Advertisement

ಫರಂಗಿಪೇಟೆ –ಮಾಣಿ  ಸಚಿವ ರೈ ನೇತೃತ್ವದಲ್ಲಿ ಇಂದು ಸಾಮರಸ್ಯ ನಡಿಗೆ

07:31 AM Dec 12, 2017 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಮರಸ್ಯ ಮೂಡಿಸುವ ಆಶಯದೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರ ನೇತೃತ್ವದಲ್ಲಿ ಮಂಗಳವಾರ ಫರಂಗಿಪೇಟೆಯಿಂದ ಮಾಣಿ ವರೆಗೆ “ಸಾಮರಸ್ಯ ನಡಿಗೆ ಸೌಹಾರ್ದತೆಯೆಡೆಗೆ’ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿದೆ. ರಾ.ಹೆ. 75ರಲ್ಲಿ ಬರುವ ಫರಂಗಿಪೇಟೆಯಿಂದ ಬಿ.ಸಿ.ರೋಡ್‌ ಮಾರ್ಗವಾಗಿ ಮಾಣಿ ವರೆಗಿನ ಸುಮಾರು 20 ಕಿ.ಮೀ. ಈ ಪಾದಯಾತ್ರೆ ನಡೆಯಲಿದ್ದು, ಪಕ್ಷಾತೀತವಾಗಿ ಸಮಾನ ಮನಸ್ಕರೆಲ್ಲ ನಡಿಗೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

Advertisement

ಮೆಲ್ಕಾರ್‌ನಲ್ಲಿ ಗಂಜಿ ಊಟ:  ಸಾಮರಸ್ಯ ನಡಿಗೆಯಲ್ಲಿ ಭಾಗವಹಿಸುವವರಿಗೆ ಬಿಳಿ ಟೋಪಿಗಳನ್ನು ಒದಗಿಸಲಾಗುತ್ತದೆ. ಮಧ್ಯಾಹ್ನ ಮೆಲ್ಕಾರ್‌ ನಲ್ಲಿ ಗಂಜಿ ಊಟದ ವ್ಯವಸ್ಥೆ ಮಾಡಲಾಗಿದೆ. ಸ್ವಲ್ಪ ಹೊತ್ತಿನ ವಿರಾಮದ ಬಳಿಕ ನಡಿಗೆ ಮುಂದುವರಿ ಯಲಿದೆ. ಮಾಣಿ ಸಮೀಪದ‌ ನೇರಳ ಕಟ್ಟೆಯಲ್ಲಿ 5 ಗಂಟೆಗೆ ಜಾಥಾ ಸಮಾಪ್ತಿಯಾಗಲಿದೆ. ಬಳಿಕ ಸಾರ್ವಜನಿಕ ಸಭೆ ನಡೆಯಲಿದ್ದು, ಸಚಿವ ಬಿ. ರಮಾನಾಥ ರೈ, ವಿವಿಧ ಪಕ್ಷಗಳ ನಾಯಕರಾದ ಶ್ರೀರಾಮ ರೆಡ್ಡಿ, ಸಿದ್ಧನಗೌಡ ಪಾಟೀಲ್‌, ಡಾ| ಎಲ್‌. ಹನುಮಂತಯ್ಯ, ನಟ ಪ್ರಕಾಶ್‌ ರೈ ಮೊದಲಾದವರು ಭಾಷಣ ಮಾಡಲಿದ್ದಾರೆ.

ಸಾಮರಸ್ಯ ನಡಿಗೆಯು ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳನ್ನು ಹಾದು ಹೋಗಲಿದೆ. ಮಂಗಳೂರು ವಿಧಾನಸಭಾ ವ್ಯಾಪ್ತಿಯ ಫರಂಗಿಪೇಟೆಯಿಂದ ಆರಂಭವಾಗಿ ಬಂಟ್ವಾಳ ಕ್ಷೇತ್ರದ ಮೂಲಕ ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಣಿ ವರೆಗೆ ಸಾಗಲಿದೆ.

ಪಾದಯಾತ್ರೆಗೆ ಬೆಂಬಲ: ನಡಿಗೆಯಲ್ಲಿ ದ.ಕ. ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್‌ ಕಮಿಟಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಬೇಕೆಂದು ಸಮಿತಿ ಜಿಲ್ಲಾಧ್ಯಕ್ಷ ಕೆ.ಎಸ್‌. ಮೊಹಮ್ಮದ್‌ ಮಸೂದ್‌ ಕರೆ ನೀಡಿರುತ್ತಾರೆ ಎಂದು ಇಬ್ರಾಹಿಂ ಕೋಡಿಜಾಲ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ನಡಿಗೆಗೆ ಸಂಪೂರ್ಣ ಬೆಂಬಲ ಸೂಚಿಸಿರುವುದಾಗಿ ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಯು.ಕೆ. ಮೋನು ಕಣಚೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಮುಸ್ಲಿಂ ಲೀಗ್‌ ಬೆಂಬಲವಿಲ್ಲ: ನಡಿಗೆಗೆಗೆ ಮುಸ್ಲಿಂ ಲೀಗ್‌ ಬೆಂಬಲ ನೀಡುವುದಿಲ್ಲ ಎಂದು ರಾಜ್ಯ ಮುಸ್ಲಿಂ ಲೀಗ್‌ ಸದಸ್ಯ ಮಹಮ್ಮದ್‌ ಇಸ್ಮಾಯಿಲ್‌ ಸ್ಪಷ್ಟಪಡಿಸಿದ್ದಾರೆ.

Advertisement

ಬಹುಭಾಷಾ ನಟ ಪ್ರಕಾಶ್‌ ರೈ ಅವರು ಬೆಳಗ್ಗೆ 9 ಗಂಟೆಗೆ ಫ‌ರಂಗಿಪೇಟೆಯಲ್ಲಿ ಶಾಂತಿಯ ಸಂಕೇತವಾದ ಪಾರಿವಾಳವನ್ನು ಆಕಾಶಕ್ಕೆ ಹಾರಿ ಬಿಡುವ ಮೂಲಕ ಜಾಥಾಕ್ಕೆ ಸಾಂಕೇತಿಕವಾಗಿ ಚಾಲನೆ ನೀಡುವರು. ಉದ್ಘಾಟನೆ ಸಂದರ್ಭ ಯಾವುದೇ ಭಾಷಣ ಇರುವುದಿಲ್ಲ. ಬದಲಿಗೆ ಐದು ಕೊಂಬು ವಾದನದ ಮೂಲಕ ಸಾಮರಸ್ಯದ ಸಂದೇಶ ಮೊಳಗಿಸಲಾಗುವುದು. ಜಾಥಾದಲ್ಲಿ ಯಾವುದೇ ರೀತಿ ಘೋಷಣೆ ಕೂಗಲು, ಪಕ್ಷ-ಸಂಘಟನೆಗಳ ಧ್ವಜ ಪ್ರದರ್ಶನಕ್ಕೆ ಅವಕಾಶ ಇರುವುದಿಲ್ಲ ಎಂದು ಸಚಿವ ರಮಾನಾಥ ರೈ “ಉದಯವಾಣಿ’ಗೆ ತಿಳಿಸಿದ್ದಾರೆ.

ಹೆಚ್ಚುವರಿ ಪೊಲೀಸ್‌ ಇಲ್ಲ
ಪಾದಯಾತ್ರೆ ಹಾದು ಹೋಗುವ ರಸ್ತೆಯುದ್ದಕ್ಕೂ ಆಯಾ ಠಾಣೆ ವ್ಯಾಪ್ತಿಯ ಪೊಲೀಸರು ಕಾನೂನು- ಸುವ್ಯವಸ್ಥೆ ಹಾಗೂ ಭದ್ರತೆಯನ್ನು ನೋಡಿ ಕೊಳ್ಳುತ್ತಾರೆ. ಯಾತ್ರೆಗೆ ಬಂದೋಬಸ್ತ್ಗಾಗಿ ಹೆಚ್ಚುವರಿ ಪೊಲೀಸರನ್ನು ಜಿಲ್ಲೆಯಲ್ಲಿ ನಿಯೋಜಿಸಿಲ್ಲ ಎಂದು ಉನ್ನತ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.  ಆದರೆ ಪಶ್ಚಿಮ ವಲಯದ ಉಸ್ತುವಾರಿ ಎಡಿಜಿಪಿ ಪ್ರತಾಪ್‌ ರೆಡ್ಡಿ ಜಿಲ್ಲೆಯ ಒಟ್ಟಾರೆ ಭದ್ರತೆ ವಿಚಾರಗಳ
ಬಗ್ಗೆ ಹಿರಿಯ ಪೊಲೀಸ್‌ ಅಧಿಕಾರಿ ಗಳೊಂದಿಗೆ ಸಮಾಲೋಚನೆ ನಡೆಸುವ ಸಾಧ್ಯತೆಯಿದೆ.

 

Advertisement

Udayavani is now on Telegram. Click here to join our channel and stay updated with the latest news.

Next