Advertisement

ವರುಣನ ಆಗಮನಕ್ಕೆ ಅನ್ನದಾತ ಕಾತುರ

10:40 AM May 29, 2019 | Team Udayavani |

ಹಾನಗಲ್ಲ: ಕಳೆದ ವರ್ಷ ಈ ಹೊತ್ತಿಗಾಗಲೇ ಉತ್ತಮ ಮಳೆ ಬಂದು ಬಿತ್ತನೆ ಕಾರ್ಯ ಆರಂಭವಾಗಿತ್ತು. ಆದರೆ, ಪ್ರಸ್ತುತ ವರುಣನ ಬರುವಿಕೆಗೆ ಅನ್ನದಾತ ಜಾತಕಪಕ್ಷಿಯಂತೆ ಕಾಯುವಂತಾಗಿದೆ.

Advertisement

ವರ್ಷದಿಂದ ವರ್ಷಕ್ಕೆ ಮಳೆ ಅಭಾವ ಹೆಚ್ಚುತ್ತಿರುವ ಪರಿಣಾಮ ಬೇಸಿಗೆ ಆರಂಭಕ್ಕೂ ಮುನ್ನವೇ ಕೆರೆ-ಕಟ್ಟೆಗಳೆಲ್ಲ ಖಾಲಿಯಾಗುತ್ತಿವೆ. ಮೊದಲೆಲ್ಲ ಬೇಸಿಗೆಯಲ್ಲೂ ಬೆಳೆ ಬೆಳೆಯುತ್ತಿದ್ದ ರೈತ ಮಳೆ ಅಭಾವದಿಂದ ಮಳೆಗಾಲದಲ್ಲೂ ಬಿತ್ತನೆ ಮಾಡಲು ಹಿಂದೇಟು ಹಾಕುವಂಥ ಸ್ಥಿತಿ ನಿರ್ಮಾಣವಾಗಿದೆ.

53 ಸಾವಿರ ಹೆಕ್ಟೇರ್‌ ಕೃಷಿ ಭೂಮಿ: ಹಾನಗಲ್ಲ ತಾಲೂಕಿನಲ್ಲಿ 77 ಸಾವಿರ ಹೆಕ್ಟೇರ್‌ ವಿಸ್ತೀರ್ಣ ಭೂಮಿ ಇದ್ದು, 53 ಸಾವಿರ ಹೆಕ್ಟೇರ್‌ ಕೃಷಿ ಭೂಮಿ ಇದೆ. 3800 ಹೆಕ್ಟೇರ್‌ ತೋಟಗಾರಿಕೆ ಕ್ಷೇತ್ರವಿದೆ. 8400 ಹೆಕ್ಟೇರ್‌ ಅರಣ್ಯ ಭೂಮಿ ಇದೆ.

ಪ್ರಸ್ತುತ 20 ಸಾವಿರ ಹೆಕ್ಟರ್‌ ಭತ್ತ, 16700 ಹೆಕ್ಟರ್‌ ಗೋವಿನಜೋಳ, 450 ಹೆಕ್ಟರ್‌ ಶೇಂಗಾ, 2700 ಹೆಕ್ಟೕರ್‌ ಸೋಯಾ ಅವರೆ, 5900 ಹೆಕ್ಟರ್‌ ಹತ್ತಿ, 2500 ಹೆಕ್ಟರ್‌ ಕಬ್ಬು ಬೆಳೆಯುವ ನಿರೀಕ್ಷೆ ಕೃಷಿ ಇಲಾಖೆಯದ್ದಾಗಿದೆ. ಒಟ್ಟು 49 ಸಾವಿರ ಹೆಕ್ಟರ್‌ ಕೃಷಿ ಭೂಮಿ ಬಿತ್ತನೆಯಾಗುವ ನಿರೀಕ್ಷೆ ಇದೆ.

ಶುಂಠಿ ಬೆಳೆ ಆದ್ಯತೆ: ಪ್ರಸ್ತುತ ವರ್ಷ ಮೂರು ಸಾವಿರ ಹೆಕ್ಟರ್‌ ಕೃಷಿ ಭೂಮಿ ಶುಂಠಿ ಬೆಳೆ ಬೆಳೆಯಲಾಗುತ್ತಿದೆ. ಈಗಾಗಲೇ ಶುಂಠಿ ನಾಟಿ ಮುಗಿದಿದೆ. ಹತ್ತಾರು ವರ್ಷಗಳಿಂದ ಹಾನಗಲ್ಲ ತಾಲೂಕಿನಲ್ಲಿ ಕೇರಳದ ಹಲವರು ಇಲ್ಲಿನ ಭೂಮಿ ಗೇಣಿ ಪಡೆದು ಶುಂಠಿ ಬೆಳೆಯುವ ಪರಿಪಾಠವಿದೆ. ಆದರೆ, ಪ್ರಸ್ತುತ ವರ್ಷ ಅತಿ ಹೆಚ್ಚು ಪ್ರಮಾಣದಲ್ಲಿ ಕೇರಳದ ಗುತ್ತಿಗೆದಾರರು ಶುಂಠಿ ಬೆಳೆಯುತ್ತಿದ್ದಾರೆ. ಇನ್ನೂ ಕೆಲವು ರೈತರು ತಾವೇ ತಮ್ಮ ಭೂಮಿಯಲ್ಲಿ ಶುಂಠಿ ಬೆಳೆಯುತ್ತಿದ್ದಾರೆ.

Advertisement

ಬಿತ್ತನೆ ಬೀಜ ವಿತರಣೆಗೆ ಸಜ್ಜು: ಹಾನಗಲ್ಲ, ಚಿಕ್ಕಾಂಶಿಹೊಸೂರ, ಸಮ್ಮಸಗಿ, ಅಕ್ಕಿಆಲೂರು, ತಿಳವಳ್ಳಿ, ಆಡೂರು, ಬೊಮ್ಮನಹಳ್ಳಿ, ಬೆಳಗಾಲಪೇಟ್, ಮಾರನಬೀಡ ಹೀಗೆ 9 ಕೇಂದ್ರಗಳ ಮೂಲಕ ರಿಯಾಯಿತಿ ದರದ ಬಿತ್ತನೆ ಬೀಜ ವಿತರಿಸಲು ಕೃಷಿ ಇಲಾಖೆ ಸಜ್ಜಾಗಿದೆ. 1 ಸಾವಿರ ಕ್ವಿಂಟಾಲ್ ಸೋಯಾ ಅವರೆ, 1700 ಕ್ವಿಂಟಾಲ್ ಭತ್ತ, 900 ಕ್ವಿಂಟಾಲ್ ಗೋವಿನಜೋಳ ಸೇರಿದಂತೆ ಅಗತ್ಯ ಬಿತ್ತನೆ ಬೀಜಗಳನ್ನು ಕೃಷಿ ಇಲಾಖೆ ದಾಸ್ತಾನು ಮಾಡಿದೆ.

ತಾಲೂಕಿನ 74 ಅಧಿಕೃತ ರಸಗೊಬ್ಬರ ಹಾಗೂ ಬೀಜ ಮಾರಾಟ ಕೇಂದ್ರಗಳ ಸಭೆ ನಡೆಸಿ ಬೀಜ ಗೊಬ್ಬರದ ಅಭಾವ ಸೃಷ್ಟಿಸಿ ಸಮಸ್ಯೆ ಮಾಡದಂತೆ ಎಚ್ಚರಿಕೆ ನೀಡಲಾಗಿದೆ. ದರಪಟ್ಟಿ ಹಾಗೂ ದಾಸ್ತಾನು ಪ್ರಕಟಿಸಲು, ತಪ್ಪದೆ ರಸೀದಿ ನೀಡಲು, ಬಿಡಿ ಬಿತ್ತನೆ ಬೀಜ ಮಾರಾಟ ಮಾಡಕೂಡದು, ಎಂಆರ್‌ಪಿ ದರದಲ್ಲೇ ಬೀಜ ಗೊಬ್ಬರ ಮಾರಾಟ ಮಾಡಬೇಕೆಂಬುದು ಸೇರಿದಂತೆ ರೈತರಿಗೆ ತೊಂದರೆಯಾಗದಂತೆ ನಿಗಾ ವಹಿಸಲು ಸೂಚಿಸಲಾಗಿದೆ.ಏನೇ ಆದರೂ ಸಕಾಲಿಕವಾಗಿ ಮಳೆ ಬಾರದಿದ್ದರೆ ಎಂಬ ಆತಂಕ ಕೃಷಿ ಇಲಾಖೆಯನ್ನು ಕಾಡುತ್ತದೆ. ಏಪ್ರಿಲ್ನಲ್ಲಿ ಒಂದಷ್ಟು ಮಳೆ ಬಿದ್ದಿದೆ. ಮೇ ತಿಂಗಳಿನಲ್ಲಿ ಮಳೆಯೇ ಆಗಿಲ್ಲ. ಹೀಗಾಗಿ ರೈತ ಹಾಗೂ ಕೃಷಿ ಇಲಾಖೆಯ ಸಿದ್ಧತೆ ಸಫಲವಾಗಲು ಮಳೆರಾಯನೇ ಕೃಪೆ ತೋರಬೇಕು. ಈ ವರೆಗೂ ಸರಿಯಾದ ಮಳೆಯಾಗದೆ ಕೃಷಿ ಭೂಮಿ ಮುಂಗಾರು ಬಿತ್ತನೆ ಸಜ್ಜುಗೊಂಡಿಲ್ಲ ಎಂಬುದೇ ತೀರ ಆತಂಕದ ಸಂಗತಿ.

.ರವಿ ಲಕ್ಶ್ಮೀಶ್ವರ

Advertisement

Udayavani is now on Telegram. Click here to join our channel and stay updated with the latest news.

Next