ಇಂದಿನಿಂದ ನಾಡಿನೆಲ್ಲೆಡೆ ನವರಾತ್ರಿಯ ಸಂಭ್ರಮ. ಆಶ್ವಯುಜ ಶುದ್ಧ ಪ್ರತಿಪದೆಯಂದು ಆರಂಭವಾಗುವ ಈ ಹಬ್ಬ ದೇಶದೆಲ್ಲೆಡೆ ಅತ್ಯಂತ ವೈಭವ, ಸಡಗರಗಳಿಂದ ಆಚರಿಸಲ್ಪಡುತ್ತದೆ. ದೇಶಾದ್ಯಂತ ಇರುವ ದುರ್ಗಾದೇವಿಯ ದೇವಾಲಯಗಳಲ್ಲಿ ಈ ಹಬ್ಬವನ್ನು ವಿಶೇಷ ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತದೆ. ನವರಾತ್ರಿಯ ಈ ಸಂದರ್ಭದಲ್ಲಿ ದೇಶದ ಒಂಬತ್ತು ಪ್ರಸಿದ್ಧ ದೇವಿ ದೇವಾಲಯಗಳನ್ನು ಸಂಕ್ಷಿಪ್ತವಾಗಿ ಪರಿಚಯಿಸುವ “ನವರಾತ್ರಿ- ನವದೇವಿ’ ಲೇಖನ ಮಾಲಿಕೆ ಇಂದಿನಿಂದ.
ಉತ್ತರಾಖಂಡದ ಪವಿತ್ರ ಯಾತ್ರಾಸ್ಥಳವಾದ ಹರಿದ್ವಾರದಲ್ಲಿರುವ ಚಂಡಿ ದೇಗುಲ ದೇವೀ ಆರಾಧನೆಯ ಪ್ರಸಿದ್ಧ ತಾಣವಾಗಿದೆ. ಪ್ರತೀ ವರ್ಷ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಇಲ್ಲಿನ ಚಂಡಿ ದೇವಿಯ ದರುಶನ ಪಡೆಯುವುದರ ಜತೆಯಲ್ಲಿ ಹರಕೆ, ವಿಶೇಷ ಪೂಜೆ, ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ.
ದಕ್ಷಿಣ ಹಿಮಾಲಯದ ಸಾಲಿನ ಪೂರ್ವ ಭಾಗದ ಶಿವಾಲಿಕ ಪರ್ವತದ ಸಾಲಿನಲ್ಲಿರುವ ನೀಲ ಪರ್ವತದ ಬಳಿ ಈ ದೇವಸ್ಥಾನವಿದೆ. 1029ರಲ್ಲಿ ಕಾಶ್ಮೀರದ ರಾಜನಾಗಿದ್ದ ಸುಚತ್ ಸಿಂಗ್ ಈ ದೇವಾಲಯವನ್ನು ನಿರ್ಮಿಸಿದನು ಎನ್ನಲಾಗುತ್ತದೆ. ಆದರೆ ಇಲ್ಲಿರುವ ಚಂಡಿ ದೇವಿಯ ಮುಖ್ಯ ದೇವಿಯ ಮೂರ್ತಿಯನ್ನು 8ನೇ ಶತಮಾನದಲ್ಲಿ ಆದಿ ಶಂಕರಾಚಾರ್ಯರು ಪ್ರತಿಷ್ಠಾಪಿಸಿದರು ಎನ್ನಲಾಗುತ್ತದೆ. ಹರಿದ್ವಾರದ ಪಂಚತೀರ್ಥ ಪುಣ್ಯಕ್ಷೇತ್ರಗಳಲ್ಲಿ ಈ ದೇವಾಲಯವು ಒಂದಾಗಿದೆ. ಹಾಗಾಗಿ ಇದನ್ನು ನೀಲ ಪರ್ವತ ತೀರ್ಥ ಎಂದು ಹೇಳಲಾಗುತ್ತದೆ.
ಚಂಡಿಕಾ ದೇವಿಯು ಶುಂಭ-ನಿಶುಂಭರನ್ನು ಸಂಹರಿಸಿದ ಬಳಿಕ ನೀಲ ಪರ್ವತದಲ್ಲಿ ಸ್ವಲ್ಪ ಸಮಯ ವಿರಮಿಸಿದಳು ಎನ್ನುವ ಪುರಾಣ ಈ ಕ್ಷೇತ್ರಕ್ಕಿದೆ. ಭಕ್ತರು ಈ ಕ್ಷೇತ್ರವನ್ನು ತಮ್ಮ ಬೇಡಿಕೆಗಳನ್ನು ಈಡೇರಿಸುವ ಸಿದ್ಧ ಪೀಠವಾಗಿ ಕಾಣುತ್ತಾರೆ. ಇಲ್ಲಿನ ಮಾನಸ ದೇವಿ ಹಾಗೂ ಮಾಯಾ ದೇವಿ ದೇಗುಲದಲ್ಲೂ ಈ ಸಿದ್ಧಪೀಠವನ್ನು ಕಾಣಬಹುದು. ನವರಾತ್ರಿ ಹಾಗೂ ಹರಿದ್ವಾರದಲ್ಲಿ ನಡೆಯುವ ಕುಂಭಮೇಳದ ಸಮಯದಲ್ಲಿ ಸಾವಿರಾರು ಭಕ್ತರು ಈ ದೇಗುಲಕ್ಕೆ ಭೇಟಿ ನೀಡುತ್ತಾರೆ. ಧಾರ್ಮಿಕ ಪ್ರವಾಸಿ ತಾಣವಾಗಿಯೂ ಇದು ಗುರುತಿಸಿಕೊಂಡಿದ್ದು, ಚಂಡಿ ದೇಗುಲದ ಸುತ್ತಮುತ್ತಲಿನ ವಿಹಂಗಮ ದೃಶ್ಯಾವಳಿ ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದು.