ಅರಮನೆ ಮೈದಾನದಲ್ಲೊಂದು ಪಾಳು ಬಿದ್ದ ದೇವಸ್ಥಾನ. ಆ ದೇವಸ್ಥಾನದ ಆವರಣಕ್ಕೆ ಮದುವೆ ಹೆಣ್ಣು ಆತಂಕದಿಂದ, ತನ್ನ ಸಕುಟುಂಬ ಸಪರಿವಾರ ಸಮೇತ ಅಲ್ಲಿಗೆ ಬಂದಿದ್ದಾಳೆ. ಎಲ್ಲರ ಮುಖದಲ್ಲೂ ಅದೇನೋ ಆತಂಕ, ಭಯ ಮಡುಗಟ್ಟಿದೆ. ಹೀಗೆ ಲುಕ್ ಕೊಡಬೇಕಾದರೆ, ಕಟ್ ಇಟ್ ಎಂದು ಕೂಗಿದರು ಹರ್ಷ. ಕಲಾವಿದರೆಲ್ಲಾ ನಾರ್ಮಲ್ ಸ್ಥಿತಿಗೆ ಬಂದರು. ಕೆಲವರು ಕ್ಯಾರಾವಾನ್‌ಗೆ ಹೋಗಿ ಕುಳಿತರೆ, ಇನ್ನೂ ಕೆಲವರು ಅಲ್ಲೇ ಮಾತನಾಡುತ್ತಾ ಕುಳಿತರು. ಹೀಗಿರುವಾಗಲೇ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನಡೆದು ಬಂದರು …
ಮುಖ್ಯಮಂತ್ರಿಗಳು ಸಿನಿಮಾ ಮುಹೂರ್ತಕ್ಕೆ, ಆಡಿಯೋ ಬಿಡುಗಡೆ ಸಮಾರಂಭಗಳಿಗೆ ಹೋಗುವುದು ವಾಡಿಕೆ. ಆದರೆ, ಕುಮಾರಸ್ವಾಮಿ ಅವರು ಬಂದಿದ್ದು, ತಮ್ಮದೇ ಚಿತ್ರ ಎಂಬ ಕಾರಣಕ್ಕೆ. ಮುಖ್ಯಮಂತ್ರಿಗಳು ತಮ್ಮ ಮಗ ನಿಖೀಲ್‌ಗಾಗಿ “ಸೀತಾರಾಮ ಕಲ್ಯಾಣ’ ಚಿತ್ರ ನಿರ್ಮಿಸುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಅಂದು ಆ ಚಿತ್ರದ 99ನೇ ದಿನದ ಚಿತ್ರೀಕರಣ. ಅದೇ ದಿನ ಪತ್ರಿಕಾಗೋಷ್ಠಿಯನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ನಿರ್ಮಾಪಕರಾಗಿ ಎಂಟ್ರಿ ಕೊಟ್ಟರು. ಆ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಿತ್ರ ಮೂಡಿ ಬರುತ್ತಿರುವ ರೀತಿಯ ಬಗ್ಗೆ ಮಾತನಾಡಿದರು.
“ನಾನು ಮುಖ್ಯಮಂತ್ರಿಯಾಗಿ ಅದೆಷ್ಟೇ ಬಿಝಿಯಾಗಿದ್ದರೂ, ಚಿತ್ರದ ತುಣುಕುಗಳನ್ನು ಪ್ರತಿ ದಿನ ನೋಡುವ ಹವ್ಯಾಸ ಮಾಡಿಕೊಂಡಿದ್ದೇನೆ. ಚಿತ್ರ ಚೆನ್ನಾಗಿ ಮೂಡಿಬರುತ್ತಿದೆ ಮತ್ತು ಇದೊಂದು ಉತ್ತಮ ಮತ್ತು ಯಶಸ್ವಿ ಚಿತ್ರವಾಗಲಿದೆ ಎಂಬ ವಿಶ್ವಾಸ ನನಗಿದೆ. ಚಿತ್ರದಲ್ಲಿ ನಿಖೀಲ್ ತಂದೆಯಾಗಿ ಶರತ್ ಕುಮಾರ್ ಕಾಣಿಸಿಕೊಂಡಿದ್ದಾರೆ. ಅವರಿಬ್ಬರಲ್ಲಿ ನನ್ನ ಮತ್ತು ಮಗನ ಬಾಂಧವ್ಯ ಕಂಡಿದ್ದೇನೆ. ನನ್ನ ಜೀವನದ ಕೆಲವು ಭಾಗಗಳನ್ನೇ ಈ ಚಿತ್ರದಲ್ಲಿ ಅಳವಡಿಸಿಕೊಂಡಿದ್ದಾರೆ ಅನಿಸುತ್ತದೆ. ಚಿತ್ರ ಮುಗಿಯುತ್ತಾ ಬಂದಿದೆ. ಈ ಚಿತ್ರದಿಂದ ದೊಡ್ಡ ಯಶಸ್ಸು ನಿರೀಕ್ಷೆ ಮಾಡುತ್ತಿದ್ದೇನೆ’ ಎಂದರು.
ಹರ್ಷ ಪಾಲಿಗೆ ಇದೊಂದು ದೊಡ್ಡ ಅವಕಾಶವಂತೆ. “ನಿರ್ಮಾಪಕರು ನನ್ನ ಮೇಲೆ ಬಹಳ ನಿರೀಕ್ಷೆ ಇಟ್ಟಿದ್ದಾರೆ. ಅವರ ನಿರೀಕ್ಷೆಗಳನ್ನು ನಾನು ಹುಸಿಗೊಳಿಸುವುದಿಲ್ಲ. ನಿಖೀಲ್ ಬಹಳ ಚೆನ್ನಾಗಿ ಡ್ಯಾನ್ಸ್ ಮತ್ತು ಫೈಟ್ ಮಾಡುತ್ತಾರೆ. ಇದು ಚಿತ್ರೀಕರಣದ 99ನೇ ದಿನ. ಆದರೂ ಅವರ ಉತ್ಸಾಹ ಕಡಿಮೆಯಾಗಿಲ್ಲ. ಅವರು ಇನ್ನೂ ಸಾಕಷ್ಟು ಬೆಳೆಯುತ್ತಾರೆ, ಎಲ್ಲಾ ಭಾಷೆಗಳಿಗೂ ಹೋಗುತ್ತಾರೆ’ ಎಂದು ಭವಿಷ್ಯ ನುಡಿದರು. ನಿಖೀಲ್ ಸಹ ಹರ್ಷ ಅವರನ್ನು ಹೊಗಳುತ್ತಾ ಮಾತು ಶುರು ಮಾಡಿದರು. “ಕಲಾವಿದರಿಗೆ ಹರ್ಷ ತುಂಬಾ ಉತ್ಸಾಹ ತುಂಬುತ್ತಾರೆ. ಅವರ ಜೊತೆಗೆ ಮತ್ತೆಮತ್ತೆ ಕೆಲಸ ಮಾಡುವ ಆಸೆ ಇದೆ. ಇನ್ನು ಟೀಸರ್ ದೊಡ್ಡ ಹಿಟ್ ಆಗಿದೆ. ಆ ಟೀಸರ್‌ನ ಸಾಹಸ ನಿರ್ದೇಶಕರಾದ ರಾಮ್-ಲಕ್ಷ್ಮಣ್ ಅವರಿಗೆ ಅರ್ಪಿಸುವುದಕ್ಕೆ ಇಷ್ಟಪಡುತ್ತೇನೆ. ಈ ಚಿತ್ರ ರೀಮೇಕ್ ಎನ್ನುವ ವಿಚಾರ ಕೇಳಿದ್ದೇನೆ. ಇದು ಯಾವುದೇ ಚಿತ್ರದ ರೀಮೇಕ್ ಅಲ್ಲ, ಹಲವು ಚಿತ್ರಗಳಿಂದ ಸ್ಫೂರ್ತಿ ಪಡೆದಂತಹ ಚಿತ್ರ’ ಎಂದರು. ಅದಕ್ಕೆ ಸರಿಯಾಗಿ ಪಕ್ಕದಲ್ಲಿದ್ದ ಹಿರಿಯ ನಟ ಶರತ್ ಕುಮಾರ್, “ನಾನೂ ಇದುವರೆಗೂ 140 ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ನಾನು ನೋಡಿರುವಂತೆ ಇದು ಯಾವ ಚಿತ್ರದ ರೀಮೇಕ್ ಸಹ ಅಲ್ಲ. ಹಾಡುಗಳು, ಆ್ಯಕ್ಷನ್ ನೋಡುತ್ತಿದ್ದರೆ ಹೋಲಿಕೆ ಸಹಜ’ ಎಂದರು.
ಅಂದು ವೇದಿಕೆಯ ಮೇಲೆ ರಚಿತಾ ರಾಮ್, ಗಿರಿಜಾ ಲೋಕೇಶ್, ರವಿಶಂಕರ್, ಮಧು, ಜ್ಯೋತಿ ರೈ ಸೇರಿದಂತೆ ಹಲವು ಕಲಾವಿದರ ದಂಡೇ ಇತ್ತು. ಅವರೆಲ್ಲರೂ ಚಿತ್ರದಲ್ಲಿ ನಿಖೀಲ್ ಮತ್ತು ರಚಿತಾ ರಾಮ್ ಅವರ ಕುಟುಂಬದ ಸದಸ್ಯರಾಗಿ ಕಾಣಿಸಿಕೊಂಡಿದ್ದಾರೆ. ಎಲ್ಲರೂ ಚಿತ್ರದಲ್ಲಿನ ತಮ್ಮ ಅನುಭವ ಹಂಚಿಕೊಳ್ಳುವುದರ ಜೊತೆಗೆ, ಚಿತ್ರ ಮೂಡಿಬರುತ್ತಿರುವ ಬಗ್ಗೆ ಖುಷಿ ವ್ಯಕ್ತಪಡಿಸಿದರು.