Advertisement

Kt gatti: ಖ್ಯಾತ ಕಾದಂಬರಿಕಾರ ಕೆ.ಟಿ.ಗಟ್ಟಿ ನಿಧನ

12:32 AM Feb 20, 2024 | Team Udayavani |

ಮಂಗಳೂರು: ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ಖ್ಯಾತ ಕಾದಂಬರಿಕಾರ ಕೆ.ಟಿ.ಗಟ್ಟಿ(86) ನಿಧನರಾಗಿದ್ದಾರೆ.

Advertisement

ಮೂಲತ ಕಾಸರಗೋಡಿನ ಕೂಡ್ಲುವಿನವರಾದ ಕೂಡ್ಲು ತಿಮ್ಮಪ್ಪ ಗಟ್ಟಿ ಪ್ರಾಧ್ಯಾಪಕರಾಗಿ ದುಡಿದವರು. ಪತ್ರಿಕಾ ಕಾದಂಬರಿಗಳ ಮೂಲಕ ಹೆಸರುವಾಸಿಯಾಗಿದ್ದರು.

ಉಡುಪಿಯ ಟಿ.ಎಂ.ಪೈ. ಮಹಾವಿದ್ಯಾಲಯದಲ್ಲಿ ಅಧ್ಯಾಪಕರಾಗಿದ್ದರು. ಭಾರತ ಸರಕಾರದಿಂದ ಪ್ರಾಧ್ಯಾಪಕರಾಗಿ ಇಥಿಯೋಪಿಯಕ್ಕೆ ಪ್ರಯಾಣ ಬೆಳೆಸಿದ್ದರು. ಕಲಿಕೆಯಲ್ಲಿ ನಿರಂತರ ಆಸಕ್ತಿ ಹೊಂದಿದ ಇವರು ಇಂಗ್ಲೆಂಡಿನ ಟ್ರಿನಿಟಿ ಮತ್ತು ಆಕ್ಸಫರ್ಡ್ ಕಾಲೇಜುಗಳಿಂದ ಇಂಗ್ಲಿಷ್ ಕಲಿಕೆಯಲ್ಲಿ ಡಿಪ್ಲೋಮ ಗಳಿಸಿದ್ದರು. ಇಥಿಯೋಪಿಯದಿಂದ ಹಿಂತಿರುಗಿದ ನಂತರ ಅವರು ಉಜಿರೆಯಲ್ಲಿ ವಾಸವಾಗಿ ಕೃಷಿಯಲ್ಲಿ ತೊಡಗಿದ್ದರು.

ಕಾದಂಬರಿಗಳು:
ಶಬ್ದಗಳು (1976), ಸೌಮ್ಯ (1978), ಮನೆ, ರಾಮಯಜ್ಞ, ನಿರಂತರ, ಅಬ್ರಾಹ್ಮಣ, ಅಮುಕ್ತ, ಅವಿಭಕ್ತರು, ಕರ್ಮಣ್ಯೇ ವಾಧಿಕಾರಸ್ತೇ, ಕೂಪ, ಪೂಜಾರಿ, ಬಿಸಿಲುಗುದುರೆ, ಮೃತ್ಯೋರ್ಮಾ ಅಮೃತಂ ಗಮಯ, ಯುಗಾಂತರ, ಶಿಲಾತಪಸ್ವಿ, ಸ್ವರ್ಣಮೃಗ, ಅರಗಿನ ಮನೆ ಮುಂತಾದ ಕಾದಂಬರಿಗಳನ್ನು ಬರೆದು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆಯನ್ನು ನೀಡಿದ್ದರು.

ವಿಶಿಷ್ಟ ಸಂವೇದನೆಯ ಕಾದಂಬರಿಗಾರ ಕೆ.ಟಿ. ಗಟ್ಟಿ
ಮಂಗಳೂರು: ಕಾಸರ ಗೋಡು ಸಮೀಪದ ಕೂಡ್ಲುವಿನಲ್ಲಿ 1938ರ ಜುಲೈ 22ರಂದು ಜನಿಸಿದ ಕೆ.ಟಿ. ಗಟ್ಟಿಯವರು 1957ರಿಂದಲೇ ಸಾಹಿತ್ಯ ಕೃಷಿ ಪ್ರಾರಂಭಿಸಿದ್ದರು. ತಂದೆ ಧೂಮಪ್ಪ ಅವರು ವೃತ್ತಿಯಲ್ಲಿ ಕೃಷಿಕರು, ಜತೆಗೆ ಯಕ್ಷಗಾನ ಪ್ರಿಯರು. ಅವರು ಕೂಡ್ಲು ಯಕ್ಷಗಾನ ನಾಟಕ ಮಂಡಳಿಯೊಡನೆ ಊರೂರು ಸುತ್ತುತ್ತ, ಸಿಕ್ಕಿದ ಪುಸ್ತಕಗಳನ್ನು ಮನೆಗೆ ತರುತ್ತಿದ್ದರು. ಇದು ಗಟ್ಟಿ ಅವರಲ್ಲಿ ಸಾಹಿತ್ಯಾಸಕ್ತಿಗೆ ಕಾರಣವಾಯಿತು. ತಾಯಿ ಪರಮೇಶ್ವರಿ ಅವರು ಮನೆಯಲ್ಲಿ ಹಾಡುತ್ತಿದ್ದ ತುಳು -ಮಲಯಾಳಂ ಪಾಡªನಗಳು ಸಾಹಿತ್ಯ ದಲ್ಲಿ ಮತ್ತಷ್ಟು ಆಸಕ್ತಿ ಬೆಳೆಯುವಂತೆ ಮಾಡಿತು.

Advertisement

ಕೆ.ಟಿ. ಗಟ್ಟಿಯವರು ಕಾಸರಗೋಡಿನ ಹೈಯರ್‌ ಎಲಿಮೆಂಟರಿ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದು, ಪಿ.ಯು. ಹಾಗೂ ಬಿ.ಎ. ಪದವಿಗಳನ್ನು ಕೇರಳ ವಿಶ್ವ ವಿದ್ಯಾನಿಲಯದಿಂದ ಪಡೆದರು. ಮಾಯಿಪ್ಪಾಡಿಯ ಸರಕಾರಿ ಬೇಸಿಕ್‌ ಟ್ರೈನಿಂಗ್‌ ಶಾಲೆಯಿಂದ ಎರಡು ವರ್ಷಗಳ ಶಿಕ್ಷಕರ ತರಬೇತಿ ಪಡೆದಿದ್ದರು. ತಲಶೆÏàರಿಯ ಸರಕಾರಿ ಟ್ರೈನಿಂಗ್‌ ಕಾಲೇಜಿನಿಂದ ಒಂದು ವರ್ಷದ ಬಿ.ಎಡ್‌. ಪದವಿ ಪಡೆದು, ಕಾಸರಗೋಡಿನ ಸರಕಾರಿ ಪ್ರೌಢಶಾಲೆ ಶಿಕ್ಷಕರಾಗಿ ಸೇವೆ ಆರಂಭಿಸಿದರು. ಬಿಡುವಿನ ವೇಳೆಯಲ್ಲಿ ಖಾಸಗಿಯಾಗಿ ಕೇರಳ ವಿ.ವಿ.ಯಿಂದ ಇಂಗ್ಲಿಷ್‌ ಸ್ನಾತಕೋತ್ತರ ಪದವಿ ಪಡೆದರು. 1968ರಲ್ಲಿ ಮಣಿಪಾಲದ ಎಂ.ಐ.ಟಿ. ಸಂಸ್ಥೆ ಸೇರಿ ಆರು ವರ್ಷಗಳ ಕಾಲ ಇಂಗ್ಲಿಷ್‌ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದರು. ಜತೆಗೆ ಒಂದು ವರ್ಷ ಉಡುಪಿಯ ಟಿ.ಎಂ.ಎ. ಪೈ ಶಿಕ್ಷಣ ಮಹಾವಿದ್ಯಾಲಯದಲ್ಲೂ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಭಾರತ ಸರಕಾರದಿಂದ ಪ್ರಾಧ್ಯಾಪಕರಾಗಿ ನಿಯುಕ್ತರಾಗಿ ಇಥಿಯೋಪಿಯಾಕ್ಕೆ ತೆರಳಿ, ಅಲ್ಲಿರುವಾಗಲೇ ಲಂಡನ್ನಿನ ಟ್ರಿನಿಟಿ ಕಾಲೇಜಿನಿಂದ ಇಂಗ್ಲಿಷ್‌ ಕಲಿಕೆಯಲ್ಲಿ ಡಿಪ್ಲೊಮ ಮತ್ತು ಆಕ್ಸ್‌ಫರ್ಡ್‌ನ ಕಾಲೇಜ್‌ ಆಫ್‌ ಪ್ರಿಸೆಪ್ಟರ್ಸ್‌ನಿಂದ ಡಿಪ್ಲೊಮಾ ಪಡೆದರು. ಸ್ವಲ್ಪ ಕಾಲ ಇಥಿಯೋಪಿಯಾದಲ್ಲಿದ್ದು 1982ರಲ್ಲಿ ಸ್ವದೇಶಕ್ಕೆ ಮರಳಿಬಂದ ಗಟ್ಟಿಯವರು ಪೂರ್ಣಾವಧಿ ಲೇಖಕರಾಗಿ ಬದುಕಲು ನಿರ್ಧರಿಸಿ, ಉಜಿರೆಯ ಬಳಿ ಜಮೀನು ಖರೀದಿಸಿ ಕೃಷಿ, ಸಾಹಿತ್ಯಎರಡರಲ್ಲೂ ತೊಡಗಿಸಿಕೊಂಡಿದ್ದರು. ಆರು ವರ್ಷಗಳಿಂದ ಮಂಗಳೂರಿನ ಬಿಜೈ ಕೆಎಂಸಿ ಬಳಿಯ ವಸತಿ ಸಮುಚ್ಚಯದಲ್ಲಿ ವಾಸವಾಗಿದ್ದರು.

ಕೆ.ಟಿ. ಗಟ್ಟಿಯವರ ಮೊದಲ ಕಾದಂಬರಿ “ಶಬ್ದಗಳು’ 1976ರಲ್ಲಿ ಧಾರಾವಾಹಿಯಾಗಿ ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾಗಿದೆ. 1978ರಲ್ಲಿ ಬರೆದ “ಸಾಫಲ್ಯ’ ಕಾದಂಬರಿಯೂ ಸೇರಿ 2004ರ ವರೆಗೆ ಅವರ 14 ಕಾದಂಬರಿಗಳು ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿವೆ. ಇದಲ್ಲದೆ ತುಷಾರ ಮಾಸ ಪತ್ರಿಕೆಯಲ್ಲಿ “ಮನೆ’, “ಕಾಮಯಜ್ಞ’ ಕಾದಂಬರಿಗಳು, ಗೆಳತಿ ಪತ್ರಿಕೆಯಲ್ಲಿ “ಪೂಜಾರಿ’, ಕಾದಂಬರಿ ಪತ್ರಿಕೆಯಲ್ಲಿ “ಅವಿಭಕ್ತರು’, ತರಂಗ ವಾರಪತ್ರಿಕೆಯಲ್ಲಿ “ನಿರಂತರ’, ಮಲ್ಲಿಗೆ ಮಾಸಪತ್ರಿಕೆಯಲ್ಲಿ “ನವಂಬರ್‌ 10′, ಕರ್ಮವೀರ ವಾರಪತ್ರಿಕೆಯಲ್ಲಿ “ಸನ್ನಿವೇಶ’, ಪ್ರಜಾವಾಣಿಯಲ್ಲಿ “ಕಾರ್ಮುಗಿಲು’, ಮಂಗಳ ವಾರಪತ್ರಿಕೆಯಲ್ಲಿ “ರಸಾತಳ’ ಹೀಗೆ ವಿವಿಧ ಪತ್ರಿಕೆಗಳಲ್ಲಿ ಅವರ ಕಾದಂಬರಿಗಳು ಧಾರಾವಾಹಿಗಳಾಗಿ ಪ್ರಕಟವಾಗಿವೆ. ಅಬ್ರಾಹ್ಮಣ, ಅಮುಕ್ತ, ಅವಿಭಕ್ತರು, ಕರ್ಮಣ್ಯೇ ವಾಧಿಕಾರಸ್ತೇ, ಕೂಪ, ಪೂಜಾರಿ, ಬಿಸಿಲುಗುದುರೆ, ಮೃತ್ಯೋರ್ಮಾ ಅಮೃತಂಗಮಯ, ಯುಗಾಂತರ, ಶಿಲಾತಪಸ್ವಿ, ಸ್ವರ್ಣಮೃಗ, ಅರಗಿನ ಮನೆ ಮುಂತಾದವು ಅವರ ಇನ್ನಿತರ ಕಾದಂಬರಿಗಳು.

ಗಟ್ಟಿಯವರು ಪತ್ರಿಕೆಗಳಿಗೆ ಬರೆದ ಕಥೆಗಳು “ಮನುಷ್ಯನ ವಾಸನೆ ಮತ್ತು ಇತರ ಕಥೆಗಳು’, “ನೀಲಿ ಗುಲಾಬಿ ಮತ್ತು ಇತರ ಕಥೆಗಳು’, “ಭೂಗತ ಮತ್ತು ಇತರ ಕಥೆಗಳು’, “ವಿಶ್ವ ಸುಂದರಿ ಮತ್ತು ಇತರ ಕಥೆಗಳು’ ಹಾಗೂ “ಪ್ರೀತಿ ಎಂಬ ಮಾಯೆ ಮತ್ತು ಇತರ ಕಥೆಗಳು’ ಎಂಬ ಸಂಕಲನಗಳಲ್ಲಿ ಸೇರಿವೆ. ನಲುವತ್ತಕ್ಕೂ ಹೆಚ್ಚು ಕಾದಂಬರಿ, ಕಥಾ ಸಂಕಲನ, ಕವಿತೆ, ವೈಚಾರಿಕ ಬರಹಗಳು, ಭಾಷೆಯ ಬಗೆಗಿನ ಪುಸ್ತಕಗಳನ್ನು ಬರೆದಿದ್ದಾರೆ.

ಅಂತಿಮ ದರ್ಶನ ಪಡೆದ ಗಣ್ಯರು
ವಿಶ್ರಾಂತ ಕುಲಪತಿ, ವಿದ್ವಾಂಸರಾದ ಪ್ರೊ| ಬಿ.ಎ. ವಿವೇಕ ರೈ, ಡಾ| ಚಿನ್ನಪ್ಪ ಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್‌, ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಡಾ| ಎಂ.ಪಿ. ಶ್ರೀನಾಥ್‌, ಕಸಪಾ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಪ್ರೊ| ಯದುಪತಿಗೌಡ, ವಿಚಾರವಾದಿ ಪ್ರೊ| ನರೇಂದ್ರ ನಾಯಕ್‌, ಹಿರಿಯ ಸಾಹಿತಿ ಬಿ.ಎಂ. ರೋಹಿಣಿ, ಪ್ರಮುಖರಾದ ಪ್ರೊ| ಶಿವರಾಮ ಶೆಟ್ಟಿ, ಡಾ| ಮೀನಾಕ್ಷಿ ರಾಮ ಚಂದ್ರ, ಕಲ್ಲೂರು ನಾಗೇಶ್‌ ಮೊದಲಾದವರು ಅಂತಿಮ ದರ್ಶನ ಪಡೆದರು.

ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್‌, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಸದ ನಳಿನ್‌ ಕುಮಾರ್‌ ಕಟೀಲು, ಶಾಸಕ ವೇದವ್ಯಾಸ ಕಾಮತ್‌, ವಿಧಾನ ಪರಿಷತ್‌ ಸದಸ್ಯ ಪ್ರತಾಪ ಸಿಂಹ ನಾಯಕ್‌, ಸಾಹಿತ್ಯ ಪರಿಷತ್‌ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಜಿಲ್ಲಾ ಸಾಹಿತ್ಯ ಪರಿಷತ್‌ನ ನಿಕಟಪೂರ್ವ ಅಧ್ಯಕ್ಷ ಎಸ್‌. ಪ್ರದೀಪ ಕುಮಾರ ಕಲ್ಕೂರ ಸಹಿತ ಹಲವರು ಸಂತಾಪ ಸೂಚಿಸಿದ್ದಾರೆ.

ಪ್ರಶಸ್ತಿ-ಗೌರವ
ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಮಾಹೆ ಮಣಿಪಾಲ, ಉಡುಪಿ ಎಂಜಿಎಂ ಕಾಲೇಜು ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಸಮಿತಿ ವತಿಯಿಂದ 2021ನೇ ಸಾಲಿನ “ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ’, ಕನ್ನಡ ಸಾಹಿತ್ಯ ಪರಿಷತ್‌ ಕೇರಳ ಗಡಿನಾಡ ಘಟಕದಿಂದ ವಿಶೇಷ ಗೌರವ ಸಹಿತ ಹಲವು ಪ್ರಶಸ್ತಿ-ಗೌರವಗಳಿಗೆ ಭಾಜನರಾಗಿದ್ದರು.

ಅಪ್ರತಿಮ ಭಾಷಾತಜ್ಞ
ಕೆ.ಟಿ. ಗಟ್ಟಿಯವರು ಹಲವಾರು ವರ್ಷಗಳ ಕಾಲ ಪ್ರಾಧ್ಯಾಪಕರಾಗಿ ದುಡಿದ ಅನುಭವದಿಂದ ಭಾಷಾಶಾಸ್ತ್ರಕ್ಕೆ ಸಂಬಂಧಿಸಿದಂತೆ ಭಾಷಾಧ್ಯಯನ, ವ್ಯಾಕರಣ, ಇಂಗ್ಲಿಷ್‌ ಭಾಷೆಯ ಪ್ರಯೋಗ ಉಚ್ಚಾರಶಾಸ್ತ್ರ ಮುಂತಾದ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗಷ್ಟೇ ಅಲ್ಲದೆ ಪೋಷಕರಿಗೂ ಉಪಯುಕ್ತವಾಗುವಂತಹ ಅನೇಕ ಕೃತಿಗಳನ್ನು ಇಂಗ್ಲಿಷ್‌ ಹಾಗೂ ಕನ್ನಡ ಭಾಷೆಗಳಲ್ಲಿ ರಚಿಸಿದ್ದಾರೆ.

ಕನ್ನಡ ಕೃತಿಗಳೆಂದರೆ ಉತ್ಕಷ್ಟತೆಗಾಗಿ ತಾಯಿ-ತಂದೆ, ಗುರುಗಳಾಗಿ ತಾಯಿ-ತಂದೆ, ಇಂಗ್ಲಿಷ್‌ ಮತ್ತು ಕನ್ನಡ ಭಾಷಾಧ್ಯಯನ, ನಿಮ್ಮ ಮಗುವಿಗೆ ಇಂಗ್ಲಿಷ್‌ ಹಾಗೂ ಕನ್ನಡ ಕಲಿಸುವ ವಿಧಾನ, ಕನ್ನಡ ಆಲಿಸಿ ಕಲಿಸಿ, ಇಂಗ್ಲಿಷ್‌ ಆಲಿಸಿ ಕಲಿಸಿ, ಇಂಗ್ಲಿಷ್‌ನಲ್ಲಿ ಇಂಗ್ಲಿಷ್‌ ಕನ್ನಡ ಬೈಲಿಂಗಲ್‌, ಪೇರೆಂಟಿಂಗ್‌ ಫಾರ್‌ ಎಕ್ಸೆಲೆನ್ಸಿ, ಬೈಲಿಂಗಲ್‌ ಮಾಸ್ಟರ್‌, ಹೌಟು ಟೀಚ್‌ ಯುವರ್‌ ಚೈಲ್ಡ್‌ ಇಂಗ್ಲಿಷ್‌ ಆ್ಯಂಡ್‌ ಕನ್ನಡ, ಲರ್ನ್ ಕನ್ನಡ ಥ್ರೂ ಇಂಗ್ಲಿಷ್‌, ಲರ್ನ್ ಇಂಗ್ಲಿಷ್‌ ಥ್ರೂ ಕನ್ನಡ‌ ಕೃತಿಗಳನ್ನು ರಚಿಸಿದ್ದು, ಇವು ಶಿಕ್ಷಣ ಕ್ಷೇತ್ರಕ್ಕೆ ಬಹಳಷ್ಟು ಉಪಕಾರಿ ಎನಿಸಿವೆ. ಅಂಡಮಾನ್‌ ಪ್ರವಾಸದ “ನಿಸರ್ಗ ಕನ್ಯೆ ಅಂಡಮಾನ್‌’, ಪ್ರಬಂಧ ಸಂಕಲನ “ಗುಳಿಗೆಗಳು’ ಮತ್ತು ಗಟ್ಟಿಯವರ ಆತ್ಮಕಥೆ “ತೀರ’ ಪ್ರಕಟವಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next