ಉಡುಪಿ: ರಂಗಭೂಮಿ ಕ್ಷೇತ್ರದ ಖ್ಯಾತ ಗಾಯಕ, ನಟ ಬಿ. ಕೃಷ್ಣ ಕಾರಂತ ಅವರು ಗುರುವಾರ (ಡಿ12) ನಿಧನ ಹೊಂದಿದ್ದಾರೆ.
ಉಡುಪಿ ಎಂಜಿಎಂ ಕಾಲೇಜಿನ ರೀಜನಲ್ ರಿಸರ್ಚ್ ಸೆಂಟರ್ ( RRC) ನ ನಿವೃತ್ತ ಉದ್ಯೋಗಿಯಾಗಿದ್ದ ಕೃಷ್ಣ ಕಾರಂತ
ಅದ್ಭುತ ಹಾಡುಗಾರರಾಗಿದ್ದರು. ಇವರ ಸಂಗೀತ ಕಾರ್ಯಕ್ರಮಗಳು, ಇವರ ಹಾಡಿನ ಕ್ಯಾಸೆಟ್ ಗಳು ಬಹಳ ಜನಪ್ರಿಯವಾಗಿದ್ದವು. ರಂಗಭೂಮಿ ಉಡುಪಿಯ ನಾಟಕಗಳಲ್ಲಿ ಅಭಿನಯಿಸಿದ್ದಲ್ಲದೆ, ಹಿನ್ನೆಲೆ ಹಾಡುಗಾರರಾಗಿ ಬಹಳಷ್ಟು ನಾಟಕಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.
ಕೃಷ್ಣ ಕಾರಂತ ಅವರು ಪ್ರಸಿದ್ಧ ರಂಗಕರ್ಮಿ ದಿವಂಗತ ಬಿ. ವಿ. ಕಾರಂತರ ಸಹೋದರ ಸಾಂಸ್ಕೃತಿಕ ರಂಗಕ್ಕೆ ನೀಡಿರುವ ಕೊಡುಗೆಗಾಗಿ ಇವರನ್ನು ಇತ್ತೀಚಿಗೆ ರಂಗಭೂಮಿ ಉಡುಪಿ ಸಂಸ್ಥೆಯು ಗೌರವಿಸಿ ಸನ್ಮಾನಿಸಿತ್ತು.
ರಂಗಭೂಮಿಯ ಎಲ್ಲಾ ಕಾರ್ಯಕ್ರಮಗಳಿಗೆ ನಿರಂತರ ಪ್ರೋತ್ಸಾಹ ನೀಡುತ್ತಿದ್ದರು.ವಿದೇಶದಲ್ಲಿ ಇರುವ ಬಿ.ಕೆ. ಕಾರಂತರ ಪುತ್ರ ಬಂದ ನಂತರ ಅಂತಿಮ ದರ್ಶನ ಹಾಗೂ ಅಂತಿಮ ವಿಧಿವಿಧಾನವು ಡಿ. 13ರ ಸಂಜೆ ನಡೆಯಲಿದೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.