ಹೋಬರ್ಟ್: ಆ್ಯಶಸ್ ಸರಣಿಯ ಅಂತಿಮ ಟೆಸ್ಟ್ ಪಂದ್ಯದಲ್ಲೂ ಆಸ್ಟ್ರೇಲಿಯದ ಹಿಡಿತ ಬಿಗಿಗೊಳ್ಳತೊಡಗಿದೆ. ಈ ಪಿಂಕ್ ಬಾಲ್ ಪಂದ್ಯದ ಎರಡೇ ದಿನಗಳ ಆಟದಲ್ಲಿ ಆಸೀಸ್ 152 ರನ್ ಮುನ್ನಡೆ ಸಾಧಿಸಿದೆ.
6 ವಿಕೆಟಿಗೆ 241 ರನ್ ಗಳಿಸಿದ್ದ ಆಸ್ಟ್ರೇಲಿಯ ತನ್ನ ಮೊದಲ ಇನ್ನಿಂಗ್ಸ್ ಮೊತ್ತವನ್ನು 303ಕ್ಕೆ ಏರಿಸಿತು. ಜವಾಬಿತ್ತ ಇಂಗ್ಲೆಂಡ್‌ಗೆ ಕಮಿನ್ಸ್ ಮತ್ತು ಸ್ಟಾರ್ಕ್ ಬಿಸಿ ಮುಟ್ಟಿಸಿದರು. ಆಂಗ್ಲರ ಪಡೆ 188ಕ್ಕೆ ಕುಸಿಯಿತು. 115 ರನ್ನುಗಳ ಉಪಯುಕ್ತ ಮುನ್ನಡೆ ಪಡೆದ ಆಸ್ಟ್ರೇಲಿಯ ದ್ವಿತೀಯ ಇನ್ನಿಂಗ್ಸ್‌ನಲ್ಲಿ 37 ರನ್ನಿಗೆ 3 ವಿಕೆಟ್ ಕಳೆದುಕೊಂಡಿದೆ. ಒಟ್ಟು ಮುನ್ನಡೆ 152ಕ್ಕೆ ಏರಿದೆ.
ಪಂದ್ಯವಿನ್ನೂ 3 ದಿನ ಕಾಣಬೇಕಿದ್ದು, ಆಸ್ಟ್ರೇಲಿಯದ ಲೀಡ್ 300ಕ್ಕೆ ಏರುವುದರಲ್ಲಿ ಅನುಮಾನವಿಲ್ಲ. ಆಗ ಇಂಗ್ಲೆಂಡ್ ಹಾದಿ ಖಂಡಿತವಾಗಿಯೂ ದುರ್ಗಮಗೊಳ್ಳಲಿದೆ.
ಇಂಗ್ಲೆಂಡ್ ಸರದಿಯಲ್ಲಿ ಒಂದೂ ಅರ್ಧ ಶತಕ ದಾಖಲಾಗಲಿಲ್ಲ. 36 ರನ್ ಮಾಡಿದ ಬೌಲರ್ ಕ್ರಿಸ್ ವೋಕ್ಸ್ ಅವರದೇ ಗರಿಷ್ಠ ಗಳಿಕೆ. ನಾಯಕ ರೂಟ್ 34 ರನ್ ಹೊಡೆದರು. ಕಮಿನ್ಸ್ 4, ಸ್ಟಾರ್ಕ್ 3 ವಿಕೆಟ್ ಉಡಾಯಿಸಿ ಇಂಗ್ಲೆಂಡಿಗೆ ಘಾತಕವಾಗಿ ಪರಿಣಮಿಸಿದರು. ಡೇವಿಡ್ ವಾರ್ನರ್ ಸತತ ಎರಡೂ ಇನ್ನಿಂಗ್ಸ್‌ಗಳಲ್ಲಿ ಖಾತೆ ತೆರೆಯಲು ವಿಫಲರಾದರು. ಖ್ವಾಜಾ 11, ಲಬುಶೇನ್ 5 ರನ್ ಮಾಡಿ ಪೆವಿಲಿಯನ್ ಸೇರಿದ್ದಾರೆ. ಕ್ರೀಸಿನಲ್ಲಿರುವವರು ಸ್ಮಿತ್ (17) ಮತ್ತು ಬೋಲ್ಯಾಂಡ್ (3).
ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯ-303 ಮತ್ತು 3 ವಿಕೆಟಿಗೆ 37. ಇಂಗ್ಲೆಂಡ್-188.