ಕುಷ್ಟಗಿ: ತಾಲೂಕಿನ ಬೋದೂರು ಸೀಮಾದ ಕಲ್ಲು ಜಮೀನು ಖರೀದಿಸಿರುವ ಬಾಗಲಕೋಟೆ ಮೂಲದ ಯುವ ರೈತರೊಬ್ಬರು ಅದನ್ನು ಕೃಷಿ ಭೂಮಿಯಾಗಿ ಪರಿವರ್ತಿಸಿ ಶ್ರಮ, ಇಚ್ಛಾಶಕ್ತಿಯಿದ್ದರೆ ಸಾಧನೆ ಕಷ್ಟವಲ್ಲ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ. ಮೂಲತಃ ಬಾಗಲಕೋಟೆಯವರಾದ ಮಹಾರುದ್ರಯ್ಯ ಪುರಾಣಿಕಮಠ, ಬಳ್ಳಾರಿಯಲ್ಲಿ ಸಿವಿಲ್ ಕಾಂಟ್ರಾಕ್ಟರ್ ಆಗಿದ್ದು, ಬಾಲ್ಯದಿಂದಲೂ ಕೃಷಿ ಕ್ಷೇತ್ರದ ಬಗ್ಗೆ ಆಸಕ್ತಿ ಹೊಂದಿದವರು. ಈ ಹಿನ್ನೆಲೆಯಲ್ಲಿ ಅವರ ಕೃಷಿ ಪ್ರೀತಿ ಕುಷ್ಟಗಿಯವರೆಗೂ ವಿಸ್ತರಿಸಿದೆ.
ಆಲಮಟ್ಟಿ ಜಲಾಶಯದ ಹಿನ್ನೀರಿಗೆ ಅವರ ಜಮೀನು ಮುಳುಗಡೆಯಾಗಿ ಬಂದ ಪರಿಹಾರ ಮೊತ್ತದಲ್ಲಿ ಕಳೆದ ನಾಲ್ಕೈದು ವರ್ಷಗಳ ಹಿಂದೆ ಕುಷ್ಟಗಿ ತಾಲೂಕಿನ ಬೋದೂರು ಸೀಮಾದಲ್ಲಿ ಒಟ್ಟು 27 ಎಕರೆ ಭೂಮಿ ಖರೀದಿಸಿದ್ದಾರೆ. ಸದರಿ ಜಮೀನಿನಲ್ಲಿ ಹಿಂದಿನ ರೈತರು ಭಾಗಶಃ ದಾಳಿಂಬೆ ಬೆಳೆ ಬೆಳೆಸಿದ್ದು, ಬಿಟ್ಟರೆ ಬಹುತೇಕ ಕಲ್ಲುಗಳಿಂದ ಕೂಡಿರುವ ಭೂಮಿ ಇದಾಗಿತ್ತು.
ಮಹಾರುದ್ರಯ್ಯ ಪುರಾಣಿಕಮಠ ಅವರಿಗೆ ಭೂಮಿಯಲ್ಲಿ ಕಲ್ಲುಗಳನ್ನು ತೆಗಿಸಿ ಕೃಷಿ ಜಮೀನಾಗಿ ಪರಿವರ್ತಿಸಲು ಎರಡೂವರೆ ವರ್ಷವೇ ಹಿಡಿಯಿತು. ಅಂತರ ಬೆಳೆಯಾಗಿ ಬೆಳೆದಿರುವ ಪಪ್ಪಾಯಿ ಹಾಗೂ ದಾಳಿಂಬೆ ಬೆಳೆದಿದ್ದು, ಪಪ್ಪಾಯಿ ಅನ್ನು ತೋಟದಲ್ಲಿ ಪ್ಯಾಂಕಿಂಗ್ ಮಾಡಿ, ಮುಂಬೈ ಮಾರುಕಟ್ಟೆಗೆ ಕಳುಹಿಸುತ್ತಿದ್ದಾರೆ. ಸದ್ಯ ಕೆ.ಜಿ.ಗೆ 21 ರೂ, ಉತ್ತಮ ದರವಿದ್ದು, ಈಗಾಗಲೇ ನಾಲ್ಕು ಬಾರಿ ಕಟಾವು ಆಗಿದ್ದು, ಸದ್ಯ 4ಲಕ್ಷ ರೂ. ಆದಾಯ ಬಂದಿದೆ. ಇನ್ನು ನಾಲ್ಕು ಕಟಾವಿನಲ್ಲಿ ಇದೇ ದರ ಇದ್ದರೆ ಇನ್ನು 4 ಲಕ್ಷ ರೂ. ನಿರೀಕ್ಷಿಸಲಾಗಿದೆ ಎನ್ನುತ್ತಾರೆ ಮಹಾರುದ್ರಯ್ಯ.
15 ಕೊಳವೆಬಾವಿ: ಈ ಜಮೀನಿಲ್ಲಿ ಕೊಳವೆಬಾವಿ ಕೊರೆಯಿಸಿ ತೋಟಗಾರಿಕೆ ಆರಂಭಿಸುವ ಹಿನ್ನೆಲೆಯಲ್ಲಿ 15 ಕೊಳವೆಬಾವಿ ಕೊರೆಯಿಸಿದಾಗ್ಯೂ ಎಲ್ಲವೂ ವಿಫಲವಾಗಿದ್ದವು. ಮಳೆ ನೀರು ಹಿಡಿದಿಡುವ ವಿಧಾನದಿಂದ ಅಂತರ್ಜಲ ಮೂಲ ಹೆಚ್ಚಳ ಮಾಡಬಹುದು ಎನ್ನುವುದು ಅರಿತ ಅವರು, ಮಳೆ ನೀರು ಅಲ್ಲಲ್ಲಿ ತಡೆಯುವ ಉದ್ದೇಶದಿಂದ ವೈಜ್ಞಾನಿಕವಾಗಿ ಒಡ್ಡು ನಿರ್ಮಿಸಿದರು. ಈ ಪ್ರಯೋಗದಿಂದ ಇದೀಗ ಬಿದ್ದಂತಹ ಮಳೆ ನೀರು ಜಮೀನಲ್ಲಿ ಇಂಗುತ್ತಿದೆ. ಮಳೆ ನೀರು ಹಿಡಿದಿಡುವ ವಿಧಾನದಿಂದ ವಿಫಲವಾಗಿದ್ದ ಕೊಳವೆಬಾವಿಗಳಲ್ಲಿ ಸದ್ಯ ಅರ್ಧ ಇಂಚು, ಒಂದಿಂಚು ನೀರಿನ ಸೆಲೆ ಜಿನುಗುತ್ತಿದೆ. ಕೃಷಿಯ ಬಗ್ಗೆ ಭರವಸೆ ಮೂಡಿಸಿದ್ದರಿಂದ 2ಲಕ್ಷ ಲೀಟರ್ ನೀರಿನ ತೊಟ್ಟಿ ನಿರ್ಮಿಸಿಕೊಂಡಿದ್ದು, ಇದಕ್ಕೆ ಐದಾರು ಕೊಳವೆಬಾವಿಗಳಲ್ಲಿನ ಲಭ್ಯವಾದಷ್ಟೇ ನೀರು ಸಂಗ್ರಹಿಸಿ ಜಮೀನಿಗೆ ಹನಿ ನೀರಾವರಿ ಆಧಾರಿತ ಕೃಷಿಗೆ ಮುಂದಾಗಿದ್ದಾರೆ.
ಕಠಿಣ ಪರಿಶ್ರಮ ಇಲ್ಲದೇ ಕೃಷಿ ಒಲಿಯುವುದಿಲ್ಲ. ಇದಕ್ಕೆ ಮಾಡಿರುವ ಖರ್ಚು ಲೆಕ್ಕ ಇಟ್ಟಿಲ್ಲ. ಬಾಗಲಕೋಟೆ ಮುಳುಗಡೆ ಜಮೀನಿನ ಪರಿಹಾರ ಮೊತ್ತ, ತಂದೆ-ತಾಯಿಪೆನ್ಶನ್ ಮೊತ್ತ ಇದಕ್ಕೆ ಹಾಕಲಾಗಿದೆ. ಕುಷ್ಟಗಿ ತಾಲೂಕಿನ ಜಮೀನು ದಾಳಿಂಬೆಗೆ ಸೂಕ್ತವಾಗಿದೆ. ಪೂರ್ಣ ಪ್ರಮಾಣದಲ್ಲಿ ದಾಳಿಂಬೆ ಬೆಳೆಯಲು ಮುಂದಾಗುತ್ತೇನೆ.
.ಮಹಾರುದ್ರಯ್ಯ ಪುರಾಣಿಕಮಠ, ಯುವ ರೈತ
.ಮಂಜುನಾಥ ಮಹಾಲಿಂಗಪುರ