Advertisement

ಕೃಷಿ ಹೊಂಡದ ನೀರೇ ಜನರಿಗೆ ಆಸರೆ

01:16 PM May 11, 2019 | Suhan S |

ಕೊಪ್ಪಳ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕುಡಿಯುವ ನೀರಿನ ಭವಣೆ ಹೆಚ್ಚುತ್ತಿದ್ದು, ನದಿ ಪಾತ್ರದ ಹಳ್ಳಿಗಳಲ್ಲಿಯೇ ಹಾಹಾಕಾರ ಸೃಷ್ಟಿಯಾಗುತ್ತಿದೆ. ತಾಲೂಕಿನ ಗುಡಗೇರಿ ಗ್ರಾಮದಲ್ಲಿನ ಜನರು ಕೃಷಿ ಹೊಂಡದ ನೀರನ್ನೇ ಕುಡಿಯಲು ಬಳಕೆ ಮಾಡುತ್ತಿದ್ದರೆ, ಕುಣಕೇರಿ ತಾಂಡಾದ ಜನರು ನೀರಿಗಾಗಿ ಪಂಪ್‌ಸೆಟ್‌ಗಳಿಗೆ ಅಲೆದಾಡುವಂತ ಸ್ಥಿತಿ ಎದುರಾಗಿದೆ.

Advertisement

ಜಿಲ್ಲಾಡಳಿತ ಕುಡಿಯುವ ನೀರಿಗೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎನ್ನುತ್ತಿದೆ. ಆದರೆ ಗ್ರಾಮೀಣ ಭಾಗದಲ್ಲಿ ನೀರಿನ ಭವಣೆ ನೀಗುತ್ತಿಲ್ಲ. ಜನರು ನೀರಿನ ದಾಹ ತೀರಿಸಿಕೊಳ್ಳಲು ಗದ್ದೆ ಹೊಲ, ಕೆರೆ, ಕಟ್ಟೆಗಳಿಗೆ ತೆರಳಿ ನೀರು ತಂದು ಉಪಜೀವನ ನಡೆಸುವಂತ ಸ್ಥಿತಿ ಎದುರಾಗಿದೆ. ತಾಲೂಕಿನ ಕೊನೆ ಭಾಗದ ಹಳ್ಳಿ ಗುಡಗೇರಿಯಲ್ಲಿ ಪ್ರತಿ ವರ್ಷವೂ ನೀರಿನ ಭವಣೆ ತಪ್ಪುತ್ತಿಲ್ಲ. ಜನರು ಇಲ್ಲಿ ಪ್ರತಿ ಮನೆ ಮನೆಯಲ್ಲಿ ಸಿಂಟೆಕ್ಸ್‌ ಇಟ್ಟುಕೊಂಡಿದ್ದಾರೆ. ವಾರಕ್ಕೆ 2 ಸಲ ಮಾತ್ರ ಇಲ್ಲಿ ನೀರು ಪೂರೈಸಲಾಗುತ್ತಿದೆ. ಹಾಗಾಗಿ ನೀರು ಸಂಗ್ರಹಣೆಗೆ ಸಿಂಟೆಕ್ಸ್‌ ಎಲ್ಲರ ಮನೆಯಲ್ಲೂ ಇವೆ.

ಕೃಷಿ ಹೊಂಡದ ನೀರು ಬಳಕೆ: ಇನ್ನೂ ಗ್ರಾಮದಲ್ಲಿ ಎರಡು ಸಣ್ಣ ಕೆರೆಗಳಿವೆ. ಕಳೆದ ವರ್ಷ ಮಳೆ ಅಲ್ಪ ಪ್ರಮಾಣದಲ್ಲಿ ಸುರಿದ ಹಿನ್ನೆಲೆಯಲ್ಲಿ ಕೆರೆಗಳು ಪೂರ್ಣವಾಗಿ ಭರ್ತಿಯಾಗಿಲ್ಲ. ಒಂದು ಕೆರೆಯಲ್ಲಿ ನೀರು ಖಾಲಿಯಾಗಿದ್ದರೆ ಮತ್ತೂಂದು ಕೆರೆ ನೀರು ಕೆಟ್ಟಿವೆ ಎನ್ನುತ್ತಿದ್ದಾರೆ ಇಲ್ಲಿನ ಜನರು. ಹಾಗಾಗಿ ಅದನ್ನು ಬಳಕೆಗೆ ಉಪಯೋಗಿಸುತ್ತಿದ್ದಾರೆ. ಇನ್ನೂ ಗ್ರಾಮದಿಂದ 3 ಕಿಲೋ ಮೀಟರ್‌ ದೂರದಲ್ಲಿ ವೈದ್ಯರೊಬ್ಬರು ಹೊಲದಲ್ಲಿ ಕೃಷಿ ಹೊಂಡ ನಿರ್ಮಿಸಿದ್ದಾರೆ. ಅದರಲ್ಲಿ ಮಳೆ ನೀರು ಸಂಗ್ರಹವಾಗಿದೆ. ಜನರು ಆ ಕೆರೆಗೆ ನಿತ್ಯ 3 ಕಿಮೀ ತೆರಳಿ ನೀರು ತಂದು ಜೀವನ ಸಾಗಿಸುತ್ತಿದ್ದಾರೆ. ಗ್ರಾಮದಲ್ಲಿ ಶಾಶ್ವತ ನೀರಿನ ವ್ಯವಸ್ಥೆ ಮಾಡಿಲ್ಲ. ಇನ್ನೂ ಕವಲೂರು ಗ್ರಾಮದ ಜನರೂ ಬೈಕ್‌ನಲ್ಲಿ ಆಗಮಿಸಿ ಇದೇ ಕೃಷಿ ಹೊಂಡದ ನೀರನ್ನೇ ತಗೆದುಕೊಂಡು ಹೋಗುತ್ತಿದ್ದಾರೆ.

ಗುಡಗೇರಿಯದ್ದು ಕೃಷಿ ಹೊಂಡದ ನೀರಾಗಿದ್ದರೆ, ತಾಲೂಕಿನ ಕುಣಕೇರಿ ತಾಂಡಾ ನದಿಪಾತ್ರದ ಸಮೀಪದಲ್ಲೇ ಇದ್ದರೂ ನೀರಿನ ಭವಣೆ ಎದುರಿಸುತ್ತಿದೆ. ಕಳೆದ ಒಂದು ತಿಂಗಳಿಂದಲೂ ಇಲ್ಲಿ ನೀರಿನ ಅಭಾವ ತಲೆದೋರಿದೆ. ಪೈಪ್‌ಲೈನ್‌ ಕಾಮಗಾರಿ ನಡೆಸಿದ್ದರೂ ನೀರು ಪೂರೈಕೆಯಾಗಿಲ್ಲ. ಇಲ್ಲಿನ ಜನರು ಪ್ರತಿ ವರ್ಷ ದುಡಿಮೆ ಅರಸಿ ಗುಳೆ ಹೋಗುತ್ತಾರೆ. ಗ್ರಾಮದಲ್ಲಿ ದುರ್ಗಾದೇವಿ ಜಾತ್ರೆಯಿದ್ದ ಕಾರಣ ಊರಿಗೆ ವಾಪಾಸ್ಸಾಗಿದ್ದಾರೆ. ಈಗ ಏಕಾಏಕಿ ನೀರಿನ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಅಧಿಕಾರಿಗಳ ಗಮನಕ್ಕೂ ತಂದಿದ್ದಾರೆ. ಆದರೆ ಅಲ್ಲಿ ಇನ್ನೂ ಸಮಸ್ಯೆ ಬಗೆಹರಿದಿಲ್ಲ. ನೀರಿಲ್ಲದೆ ಹಬ್ಬ ಹೇಗೆ ಮಾಡೋದು ಎಂದು ಚಿಂತೆಯಲ್ಲಿದ್ದಾರೆ. ನದಿ ಪಾತ್ರದ ತಟದಲ್ಲೇ ಈ ಗ್ರಾಮಕ್ಕೆ ನೀರಿನ ಭವಣೆ ಎದುರಾಗಿದ್ದು, ಅಧಿಕಾರಿಗಳ ಕಾರ್ಯ ವೈಖರಿಗೆ ಜನತೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಿನಲ್ಲಿ ಕೇವಲ ಇವೆರಡು ಗ್ರಾಮಗಳ ಸಮಸ್ಯೆಯಿಲ್ಲ. ಜಿಲ್ಲೆಯಲ್ಲಿ ಹಲವು ಗ್ರಾಮಗಳು ಇಂತಹ ಸಮಸ್ಯೆ ಎದುರಿಸುತ್ತಿವೆ. ಜಿಲ್ಲಾಡಳಿತ ಕುಡಿಯುವ ನೀರಿಗೆ ಹೆಚ್ಚಿನ ಅನುದಾನ ವಿನಿಯೋಗ ಮಾಡಿದೆ. ಅಧಿಕಾರಿಗಳು ಹೊದ್ದು ಮಲಗಿದ್ದಾರೋ? ಜನರ ನೀರಿನ ಭವಣೆ ಬಗ್ಗೆ ಕಣ್ತೆರೆದು ನೋಡುತ್ತಿದ್ದಾರೋ ಎನ್ನುವ ಪ್ರಶ್ನೆ ಮೂಡುತ್ತಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳ ಸೂಚನೆ ಪಿಡಿಒಗಳ ಹಂತದಲ್ಲಿ ಕಿಮ್ಮತ್ತಿಲ್ಲ ಎನ್ನುವಂತ ಮಾತಾಗಿದೆ.

•ದತ್ತು ಕಮ್ಮಾರ

Advertisement
Advertisement

Udayavani is now on Telegram. Click here to join our channel and stay updated with the latest news.

Next