ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯಲ್ಲಿಯ ಸಾವಜಿ ಕುಟುಂಬವೊಂದು ಸಸ್ಯಹಾರಿ ಖಾದ್ಯಗಳಿಗೇ ಹೆಸರುವಾಸಿ! ವಿಶೇಷವಾಗಿ ಇವರ “ಖಾರ’ ಮತ್ತಿಗೆ ಫಿದಾ ಆಗದವರಿಲ್ಲ. ಅನೇಕರು ಇದರ ರುಚಿ ಸವಿಯುವ ಮುನ್ನ ಖಾರದ ಆಕಾರ, ಬಣ್ಣ ನೋಡಿಯೇ ಇದು “ಮರಾಠರ ಖಾರ’ ಎಂದು ಗುರುತಿಸಿ ಬಿಡುತ್ತಾರೆ!
ಇವರು ಮೂಲತಃ ಗದಗಿನವರು. ಮೂರು ದಶಕದ ಕೆಳಗೆ ಅಲ್ಲಿ ಕೈಮಗ್ಗಕ್ಕೆ ಕರಾಳ ದಿನ ಆರಂಭ ಆದವು. ಆಗ ರಘುನಾಥ ತಮ್ಮ ಕುಟುಂಬ ಸಮೇತ ಕೂಡ್ಲಿಗಿಗೆ ವಲಸೆ ಬಂದರು. ಇಡ್ಲಿ, ಚಟ್ನಿ ಮಾಡಿ ಓಣಿ ಓಣಿ ತಿರುಗಿ ಮಾರಿದರು. ಸ್ವಾದಿಷ್ಟ ಇಡ್ಲಿ ಚಟ್ನಿಗೆ ಜನ ಮನೆ ಮುಂದೆ ಕ್ಯೂ ನಿಂತರು! ತಿರುಗಾಟ ನಿಲ್ಲಿಸಿ, ಮನೆ ಮುಂದೆಯೇ ಹೋಟೆಲ್ ತೆಗೆದರು. ಬೆಳಗ್ಗೆ ಇಡ್ಲಿ - ಚಟ್ನಿ, ಸಂಜೆ ಅಲಸಂದಿ ವಡೆ ಮಾಡಿ ಫೇಮಸ್ ಆದರು.
ನಂತರ ಖಾರ ಪರಿಚಯಿಸಿದರು. ಶುಚಿ- ರುಚಿಯ ಕಾರಣಕ್ಕೆ ಇದೂ ಬೇಗನೆ ಹೆಸರಾಯ್ತು. ಈ ನಡುವೆ ಮನೆಯ ಮಾಲಿಕ ರಘುನಾಥ ತೀರಿಕೊಂಡ ನಂತರ ಪತ್ನಿ ರತ್ನಬಾಯಿ ತನ್ನ ಮಕ್ಕಳಾದ ಭಾಗ್ಯಶ್ರೀ ಮತ್ತು ಸಂತೋಷರೊಂದಿಗೆ ಈ ವ್ಯಾಪಾರ ಮುಂದುವರಿಸಿದ್ದಾರೆ. ಬಣ್ಣರಹಿತ ಢಾಣೆ ಸೇವು ಬಾಯಲ್ಲಿಟ್ಟರೆ ಸಾಕು ಕರಗುತ್ತೆ. ಅಷ್ಟು ಮೃದು!. ಇನ್ನು ಖಾರದ ಪುಡಿ, ಬೆಳ್ಳುಳ್ಳಿಯನ್ನು ಹದವಾಗಿ ಬೆರೆಸಿ ಮಾಡಿದ ಬುಗ್ಗಿ ಹೆಚ್ಚು ರುಚಿ ಬರುತ್ತೆ.
ಗಿರಾಕಿಗಳಿಗೆ, ಹೋಲ್‌ಸೇಲ್ ವ್ಯಾಪಾರಿಗಳಿಗೆ ಖಾರ ಖರೀದಿಸಲು ದುಂಬಾಲು ಬೀಳಲ್ಲ. ಖಾರದ ರುಚಿ ನೋಡಿದವರೇ ಇವರಿಗೆ ಪ್ರಚಾರಕರು!. ಮೊದಲು ಅವರು ಸಂತೆ ಮಾರ್ಕೆಟ್ ಜಾಗದಲ್ಲಿದ್ದರು. ಸಂತೆಗೆ ಬರುವವರೆಲ್ಲ ಕಡ್ಡಾಯವಾಗಿ ಖಾರ ಖರೀದಿಸುತ್ತಿದ್ದರು. ಈಗ ಅಲ್ಲಿಲ್ಲ. ಆದರೂ ವ್ಯಾಪಾರ ಚೆನ್ನಾಗಿಯೇ ಆಗುತ್ತಿತ್ತು. ಅವರಿಗೆ ಕಾಯಂ ಗಿರಾಕಿ ಇದ್ದಾರೆ. “ಖಾರ’ದ ವ್ಯಾಪಾರ ಜೀವನಕ್ಕೆ ಆಸರೆ…’ ಎನ್ನುತ್ತಾರೆ ಸಂತೋಷ್.
“ಇಲ್ಲಿಯವರು ದೂರದೂರಿನ ತಮ್ಮ ಸ್ನೇಹಿತರು, ಸಂಬಂಧಿಕರಿಗೆ ಖಾರ ಕಳುಹಿಸುತ್ತಾರೆ. ಇದರಿಂದ ಇವರಿಗೇನೋ ಖುಷಿ. ಅವರ ನಾಲಿಗೆಗೂ ರುಚಿ!. ಅಷ್ಟೇಕೆ ಹಾಸ್ಟೆಲ್ ಮಕ್ಕಳಿಗೆ ಇದೇ ಸ್ನ್ಯಾಕ್ಸ್. ಒಟ್ಟಿನಲ್ಲಿ ಖಾರ ಖರೀದಿ ಕಿಂಚಿತ್ತೂ ಕರಗಿಲ್ಲ. ತಿಂಗಳಲ್ಲಿ 20 ಸಾವಿರ ನಿವ್ವಳ ಆದಾಯ ಸಂಪಾದಿಸಬಹುದು ಎನ್ನುವುದು ಭಾಗ್ಯಶ್ರೀ ಅವರ ಅಭಿಪ್ರಾಯ. ಇತ್ತೀಚೆಗೆ ಇವರು ಸಣ್ಣಪುಟ್ಟ ಊಟದ ಆರ್ಡರನ್ನೂ ಪಡೆಯುತ್ತಾರೆ. ವಿಶೇಷವಾಗಿ ಇವರು ಮಾಡುವ ಕೆಂಪು ಚಟ್ನಿ ಎಲ್ಲರಿಗೂ ಅಚ್ಚುಮೆಚ್ಚು.
-ಸ್ವರೂಪಾನಂದ ಎಂ. ಕೊಟ್ಟೂರು