತೆ. ಹೇಗೂ, ಮಾಜಿ ಮುಖ್ಯ ಮಂತ್ರಿ ಕ್ಯಾ| ಅಮರೀಂದರ್ ಸಿಂಗ್ “ಪಂಜಾಬ್ ಲೋಕ ಕಾಂಗ್ರೆಸ್’ ಎಂಬ ಹೊಸ ಪಕ್ಷ ಸ್ಥಾಪಿಸಿದ್ದಾರೆ. ಅವರ ಮೂಲಕ ಬಿಜೆಪಿ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿಯನ್ನು ಹಿಡಿಯುವುದೋ, ಸರಕಾರ ರಚನೆ ನಿಟ್ಟಿನಲ್ಲಿ ಸೂತ್ರಧಾರನ ಪಾತ್ರವಹಿಸುವುದೋ ಎಂಬ ಬಗ್ಗೆ ಪರಿಸ್ಥಿತಿ ನೋಡಿಕೊಂಡು ಲೆಕ್ಕಾಚಾರ ಮಾಡುವ ಹಂತದಲ್ಲಿದೆ. ಏಕೆಂದರೆ 1996ರಲ್ಲಿ ಎಸ್‌ಎಡಿ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡು 24 ವರ್ಷ ಗಳ ಕಾಲ ಮುಂದುವರಿದಿತ್ತು ಮತ್ತು 2 ಅಧಿಕಾರವನ್ನೂ ನಡೆಸಿದ್ದವು. ಹೀಗಾಗಿ ಬಿಜೆಪಿಗೆ ಆ ರಾಜ್ಯದಲ್ಲಿ ಏಕಾಂಗಿ ಸ್ಪರ್ಧೆ ಹೊಸತು.
ಅದಕ್ಕೆ ಪೂರಕವಾಗಿ ಮುಂದಿನ ವರ್ಷದ ಚುನಾವಣೆಯಲ್ಲಿ ಆ ರಾಜ್ಯದಲ್ಲಿ ಚತುಷೊRàನ ಸ್ಪರ್ಧೆ ಉಂಟಾಗುವುದು ಖಚಿತ. ಆಡಳಿತಾರೂಡ ಕಾಂಗ್ರೆಸ್, ವಿಪಕ್ಷ ಅಕಾಲಿದಳ, ಆಮ್ ಆದ್ಮಿ ಪಾರ್ಟಿ, ಬಿಜೆಪಿ ಮತ್ತು ಅಮರಿಂದರ್ ಸಿಂಗ್ ಅವರ ಹೊಸ ಪಕ್ಷ ಜಂಟಿಯಾಗಿ ಸ್ಪರ್ಧೆ. 2017ರ ಚುನಾವಣೆ ಬಳಿಕ ಮತ್ತು ಕೃಷಿ ಕಾಯ್ದೆ ರದ್ದಾಗಿರುವುದು ಈ ಬೆಳವಣಿಗೆ ನಿರ್ಮಾಣ ಮಾಡಲಿದೆ.
ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡಿದ್ದರ ಪರಿಣಾಮವಾಗಿ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಮತಗಳು ಬರಲಾರವು ಎನ್ನುವುದು ಖುದ್ದು ಪ್ರಧಾನಿ ಮೋದಿಯವರಿಗೆ ಮತ್ತು ಶಾ ಅವರಿಗೂ ಗೊತ್ತಿದೆ. ಹಾಗೆಂದ ಮಾತ್ರಕ್ಕೆ ಇರುವ ಸ್ಥಾನಗಳನ್ನು ಉಳಿಸಿಕೊಳ್ಳುವುದರ ಜತೆಗೆ ಸಾಧ್ಯವಾದರೆ, ಒಂದೆರಡು ಕ್ಷೇತ್ರಗಳಲ್ಲಿ ಗೆಲ್ಲಬೇಕು ಎನ್ನುವುದು ಲೆಕ್ಕಾಚಾರ. ಜತೆಗೆ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ “ಬಿಜೆಪಿ ರೈತ ವಿರೋಧಿ’ ಆರೋಪಗಳನ್ನು ತೊಳೆದುಕೊಳ್ಳುವುದು ಪ್ರಧಾನವಾಗಿ ರಲಿದೆ. ಜತೆಗೆ ಪ್ರಧಾನಿ ಮೋದಿಯವರ ಘೋಷಣೆ ಕಾಂಗ್ರೆಸ್, ಎಸ್‌ಎಡಿ, ಆಪ್‌ಗ್ಳಿಗೆ ಪ್ರಚಾರದ ವೇಳೆ ನುಂಗಲಾರದ ತುತ್ತಾಗಿ ಪರಿಣಮಿಸಲಿದೆ. ಪಂಜಾಬ್‌ನ ಜಲಂಧರ್, ಹೋಶಿಯಾರ್‌ಪುರ್, ಪಠಾಣ್‌ಕೋಟ್ ಜಿಲ್ಲೆಗಳಲ್ಲಿ ಉತ್ತಮ ಮತ ಬ್ಯಾಂಕ್ ಇದೆ. ಅದರ ಆಧಾರದಲ್ಲಿ ರಾಜ್ಯದ ಇತರ ಭಾಗಗಳಲ್ಲಿ ಪಕ್ಷದ ವರ್ಚಸ್ಸು ಮತ್ತು ಬಲ ವೃದ್ಧಿಸಬೇಕಾಗಿದೆ.
ಇನ್ನು ಮೂರು ಕಾಯ್ದೆಗಳನ್ನು ರದ್ದು ಮಾಡಿದ್ದರಿಂದ ಪ್ರಧಾನಿ ನರೇಂದ್ರ ಮೋದಿಯವರು ಮತ್ತು ಕೇಂದ್ರ ಸರಕಾರದ ವರ್ಚಸ್ಸಿಗೆ ಧಕ್ಕೆಯಾಯಿತು ಎಂಬ ವಾದಗಳೂ ಇವೆ. ರಾಜಕೀಯವೆಂಬ ಯುದ್ಧದಲ್ಲಿ ಸೋಲು ಮತ್ತು ಗೆಲುವುಗಳು ಇದ್ದದ್ದೇ ಎನ್ನುವ ಅಂಶ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದವರಿಗೂ ಗೊತ್ತು. ರಫೇಲ್ ಯುದ್ಧ ವಿಮಾನಗಳ ವಿಚಾರ ಮುಂದಿಟ್ಟುಕೊಂಡು ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಪದೇ ಪದೆ ಆರೋಪ ಮಾಡುತ್ತಾ ಬಂದರು. ಚುನಾವಣೆಯಲ್ಲಿ ಅವರ ಪಕ್ಷಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚಾಯಿತು. ಹೀಗಾಗಿ ಮೂರು ಕಾಯ್ದೆಗಳನ್ನು ರದ್ದು ಮಾಡಿದ್ದರಿಂದಲಾಗಿ ಪ್ರತಿಪಕ್ಷಗಳಿಗೆ ಉಂಟಾಗುವ ಹಾನಿಗಿಂತ ಬಿಜೆಪಿಗೇ ಲಾಭ ಹೆಚ್ಚು ನಿರೀಕ್ಷಿಸಲಾಗಿದೆ. ಏಕೆಂದರೆ 2022 ವರ್ಷಾಂತ್ಯಕ್ಕೆ ಹಿಮಾಚಲ ಪ್ರದೇಶ, ಗುಜರಾತ್ ವಿಧಾನಸಭೆಗಳಿಗೆ ಚುನಾವಣೆಯಲ್ಲಿಯೂ ಗೆಲ್ಲುವುದು ಬಿಜೆಪಿಗೆ ಅನಿವಾರ್ಯ.
-ಸದಾಶಿವ ಕೆ.