ಬೆಂಗಳೂರು: ಸಾಮಾನ್ಯವಾಗಿ ಒಂದು ಕೋಳಿಯ ಬೆಲೆ ಎಷ್ಟಿರಬಹುದು? 500 ರೂಪಾಯಿ? ಅಬ್ಬಬ್ಟಾ ಎಂದರೆ ಸಾವಿರ ರೂ. ಆದರೆ, ನ.3ರಿಂದ ನಡೆಯಲಿರುವ ಕೃಷಿ ಮೇಳದಲ್ಲಿ 30ರಿಂದ 40 ಸಾವಿರ ರೂ. ಬೆಲೆಬಾಳುವ ಫ್ಯಾನ್ಸಿ ಕೋಳಿಗಳು ನೋಡಲು ಸಿಗಲಿವೆ!
ಪ್ರತಿ ವರ್ಷದ ಕೃಷಿ ಮೇಳದಲ್ಲಿ ಕಿಲಾರಿ, ಹಳ್ಳಿಕಾರ್, ಗಿರ್‌ನಂತಹ ಅಪರೂಪದ ಜಾನುವಾರು ತಳಿಗಳು ಪ್ರಮುಖ ಆಕರ್ಷಣೆ ಆಗಿರುತ್ತಿದ್ದವು. ಆದರೆ, ಈ ಬಾರಿ ವಿಶ್ವದ ಅತಿ ಕಿರಿದಾದ ಕೋಳಿ, ಪೊಲೀಸ್ ಕ್ಯಾಪ್ ಹಾಕಿಕೊಂಡ, ಸುಮಾರು 12 ಮೀಟರ್ ಉದ್ದ ಬಾಲವನ್ನು ಹರಡಿಕೊಂಡಿರುವಂತಹ ತರಹೇವಾರಿ ವಿದೇಶಿ ಮೂಲದ ಕೋಳಿಗಳು ಆಕರ್ಷಣೆಯ ಕೇಂದ್ರಬಿಂದು ಆಗಿರಲಿವೆ. ಸುಮಾರು 10 ಪ್ರಕಾರದ ಅಲಂಕಾರಿಕ ಕೋಳಿಗಳ ಪ್ರದರ್ಶನಕ್ಕೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಮೇಳದಲ್ಲಿ ವೇದಿಕೆ ಕಲ್ಪಿಸುತ್ತಿದೆ. ವಾಣಿಜ್ಯ ಉದ್ದೇಶಕ್ಕೆ ರೈತರು ಗಿರಿರಾಜ, ಅಸೀಲ್, ಸ್ವರ್ಣಧಾರ, ಅಸೀಲ್ ಫೈಟರ್ ಮತ್ತಿತರ ನಾಟಿ ಕೋಳಿಗಳ ಸಾಕಾಣಿಕೆ ಈ ಮೊದಲು ಸರ್ವೇಸಾಮಾನ್ಯವಾಗಿತ್ತು.
ಇತ್ತೀಚಿನ ದಿನಗಳಲ್ಲಿ ಚೀನಾ, ಜಪಾನ್, ಏಷಿಯಾ, ಮಲೇಷ್ಯಾ ಸೇರಿದಂತೆ ಹಲ ವು ದೇಶಗಳ ಮೂಲದ ಅಲಂಕಾರಿಕ ಕೋಳಿ ತಳಿಗಳ ಸಾಕಾಣಿಕೆ ಹೆಚ್ಚಾಗಿ ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ಅವುಗಳ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಅಲಂಕಾರಿಕ ಕೋಳಿಗಳು ಆಕರ್ಷಣೆ ಮಾತ್ರವಲ್ಲ; ಹೆಚ್ಚು ಮೊಟ್ಟೆಗಳನ್ನೂ ಇಡುತ್ತವೆ. ಸೀರಾಮ ವಾರ್ಷಿಕ 180ರಿಂದ 200 ಮೊಟ್ಟೆಗಳನ್ನು ಇಡುತ್ತದೆ. ಅದೇ ರೀತಿ, ನಿಕೋಬಾರಿ 200-250 ಮೊಟ್ಟೆಗಳನ್ನು ನೀಡುತ್ತದೆ. ಒಂದೊಂದು ಕೋಳಿ ಮರಿಗಳೂ ಸಾವಿರಾರು ರೂಪಾಯಿ ಬೆಲೆಬಾಳುತ್ತವೆ. ಬೇಡಿಕೆ ಕೂಡ ಇರುವುದರಿಂದ ಲಾಭದಾಯಕ ಉದ್ಯಮವಾಗಿ ಬೆಳೆಯುತ್ತಿದೆ ಎಂದು ಬೆಂಗಳೂರು ಕೃಷಿ ವಿವಿ ಪಶುಸಂಗೋಪನೆ ವಿಭಾಗದ ಡಾ|ನಟರಾಜ್ ತಿಳಿಸುತ್ತಾರೆ. ಕೆರೆ, ಹೊಂಡಗಳಲ್ಲಿ ವಾಣಿಜ್ಯ ಉದ್ದೇಶಕ್ಕೆ ಮೀನುಗಳ ಸಾಕಾಣಿಕೆ ಜತೆಗೆ ಅಲಂಕಾರಿಕ ಮೀನುಗಳನ್ನು ಸಾಕುವ ವರ್ಗವೂ ಇದೆ. ಅದೇ ರೀತಿ, ಇತ್ತೀಚಿನ ದಿನಗಳಲ್ಲಿ “ಟ್ರೆಂಡ್’ ಆಗಿರುವ ಶ್ವಾನಗಳ ತಳಿ ಅಭಿವೃದ್ಧಿ ಕಾಣಬಹುದು. ಅದೇ ರೀತಿ, ಕೆಲವು ಅಪರೂಪದ ಜಾನುವಾರುಗಳನ್ನೂ ಒಂದು ವರ್ಗ ವಿವಿಧ ಉದ್ದೇಶಗಳಿಗೆ ಸಾಕುತ್ತದೆ. ಅದರ ಮುಂದುವರಿದ ಭಾಗವಾಗಿ ಈಗ ಅಲಂಕಾರಿಕ ಅಥವಾ ಫ್ಯಾನ್ಸಿ ಕೋಳಿಗಳ ಸಾಕಣೆದಾರರ ಸಂಖ್ಯೆ ನಿಧಾನವಾಗಿ ಹೆಚ್ಚಾಗುತ್ತಿದೆ. ಹಾಗಾಗಿ, ಈ ಬಾರಿಯ ಮೇಳದಲ್ಲಿ 10-15 ಪ್ರಕಾರದ ವಿವಿಧ ಕೋಳಿಗಳನ್ನು ಪ್ರದರ್ಶಿಸಲಾ ಗುತ್ತಿದೆ ಎಂದು ಡಾ.ನಟರಾಜ್ ಮಾಹಿತಿ ನೀಡುತ್ತಾರೆ.
“ಅಲಂಕಾರಿಕ ಕೋಳಿಗಳಿಗೆ ಹೊರರಾಜ್ಯಗಳಲ್ಲಿ ಹೆಚ್ಚು ಬೇಡಿಕೆ ಇದೆ. ಸಾಮಾನ್ಯವಾಗಿ ಮುಂಬೈ, ಕೋಲ್ಕ ತಾ, ಹರಿಯಾಣ, ಪಂಜಾಬ್‌ನಿಂದ ಈ ಕೋಳಿಗಳನ್ನು ಪೂರೈಸುವಂತೆ ಕರೆಗಳು ಬರುತ್ತಿವೆ. ನೋಡಲು ಸುಂದರವಾಗಿದ್ದು, ಪೂರೈಕೆದಾರರು ಅಥವಾ ತಳಿ ಅಭಿವೃದ್ಧಿ ಮಾಡುವವರ ಸಂಖ್ಯೆ ವಿರಳ ಮತ್ತು ವಿದೇಶಿ ಮೂಲದವು ಆಗಿರುವುದರಿಂದ ದುಬಾರಿ ಆಗಿವೆ. ಆದರೆ, ಸಾಕಣೆ ಹೆಚ್ಚಾದರೆ ಬೆಲೆ ಕಡಿಮೆ ಆಗುತ್ತದೆ. ಉದಾಹರಣೆಗೆ ಸ್ವತಃ ನಾನು ಖಡಕ್‌ನಾತ್ ಕೋಳಿಯನ್ನು 2011-12ರಲ್ಲಿ ಇದೇ ಕೃಷಿ ಮೇಳದಲ್ಲಿ 500 ರೂ.ಗೆ ಒಂದು ಮರಿ ಮಾರಾಟ ಮಾಡಿದ್ದೆ. 2019ರಲ್ಲಿ ಅದರ ಬೆಲೆ 50-100 ರೂ.ಗೆ ಮಾರಾಟ ಆಯಿತು’ ಎಂದು ಈ ಬಾರಿ ಕೃಷಿ ಮೇಳದಲ್ಲಿ ಅಲಂಕಾರಿಕ ಕೋಳಿಗಳನ್ನು ಪ್ರದರ್ಶಿಸಲಿರುವ ಎಕೆಎನ್ ಫಾರ್ಮ್ ಪ್ರೈ.ಲಿ.,ನ ಅನಂತಕುಮಾರ್ ನಾಯ್ಡು ತಿಳಿಸುತ್ತಾರೆ.
ಪ್ರದರ್ಶನಗೊಳ್ಳಲಿರುವ ಕೆಲವು ಪ್ರಮುಖ ಕೋಳಿಗಳು ಮತ್ತು ಅವುಗಳ ವೈಶಿಷ್ಟ್ಯತೆ :
ಸೀರಾಮ: ವಿಶ್ವದ ಅತಿ ಚಿಕ್ಕ ಕೋಳಿಯಾಗಿದ್ದು, ಪ್ರಾಯದಲ್ಲೂ ಇದರ ತೂಕ ಗರಿಷ್ಠ ಅರ್ಧ ಕೆ.ಜಿ. ಮಾತ್ರ. ವಾರ್ಷಿಕ 180-200 ಮೊಟ್ಟೆ.
- ಒಗನದೋರಿ: ಇದರ ತೂಕ 2-2.5 ಕೆ.ಜಿ., ಉದ್ದನೆಯ ಬಾಲವೇ ಇದರ ವೈಶಿಷ್ಟ್ಯ. ಸುಮಾರು 12 ಮೀಟರ್ ಬಾಲ ಹೊಂದಿರುತ್ತದೆ. ವಾಷಿರ್ಕ 90 ಮೊಟ್ಟೆ. 50- 60 ಸಾವಿರ ರೂ. ಬೆಲೆ ಇದೆ.
- ಫ್ರಿಜಲ್: ಬಿಳಿಯಾದ ಸುರುಳಿಯಾಗಿರುವ ಗರಿಗಳು, 2- 4 ಕೆ.ಜಿ. ತೂಕ ಹೊಂದಿರುತ್ತದೆ. ವಾರ್ಷಿಕ 120-150 ಮೊಟ್ಟೆ ನೀಡುತ್ತದೆ.
- ಪೋಲಿಷ್ ಕ್ಯಾಪ್: ಹೆಸರೇ ಸೂಚಿಸುವಂತೆ ಇದರ ತಲೆಭಾಗಕ್ಕೆ ಬಿಳಿ ಟೊಪ್ಪಿಗೆ ಇರುತ್ತದೆ. ಕೋಳಿಯ ಬಣ್ಣ ಕಪ್ಪು. ವಾರ್ಷಿಕ 150 ಮೊಟ್ಟೆ. 3-4 ಸಾವಿರ ರೂ. ಬೆಲೆ.
- ಡಾಂಗ್ ತಾವ್: ತುಂಬಾ ದುಬಾರಿ ಯಾದ ಈ ಕೋಳಿಯು ವಾರ್ಷಿಕ 40-60 ಮೊಟ್ಟೆಗಳನ್ನು ನೀಡುತ್ತದೆ. ಇದರ ಕಾಲುಗಳಿಗೆ ವಿದೇಶಗಳಲ್ಲಿ ಹೆಚ್ಚಿನ ಬೇಡಿಕೆ. ಆನೆ ಕಾಲಿನ ರೀತಿ ಇವುಗಳ ಕಾಲು ದಪ್ಪ ಇರುತ್ತವೆ. ಇದರ ಬೆಲೆ 70-80 ಸಾವಿರ ರೂ.
– ವಿಜಯಕುಮಾರ ಚಂದರಗಿ