Advertisement

Famous Goddess Temple: ಅಭಯಪ್ರದಾಯಿನಿ ಶಕ್ತಿಮಾತೆ ಕನಕದುರ್ಗಾ ದೇವಾಲಯ

02:33 AM Oct 08, 2024 | Team Udayavani |

ನಾಡಿನೆಲ್ಲೆಡೆ ಈಗ ನವರಾತ್ರಿಯ ಸಂಭ್ರಮ. ಈ ಹಬ್ಬವನ್ನು ದೇಶದೆಲ್ಲೆಡೆ ಅತ್ಯಂತ ವೈಭವ, ಸಡಗರಗಳಿಂದ ಆಚರಿಸಲಾಗುತ್ತಿದೆ. ದೇಶಾದ್ಯಂತ ಇರುವ ದುರ್ಗಾದೇವಿಯ ದೇವಾಲಯಗಳಲ್ಲಿ ಭಕ್ತರು ವಿಶೇಷ ಶ್ರದ್ಧಾಭಕ್ತಿಯಿಂದ ಶಕ್ತಿಮಾತೆಯ ಆರಾಧನೆಯಲ್ಲಿ ತೊಡಗಿದ್ದಾರೆ. ನವರಾತ್ರಿಯ ಈ ಸಂದರ್ಭದಲ್ಲಿ ದೇಶದ ಒಂಬತ್ತು ಪ್ರಸಿದ್ಧ ದೇವಿ ದೇವಾಲಯಗಳನ್ನು ಸಂಕ್ಷಿಪ್ತವಾಗಿ ಪರಿಚಯಿಸುವ “ನವರಾತ್ರಿ- ನವದೇವಿ’ ಲೇಖನ ಮಾಲಿಕೆಯಲ್ಲಿ ಈ ದಿನ ಆಂಧ್ರಪ್ರದೇಶದ ವಿಜಯವಾಡಾದ ಕನಕದುರ್ಗಾ ದೇವಾಲಯ.

Advertisement

ಆಂಧ್ರಪ್ರದೇಶದ ವಿಜಯವಾಡಾದಲ್ಲಿರುವ ಶ್ರೀ ದುರ್ಗಾ ಮಲ್ಲೇಶ್ವರ ಸ್ವಾಮಿ ವರ್ಲಾ ದೇವಸ್ಥಾನಂ, “ಕನಕದುರ್ಗಾ ದೇವಾಲಯ’ ವೆಂದು ಪ್ರಸಿದ್ಧಿಯನ್ನು ಪಡೆದಿದೆ. ಕೃಷ್ಣಾ ನದಿಯ ದಡದಲ್ಲಿರುವ ಇಂದ್ರಕೀಲಾದ್ರಿ ಬೆಟ್ಟದ ಮೇಲೆ ಕನಕದುರ್ಗಾ ದೇವಿ ಸ್ವಯಂಭೂ ಆಗಿ ನೆಲೆಯಾದಳು ಎಂಬ ಪೌರಾಣಿಕ ಐತಿಹ್ಯ ಈ ದೇಗುಲಕ್ಕಿದೆ. ಶಕ್ತಿ ಪೀಠಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ ಈ ದೇಗುಲದಲ್ಲಿನ ಪ್ರಧಾನ ದೇವಿಯಾದ ಕನಕದುರ್ಗಾ ಮಾತೆ ಅಭಯಪ್ರದಾಯಿನಿ ಆಗಿ, ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಶಕ್ತಿಮಾತೆಯಾಗಿದ್ದಾಳೆ.

ಕಾಳಿಕಾ ಪುರಾಣ, ಸಪ್ತಶತಿ, ವೇದಗಳಲ್ಲಿ ಇಂದ್ರಕೀಲಾದ್ರಿಯಲ್ಲಿ ಕನಕದುರ್ಗಾ ದೇವಿ ನೆಲೆ ನಿಂತ ಬಗ್ಗೆ ಉಲ್ಲೇಖವಿದೆ. ತ್ರಿತೇಯ ಕಲ್ಪದಲ್ಲಿ ದೇವಿಯನ್ನು ಸ್ವಯಂಭೂ ಎಂದು ಹೇಳಲಾಗಿದೆ. ಕನಕದುರ್ಗೆಯು ಮಹಿಷಾಸುರನನ್ನು ಸಂಹರಿಸಿದಳು ಎನ್ನುವ ಕಥೆಯೂ ಇಲ್ಲಿ ಜನಜನಿತವಾಗಿದೆ. ಮಹಾಭಾರತದಲ್ಲಿಯೂ ಈ ದೇಗುಲ, ದೇವಿಯ ಬಗೆಗೆ ಉಲ್ಲೇಖವಿದೆ. ಇಲ್ಲಿನ ದೇವಿಯು ಉಗ್ರ ಸ್ವರೂಪಿಣಿಯಾಗಿರುವುದರಿಂದ ಋಷಿಮುನಿಗಳನ್ನು ಹೊರತುಪಡಿಸಿ, ಜನಸಾಮಾನ್ಯರು ಬೆಟ್ಟವನ್ನೇರಲು ಹಿಂದೇಟು ಹಾಕುತ್ತಿದ್ದರು. ಆದಿ ಶಂಕರಾಚಾರ್ಯರು ದೇಗುಲಕ್ಕೆ ಭೇಟಿ ನೀಡಿದ ವೇಳೆ ಶ್ರೀಚಕ್ರವನ್ನು ಪ್ರತಿಷ್ಠಾಪಿಸಿ, ವೈದಿಕ ವಿಧಿ ವಿಧಾನಗಳನ್ನು ಆರಂಭಿಸಿದ ಬಳಿಕವೇ ಇಲ್ಲಿಗೆ ಭಕ್ತರ ದಂಡೇ ಹರಿದುಬರತೊಡಗಿತು.

ಈ ದೇಗುಲದಲ್ಲಿ ಆಭರಣಗಳಿಂದ ಅಲಂಕರಿಸಲ್ಪಟ್ಟ, 8 ಕೈಗಳಲ್ಲಿ ವಿವಿಧ ಆಯುಧಗಳನ್ನು ಹಿಡಿದು, ಮಹಿಷಾಸುರನನ್ನು ವಧಿಸುವ ರೂಪದಲ್ಲಿ ಕನಕದುರ್ಗೆಯ 4 ಅಡಿ ಎತ್ತರದ ಪ್ರತಿಮೆಯಿದೆ. ಕನಕದುರ್ಗಾ ದೇವಿಯನ್ನು ಮಹಾಲಕ್ಷ್ಮೀ, ಲಕ್ಷ್ಮೀ ದುರ್ಗಾ ಎಂದು ಕರೆಯಲಾಗುತ್ತದೆ. ಲಕ್ಷ್ಮೀ ದೇವಿಗೆ ಮಾಡಲಾಗುವ ಪೂಜೆಯನ್ನು ಇಲ್ಲಿ ದೇವಿಗೆ ಮಾಡಲಾಗುತ್ತದೆ. ಆಷಾಢ ಮಾಸದಲ್ಲಿ ವಾರ್ಷಿಕ ಶಾಕಂಬರಿ ಹಬ್ಬವನ್ನು ತರಕಾರಿ, ಕೃಷಿ ಬೆಳೆಗಳನ್ನು ದೇವಿಗೆ ಅರ್ಪಿಸಿ ವಾರ್ಷಿಕ ಶಾಕಂಬರಿ ಹಬ್ಬವನ್ನು ಆಚರಿಸಲಾಗುತ್ತದೆ. ಶ್ರಾವಣ ಮಾಸದಲ್ಲಿ ಪ್ರತೀ ಶುಕ್ರವಾರ ವರಮಹಾಲಕ್ಷ್ಮೀ ವ್ರತವನ್ನು ಮಾಡಲಾಗುತ್ತದೆ. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಈ ವೇಳೆ ಬೆಟ್ಟವನ್ನೇರಿ ದೇವಿಯ ದರುಶನ ಪಡೆಯುತ್ತಾರೆ.

ಇನ್ನು ದಸರಾ ಅಥವಾ ನವರಾತ್ರಿಯ ವೇಳೆ ದೇಗುಲದಲ್ಲಿ ಉತ್ಸವದ ಮಾದರಿಯಲ್ಲಿ ವಿಶೇಷ ಪೂಜೆ, ಪುನಸ್ಕಾರಗಳು ನೆರವೇರುತ್ತವೆ. ಬೆಟ್ಟದ ಕೆಳಗೆ ಹರಿಯುವ ಕೃಷ್ಣಾ ನದಿಯಲ್ಲಿ ತೀರ್ಥಸ್ನಾನಗೈದು ಮೆಟ್ಟಿಲುಗಳ ಮೂಲಕ ಬೆಟ್ಟವನ್ನು ಏರಿ ಕನಕದುರ್ಗೆಯ ದರುಶನ ಪಡೆಯುತ್ತಾರೆ. 1960ರ ದಶಕದ ಅಂತ್ಯದಲ್ಲಿ ಬೆಟ್ಟವನ್ನೇರಲು ರಸ್ತೆಗಳನ್ನು ನಿರ್ಮಿಸಲಾಗಿದೆ. ಮೆಟ್ಟಿಲುಗಳನ್ನೇರಿ ದೇವಿಯ ದರುಶನ ಪಡೆದು ಪ್ರಾರ್ಥಿಸಿದರೆ ಸಂಕಷ್ಟಗಳೆಲ್ಲವೂ ನಿವಾರಣೆಯಾಗಿ, ಇಷ್ಟಾರ್ಥಸಿದ್ಧಿಯಾಗುತ್ತದೆ ಎಂಬ ನಂಬಿಕೆ ಇರುವುದರಿಂದ ಭಕ್ತರು ಮೆಟ್ಟಿಲುಗಳ ಮೂಲಕವೇ ಬೆಟ್ಟವನ್ನು ಏರಿ ದೇವರ ದರುಶನ ಪಡೆಯುತ್ತಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next