ತೀರ್ಥಹಳ್ಳಿ: ಸಾವಿರಾರು ವರ್ಷಗಳ ಇತಿಹಾಸದ ಗುಡ್ಡೆಕೊಪ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯ ದಾವಣೆಬೈಲು ಕಪ್ಪಗೋಡು ಶ್ರೀ ಕಪಿಲೇಶ್ವರ ದೇವಸ್ಥಾನ ಜೀರ್ಣೋದ್ದಾರ ಹಾಗೂ ದೇವರ ಪುನರ್ ಪ್ರತಿಷ್ಠಾಪನೆ ಮಾಡಲು ಊರ ಗ್ರಾಮಸ್ಥರೆಲ್ಲರೂ ಸೇರಿ ತೀರ್ಮಾನ ತೆಗೆದುಕೊಂಡಿದ್ದು, ಇದರ ಪೂರ್ವಭಾವಿಯಾಗಿ ಶೃಂಗೇರಿಯ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠಾಧೀಶ್ವರ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳನ್ನು ಫೆ.23ರ ಗುರುವಾರ ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಂಡರು.
ನಂತರ ಶ್ರೀ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳವರು ಈ ದೇವಸ್ಥಾನದ ಪುರಾತನ ಶಿಲ್ಪಕಲೆ, ದೇವಸ್ಥಾನ ಒಳಾಂಗಣ, ಗರ್ಭಗುಡಿ, ಶಿವಲಿಂಗ, ಪೀಠವನ್ನು ವೀಕ್ಷಣೆ ಮಾಡಿದರು. ದೇವಸ್ಥಾನದ ಸಂಪೂರ್ಣ ಇತಿಹಾಸವನ್ನು ಇತಿಹಾಸ ಅಜಯ್ ಕುಮಾರ್ ಶರ್ಮಾ ಶಿವಮೊಗ್ಗ ಇವರು ಸ್ವಾಮೀಜಿಗಳಿಗೆ ನೀಡಿದರು. ಗ್ರಾಮಸ್ಥರ ಮನವಿ ಮೇರೆಗೆ ಕೋಣಂದೂರಿನ ಧಾರ್ಮಿಕ ಸಮಾರಂಭಕ್ಕೆ ಹೋಗುತಿದ್ದ ಸ್ವಾಮೀಜಿಗಳು ಈ ಕಪಿಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ದೇವಸ್ಥಾನ ಜೀರ್ಣೋದ್ದಾರ ಹಾಗೂ ದೇವರ ಪುನರ್ ಪ್ರತಿಷ್ಠಾಪನೆಯ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಸುವುದಾಗಿ ಸ್ವಾಮೀಜಿಗಳು ತಿಳಿಸಿದರು. ಈ ಸಂದರ್ಭದಲ್ಲಿ ಸುತ್ತ ಮುತ್ತಲಿನ ಗ್ರಾಮಸ್ಥರು ಮತ್ತಿತರರು ಉಪಸ್ಥಿತರಿದ್ದರು.
17 ವರ್ಷಗಳ ಹಿಂದೆ ಆಗ ಶಾಸಕರಾಗಿದ್ದ ಹಾಗೂ ಈಗಿನ ಗೃಹಸಚಿವ ಆರಗ ಜ್ಞಾನೇಂದ್ರ ಅವರು ತಮ್ಮ ವಿಶೇಷ ಪ್ರಯತ್ನದಿಂದ 20 ಲಕ್ಷರೂ.ಗಳ ಅನುದಾನ ಒದಗಿಸಿ ಶಿಥಿಲಾವಸ್ಥೆ ತಲುಪುತ್ತಿದ್ದ ಈ ಕಪಿಲೇಶ್ವರ ದೇವಸ್ಥಾನದ ಪುನರ್ ನಿರ್ಮಾಣ ಮಾಡಿದ್ದರು. ಆದರೆ ಈ ದೇವಸ್ಥಾನಗಳಿಗೆ ದೇವರ ಪ್ರತಿಷ್ಠಾಪನೆಯಾಗಿರಲಿಲ್ಲ, ದೇವಸ್ಥಾನದ ಎದುರು ವಿಶಾಲವಾದ ಕೆರೆ, ಮರ ಗಿಡಗಳು ಇದ್ದೂ ಪ್ರೇಕ್ಷಣೀಯ ಸ್ಥಳವಾಗಿ ಹಲವಾರು ಕಿರುತೆರೆಯ ಧಾರವಾಹಿ ಮತ್ತು ಸಿನಿಮಾಗಳು ಚಿತ್ರೀಕರಣಗಳು ಇಲ್ಲಿ ನಡೆಯುತ್ತಿತ್ತು. ಈಗ ದೇವಸ್ಥಾನಕ್ಕೆ ಹೆಚ್ಚುವರಿಯಾಗಿ ಎರಡು ಎಕ್ರೆ ಜಾಗವನ್ನು ಕೂಡ ಗೃಹಸಚಿವ ಆರಗ ಜ್ಞಾನೇಂದ್ರ ಅವರು ಮಂಜೂರು ಮಾಡಿಸಿದ್ದಾರೆ.