ಮುಂಬಯಿ: 2024 ರ ಐಪಿಎಲ್ ಆರಂಭಕ್ಕೆ ದಿನ ನಿಗದಿಯಾಗದಿದ್ದರೂ, ಈಗಲೇ ಚುಟುಕು ಕ್ರಿಕೆಟ್ ಕ್ರೇಜ್ ಶುರುವಾಗಿದೆ. ಆಟಗಾರರ ಹರಾಜು ಪ್ರಕ್ರಿಯೆ, ಟ್ರೇಡ್ ಎಲ್ಲವೂ ಮುಗಿದಿದ್ದು ಐಪಿಎಲ್ ಆರಂಭಕ್ಕೆ ಕ್ರೀಡಾ ಪ್ರೇಕ್ಷಕರು ಎದುರು ನೋಡುತ್ತಿದ್ದಾರೆ.
ಈ ಬಾರಿಯ ಐಪಿಎಲ್ ನ ಟ್ರೇಡ್ ನಲ್ಲಿ ಹೆಚ್ಚು ಗಮನ ಸೆಳೆದದ್ದು ಹಾಗೂ ಅಚ್ಚರಿಯಾಗಿಸಿದ್ದು ಹಾರ್ದಿಕ್ ಪಾಂಡ್ಯ ಗುಜರಾತ್ ತಂಡವನ್ನು ತೊರೆದು, ಮತ್ತೆ ಮುಂಬಯಿ ತಂಡಕ್ಕೆ ಮರಳಿದ್ದು. ಮುಂಬೈಗೆ ಮರಳಿದ ಬಳಿಕ ತಂಡದ ನಾಯಕನಾಗಿ ಹಾರ್ದಿಕ್ ಮುಂದುವರೆಯಲಿದ್ದಾರೆ. ಇತ್ತ ಗುಜರಾತ್ ಟೈಟಾನ್ಸ್ ಶುಭ್ಮನ್ ಗಿಲ್ ಅವರನ್ನು ನಾಯಕರನ್ನಾಗಿ ನೇಮಿಸಿದೆ.
ಕಳೆದ ಎರಡು ಋತುವಿನಲ್ಲಿ ಗುಜರಾತ್ ತಂಡವನ್ನು ಫೈನಲ್ ಗೇರಿಸಿ ಒಂದು ಬಾರಿ ಚಾಂಪಿಯನ್ ಹಾಗೂ ಮತ್ತೊಂದು ಬಾರಿ ರನ್ನರ್ ಅಪ್ ಪ್ರಶಸ್ತಿಯನ್ನು ತಂದುಕೊಟ್ಟಿದ್ದ ಹಾರ್ದಿಕ್ ಪಾಂಡ್ಯ ಮುಂಬಯಿ ತಂಡಕ್ಕೆ ಟ್ರೇಡ್ ಆಗಿರುವ ಬಗ್ಗೆ ಗುಜರಾತ್ ಟೈಟಾನ್ಸ್ ತಂಡದ ಸ್ಟಾರ್ ಬೌಲರ್ ಮೊಹಮ್ಮದ್ ಶಮಿ ಮಾತನಾಡಿದ್ದಾರೆ.
ಇದನ್ನೂ ಓದಿ: ಸಿಡಿದ RCB ಯ ಮಾಜಿ ಆಟಗಾರ: 16 ಸಿಕ್ಸರ್,137 ರನ್.. ಒಂದು T20 ಪಂದ್ಯದಲ್ಲಿ ಹಲವು ದಾಖಲೆ
ಸಂದರ್ಶನವೊಂದರಲ್ಲಿ ಹಾರ್ದಿಕ್ ಪಾಂಡ್ಯ ನಾಯಕನಾಗಿದ್ದರ ಬಗ್ಗೆ ಪ್ರಶ್ನೆ ಕೇಳಲಾಗಿದೆ. “ಯಾರೋ ಹೋಗಿದ್ದರಿಂದ ಯಾರಿಗೂ ಯಾವ ಪರಿಣಾಮನೂ ಬೀರಲ್ಲ. ನೀವು ತಂಡ ಬ್ಯಾಲೆನ್ಸ್ ಆಗಿ ಇದೆಯೇ ಎನ್ನುವುದನ್ನು ನೋಡಬೇಕು. ಹಾರ್ದಿಕ್ ಇದ್ದಾಗ, ಉತ್ತಮವಾಗಿ ನಾಯಕತ್ವ ವಹಿಸಿದ್ದರು. ಅವರು ಎರಡೂ ಆವೃತ್ತಿಗಳಲ್ಲಿ ನಮ್ಮನ್ನು ಫೈನಲ್‌ಗೆ ಕರೆದೊಯ್ದರು ಮತ್ತು ನಾವು ಒಮ್ಮೆ ಗೆದ್ದಿದ್ದೇವೆ. ಆದರೆ ಗುಜರಾತ್ ಹಾರ್ದಿಕ್ ಅವರನ್ನು ಜೀವಮಾನವಿಡೀ ಸಹಿ ಮಾಡಿರಲಿಲ್ಲ. ತಂಡದಲ್ಲಿ ಇರುವುದು ಬಿಡುವುದು ಅವರ ನಿರ್ಧಾರ. ಶುಭ್‌ಮನ್‌ಗೆ ಈಗ ನಾಯಕನಾಗಿದ್ದು, ಅನುಭವವನ್ನೂ ಪಡೆಯಲಿದ್ದಾರೆ. ಕೆಲವು ದಿನದಲ್ಲಿ ಅವರೂ ಹೋಗಬಹುದು. ಮತ್ತು ಇದು ಆಟದ ಒಂದು ಭಾಗವಾಗಿದೆ. ಆಟಗಾರರು ಬರುತ್ತಾರೆ ಮತ್ತು ಹೋಗುತ್ತಾರೆ” ಎಂದಿದ್ದಾರೆ.
“ನೀವು ನಾಯಕರಾದಾಗ, ನಿಮ್ಮ ಪ್ರದರ್ಶನಗಳನ್ನು ನೋಡಿಕೊಳ್ಳುವಾಗ ಜವಾಬ್ದಾರಿಯನ್ನು ನಿರ್ವಹಿಸುವುದು ಮುಖ್ಯವಾಗಿದೆ. ಆ ಜವಾಬ್ದಾರಿಯನ್ನು ಈ ಬಾರಿ ಶುಭ್‌ಮನ್‌ಗೆ ವಹಿಸಲಾಗಿದೆ. ಅವರಿಗೆ ಸ್ವಲ್ಪ ಹೊರೆ ಇರಬಹುದು, ಆದರೆ ಆಟಗಾರರು ಹೆಚ್ಚು ಕಡಿಮೆ ಒಂದೇ ಆಗಿರುತ್ತಾರೆ. ಹಾಗಾಗಿ ಚಿಂತಿಸುವ ಅಗತ್ಯವಿಲ್ಲ. ನೀವು ಆಟಗಾರರನ್ನು ಚೆನ್ನಾಗಿ ನಿರ್ವಹಿಸಬೇಕು ಮತ್ತು ನಿಮ್ಮ ಆಟಗಾರರಿಂದ ಉತ್ತಮವಾದುದನ್ನು ಹೊರತೆಗೆಯಬೇಕು” ಎಂದಿದ್ದಾರೆ.