Advertisement

ನಿರ್ಗಮಿತ ಡಿಸಿಗೆ ಆತ್ಮೀಯ ಬೀಳ್ಕೊಡುಗೆ : ಎಲ್ಲ ಅಧಿಕಾರಿಗಳ ಸಹಕಾರ ಕೋರಿದ ನೂತನ ಡಿಸಿ

03:12 PM Jul 02, 2020 | mahesh |

ಕೊಪ್ಪಳ: ಬೆಂಗಳೂರಿನ ಬಿಬಿಎಂಪಿ ಹಣಕಾಸು ಮತ್ತು ಐಟಿ ವಿಭಾಗದ ವಿಶೇಷ ಆಯುಕ್ತರಾಗಿ ವರ್ಗಾವಣೆಯಾದ ಜಿಲ್ಲಾಧಿಕಾರಿ ಪಿ. ಸುನೀಲ್‌ ಕುಮಾರ್‌ ಅವರಿಗೆ ಜಿಲ್ಲಾಡಳಿತ ಮತ್ತು ಜಿಪಂ ವತಿಯಿಂದ ಜಿಲ್ಲಾಡಳಿತ ಭವನದ ಅಡಿಟೋರಿಯಂ ಹಾಲ್‌ನಲ್ಲಿ ಬುಧವಾರ ಆತ್ಮೀಯವಾಗಿ ಬೀಳ್ಕೊಡಲಾಯಿತು. ಈ ವೇಳೆ ಮಾತನಾಡಿದ ನಿರ್ಗಮಿತ ಡಿಸಿ ಪಿ. ಸುನೀಲ್
ಕುಮಾರ್‌, ಕೊಪ್ಪಳ ಜಿಲ್ಲೆಯ ಎಲ್ಲಾ ಅಧಿಕಾರಿಗಳು ನನಗೆ ಉತ್ತಮ ಸಹಕಾರ ನೀಡಿದ್ದು, ಒಂದು ತಂಡವಾಗಿ ಕಾರ್ಯನಿರ್ವಹಿಸಿ ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಸೇವೆ ನೀಡಿದ ತೃಪ್ತಿ ಇದೆ. ಸರ್ಕಾರಿ ಕಚೇರಿಗಳಿಗೆ ಆಗಮಿಸುವ ಸಾರ್ವಜನಿಕರಿಗೆ ಅವರ ಸೇವೆಗಾಗಿ ನಾವಿದ್ದೇವೆ ಎಂಬ ನಂಬಿಕೆ ಮೂಡಿಸಬೇಕು. ಸಾರ್ವಜನಿಕರ ಸೇವೆಗಾಗಿಯೇ ನಾವು ನಾಗರಿಕ ಸೇವೆಯನ್ನು ಆಯ್ಕೆ
ಮಾಡಿಕೊಂಡಿರುತ್ತೇವೆ. ಅದಕ್ಕೆ ನ್ಯಾಯ ಒದಗಿಸಬೇಕು. ಸರ್ಕಾರಿ ಸೇವೆಯಲ್ಲಿ ಜಾತಿ, ಧರ್ಮ, ರಾಜಕೀಯ ಪಕ್ಷಗಳನ್ನು ದೂರವಿಟ್ಟು, ಕಾನೂನು ಮತ್ತು ಶಿಷ್ಟಾಚಾರದ ಪಾಲನೆ ಮಾಡುತ್ತಾ ನಮ್ಮ ವ್ಯಾಪ್ತಿಯಲ್ಲಿ ಸಾಧ್ಯವಿರುವ ಎಲ್ಲ ಸಾರ್ವಜನಿಕ ಸೇವೆ, ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕು. ಒತ್ತಡಗಳ ನಡುವೆಯೂ ಪಾರದರ್ಶಕ ಆಡಳಿತದಿಂದ ಜನರಲ್ಲಿ ಜಿಲ್ಲಾಡಳಿತದ ಕುರಿತು
ವಿಶ್ವಾಸ ಮೂಡಿಸಬೇಕು. ಜಿಲ್ಲೆಯಲ್ಲಿ ಇದುವರೆಗಿನ ನನ್ನ ಅ ಧಿಕಾರವಧಿ ಯಲ್ಲಿ ಎಲ್ಲ ಇಲಾಖೆಗಳ ಸಹಕಾರದೊಂದಿಗೆ ಕಾರ್ಯನಿರ್ವಹಿಸಿದ್ದೇನೆ.

Advertisement

ಕೋವಿಡ್‌ ನಂತಹ ತುರ್ತು ಪರಿಸ್ಥಿತಿಯಲ್ಲಿ ಎಲ್ಲ ಇಲಾಖೆಗಳ ಅ ಧಿಕಾರಿಗಳು ನನ್ನೊಂದಿಗೆ ಹಗಲಿರುಳು ಶ್ರಮಿಸಿದ್ದೀರಿ, ನಿಮ್ಮ ಪರಿಶ್ರಮದಿಂದಲೇ ಜಿಲ್ಲಾಡಳಿತಕ್ಕೆ ಒಳ್ಳೆಯ ಹೆಸರಿದೆ ಎಂದು ಅವರು ಹೇಳಿದರು. ಜಿಲ್ಲೆಗೆ ನೂತನ ಜಿಲ್ಲಾ ಕಾರಿಯಾಗಿ ಆಗಮಿಸಿದ ಸುರಳ್ಕರ್‌ ವಿಕಾಸ್‌ ಕಿಶೋರ್‌ ಮಾತನಾಡಿ, ಎಲ್ಲ ಇಲಾಖೆಗಳು ನನಗೆ ಸಹಕಾರ ನೀಡಿ, ನಾವೆಲ್ಲರೂ ಒಂದು ತಂಡವಾಗಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸೋಣ. ನಿರ್ಗಮಿತ ಜಿಲ್ಲಾಧಿಕಾರಿ ಪಿ. ಸುನೀಲ್‌ ಕುಮಾರ್‌ ಅವರ ವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು. ಜಿಪಂ ಸಿಇಒ ರಘುನಂದನ್‌ ಮೂರ್ತಿ, ಎಡಿಸಿ ಎಂ.ಪಿ. ಮಾರುತಿ, ಎಸಿ ನಾರಾಯಣರೆಡ್ಡಿ ಕನಕರೆಡ್ಡಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸಿದ್ರಾಮೇಶ್ವರ, ಜಿಲ್ಲಾ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮನ್ನವರ ಅವರು ನಿರ್ಗಮಿತ ಜಿಲ್ಲಾಧಿಕಾರಿ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಜಿಲ್ಲೆಯ ಎಲ್ಲ ತಾಲೂಕುಗಳ ತಹಶೀಲ್ದಾರ್‌ರು
ಮತ್ತು ವಿವಿಧ ಇಲಾಖೆಗಳಿಂದ ನಿರ್ಗಮಿತ ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್‌ ಅವರಿಗೆ ಸನ್ಮಾನಿಸಲಾಯಿತು. ಜಿಲ್ಲೆಯ ವಿವಿಧ ಇಲಾಖೆಗಳ ಅ ಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

ನೂತನ ಜಿಲ್ಲಾಧಿಕಾರಿ ಅಧಿಕಾರ ಸ್ವೀಕಾರ
ಕೊಪ್ಪಳ: ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಸುರಳ್ಕರ್‌ ವಿಕಾಸ್‌ ಕಿಶೋರ್‌ ಅವರು ಬುಧವಾರ ಅಧಿ ಕಾರ ಸ್ವೀಕಾರ ಮಾಡಿದರು. ಬಳಿಕ ಮಾತನಾಡಿದ ಅವರು, 2012ನೇ
ಸಾಲಿನ ಐಎಎಸ್‌ ಬ್ಯಾಚಿನ ಅಧಿಕಾರಿಯಾಗಿದ್ದು, ಈ ಹಿಂದೆ ಬೆಂಗಳೂರಿನ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದೇನೆ. ಸರ್ಕಾರದ ಆದೇಶದ ಮೇರೆಗೆ
ಕೊಪ್ಪಳ ಡಿಸಿಯಾಗಿ ಸೇವೆ ಸಲ್ಲಿಸುವ ಅವಕಾಶ ಒದಗಿ ಬಂದಿದೆ. ಇದೇ ಮೊದಲ ಬಾರಿಗೆ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದೇನೆ. ಮೂಲತಃ ಮಹಾರಾಷ್ಟ್ರದವರಾಗಿದ್ದು, ಈ ಹಿಂದೆ
ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ ಜಿಪಂ ಸಿಇಒ ಆಗಿ ಸೇವೆ ಸಲ್ಲಿಸಿದ್ದೇನೆ ಎಂದರು.

ದೇಶದೆಲ್ಲೆಡೆ ಕೋವಿಡ್‌-19 ಸೋಂಕು ಹರಡುತ್ತಿದ್ದು, ಜಿಲ್ಲೆಯಲ್ಲಿ ಕೋವಿಡ್‌-19 ತಡೆಗಟ್ಟುವುದೇ ನಮ್ಮ ಮುಂದಿರುವ ಮೊದಲ ಗುರಿಯಾಗಿದೆ. ಅದರಂತೆಯೇ ಕೊಪ್ಪಳ ಜಿಲ್ಲೆಯಲ್ಲಿ
13 ಕೋವಿಡ್‌-19 ಪ್ರಕರಣಗಳು ದೃಢಪಟ್ಟಿದ್ದು, ಅವುಗಳ ಮಾಹಿತಿ ಪಡೆಯಲಾಗಿದೆ. ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ 17 ಜನರ ಗಂಟಲು ದ್ರವವನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಕೋವಿಡ್‌-19 ಕುರಿತು ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಜಿಲ್ಲೆಯ ಅಭಿವೃದ್ಧಿಗೆ ಸಾರ್ವಜನಿಕರ ಮತ್ತು ಎಲ್ಲಾ
ಸರ್ಕಾರಿ ಇಲಾಖೆ ಅಧಿ ಕಾರಿ, ಮಾಧ್ಯಮ ಮಿತ್ರರು ಅಗತ್ಯ ಸಹಕಾರ ನೀಡಬೇಕೆಂದರು.

Advertisement

Udayavani is now on Telegram. Click here to join our channel and stay updated with the latest news.

Next