ನಾಗಮಂಗಲ: ‘ನಾನು ರಾಜಕೀಯ ಪ್ರವೇಶ ಮಾಡಬೇಕೆಂದು ಅಭಿಮಾನಿಗಳು ತುಂಬಾ ಆಸೆ ಇಟ್ಟುಕೊಂಡು ಒತ್ತಡ ಹಾಕುತ್ತಿದ್ದಾರೆ. ಅಭಿಮಾನಿಗಳ ಆಸೆ ಸೋಲಬಾರದು ಎನ್ನುವುದು ನನ್ನ ಆಸೆ’ ಎಂದು ಹೇಳುವ ಮೂಲಕ ಚಿತ್ರನಟಿ ಸುಮಲತಾ ಅಂಬರೀಶ್ ರಾಜಕೀಯ ಪ್ರವೇಶದ ಇಂಗಿತ ವ್ಯಕ್ತಪಡಿಸಿದರು.
ತಾಲೂಕಿನ ಆದಿಚುಂಚನಗಿರಿ ಶ್ರೀಕ್ಷೇತ್ರಕ್ಕೆ ಭಾನುವಾರ ಭೇಟಿ ನೀಡಿ ಶ್ರೀ ಕಾಲಭೈರವೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ರಾಜಕೀಯ ಪ್ರವೇಶದ ಕಾಲ ಕೂಡಿ ಬಂದರೆ ಮಂಡ್ಯ ಕ್ಷೇತ್ರದಿಂದಲೇ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅಂಬರೀಶ್ ಅಭಿಮಾನಿಗಳು ಮತ್ತು ಜಿಲ್ಲೆಯ ಜನರ ಅಭಿಮಾನದ ಋಣ ತೀರಿಸುವುದಾಗಿ ಹೇಳಿದರು.
ಅಂಬರೀಶ್ ಅವರ ಸಾವಿನ ದುಃಖದ ಹೋರಾಟ ನಮ್ಮೊಳಗೆ ನಿರಂತರವಾಗಿ ನಡೆಯುತ್ತಿದೆ. ಇಷ್ಟು ಬೇಗ ರಾಜಕೀಯದ ಚರ್ಚೆಗಳು ಇಷ್ಟು ತೀವ್ರಗತಿಯಲ್ಲಿ ಮುನ್ನೆಲೆಗೆ ಬರುತ್ತವೆ ಎಂದು ನಾನು ಅಂದುಕೊಂಡಿರಲಿಲ್ಲ. ಆದರೆ, ಅಭಿಮಾನಿಗಳ ಒತ್ತಡಕ್ಕೆ ಮಣಿದು ದೃಢ ನಿರ್ಧಾರ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಸೃಷ್ಠಿಯಾಗಿದೆ ಎಂದರು.
ಮಂಡ್ಯ ಹೊರತಾಗಿ ಬೇರೆ ಆಯ್ಕೆ ಇಲ್ಲ: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ಅಥವಾ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೆಂಬ ವದಂತಿಯಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಚುನಾವಣೆ ಎಂದು ಆಯ್ಕೆ ಮಾಡಿಕೊಳ್ಳುವುದಾದರೆ ಅಥವಾ ನನ್ನ ರಾಜಕೀಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವುದಾದರೆ ಮಂಡ್ಯವನ್ನು ಮಾತ್ರ ಎಂದು ಸ್ಪಷ್ಟಪಡಿಸಿದರು. ರಾಜಕೀಯದಲ್ಲಿ ಅಂಬಿ ಗುರುತಿಸಿಕೊಂಡಿದ್ದು ಹೆಚ್ಚಾಗಿ ಕಾಂಗ್ರೆಸ್ ಪಕ್ಷದಿಂದ. ಕಾಂಗ್ರೆಸ್ ಎಂದರೆ ಅಂಬಿಗೆ ಎಲ್ಲಿಲ್ಲದ ಪ್ರೀತಿ. ಆದ ಕಾರಣ ನಾನು ಚುನಾವಣೆಯಲ್ಲಿ ಸ್ಫರ್ಧಿಸುವುದೇ ಆದರೆ ಕಾಂಗ್ರೆಸ್ ಪಕ್ಷಕ್ಕೆ ನನ್ನ ಮೊದಲ ಆದ್ಯತೆ ಎಂದು ಸುಮಲತಾ ಅಭಿಪ್ರಾಯಪಟ್ಟರು.
ವಿಧಾನ ಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಮಂಡ್ಯ ಗೌಡ್ತಿ ಅಲ್ಲ ಎಂಬ ವಿವಾದಾತ್ಮಕ ಹೇಳಿಕೆ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಅಂಬರೀಶ್ ಮಂಡ್ಯ ಜನರ ಜತೆಗಿನ ಬಾಂಧವ್ಯ ಅಗಾಧವಾಗಿತ್ತು. ಅದನ್ನು ನಮ್ಮ ಕುಟುಂಬ ಉಳಿಸಿಕೊಂಡು ಹೋಗುತ್ತೆ ಎಂದಷ್ಟೇ ಹೇಳಿದರು.
ಭೇಟಿ ಹಿಂದೆ ರಾಜಕೀಯ ಉದ್ದೇಶವಿಲ್ಲ: ಆದಿ ಚುಂಚನಗಿರಿ ಶ್ರೀಗಳನ್ನು ಭೇಟಿ ಮಾಡಿರುವುದರ ಹಿಂದೆ ರಾಜಕೀಯ ಉದ್ದೇಶವಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು. ಫೆ.14ಕ್ಕೆ ಮಗನ ಮೊಟ್ಟಮೊದಲ ಅಭಿನಯದ ‘ಅಮರ್’ ಚಿತ್ರದ ಟೀಸರ್ ಬಿಡುಗಡೆಗೊಳ್ಳಲಿದ್ದು ಚಿತ್ರ ಯಶಸ್ವಿಯಾಗಲೆಂದು ಕುಲದೈವ ಕಾಲಭೈರವ ಮತ್ತು ಶ್ರೀಗಳ ಆಶಿರ್ವಾದ ಪಡೆಯುವುದಷ್ಟೇ ಆಗಿದೆ ಎಂದರು. ಪುತ್ರ ಅಭಿಷೇಕ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ನಟ ದೊಡ್ಡಣ್ಣ ಹಾಜರಿದ್ದರು.