ಚಿಕ್ಕೋಡಿ: ಕಳೆದ ನಾಲ್ಕೈದು ವರ್ಷಗಳಿಂದ ಸಮರ್ಪಕ ಮಳೆ ಆಗದೇ ಇರುವುದರಿಂದ ಚಿಕ್ಕೋಡಿ ಭಾಗದ ರೈತರು ಬರಗಾಲಕ್ಕೆ ಸಿಲುಕಿ ಸಂಕಷ್ಟ ಪಡುತ್ತಾ ಬಂದಿದ್ದಾರೆ. ಆದರೆ ಪ್ರಸಕ್ತ ವರ್ಷದ ಮುಂಗಾರು ಉತ್ತಮವಾಗಬಹುದೆಂಬ ನಿರೀಕ್ಷೆ ಇಟ್ಟುಕೊಂಡ ರೈತರು ತಮ್ಮ ಜಮೀನುಗಳನ್ನು ಬಿತ್ತನೆಗೆ ಸಜ್ಜುಗೊಳಿಸಲು ಜಮೀನುಗಳತ್ತ ಮುಖ ಮಾಡುತ್ತಿದ್ದಾರೆ.
ಏಪ್ರಿಲ್-ಮೇ ಕೊನೆವಾರ ಬಂದರೂ ಒಂದು ಅಡ್ಡ ಮಳೆ ಆಗಿಲ್ಲ, ಕುಡಿಯುಲು ನೀರು ಇಲ್ಲದೆ ಜನ ಪರದಾಡುತ್ತಿದ್ದಾರೆ. ಆದರೂ ರೈತರು ಮಾತ್ರ ಮಳೆ ಮೇಲೆ ಅತಿಯಾದ ನಂಬಿಕೆ ಇಟ್ಟುಕೊಂಡು ತನ್ನ ಜೋಡೆತ್ತುಗಳನ್ನು ಹೂಡಿ ಜಮೀನು ಉಳುಮೆ ಮಾಡುತ್ತಿದ್ದಾರೆ. ಮತ್ತು ಮುಂಗಾರು ಹಂಗಾಮಿನ ಬಿತ್ತನೆ ಬೀಜ ಹಾಗೂ ಅಗತ್ಯ ರಸಗೊಬ್ಬರ ದಾಸ್ತಾನು ಮಾಡಿಕೊಳ್ಳುವ ಮೂಲಕ ಕೃಷಿ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ.
ಚಿಕ್ಕೋಡಿ ಕೃಷಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ಚಿಕ್ಕೋಡಿ, ಸದಲಗಾ, ನಿಪ್ಪಾಣಿ, ನಾಗಮುನ್ನೋಳ್ಳಿ ನಾಲ್ಕು ಹೋಬಳಿ ಪ್ರದೇಶಗಳಲ್ಲಿ ಸುಮಾರು 1.5 ಲಕ್ಷ ಹೆಕ್ಟೇರ್ ಕೃಷಿ ಭೂಮಿಯಿದ್ದು. ಅದರಲ್ಲಿ ಮುಂಗಾರಿನಲ್ಲಿ 78 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಪ್ರದೇಶಕ್ಕೆ ಕೃಷಿ ಇಲಾಖೆ ಸಮರ್ಪಕ ಬೀಜ, ರಸಗೊಬ್ಬರ ದಾಸ್ತಾನು ಮಾಡಿಕೊಂಡಿದೆ. ಉಳಿದ 47 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ನಾಟಿಯಾಗಲಿದೆ.
ಈಗಾಗಲೇ ಬೀಜ ದಾಸ್ತಾನು ಸಂಗ್ರಹದ ಮೂಲಕ ಮುಂಗಾರು ಆರಂಭವಾಗುತ್ತಿದ್ದಂತೆ ಬೀಜ ವಿತರಣೆ ಪ್ರಕ್ರಿಯೆ ಆರಂಭಿಸಲು ಇಲಾಖೆ ಕ್ರಮ ಕೈಗೊಂಡಿದ್ದು, ಬಿತ್ತನೆ ಬೀಜವನ್ನು ಪ್ರಮಾಣೀಕೃತ ಸಂಸ್ಥೆಗಳಿಂದ ಪಡೆದುಕೊಂಡಿದೆ. ಮಳೆಯಾಶ್ರಿತ ಪ್ರದೇಶದಲ್ಲಿ ಬಿತ್ತನೆ ಮಾಡಲು ಸೋಯಾ, ತೊಗರಿ, ಜೋಳ, ಉದ್ದು, ಹೆಸರು ಬೀಜಗಳನ್ನು ದಾಸ್ತಾನು ಮಾಡಿಕೊಂಡಿದೆ. ಮುಂಗಾರು ಆರಂಭವಾದ ಬಳಿಕ ಚಿಕ್ಕೋಡಿ ತಾಲೂಕಿನ ನಾಲ್ಕು ರೈತ ಸಂಪರ್ಕ ಕೇಂದ್ರಗಳ ಮೂಲಕ ರೈತರಿಗೆ ಬೀಜಗಳನ್ನು ವಿತರಿಸಲು ಕೃಷಿ ಇಲಾಖೆ ತೀರ್ಮಾನಿಸಿದೆ.
ಮಳೆಯಾಶ್ರಿತ ಪ್ರದೇಶದಲ್ಲಿ ವಿತರಣೆ ಮಾಡಲು 4,380 ಕ್ವಿಂಟಲ್ ಸೋಯಾ, 20 ಕ್ವಿಂಟಲ್ ತೊಗರಿ, 20 ಕ್ವಿಂಟಲ್ ಜೋಳ ಸೇರಿದಂತೆ ಉದ್ದಿನ ಬೀಜಗಳು ರೈತ ಸಂಪರ್ಕ ಕೇಂದ್ರ ಮತ್ತು ಕೃಷಿ ಇಲಾಖೆಯಿಂದ ಮಾನ್ಯತೆ ಪಡೆದ ಪಿಕೆಪಿಎಸ್ ಮೂಲಕ ರೈತರಿಗೆ ವಿತರಿಸಲು ದಾಸ್ತಾನು ಮಾಡಲಾಗಿದೆ. ಆಸಕ್ತ ರೈತರು ಮಳೆ ಆದ ಮೇಲೆ ಬೀಜ ಖರೀದಿಸಿ ಬಿತ್ತನೆ ಮಾಡಬೇಕು ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ. ಉತ್ತಮ ಮುಂಗಾರು: ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಜೂ. 5ರ ಆಸುಪಾಸಿನಲ್ಲಿ ರಾಜ್ಯಕ್ಕೆ ಉತ್ತಮ ಮುಂಗಾರು ಪ್ರವೇಶಿಸಲಿದ್ದು, ರೈತರು ಬಿತ್ತನೆ ಸಮಯದಲ್ಲಿ ಅನಗತ್ಯ ಗಡಿಬಿಡಿ ಮಾಡುವ ಬದಲು ಭೂಮಿಯ ತೇವಾಂಶ ನೋಡಿಕೊಂಡು ಬಿತ್ತನೆ ಮಾಡಬೇಕು. ತೇವಾಂಶ ಕೊರತೆಯಿಂದ ಬಿತ್ತಿದ ಬೀಜ ನಾಟದೇ ಹೋಗಬಹುದು. ಆದ್ದರಿಂದ ಪರಿಸ್ಥಿತಿಗನುಗುಣವಾಗಿ ಬಿತ್ತನೆ ಮಾಡಬೇಕೆಂದು ಚಿಕ್ಕೋಡಿ ಕೃಷಿ ಅಧಿಕಾರಿ ಮಂಜುನಾಥ ಜನಮಟ್ಟಿ ಸಲಹೆ ನೀಡಿದ್ದಾರೆ.