Advertisement
ದೇಶದ ಮನ ಗೆದ್ದ ಕೆ.ಶಿವನ್ : ಕೈಲಾಸವಾಡಿ ಶಿವನ್. ತಮಿಳುನಾಡಿನ ಪುಟ್ಟ ಹಳ್ಳಿಯ ರೈತನ ಮಗ. ಇಡೀ ಜಗತ್ತನ್ನೇ ನಭೋ ಮಂಡಲದತ್ತ ಮುಖ ಮಾಡಿ ತುದಿಗಾಲ ಮೇಲೆ ನಿಲ್ಲಿಸಿದ ಸಾಹಸಿ ವಿಜ್ಞಾನಿ. ಇಸ್ರೋದ ಮಹತ್ವಾಕಾಂಕ್ಷಿ ಚಂದ್ರಯಾನ-2ರ ಉಸ್ತುವಾರಿ ಹೊತ್ತಿದ್ದ ಅಪ್ರತಿಮ ಸಾಧಕ. ಚಂದ್ರನ ದಕ್ಷಿಣ ಮೇಲ್ಮೆಯಲ್ಲಿ ವಿಕ್ರಮ ಲ್ಯಾಂಡರ್ ಇಳಿಸುವ ಸಾಹಸ ಕೈಗೂಡದಿದ್ದರೂ ವಿಶ್ವದ ಗಮನ ಭಾರತದತ್ತ ಹರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೆ.7ರಂದು ಬೆಳಗ್ಗೆ ಚಂದ್ರನ ಮೇಲೆ ಲ್ಯಾಂಡ್ ಆಗಬೇಕಿದ್ದ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೆ ತಲುಪಲು ಇನ್ನು 2.5 ಕಿಮೀ ಇರುವಾಗಲೇ ಸಂಪರ್ಕ ಕಡಿದುಕೊಂಡಿತ್ತು. ಇದಕ್ಕೆ ಪ್ರಧಾನಿ ಮೋದಿ ಖುದ್ದು ಸಾಕ್ಷಿಯಾಗಿದ್ದರು. ಕೊನೆ ಗಳಿಗೆಯ ನಿರಾಸೆಗೆ ಸಾಂತ್ವನ ಹೇಳಿದ್ದರು.
Related Articles
Advertisement
ಗ್ರೇಟಾ ಥನ್‌ಬರ್ಗ್ : ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಪರಿಸರ ಕಾಳಜಿ ಬಗ್ಗೆ ಚಿಂತಿಸುವ ಜನಗಳ ಮಧ್ಯೆ ಸ್ವೀಡನ್ ದೇಶದ 16 ವರ್ಷದ ಪುಟ್ಟ ಬಾಲಕಿ ಗ್ರೇಟಾ ಥನ್‌ಬರ್ಗ್ ಪರಿಸರ ಕ್ರಾಂತಿಯನ್ನೇ ಸೃಷ್ಟಿಸಿದ್ದಾಳೆ. ಇಡೀ ವಿಶ್ವಕ್ಕೆ ಪರಿಸರ ಪಾಠ ಮಾಡುತ್ತಿದ್ದಾಳೆ. ವಿಶ್ವಸಂಸ್ಥೆಯಲ್ಲೇ ಜಗದ್ವಿಖ್ಯಾತರ ಎದುರು ನಿಂತು ಪರಿಸರ ಹಾಳು ಮಾಡುತ್ತಿದ್ದೀರಿ. ಇನ್ನಾದರೂ ಅದನ್ನು ರಕ್ಷಿಸಿ ಎಂದು ಏರಿದ ಧ್ವನಿಯಲ್ಲಿ ಎಚ್ಚರಿಕೆ ಕೊಟ್ಟಿದ್ದಾಳೆ. ಸ್ವೀಡನ್‌ಸರ್ಕಾರಕ್ಕೆ ಪ್ರತಿ ವರ್ಷ ಶೇ.15ರಷ್ಟು ಮಾಲಿನ್ಯ ತಗ್ಗಿಸಲು ಕ್ರಮ ಕೈಗೊಳ್ಳಲೇಬೇಕು ಎಂದು ಖಡಕ್ ಎಚ್ಚರಿಕೆ ಕೊಟ್ಟಿದ್ದಾಳೆ!
ಸನ್ನಾ ಮರೀನ್ : ವಿಶ್ವದ ಅತಿ ಕಿರಿಯ ಪ್ರಧಾನಿ. ಫಿನ್ ಲ್ಯಾಂಡ್ ನಲ್ಲಿ ಕ್ರಾಂತಿ ಸೃಷ್ಟಿಸಿದ ಮಹಿಳೆ. ಸೊಷಿಯಲ್ ಡೆಮಾಕ್ರಾಟಿಕ್ ಪಕ್ಷದಿಂದ ಸ್ಪರ್ಧಿಸಿದ್ದ ಸನ್ನಾ ಮರೀನ್ ಅಲ್ಲಿನ ಜನರ ಮನಗೆದ್ದು ಗದ್ದುಗೆ ಏರಿದ್ದಾರೆ. ಇದಕ್ಕೂ ಮೊದಲು ಫಿನ್ ಲ್ಯಾಂಡ್ ಸರ್ಕಾರದಲ್ಲಿ ಅತಿ ಕಿರಿಯ ವಯಸ್ಸಿನ ಸಾರಿಗೆ ಸಚಿವೆಯಾಗಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆಯೂ ಮರೀನ್‌ಗಿದೆ. ರಾಜಕೀಯ ಅನುಭವ, ಪಟ್ಟುಗಳನ್ನು ಚಿಕ್ಕ ವಯಸ್ಸಿನಲ್ಲೇ ಕರಗತ ಮಾಡಿಕೊಂಡಿರುವ ಸನ್ನಾ ಮೇಲೆ ಅಲ್ಲಿನ ಜನತೆ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಭಾರತದಲ್ಲಿ ರಾಜೀವ್ ಗಾಂಧಿ 40ನೇ ವಯಸ್ಸಿನಲ್ಲಿ ಪ್ರಧಾನಿಯಾಗಿದ್ದು ಇದುವರೆಗಿನ ದಾಖಲೆ.
ಹೌದು ಹುಲಿಯಾ! : ಕಾಗವಾಡ ಕ್ಷೇತ್ರದ ಉಪ ಚುನಾವಣೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಭಾಷಣ ಮಾಡುತ್ತಿದ್ದರು. ವೇದಿಕೆ ಕೆಳಗೆ ಕುಳಿತಿದ್ದ ಅಥಣಿಯ ಪೀರಪ್ಪ ಎಂಬುವವರು ಸಿದ್ದು ಮಾತಿಗೆ ಮೆಚ್ಚುಗೆ ವ್ಯಕ್ತಪಡಿಸಲು ಎದ್ದು ನಿಂತು ಹೌದು ಹುಲಿಯಾ ಎಂದುಬಿಟ್ಟರು. ಬಹು ಆಕರ್ಷಿತವಾದ ಪದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು. ಅಷ್ಟೇ ಅಲ್ಲ, ಕಮತಗಿಯ ಹುಚ್ಚೇಶ್ವರ ನಾಟ್ಯ ಸಂಘದಿಂದ ಮಹೇಶ ಕಲ್ಲೋಳರ ಅವರು ಇದೇ ಹೆಸರಿನಲ್ಲಿ ನಾಟಕ ಪ್ರದರ್ಶನ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಕ್ಷೇತ್ರ ಬಾದಾಮಿ ಬನಶಂಕರಿ ಜಾತ್ರೆಯಲ್ಲಿ ಜ.9ರಿಂದ ತಿಂಗಳ ಕಾಲ ಪ್ರದರ್ಶನವಾಗಲಿದೆ.
ಉದ್ಧವ್ ಠಾಕ್ರೆ : ಪ್ರಬಲ ಹಿಂದುತ್ವ ಪ್ರತಿಪಾದಕ ಬಾಳಾಸಾಹೇಬ್ ಠಾಕ್ರೆ ಪುತ್ರ. ಬಿಜೆಪಿ ಗೆಳೆತನದಲ್ಲೇ ಚುನಾವಣೆ ಎದುರಿಸಿ ಕೊಡು-ಕೊಳ್ಳುವಿಕೆ ಚೌಕಾಸಿಯಲ್ಲಿ ಮುನಿಸಿಕೊಂಡು ತದ್ವಿರುದ್ಧ ಸಿದ್ಧಾಂತಗಳ ಪಕ್ಷಗಳಾದ ಎನ್‌ಸಿಪಿ ಹಾಗೂ ಕಾಂಗ್ರೆಸ್ ಜತೆ ಸೇರಿ ಮೈತ್ರಿ ಸರ್ಕಾರ ರಚಿಸಿ ಸಿಎಂ ಗಾದಿ ಮೇಲೆ ಕುಳಿತಿದ್ದಾರೆ. ರಾಜಕೀಯ ಸ್ಥಿತ್ಯಂತರದಲ್ಲಿ ಗುದ್ದಾಡಿ ಠಾಕ್ರೆ ಕುಟುಂಬದ ಮೊಟ್ಟ ಮೊದಲ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ್ದಾರೆ. ಮಾಜಿ ಸಿಎಂ, ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಅವರು ಅಜಿತ್ ಪವಾರ್ ಜತೆ ಸೇರಿ ಸರ್ಕಾರ ರಚಿಸಿದರೂ ಶರದ್ ಪವಾರ್ ಅವರ ಚಾಣಾಕ್ಷತೆಯಿಂದ ಉದ್ಧವ್ ಸಿಎಂ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ಸದ್ಯಕ್ಕೆ ಗೆಳೆತನದಲ್ಲಿ ಎಲ್ಲವೂ ಚೆನ್ನಾಗಿದೆ. ಮುಂದೆ ಹೇಗಿರುತ್ತದೆ ಎಂದು ಕಾಲವೇ ಉತ್ತರಿಸಲಿದೆ.