ತೆರೆದ ಬಾವಿಗಳಲ್ಲಿ ನೀರಿಲ್ಲವೆಂದು ಅವುಗಳನ್ನು ನಿರ್ದಾಕ್ಷಿಣ್ಯವಾಗಿ ಮುಚ್ಚಿಹಾಕುತ್ತಿರುವ ಕಾಲವಿದು. ಈ ಉದಾಹರಣೆಗಳಿಗೆ ವ್ಯತಿರಿಕ್ತವಾಗಿ ಒಣಗುತ್ತಿದ್ದ ಕೊಳವೆಬಾವಿಗಳಿಗೆ ಆಸರೆಯಾದ ಒಂದು ತೆರೆದ ಬಾವಿಯ ಕಥೆ ಇದು..
ಹಿರಿಯೂರು ತಾಲ್ಲೂಕು, ಸೂಗೂರಿನ ತಿಪ್ಪಮ್ಮ 1983ರಲ್ಲಿ ಒಂದು ತೆರೆದ ಬಾವಿ ತೆಗೆಸಿದರು. ಆರಂಭದ 4- 5 ವರ್ಷ ನೀರಿಗೆ ಯಾವುದೇ ರೀತಿಯ ಸಮಸ್ಯೆ ಉಂಟಾಗಲಿಲ್ಲ. ಆನಂತರ ಮಳೆ ಕೊರತೆ ಹಾಗೂ ಅಂತರ್ಜಲ ಕುಸಿತದಿಂದ ನೀರು ಬತ್ತಿ ಹೋಯಿತು. 1990ರ ವೇಳೆಗೆ ಕ್ರಮೇಣ ದಡ ಕುಸಿದು ಮಣ್ಣುತುಂಬಿಕೊಂಡು ಅದು ಹಾಳು ಬಾವಿಯಾಗಿ ಮಾರ್ಪಾಡಾಯಿತು. ಕೊಳವೆಬಾವಿಯ ಆಗಮನವೂ ಸಹ ಇದನ್ನು ನಿರ್ಲಕ್ಷ್ಯ ಮಾಡಲು ಪ್ರಮುಖ ಕಾರಣ.
ಕೊಳವೆಬಾವಿಗೂ ಮರುಜೀವ : ಇದಾಗಿ 28 ವರ್ಷಗಳ ನಂತರ- ಅಂದರೆ, 2018ರಲ್ಲಿ ತಿಪ್ಪಮ್ಮನವರಿಗೆ ಮತ್ತೆ ಬಾವಿಯ ನೆನಪಾಯಿತು. ಬಾವಿಯಲ್ಲಿ ತುಂಬಿದ್ದ ಐದು ಅಡಿಯಷ್ಟು ಹೂಳು ತೆಗೆಸಿದರು. ಕುಸಿದಿದ್ದ ದಡ ಕತ್ತರಿಸಿ ಆಕಾರ ಸರಿಪಡಿಸಿದರು. ಮಳೆ ನೀರು ಬರಬಹುದಾದ ಬಾವಿಯ ಮೇಲ್ಭಾಗದ ಹೊಲದಲ್ಲಿ ಕಾಲುವೆ ತೆಗೆದು ನೀರು ಸರಾಗವಾಗಿ ಹರಿಯಲು ಅನುವು ಮಾಡಿದರು. ನೀರು, ಬಾವಿಗೆ ಬೀಳುವ ಮುನ್ನ ಒಂದು ಹೂಳು ಸಂಗ್ರಹಣಾ ತೊಟ್ಟಿ ಸೇರುವಂತೆ ಮಾಡಿ ಸಿಮೆಂಟ್ ಪೈಪ್ ಕೂರಿಸಿದರು. ಇದರಿಂದ, ಹೊಲದ ಮಣ್ಣು ಮತ್ತು ಹೂಳು, ಬಾವಿಯಲ್ಲಿ ಶೇಖರವಾಗುವುದು ತಪ್ಪಿತು. 2018ರಲ್ಲಿ ಸುಮಾರಾಗಿ ಮಳೆ ಬಿದ್ದಾಗಲೇ ಹೊಲದ ನೀರೆಲ್ಲಾ ಕಾಲುವೆ ಮೂಲಕ ಹರಿದು 3 ಸಲ ಬಾವಿ ಭರ್ತಿಯಾಯಿತು. ಎಷ್ಟೋ ವರ್ಷಗಳ ನಂತರ ಬಾವಿಯಲ್ಲಿ ನೀರು ತುಂಬಿತ್ತು. 2019ರಲ್ಲಿಯೂ ಉತ್ತಮ ಮಳೆಯಾಗಿ 2 ಸಲ ನೀರು ತುಂಬಿ ನೆಲದಲ್ಲಿ ಇಂಗಿದೆ. ಈ ಬಾವಿಯಲ್ಲಿ ನೀರು ಇಂಗುವುದರಿಂದ ಸುತ್ತಮುತ್ತಲ ಕನಿಷ್ಠ 3 ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ ಎನ್ನುತ್ತಾರೆ ಅಕ್ಕಪಕ್ಕದ ರೈತರು. ಸ್ವತಃ ವೀರಭದ್ರಪ್ಪನವರ ಕೊಳವೆಬಾವಿಯೇ, ತೆರೆದ ಬಾವಿಯ ಜೀರ್ಣೋದ್ಧಾರದ ಮೊದಲ ಫಲಾನುಭವಿ. ಏಕೆಂದರೆ, ಕೇವಲ ಒಂದಿಂಚು ನೀರು ಕೊಡುತ್ತಿದ್ದ ಕೊಳವೆಬಾವಿ ಈಗ 2.5 ಇಂಚು ನೀರು ಕೊಡುತ್ತಿದೆ.
ನಬಾರ್ಡ್‌ನಿಂದ ಸಹಾಯ : ಶಿಥಿಲಗೊಂಡಿದ್ದ ತೆರೆದ ಬಾವಿಯನ್ನು ಸರಿಪಡಿಸುವ ಕೆಲಸಕ್ಕೆ ಉತ್ತೇಜನ ನೀಡಿದ್ದು ನಬಾರ್ಡ್‌ನ “ಮಣ್ಣು ಆರೋಗ್ಯ ಯೋಜನೆ’. ಬಾವಿ ಶಿಥಿಲಗೊಂಡಿದ್ದನ್ನು ಕಂಡು ನಬಾರ್ಡ್ ಸಿಬ್ಬಂದಿ ಅದನ್ನು ಜೀರ್ಣೋದ್ಧಾರ ಮಾಡುವ ಪ್ರಸ್ತಾಪವನ್ನು ಮುಂದಿಟ್ಟರು. ತಿಪ್ಪಮ್ಮನವರು ಒಪ್ಪಿದರು. ನಬಾರ್ಡ್ ನೆರವನ್ನು ಹೊರತುಪಡಿಸಿ, ತಗುಲಿದ 25 ಸಾವಿರ ವೆಚ್ಚವನ್ನು ಮನೆಯವರೇ ಭರಿಸಿದ್ದರು. ಇವರ 3.5 ಎಕರೆಗೂ ಯೋಜನೆ ಅನುದಾನದಿಂದ ಬದುಗಳ ನಿರ್ಮಾಣ ಮಾಡಲಾಗಿದೆ. ಮೊದಲೆಲ್ಲಾ ಹೊಲದಲ್ಲಿ ಬಿದ್ದ ನೀರು ಹರಿದು ಮೇಲ್ಮಣ್ಣಿನ ಸಮೇತ ಹಳ್ಳಕ್ಕೆ ಹೋಗುತ್ತಿತ್ತು. ಈಗ ಬದುಗಳ ನಿರ್ಮಾಣದ ನಂತರ ಬಿದ್ದ ಮಳೆಯ ಒಂದು ಹನಿಯೂ ಸಹ ಹೊರ ಹೋಗುತ್ತಿಲ್ಲ. ನೀರು ಅಲ್ಲಲ್ಲೇ ಇಂಗುತ್ತಿದೆ. ಮಣ್ಣಿನಲ್ಲಿ ತೇವಾಂಶದ ಪ್ರಮಾಣ ಹೆಚ್ಚಿಸಿದೆ. ಸ್ವಲ್ಪ ದಿವಸ ಮಳೆ ಬಾರದಿದ್ದರೂ ಬೆಳೆಗಳು ಒಣಗುವುದಿಲ್ಲ.
ಹೆಚ್ಚಿದ ಅಂತರ್ಜಲ : ಕೊಳವೆಬಾವಿಯಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದರಿಂದ ವೀರಭದ್ರಪ್ಪ 2018 ಮತ್ತು 2019ರಲ್ಲಿ ಎರಡು ಎಕರೆಗೆ ಹತ್ತಿ ಹಾಕಿದ್ದರು. ಎರಡೂ ವರ್ಷ ತಲಾ 10 ಕ್ವಿಂಟಾಲ್ ಹತ್ತಿ ಇಳುವರಿ ಬಂದಿದ್ದು ಪ್ರತಿ ಕ್ವಿಂಟಾಲಿಗೆ 6,000ದಂತೆ 60,000 ರೂ. ಆದಾಯ ಪಡೆದಿದ್ದಾರೆ. 2 ವರ್ಷದಿಂದ ಬಂದ ಒಟ್ಟು ಆದಾಯ 1,20,000 ರೂ.ಗಳು. ಇದರ ಜೊತೆಗೆ ಹತ್ತಿಯೊಂದಿಗೆ ತರಕಾರಿ ಬೆಳೆಗಳಾದ ಬದನೆ, ಮರಬೆಂಡೆ, ಮೆಣಸಿನಕಾಯಿ, ಅಗಸೆ ಇತ್ಯಾದಿ ಉಪಬೆಳೆಗಳನ್ನೂ ಬೆಳೆಯುತ್ತಿದ್ದಾರೆ. ಇದರಲ್ಲಿ ಬಹುತೇಕ ಮನೆ ಬಳಕೆಗೆ ಉಪಯೋಗಿಸಿ ಉಳಿದದ್ದನ್ನು ಮಾರಾಟ ಮಾಡುತ್ತಿದ್ದಾರೆ.
-ಮಲ್ಲಿಕಾರ್ಜುನ ಹೊಸಪಾಳ್ಯ