Advertisement

ಎದ್ದು ಬಾರೋ ನನ್ನಪ್ಪನೇ..

10:04 AM Oct 30, 2021 | Team Udayavani |

ಬೆಂಗಳೂರು: ಅಪ್ಪು …ಎದ್ದು ಬಾ….ನಿಮಗೇನೂ ಆಗಿಲ್ಲ. ಚಿಕ್ಕ ಯಜಮಾನೇ… ಮಗನೇ ನಿನ ಗೇನೂ ಆಗಿಲ್ಲ, ನೀನು ಬರ್ತೀಯಾ…. ಅಣ್ಣ ಬೇಗ ಹುಷಾರಾಗಿ ಬನ್ನಿ… ಎದ್ದು ಬಾರೋ ನನ್ನಪ್ಪನೇ…. -ಮನದ ತುಂಬಾ ದುಃಖ, ಕಣ್ತುಂಬ ನೀರು ತುಂಬಿಕೊಂಡು ಅಭಿಯಾನಿಗಳು ಹೇಳುತ್ತಿದ್ದ ಈ ಮಾತುಗಳನ್ನು ಕೊನೆಗೂ ಪುನೀತ್‌ ರಾಜ ಕುಮಾರ್‌ ಕೇಳಿಸಿಕೊಳ್ಳಲೇ ಇಲ್ಲ! ಪುನೀತ್‌ಗೆ ಹೃದಯಾಘಾತವಾಗಿ ವಿಕ್ರಂ ಆಸ್ಪತ್ರೆಗೆ ದಾಖಲಿಸಿದ್ದಾರೆಂಬ ಸುದ್ದಿ ತಿಳಿಯುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಸ್ಪತ್ರೆ ಮುಂದೆ ಜಮಾಯಿಸಿದರು. ಸುತ್ತಮುತ್ತಲ ಎತ್ತರ ಕಟ್ಟಡಗಳು, ಆಸ್ಪತ್ರೆ ಕಾಂಪೌಂಡ್‌ ಮೇಲೆ ಅಭಿಮಾನಿಗಳು ಪುನೀತ್‌ ಗುಣಮುಖರಾಗಿ ಬರಲಿ ಎಂದು ಆಶಿಸುತ್ತಾ ನಿಂತಿದ್ದರು. ಪ್ರತಿಯೊ ಬ್ಬರ ಮುಖದಲ್ಲೂ ಆತಂಕ, ಕಣ್ಣಂಚಲ್ಲಿ ನೀರು ನಿಂತಿತ್ತು.

Advertisement

ವೃದ್ಧರಿಂದ ಹಿಡಿದು ಪಕ್ಕದ ಶಾಲೆಯ ಚಿಕ್ಕ ಮಕ್ಕಳು, ಕಾಲೇಜು ಯುವಕರು, ಉದ್ಯೋಗಸ್ಥ ಮಹಿಳೆಯರು, ಆಟೋ ಚಾಲಕರು ವೈದ್ಯರ ಹೇಳಿಕೆಗೆ ಎದುರು ನೋಡುತ್ತಿದ್ದರು. “ಅಪ್ಪು… ಅಪ್ಪು …ಕಂಬ್ಯಾಕ್‌ ಪವರ್‌ ಸ್ಟಾರ್‌..ರಾಜಕುಮಾರ….’ ಎಂದು ಘೋಷಣೆ ನಿರಂತರ ವಾಗಿತ್ತು. ಮಲ್ಲೇಶ್ವರದ ವೃದ್ಧೆ ಶಾಂತಮ್ಮ ಎಂಬು ವವರು ಆಸ್ಪತ್ರೆ ಪಕ್ಕದ ಕಟ್ಟಡದ ಬಳಿ ಕುಳಿತು “ಮಗನೇ ನಿನಗೇನೂ ಆಗಿಲ್ಲ, ನೀನು ಬರ್ತೀಯಾ…’ ಎಂದು ಕಣ್ಣೀರಿಟ್ಟರು. ಕೊಳ್ಳೆ ಗಾಲದ ಗಾಜನೂರು ಮೂಲದ ಕೆಲ ಅಭಿಮಾನಿ ಗಳು, “ನಿಮಗೇನೂ ಆಗಿಲ್ಲ ಚಿಕ್ಕ ಯಜಮಾನೆರೇ’ ಎಂದು ರೋಧಿಸಿದರು.

ಸುತ್ತಮುತ್ತಲ ಕಂಪನಿ ಗಳಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಅಭಿಯಾನಿ ಗಳು “ಅಣ್ಣ ಬೇಗ ಹುಷಾರಾಗಿ ಬನಿ’° ಎಂದು ಹಾರೈಸುತ್ತಿದ್ದರು. ರಾಜಾಜಿನಗರ ಭಾಗದಿಂದ ಬಂದಿದ್ದ ಹಿರಿಯ ಮಹಿಳಾ ದಂಪತಿ “ನಮ್ಮ ರಾಜಕುಮಾರ ನೀನು, ಅಪ್ಪು …ಎದ್ದು ಬಾ’ ಎಂದು ಗೋಳಾಡಿದರು.

ಅಭಿಮಾನಿಗಳ ಹಾರೈಕೆ ನುಚ್ಚುನೂರು: “ಚಿಕಿತ್ಸೆ ನಡೆಯುತ್ತಿದೆ, ಪರಿಸ್ಥಿತಿ ತುಂಬಾ ಗಂಭೀರವಾಗಿದೆ’ ಎಂಬ ಹೇಳಿಕೆಯನ್ನು ವೈದ್ಯರು ನೀಡುತ್ತಿದ್ದಂತೆ ಅಭಿಮಾನಿಗಳ ರೋಧನ ಹೆಚ್ಚಾಯಿತು. ಪೊಲಿ àಸರು ದೊಡ್ಡ ಬ್ಯಾರಿಕೇಡ್‌ ಅಳವಡಿಸುತ್ತಿದ್ದು, ದೊಡ್ಡ ವಾಹನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಅಭಿಮಾನಿ ಗಳಿಗೆ ಪುನೀತ್‌ ಸಾವು ಖಚಿತವಾಗುತ್ತಾ ಬಂತು. 2 ಗಂಟೆ ಸುಮಾರಿಗೆ “ಅಪ್ಪು ಇನ್ನಿಲ್ಲ” ಎಂಬ ಸತ್ಯ ತಿಳಿದ ಕೂಡಲೇ ಆತಂಕ ಅಳುವಾಗಿ ನೆರೆದಿದ್ದ ಪ್ರತಿ ಯೊಬ್ಬರ ಕಣ್ಣು ಒದ್ದೆಯಾದವು. ಅಭಿಮಾನಿಗಳ ಹಾರೈಕೆ ನುಚ್ಚುನೂರಾಯ್ತು. ಕೆಲವರು ರಸ್ತೆಯ ಲ್ಲಿಯೇ ಬಿದ್ದು ಗೋಳಾಡಿದರು. “ದೇವರೇ ನಿನಗೆ ಧಿಕ್ಕಾರ’ ಎಂದು ಘೋಷಣೆ ಕೂಗಿದರು. ಆಸ್ಪತ್ರೆ ವೈದ್ಯರಿಗೆ ಕೆಲ ಮುಗ್ಧ ಅಭಿಯಾನಿಗಳು ಹಿಡಿಶಾಪ ಹಾಕಿದರು.

ಇದನ್ನೂ ಓದಿ;- ಹಾನಗಲ್ ಉಪಚುನಾವಣೆ: ಮೂರು ಕಡೆ ಕೈಕೊಟ್ಟ ಮತಯಂತ್ರ

Advertisement

ಹತ್ತಕ್ಕೂ ಹೆಚ್ಚು ಆ್ಯಂಬುಲೆನ್ಸ್‌!

ಪುನೀತ್‌ ನಿಧನರಾಗಿದ್ದಾರೆಂಬ ಸುದ್ದಿ ತಿಳಿಯುತ್ತಿದ್ದಂತೆ ಹತ್ತಕ್ಕೂ ಹೆಚ್ಚು ಆ್ಯಂಬುಲೆನ್ಸ್‌, ಅಂತಿಮ ಯಾತ್ರೆ ವಾಹನಗಳು ಆಸ್ಪತ್ರೆ ಮುಂಭಾಗ ಬಂದವು. ಅಚ್ಚರಿ ಎಂದರೆ, ಈ ಆ್ಯಂಬುಲೆನ್ಸ್‌ಗಳಿಗೆ ಅಧಿಕೃತವಾಗಿ ಕುಟುಂಬಸ್ಥರು ಯಾರೂ ಕರೆ ಮಾಡಿರಲಿಲ್ಲ. ಅಭಿಮಾನಿ ಬಳಗ, ಸಿನಿಮಾರಂಗದ ಆಪ್ತರು ಕರೆ ಮಾಡಿದರು ಎಂದು ಕೆಲವರು ಬಂದಿದ್ದರೆ, ಮತ್ತೆ ಕೆಲ ಅಭಿಮಾನಿಗಳು ಅಪ್ಪು ಕೊನೆಯ ಪಯಣ ನನ್ನ ವಾಹನದಲ್ಲಿ ಆಗಲಿ ಎಂಬ ಆಸೆಯಿಂದ ಬಂದಿದ್ದರು. ಈ ಆ್ಯಂಬುಲೆನ್ಸ್‌ಗಳನ್ನು ತೆರವು ಮಾಡಲು ಪೊಲೀಸರು ಹರಸಾಹಸ ಪಟ್ಟರು.

ಆಸ್ಪತ್ರೆ ಗಣ್ಯರ ದಂಡು: ವಿಕ್ರಂ ಆಸ್ಪತ್ರೆಯಲ್ಲಿ ಗಣ್ಯರ ದಂಡು ನೆರೆದಿತ್ತು. ರಾಘವೇಂದ್ರ ರಾಜಕುಮಾರ್‌, ಪುನೀತ್‌ ಪತ್ನಿ, ಪುನೀತ್‌ ಜತೆ ಆಗಮಿಸಿದ್ದರು. ಮನೆಯಿಂದ ಆಸ್ಪತ್ರೆಗೆ ಪುನೀತ್‌ ಕರೆತರುವಾಗಲೇ ಪೊಲೀಸ್‌ ವಾಹನವೊಂದು ಗಸ್ತಿಗೆ ಬಂದಿತ್ತು. ಪರಿಸ್ಥಿತಿ ಗಂಭೀರ ಇದೆ ಎಂದು ಆಸ್ಪತ್ರೆ ವೈದ್ಯರು ಪೊಲೀಸರಿಗೆ ತಿಳಿಸಿದ ಕೂಡಲೇ ನಗರ ಪೊಲೀಸ್‌ ಆಯುಕ್ತರು ಆಗಮಿಸಿದರು. ಬಳಿಕ ಪೊಲೀಸ್‌ ಆಯುಕ್ತರು ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದರು. ಕೂಡಲೇ ಸಿಎಂ ಬಸವರಾಜ ಬೊಮ್ಮಾಯಿ ಸೇರಿ ಕಂದಾಯ ಸಚಿವ ಆರ್‌.ಅಶೋಕ್‌, ವಸತಿ ಸಚಿವ ಸೋಮಣ್ಣ ಆಸ್ಪತ್ರೆಗೆ ಆಗಮಿಸಿದರು. ಇನ್ನು ರಾಜ್‌ ಕುಟುಂಬಸ್ಥರು ಸೇರಿ ನಟ- ನಟಿಯರು ದಂಡೇ ಆಸ್ಪತ್ರೆ ಬಳಿ ಬಂದಿತ್ತು.

ಬಿಕ್ಕಿ ಬಿಕ್ಕಿ ಅತ್ತ ಸಂತೋಷ್‌ ಆನಂದ್‌ರಾಮ್‌: ಪುನೀತ್‌ ನಟನೆಯ ಕೊನೆಯ ಚಿತ್ರ ಯುವರತ್ನ ನಿರ್ದೇಶಿಸಿದ ಸಂತೋಷ್‌ ಆನಂದ್‌ ರಾಮ್‌ ಆಸ್ಪತ್ರೆಯಿಂದ ಹೊರಬರುತ್ತಿದ್ದಂತೆ ಬಿಕ್ಕಿ ಬಿಕ್ಕಿ ಅತ್ತರು. ಆಪ್ತರು ತಬ್ಬಿಕೊಂಡು ಸಮಾಧಾನ ಪಡಿಸಿದರು. ಪುನೀತ್‌ ಜತೆ ವರ್ಕ್‌ಔಟ್‌ ಮಾಡುತ್ತಿದ್ದ ಹುಡುಗರು, ಕಿರಿಯ ಕಲಾವಿದರು ಕೂಡ ಒಬ್ಬರಿಗೊಬ್ಬರ ಬಿಗಿದಪ್ಪಿ ಅತ್ತರು.

ಆಸ್ಪತ್ರೆಗೆ ಕರೆತರುವಾಗಲೇ ಹೃದಯ ಸ್ತಬ್ಧವಾಗಿತ್ತು!

ಬೆಂಗಳೂರು: ಪುನೀತ್‌ ರಾಜ್‌ಕುಮಾರ್‌ ಅವರನ್ನು ಆಸ್ಪತ್ರೆಗೆ ಕರೆತರುವಾಗಲೇ ಹೃದಯ ಕಾರ್ಯಚಟುವಟಿಕೆ ಸ್ತಬ್ಧವಾಗಿತ್ತು ಎಂದು  ವಿಕ್ರಂ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ರಂಗನಾಥ್‌ ನಾಯಕ್‌ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪುನೀತ್‌ ರಾಜ್‌ಕುಮಾರ್‌ಗೆ ಈವರೆಗೆ ಹೃದ್ರೋಗ ಸಮಸ್ಯೆ ಇರಲಿಲ್ಲ.

ಶುಕ್ರವಾರ ಬೆಳಗ್ಗೆ ಜಿಮ್‌ನಲ್ಲಿ ಎರಡು ಗಂಟೆ ವ್ಯಾಯಾಮ ಮಾಡಿದ್ದರು. ಬಳಿಕ ಎದೆಯಲ್ಲಿ ನೋವು ಕಾಣಿಸಿಕೊಂಡಿದ್ದರಿಂದ ಕುಟುಂಬದ ವೈದ್ಯರ ಬಳಿ ಹೋಗಿದ್ದರು. ಅವರು ಇಸಿಜಿ ಪರೀಕ್ಷೆ ನಡೆಸಿದಾಗ ಹೃದಯಾಘಾತ ಆಗಿರುವುದು ದೃಢಪಟ್ಟಿತ್ತು. ಹೆಚ್ಚಿನ ಚಿಕಿತ್ಸೆಗೆ ವಿಕ್ರಂ ಆಸ್ಪತ್ರೆಗೆ ಬರುವಾಗ ಹೃದಯದ ಕಾರ್ಯಚಟುವಟಿಕೆ ಸ್ತಬ್ಧವಾಗಿತ್ತು.

ಯಾವುದೇ ಸ್ಪಂದನೆಯಿಲ್ಲದ ಸ್ಥಿತಿಯಲ್ಲಿದ್ದ ಪುನೀತ್‌ ಅವರನ್ನು ಉಳಿಸಲು ಸತತ ಮೂರು ಗಂಟೆಗಳ ಕಾಲ ವೆಂಟಿಲೇಟರ್‌ ವ್ಯವಸ್ಥೆಯಲ್ಲಿಟ್ಟು ಎಲ್ಲಾ ಪ್ರಯತ್ನ ನಡೆಸಲಾಯಿತು. ಹೃದಯವು ತುಂಬಾ ದುರ್ಬಲವಾಗಿತ್ತು. ಹೃದಯದ ಮಸಾಜ್‌ ಸೇರಿದಂತೆ ಎಲ್ಲ ರೀತಿಯ ಪ್ರಯತ್ನಗಳನ್ನು ನಡೆಸಿದರೂ ಅವರ ದೇಹ ಚಿಕಿತ್ಸೆಗೆ ಸ್ಪಂದಿಸಲಿಲ್ಲ. ಬಳಿಕ ನಿಧನ ಎಂದು ಘೋಷಿಸಲಾಯಿತು ಎಂದು ಮಾಹಿತಿ ನೀಡಿದರು.

ಆ್ಯಂಬುಲೆನ್ಸ್‌ ಬಾಗಿಲು ತೆರೆಯಲು ಬಿಡದ ಅಭಿಮಾನಿಗಳು

ಅಪ್ಪು ಸತ್ತಿಲ್ಲ ಆ್ಯಂಬುಲೆನ್ಸ್‌ ಯಾಕೆ? ನಾವು ಅಪ್ಪು ನೋಡಬೇಕು ಎಂದು ಆ್ಯಂಬುಲೆನ್ಸ್‌ ಬಾಗಿಲು ತೆರೆಯಲು ಅವಕಾಶ ನೀಡದೇ ಕೆಲ ಅಭಿಮಾನಿಗಳು ಹಠ ಹಿಡಿದರು. ಕೂಡಲೇ ರಾಘವೇಂದ್ರ ರಾಜ್‌ಕುಮಾರ್‌ ಪುತ್ರ ಯುವರಾಜ್‌ ಮತ್ತು ಪುನೀತ್‌ ಅಕ್ಕನ ಮಕ್ಕಳು ಆಗಮಿಸಿ ಅಭಿಮಾನಿಗಳಿಗೆ ಮುಂದಿನ ಕಾರ್ಯಗಳಿಗೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು. ಬಳಿಕ ಅಭಿಮಾನಿಗಳು ಆ್ಯಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟರು. ಪುನೀತ್‌ ಶವ ಹೊತ್ತ ಆ್ಯಂಬುಲೆನ್ಸ್‌ ಆಸ್ಪತ್ರೆಯಿಂದ ಹೊರ ಬಂದು ಮನೆ ಕಡೆ ಸಾಗುತ್ತಿದ್ದಂತೆ ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿತು.

Advertisement

Udayavani is now on Telegram. Click here to join our channel and stay updated with the latest news.

Next