Advertisement

ಖ್ಯಾತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ ನಿಧನ

11:49 PM Aug 11, 2022 | Team Udayavani |

ಬೆಂಗಳೂರು/ಶಿವಮೊಗ್ಗ: ಕನ್ನಡಕ್ಕೆ ಮೊದಲ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ಖ್ಯಾತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ (83) ಗುರುವಾರ ನಿಧನರಾದರು.

Advertisement

ತೀವ್ರ ಹೃದಯಾಘಾತದಿಂದ ಅವರು ರಾತ್ರಿ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಕೊನೆಯುಸಿರೆಳೆದರು.

ಕಾಡುಕುದುರೆ ಚಿತ್ರದ ಹಿನ್ನೆಲೆ ಗಾಯನಕ್ಕೆ ಶಿವಮೊಗ್ಗ ಸುಬ್ಬಣ್ಣ ಅವರಿಗೆ ರಾಷ್ಟ್ರ ಪ್ರಶಸ್ತಿ ದೊರಕಿತ್ತು. ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಶುಕ್ರವಾರ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸುಬ್ಬಣ್ಣ ಅವರ ನಿಜ ನಾಮಧೇಯ “ಜಿ.ಸುಬ್ರಹ್ಮಣ್ಯಂ”. ಶ್ರೀ ಗಣೇಶ್ ರಾವ್ ಹಾಗೂ ರಂಗನಾಯಕಮ್ಮನವರ ಮುದ್ದಿನ ಮಗನಾದ ಸುಬ್ಬಣ್ಣ. ಶಿವಮೊಗ್ಗ ಜಿಲ್ಲೆಯ ನಗರ ಗ್ರಾಮದಲ್ಲಿ 1938ರಲ್ಲಿ ಜನಿಸಿದವರು. ಮನೆಯಲ್ಲಿ ಪ್ರತಿದಿನ ಪೂಜೆ, ಪುರಸ್ಕಾರ, ವೇದ ಮಂತ್ರಗಳ ಝೇಂಕಾರ ಕೇಳಿ ಬೆಳೆದವರು. ಇವರ ತಾತ ಶಾಮಣ್ಣನವರು ಸಂಗೀತದಲ್ಲಿ ಘನ ವಿದ್ವಾಂಸರು.

ಅವರ ಬಳಿಯಲ್ಲಿಯೇ ತಮ್ಮ ಪ್ರಾಥಮಿಕ ಸಂಗೀತಾಭ್ಯಾಸ ಆರಂಭಿಸಿದರು. ಇವರೊಂದಿಗೆ ಹೆಸರಾಂತ ಗಾಯಕಿ ಕರ್ನಾಟಕದ ಕೋಗಿಲೆ ಬಿ.ಕೆ. ಸುಮಿತ್ರಾ ಅವರೂ ಸೇರಿ ಕೆಲವು ವರ್ಷಗಳ ಕಾಲ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡಿದರು. ನಂತರ ತಮ್ಮ ವ್ಯಾಸಂಗದ ಕಡೆ ಗಮನ ಹರಿಸಿದ ಸುಬ್ಬಣ್ಣ ಬಿ.ಎ.,ಬಿ.ಕಾಂ.,ಎಲ್.ಎಲ್.ಬಿ.,ಪದವೀದರರು.ವಕೀಲರಾಗಿ ವ್ರತ್ತಿ ಬದುಕು ಆರಂಭಿಸಿದ ಇವರು ಬಳಿಕ ನೋಟರಿಯಾಗಿ ನೇಮಕಗೊಂಡು ಕೆಲವು ವರ್ಷಗಳ ಕಾಲ ಸಂಗೀತದ ಕಡೆ ಮುಖ ಮಾಡದಿದ್ದರೂ, ರಕ್ತಗತವಾಗಿದ್ದ ಸಂಗೀತ ಆಗಾಗ ಇವರನ್ನು ಎಚ್ಚರಿಸಿ ಶಾಲಾ ಸಮಾರಂಭಗಳಲ್ಲಿ ಹಾಡುವಂತೆ ಪ್ರೇರೇಪಿಸುತ್ತಿತ್ತು. ಇದರಿಂದಾಗಿ ಶಾಲಾ ದಿನಗಳಲ್ಲಿ ಹಲವಾರು ಪ್ರಶಸ್ತಿ ಪಡೆದು, ಹಾಡಿನ ಸುಬ್ಬಣ್ಣ ಎಂದೆನಿಸಿಕೊಂಡರು.ಮುಂದೆ ಕನ್ನಡ ಗಾಯನ ಕ್ಷೇತ್ರದಲ್ಲಿ ತಮ್ಮನ್ನು ಗುರುತಿಸಿಕೊಂಡ ಸುಬ್ಬಣ್ಣ 1963ರಲ್ಲಿ ಆಕಾಶವಾಣಿಯ ಗಾಯಕರಾಗಿಯೂ ಆಯ್ಕೆಯಾದರು. ಸಿನಿಮಾ ರಂಗಕ್ಕೆ ಸುಬ್ಬಣ್ಣ ಹಿನ್ನೆಲೆ ಗಾಯಕರಾಗಿ ಚಿತ್ರರಂಗ ಪ್ರವೇಶಿಸಿದ್ದು ನಾಟಕಕಾರ, ಚಿತ್ರ ನಿರ್ದೇಶಕ ಕವಿ ಚಂದ್ರಶೇಖರ ಕಂಬಾರರ ‘ಕರಿಮಾಯಿ’ ಮೂಲಕ.1979ರಲ್ಲಿ ಅಂದಿನ ರಾಷ್ಟ್ರಪತಿ ನೀಲಂ ಸಂಜೀವ ರೆಡ್ಡಿ ಅವರಿಂದ ರಜತಕಮಲ ಪ್ರಶಸ್ತಿ ಸ್ವೀಕರಿಸಿದ ಸುಬ್ಬಣ್ಣ ಯಶಸ್ಸಿನ ಕುದುರೆಯೇರಿ ನಡೆದರು.

Advertisement

ಆಕಾಶವಾಣಿ ಎಂ.ಎಸ್.ಐ.ಎಲ್. ಪ್ರಾಯೋಜಕತ್ವದಲ್ಲಿ ಪ್ರಸಾರ ಮಾಡಿದ ಜನಪ್ರಿಯ ಕರ‍್ಯಕ್ರಮದಲ್ಲಿ ‘ಕೋಡಗನ ಕೋಳಿ ನುಂಗಿತ್ತಾ..’, ‘ಅಳಬೇಡಾ ತಂಗಿ ಅಳಬೇಡ…’ ‘ಬಿದ್ದೀಯಬ್ಬೇ ಮುದುಕಿ..’ ಮೊದಲಾದ ಶಿಶುನಾಳ ಷರೀಫರ ಗೀತೆಗಳನ್ನು ಹಾಡಿದ ಸುಬ್ಬಣ್ಣ ಮನೆ ಮಾತಾದರು. ಸುಬ್ಬಣ್ಣ ಅವರ ಸಾಧನೆಯನ್ನು ಮನ್ನಿಸಿ ರಾಜ್ಯ ಸರ್ಕಾರ ಪ್ರತಿಷ್ಠಿತ ಸಂತ ಶಿಶುನಾಳ ಶರೀಫ್ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಸಂಗೀತ ಅಕಾಡಮಿಯ ಕರ್ನಾಟಕ ಕಲಾ ತಿಲಕ ಪ್ರಶಸ್ತಿ ನೀಡಿ ಗೌರವಿಸಿದರೆ, ಅಭಿಮಾನಿಗಳು ನೂರಾರು ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಿದ್ದಾರೆ.1974ರಲ್ಲಿ ಪ್ರಥಮ ಬಾರಿಗೆ ಕರ್ನಾಟಕಕ್ಕೆ ಸಂದ “ರಜತಕಮಲ್”ಪುರಸ್ಕಾರವನ್ನು ಪಡೆದ ಹೆಗ್ಗಳಿಕೆ ಇವರದು. ಕಾಡು ಕುದುರೆ ಚಿತ್ರದಿಂದ ಇವರಿಗೆ ಜನಪ್ರಿಯತೆ ದೊರೆಕಿತು. ಸುಗಮ ಸಂಗೀತದಲ್ಲಿ ವಿಶೇಷ ಆಸಕ್ತಿ ಹೊಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next