Advertisement

ಶ್ರೀಮಂತವಾದರೂ ಯಕ್ಷಗಾನ ಲೋಕ ಬಡವಾಗುತ್ತಿದೆಯೇ ? 

02:26 PM Sep 23, 2018 | |

( ಹಿಂದಿನ ಸಂಚಿಕೆಯಿಂದ ) ಕಲಾ ಪ್ರಪಂಚದ ಎಲ್ಲಾ ಕಲೆಗಳಿಂದ ಅದ್ಭುತವಾದ ಕಲೆ ಯಕ್ಷಗಾನ. ಈ ಮಾತನ್ನು ಪ್ರಸಿದ್ಧ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ಅವರು ಹೇಳುತ್ತಾರೆ. ಕಾರಣ ಯಕ್ಷಗಾನದ ಸೊಬಗು ಅಂತಹದ್ದಾದುದರಿಂದ ಆ ಮಾತು ಯಕ್ಷಗಾನಾಭಿಮಾನಿಗಳೆಲ್ಲರೂ ಒಪ್ಪುವಂತಹದ್ದು. 

Advertisement

ಯಕ್ಷಗಾನದ ಶಕ್ತಿಗೆ ಸಾಕ್ಷಿ ಎಂಬಂತೆ ಅಮೆರಿಕಾ , ಜರ್ಮನ್‌ನಿಂದ ಮಹಿಳೆಯರು ಆಗಮಿಸಿ ಅದನ್ನು ಅಧ್ಯಯನಕ್ಕಾಗಿ ಆಯ್ದುಕೊಂಡಿದ್ದಾರೆ. ಕರಾವಳಿಗೆ ಮತ್ತು ಕರಾವಳಿಗರಿಗೆ ಮಾತ್ರ ಸೀಮಿತ ಎನಿಸಿಕೊಂಡ ಕಲೆ  30 ಕ್ಕೂ ಹೆಚ್ಚು ದೇಶಗಳಲ್ಲಿ ಪ್ರದರ್ಶನಗೊಂಡಿದ್ದು, ಅಂತರಾಷ್ಟ್ರೀಯ ಜಾನಪದ ಕಲೆಗಳ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದಿದ್ದು ಕಲೆಯ ಶ್ರೇಷ್ಠತೆಗೆ ಸಾಕ್ಷಿ .

ಕಾಲ ಕಾಲಕ್ಕೆ ಬದಲಾಗುತ್ತಾ ಬಂದಿರುವ ಕಲೆ ಈಗ ಕೆಲ ಉಳಿಸಿಕೊಳ್ಳಬೇಕಾದ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದೆ ಎನ್ನುವುದು ಹಿರಿಯ ಕಲಾವಿದರ, ಕಲಾಭಿಮಾನಿಗಳ ಕೂಗು.

ಯಕ್ಷಗಾನದ ಮುಖವರ್ಣಿಕೆ, ವೇಷಭೂಷಣ, ನಾಟ್ಯಗಾರಿಕೆ ತಿಟ್ಟುಗಳಿಗನುಗುಣವಾಗಿ ಭಿನ್ನವಾಗಿದೆ. ಸಾಮಾನ್ಯವಾಗಿ ನಡುತಿಟ್ಟಿನ ಕಲಾ ಪ್ರಕಾರದಲ್ಲಿ ಕರ್ಣಾರ್ಜುನ ಕಾಳಗದ ಕರ್ಣ ಪಾತ್ರವನ್ನು ಹಿಂದಿನಿಂದಲು ವಿಭಿನ್ನವಾಗಿ ಕಾಣಿಸಿಕೊಂಡು ಬರಲಾಗಿದೆ. ತೆಂಕಿನಲ್ಲಿ ಕರ್ಣ ಕೀರಿಟ ವೇಷಧಾರಿಯಾದರೆ, ಬಡಾಬಡಗಿನಲ್ಲಿ ಸಾಮನ್ಯ ಮುಂಡಾಸಿನ ವೇಷವಾಗಿ ಕಾಣಿಸಲಾಗುತ್ತದೆ. 

ಕೃಷ್ಣನ ವೇಷವೂ ಬಡಗುತಿಟ್ಟಿನಲ್ಲಿ ವಿಶಿಷ್ಟವಾಗಿ ನಿರಿಯುಟ್ಟು ಕಾಣಿಸಲಾಗುತ್ತದೆ. ಸೀರೆಯನ್ನುಟ್ಟು ವಿಶಿಷ್ಟವಾಗಿ ವಿಷ್ಣು ಮತ್ತು ಕೃಷ್ಣನನ್ನು ಕಾಣಿಸಿದರೆ, ರಾಮನ ಪಾತ್ರದಲ್ಲಿ ಪ್ರಸಂಗಗಳಿಗನುಗುಣವಾಗಿ ಭಿನ್ನ ವೇಷಗಾರಿಕೆ ಕಾಣಬಹುದು. 

Advertisement

ಸೀತಾ ಕಲ್ಯಾಣದವರೆಗಿನ ರಾಮನನ್ನು ಯುವರಾಜನಂತೆ ಕಾಣಿಸಿದರೆ.ಕುಶ ಲವ ಕಾಳಗದ ರಾಮನನ್ನು ಮೀಸೆಯೊಂದಿಗೆ  ಕೀರಿಟ ವೇಷದಲ್ಲಿ ಕಾಣಿಸಲಾಗುತ್ತಿದೆ.  

ಯಕ್ಷರಂಗದಲ್ಲಿ ಈಗಾಗಲೇ ರಾಮ ಮತ್ತು ಕೃಷ್ಣನ ಪಾತ್ರದ ವೇಷಭೂಷಣದ ಕುರಿತಾಗಿ ಹಲವು ಚರ್ಚೆಗಳು ನಡೆದಿವೆ. ರಾಮನಿಗೆ ಮೀಸೆ ಇಡುವ ಅಗತ್ಯ ಇದೆಯೇ ಎನ್ನುವ ಪ್ರಶ್ನೆ ಕೇಳಲಾಗುತ್ತದೆ. ಆದರೆ ಬಡಗಿನಲ್ಲಿ ಕಿರೀಟ ವೇಷವನ್ನು ಮೀಸೆ ಇಲ್ಲದೆ ಕಾಣಿಸಲಾಗುತ್ತದೆಯೇ? 

ವಾನರ ಸ್ವರೂಪಿ ಪಾತ್ರಗಳಾದ ಹನುಮಂತ, ವಾಲಿ, ಸುಗ್ರೀವ , ಮೈಂದ, ದ್ವಿವಿದ , ಮತ್ಸ್ಯ ಹನುಮ ಮೊದಲಾದ ಪಾತ್ರಗಳಲ್ಲಿ ಮುಖವರ್ಣಿಕೆಯಲ್ಲಿ ಸಾಮೀಪ್ಯವಿದ್ದರೆ  ವೇಷಭೂಷಣಗಳಲ್ಲಿ ಭಿನ್ನತೆ ಇದೆ. 

ಯಕ್ಷಗಾನದಲ್ಲಿ ಹನುಮಂತನ ವೇಷವನ್ನು ಈಗ ಕ್ಯಾಲೆಂಡರ್‌ ಹನುಮನಂತೆ ಕಾಣಸಲಾಗುತ್ತಿದೆ. ಯಕ್ಷಗಾನ ವೇಷಭೂಷಣದಲ್ಲಿ ಹಿಂದೆ ಹನುಮಂತನ ಪಾತ್ರ ನಿರ್ವಹಿಸಲಾಗುತ್ತಿತ್ತು. ಯಕ್ಷಗಾನದಲ್ಲಿ ಹನುಮಂತನಿಗೆ ಹಿಂದೆ ಬಾಲ ಕಟ್ಟದೆ ಹೆಗಲು ವಸ್ತ್ರವನ್ನು ಬಾಲದ ಸಾಂಕೇತಿಕವಾಗಿ ತೋರಿಸಲಾಗುತ್ತಿತ್ತು ಎನ್ನುವುದು ಹಿರಿಯ ಕಲಾವಿದರ ಅಭಿಪ್ರಾಯ. 

ವಾಲಿ, ಸುಗ್ರೀವ ಪಾತ್ರಗಳನ್ನು ಬಣ್ಣದ ತಟ್ಟಿ ಕಟ್ಟಿ ಮಾಡುವ ಪರಂಪರೆ ಹಿಂದೆ ಇತ್ತು ಎನ್ನುವುದು ಹಿರಿಯ ಕಲಾವಿದರ ನೆನಪಾದರೆ, ಈಗ ಬಡಗು ಮತ್ತು ತೆಂಕಿನಲ್ಲಿ ಕಿರೀಟ ವೇಷಗಳನ್ನಾಗಿ ಕಾಣಿಸಿಕೊಳ್ಳಲಾಗುತ್ತಿದೆ. 

ಕಲಾವಿದರು ಮುಖವರ್ಣಿಕೆಯಲ್ಲಿ ಪ್ರತೀಪಾತ್ರಕ್ಕೂ ತಮ್ಮದೇ ಆದ ಬದಲಾವಣೆಯನ್ನು ಮಾಡುತ್ತಾ ಸಾಗಿದ್ದಾರೆ. ನಡುತಿಟ್ಟಿನ ಮುಖವರ್ಣಿಕೆ ವಿಭಿನ್ನವಾಗಿದ್ದರೆ. ತೆಂಕಿನ ಮುಖವರ್ಣಿಕೆಯಲ್ಲಿ ಹೆಚ್ಚಿನ ಕಸುಬನ್ನು ಕಾಣಬಹುದು. 

ಬಡಗಿನ ಬಣ್ಣದ ವೇಷದ ಸೊಬಗು ಕಳೆದುಹೋಗುವ ಕಾಲದಲ್ಲಿ ಚುಟ್ಟಿ ಇಟ್ಟು (ಅಕ್ಕಿ ಹಿಟ್ಟಿಗೆ ಸುಣ್ಣ ಬೆರೆಸಿ ಸಿದ್ದಪಡಿಸುವ ಮೇಕಪ್‌ ) ಬಣ್ಣದ ವೇಷ ಮಾಡುವ ಕಲಾವಿದರು ಬೆರಳೆಣಿಕೆಯವರಾಗಿದ್ದಾರೆ. ಆದರೆ ತೆಂಕಿನಲ್ಲಿ  ಬಣ್ಣದ ವೇಷಧಾರಿಗಳು ಸಂಖ್ಯೆ ಸಾಕಷ್ಟಿದ್ದು ಅಲ್ಲಿ  ರಾಕ್ಷಸ ಪಾತ್ರಗಳು ಶ್ರೀಮಂತವಾಗಿ ರಂಗದ ಮೇಲೆ ಆರ್ಭಟಿಸುತ್ತಿವೆ. 

ದಗಲೆ(ಸಾಮಾನ್ಯ ಭಾಷೆಯಲ್ಲಿ ಅಂಗಿ) ಪ್ರತೀ ಪಾತ್ರಕ್ಕೂ ಭಿನ್ನವಾಗಿರುತ್ತದೆ. ಸಾಮಾನ್ಯವಾಗಿ ಬಡಗುತಿಟ್ಟಿನಲ್ಲಿ ಕೆಂಪು, ಹಸಿರು, ಕಪ್ಪು  ಬಣ್ಣದ ದಗಲೆಯನ್ನು ಬಳಸಲಾಗುತ್ತದೆ. ಹಿಂದೆ ನೇರಳೆ ಬಣ್ಣದ ದಗಲೆಯನ್ನು ಬಳಸಲಾಗುತ್ತಿತ್ತು,ಈಗ ಮರೆಯಾಗಿದೆ. 

ಕಿರೀಟ ವೇಷಗಳಾರೆ ಸಾಮಾನ್ಯ ವಾಗಿ ಕೆಂಪು, ಹಸಿರು ದಗಲೆಯನ್ನು ಸಾತ್ವಿಕ ಪಾತ್ರಗಳಿಗೆ ಬಳಸುತ್ತಾರೆ. ಖಳ ಪಾತ್ರಗಳಿಗೆ ಕಪ್ಪು ದಗಲೆಯನ್ನು ಬಳಸಲಾಗುತ್ತದೆ. ಈಗ ಬಡಗುತಿಟ್ಟಿನಲ್ಲಿ ಭೀಮನ ಪಾತ್ರಕ್ಕೂ ಕೆಲ ಕಲಾವಿದರು ಕಪ್ಪು ದಗಲೆ ಬಳಕೆ ಮಾಡುತ್ತಾರೆ. ತಾಮ್ರಧ್ವಜ,ವೀರಮಣಿ ,ಶಲ್ಯ ಮೊದಲಾದ ಮುಂಡಾಸು ವೇಷಗಳಿಗೆ ಕಪ್ಪು ದಗಲೆ ಬಳಸಲಾಗುತ್ತಿದೆ. 

ಕಳೆದುಕೊಂಡ ಹಲವು,ಸೇರ್ಪಡೆಯಾದ ಹಲವು..(ಮುಂದುವರಿಯುವುದು)

Advertisement

Udayavani is now on Telegram. Click here to join our channel and stay updated with the latest news.

Next