Advertisement
ಸ್ನಾತಕೋತ್ತರ ಕ್ಲಾಸಿನಲ್ಲಿ ಪ್ರಾಡಕ್ಟ್ ಡಿಸೈನ್ ಕ್ಷೇತ್ರದ ಪಿತಾಮಹ ರೇಮಂಡ್ ಲೋವಿಯ ಬಗ್ಗೆ ಪ್ರಾಧ್ಯಾಪಕರು ಪಾಠ ಮಾಡುತ್ತಿದ್ದಾಗ ಕಣ್ಣ ಮುಂದೆ ಬಂದಿದ್ದು ಮೇರು ನಟ ಕೆರೆಮನೆ ಶಂಭು ಹೆಗಡೆ ! ನೆನಪಾದದ್ದು ದಪ್ಪ ಪಿವಿಸಿ ಪೈಪ್‌ನಿಂದ ಅವರು ಡಿಸೈನ್ ಮಾಡಿದ ಕುರ್ಚಿಯನ್ನು ತೋರಿಸುತ್ತ, “ನೋಡೋ ನಾನೇ ಡಿಸೈನ್ ಮಾಡಿದ್ದು’ ಎಂದಿದ್ದು.
Related Articles
Advertisement
ಮೇಲೆ ಹೇಳಿದ್ದು ಈ ಮೇರು ಕಲಾವಿದನ ಒಂದು ಗುಣಧರ್ಮವಷ್ಟೆ . ಇವರು ಯಕ್ಷಗಾನವನ್ನು ಕಲಾವಿದನ, ಸಂಘಟಕನ, ಯಜಮಾನನ ಕಣ್ಣುಗಳಿಂದ ನೋಡಿದವರು. ಯಕ್ಷಗಾನದ ಭವಿಷ್ಯ, ಅದಕ್ಕೆ ಸಿಗಬೇಕಾದ ಗೌರವಗಳ ಬಗ್ಗೆ ಆಳವಾಗಿ ಚಿಂತಿಸಿದವರು. ಅವಕ್ಕೆ ಬೇಕಾಗುವ ಪ್ರಯೋಗವನ್ನು ಸ್ವತಃ ಕೈಗೊಂಡವರು. ಹಾಗಾಗಿ ಅವರನ್ನು ಒಂದು ಮ್ಯಾನೇಜರ್‌ಗೆ ಹೋಲಿಸುವಂತಿಲ್ಲ. ಮುಂದಾಲೋಚನೆ, ಮುಂದಾಳತ್ವವನ್ನು ಹೊಂದಿದ ನಾಯಕನಿಗೆ ಹೋಲಿಸಬೇಕಾಗುತ್ತದೆ.
ನಾಟ್ಯಶಾಸ್ತ್ರ, ಕೊರಿಯೋಗ್ರಫಿ, ಭಾರತೀಯ ಒಟ್ಟೂ ಕಲೆಗಳ ಅರಿವು ಅಧ್ಯಯನದಿಂದಾಗಿ ಹೆಗಡೆಯವರ ಕಲಾಚಿಂತನೆ ಯಕ್ಷಗಾನಕ್ಕೆ ಬಹಳ ಮುಖ್ಯವಾದ ಕೊಡುಗೆ. ನಲವತ್ತು-ಐವತ್ತು ವರುಷಗಳಿಂದ ಈ ಕಲೆಯಲ್ಲಿ ಕೆಲವು ವಿಷಯಗಳ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಅದರ ಆಹಾರ್ಯದ ಮೇಲೆ, ಇದು ಹೇಗೆ ಶಾಸ್ತ್ರೀಯ ಕಲೆ, ಮಾಧ್ಯಮ ಮತ್ತು ಪರಿಣಾಮದ ಕಲ್ಪನೆ, ನೃತ್ಯದ ಆವರ್ತನ ಕ್ರಮ ಮತ್ತು ಭಾವಾಭಿನಯ, ಕರುಣಾರಸದಲ್ಲಿ ನೃತ್ಯದ ಬಳಕೆ, ಕಾರಂತರು ಯಕ್ಷಗಾನ ನಿರ್ವಹಿಸಿದ ರೀತಿ ಇತ್ಯಾದಿ. ಭಾರತೀಯ ಒಟ್ಟೂ ಕಲೆಯ ಕಲ್ಪನೆ ಮತ್ತು ಯಕ್ಷಗಾನದ ವಿಶಿಷ್ಟತೆಯ ಅರಿವಿನಿಂದಾಗಿ ಈ ಕ್ಲಾಸಿಕ್ ಪ್ರಾಬ್ಲಿಮ್‌ಗಳಿಗೆ ಶಂಭು ಹೆಗಡೆಯವರಲ್ಲಿ ನಿಖರವಾದ ಉತ್ತರಗಳಿದ್ದವು. ಹಾಗಾಗಿ ಹೆಗಡೆಯವರ ಇಂತಹ ವಿಚಾರಗಳು ಸಮ್ಮೇಳನದ ಪ್ರಬಂಧಕ್ಕಷ್ಟೇ ಸೀಮಿತವಾಗದೇ ಅವರ ಪ್ರಯೋಗದಲ್ಲಿ ಕಾರ್ಯಗತಗೊಂಡವು. ಕಾರಂತರ ಪ್ರಯೋಗರೀತಿಗೆ ತಮ್ಮ ಸೈದ್ಧಾಂತಿಕ ಭಿನ್ನ ನಿಲುವನ್ನು ಸ್ಪಷ್ಟ ಪಡಿಸಿದವರು. ಹೆಗಡೆಯವರ ಆವರ್ತನ ಕ್ರಮದ ಬಗ್ಗೆ ಬಹಳ ಚರ್ಚೆ ನಡೆದಿದೆ. ಅದನ್ನು ಮುಂದಿನ ವಾರಗಳಲ್ಲಿ ಶಾಸ್ತ್ರೀಯತೆ ಮತ್ತು ಅದರ ಗ್ರಹಿಕೆಯ ಅಡಿಯಲ್ಲಿ ಚರ್ಚಿಸೋಣ. ಆದರೆ ಒಂದನ್ನು ಪ್ರಸ್ತಾಪಿಸಲೇಬೇಕು. ನೃತ್ಯವೆನ್ನುವುದು ಈ ಕಲೆಯ ಅಂಗ. ಹಾಗಾಗಿ ಎಲ್ಲ ರಸಗಳನ್ನೂ ಈ ಮಾಧ್ಯಮದಲ್ಲಿ ತೋರಿಸಬೇಕು ಎನ್ನುವ ನಿಲುವು ಅವರ¨ªಾಗಿದ್ದು ಹಾಗೇ ಪ್ರಯೋಗಿಸಿದವರೂ ಕೂಡ.
ಅಸಾಧಾರಣ ಕಲಾವಿದನ ಸರಳ ಮುಖಒಂದು ಎಕಡೆಮಿಕ್ ದೃಷ್ಟಿಯಿಂದ ಹೆಗಡೆಯವರನ್ನು ನಾವು ಗಮನಿಸಿದಾಗ ನಮಗೆ ಹೆಗಡೆಯವರು ಹೀಗೆ ಕಂಡರೆ, ಸಾಮಾನ್ಯನಿಗೆ ಕಾಣುವ ಇವರ ಇನ್ನೊಂದು ಮುಖವಿದೆ. ವಯಸ್ಸಾದಂತೇ ಅವರು ಜನರಿಂದ ದೂರ ಸರಿಯಲಿಲ್ಲ. ಹಾಗೆ ನೋಡಲು ಹೋದರೆ ಅವರು ಜನರಿಂದ ಯಾವತ್ತೂ ದೂರವಿದ್ದವರೇ ಅಲ್ಲ. ಕಾರಣ ಅವರ ಆಸಕ್ತಿ ಸಮಾಜದ ಎಲ್ಲ ಸಾಧಾರಣ-ಅಸಾಧಾರಣ ವಿಷಯಗಳ ಮೇಲೆ ಇತ್ತು. ಅವರು ನಮಗೆ ಕೆಲವು ಬಾರಿ ಬ್ಯಾಂಕಿನಲ್ಲಿ ಸಿಕ್ಕರೆ, ಇನ್ನು ಕೆಲವು ಬಾರಿ ಕಾರ್ ಗರಾಜಿನಲ್ಲಿ, ದೇವಸ್ಥಾನದಲ್ಲಿ, ಅಂಗಡಿ ಮುಂಗಟ್ಟಲ್ಲಿ, ಚಹಾದ ಹೊಟೇಲಿನಲ್ಲಿ ಸಿಗುತ್ತಿದ್ದರು. ಅಲ್ಲಿ ಅವರ ಸಾಧಕ- ಭಾದಕಗಳ ಬಗ್ಗೆ ಅವರ ಎದುರಿರುವವರ ಮಟ್ಟದಲ್ಲೇ ಮಾತನಾಡುತ್ತಿದ್ದುದರಿಂದ ಯಾರಿಗೂ ಯಾವುದೇ ಇರಿಸು ಮುರಿಸು ಆಗುತ್ತಿರಲಿಲ್ಲ. ರೋಡಿನಲ್ಲಿ ಗುರುತಿದ್ದವರು ಯಾರು ಸಿಕ್ಕಿದರೂ ಕಾರನ್ನು ನಿಲ್ಲಿಸಿ ಅವರನ್ನು ಕರೆದು ಕೊಂಡು ಹೋಗುತ್ತಿದ್ದರು. ಅವರಿಗೆ ಅಭಿಮಾನಿಗಳು ಬಹಳ. ಅವರೆಲ್ಲ ಸುಸಂಸ್ಕೃತರು, ಕಲೆಯ ಬಗ್ಗೆ ಕಾಳಜಿ ಇದ್ದವರು. ತಮ್ಮ ಅಭಿಪ್ರಾಯವನ್ನು ತಿಳಿಸಲು ಅವಕಾಶವನ್ನು ಇಟ್ಟುಕೊಂಡವರು. ಬಹಳಷ್ಟು ಅಭಿಮಾನಿಗಳು ಅವರ ಹರಿಶ್ಚಂದ್ರ, ಕರ್ಣ, ಕೌರವ ಪಾತ್ರ ನೋಡಿ ಅತ್ತಿದ್ದಲ್ಲದೇ ಆಟ ಮುಗಿಸಿ ನಂತರ ಚೌಕಿಮನೆಯಲ್ಲೂ ಬಂದು ಅತ್ತು ಹೋಗುತ್ತಿದ್ದರು. (ಚೌಕಿ ಮನೆಯ ಮಾತು ಬಂತು. ಒಂದು ಚೌಕಿಯ ಸ್ಥಿತಿ ಅಲ್ಲಿನ ಒಟ್ಟೂ ಆಸಕ್ತಿ, ಸಂಸ್ಕಾರ, ಅವರು ಇಂದು ಉಣಬಡಿಸುವ ಕಲೆಯ ಮಟ್ಟವನ್ನು ಹೇಳಬಲ್ಲದು. ಕೆರೆಮನೆ ಮೇಳದ ಚೌಕಿಮನೆಗೆ ಒಂದು ದೇವಸ್ಥಾನದ ಗರ್ಭಗುಡಿಯ ಪಾವಿತ್ರ್ಯ! ಇಂದಿಗೂ ಅವರ ಮಗ ಇದನ್ನು ನಡೆಸಿಕೊಂಡು ಹೋಗುತ್ತಿ¨ªಾರೆ. ಅಲ್ಲಿಯೂ ಇಡಗುಂಜಿಯ ಗಣಪತಿ ನೆಲೆಸಿ¨ªಾನೆ ಎನ್ನುವ ನಂಬಿಕೆ ಮೇಳದ ಅಭಿಮಾನಿಗಳಿಗಿದೆ. ಆಟ ನೋಡಲು ಬಂದ ಪ್ರೇಕ್ಷಕರು ಚೌಕಿಗೂ ಬಂದು ಕಲಾವಿದರನ್ನು ಭೇಟಿಮಾಡಿ ಅಲ್ಲಿರುವ ಗಣಪತಿಗೂ ನಮಸ್ಕರಿಸಿ ಪ್ರಸಾದ ಸ್ವೀಕರಿಸಿ ಹೋಗುವುದು ಇಂದಿಗೂ ಮುಂದುವರಿದಿದೆ. ಹಾಗಾಗಿ ಅದನ್ನು ಕೇವಲ ಆಟವೆಂದು ಹೇಳುವುದು ಕಷ್ಟ ಅಥವಾ ನಿಜವಾದ ಆಟವೆಂದರೆ ಇವೆಲ್ಲವೂ ಹೌದು ಎಂದು ಹೇಳಬಹುದು) ನಮ್ಮೆಲ್ಲರ ಯಕ್ಷಗಾನ ಆಸಕ್ತಿಯೂ ಅವರ ಹರಿಶ್ಚಂದ್ರನನ್ನು ನೋಡಿ ಅತ್ತ ನಂತರವೇ ಪ್ರಾರಂಭವಾಗಿದ್ದು! ಅವರಿಗೆ ಜನರ ಅಪಾರ ಪ್ರೀತಿ-ಅಭಿಮಾನ ಇದ್ದಿದ್ದರಿಂದ ಅವರ ಜೀವಿತಾವಧಿಯಲ್ಲಿ ಎಷ್ಟು ಜನರ ನಡುವಿನ ಜಗಳ ಪರಿಹರಿಸಿದ್ದರೋ, ಅವರ ರೆಕಮಂಡೇಶನ್‌ನಿಂದಾಗಿ ಇನ್ನೆಷ್ಟು ಜನರಿಗೆ ಕೆಲಸ ದೊರಕಿ ಇಂದಿಗೂ ಮನೆಯ ದೀಪ ಬೆಳಗುತ್ತಿದೆಯೊ! ನಾವು ಬಹಳಷ್ಟು ಬಾರಿ ಜನರ ಬಗ್ಗೆ ಓದುತ್ತೇವೆ, ಕೇಳುತ್ತೇವೆ. ಈ ನಿರ್ದಿಷ್ಟ ವ್ಯಕ್ತಿ ತೀರಿಕೊಂಡದ್ದು ಈ ಕ್ಷೇತ್ರಕ್ಕೆ ತುಂಬಲಾಗದ ನಷ್ಟ , ಇವರು ಭೌತಿಕವಾಗಿ ನಮ್ಮೊಂದಿಗಿರದಿದ್ದರೂ, ಮಾನಸಿಕವಾಗಿ ನಮ್ಮೊಂದಿಗೇ ಇದ್ದಾರೆ . ಶಂಭು ಹೆಗಡೆಯವರ ವಿಷಯದಲ್ಲಿ ನನಗೆ ನಿಜವಾಗಲೂ ಇದು ಅನಿಸುತ್ತದೆ- ಅವರು ನಮ್ಮೊಂದಿಗೆ ಇದ್ದಾರೆ; ಗುಣವಂತೆ ಪಾಸಾಗುವಾಗ ಅವರೂ ಕಾರಿನಲ್ಲಿ ಪಾಸಾಗಬಹುದು, ಮುಂದೊಂದು ದಿನ ಅಂಗಡಿ ಅಥವಾ ಇಡಗುಂಜಿ ದೇವಸ್ಥಾನದಲ್ಲಿ ಸಿಕ್ಕಿ ಹಿಂದಿಂದ ಬಂದು, “ಇಲ್ಲೆಲ್ಲೋ ನೀನು’ ಎಂದು ಕೇಳಬಹುದು ಅಥವಾ ನಾಳೆ ನಡೆಯುವ ಮೇಳದ ಆಟ ಮುಗಿಯುತ್ತಿದ್ದಂತೆ ಮೈಕಿನ ಮುಂದೆ ಬಂದು ಅವರ ಮಾಸ್ಟರ್ ಸ್ಟ್ರೋಕ್ ಆದ, “ಸಹೃದಯ ಕಲಾ ಬಂಧುಗಳೇ’ ಎನ್ನಬಹುದು- ಎಂದು. (ಮುಂದುವರಿಯುವುದು) ಸಚ್ಚಿದಾನಂದ ಹೆಗಡ