ಮದ್ದೂರು: ಬಿಟ್ಟು ಹೋದ ಗಂಡ. ತನ್ನಿಬ್ಬರು ಮಕ್ಕಳು, 11 ದಿನದ ಹಸುಗೂಸುವಿನೊಂದಿಗೆ ಬಾಣಂತಿಯ ಸಂಕಷ್ಟದ ಜೀವನ. ಮಗಳ ಕರುಣಾಜನಕ ಸ್ಥಿತಿ ಸರಿದೂಗಿಸಲು ಬಟ್ಟೆ ವ್ಯಾಪಾರ ಬಿಟ್ಟು ಆಸರೆಯಾಗಿ ನಿಂತ ಅಪ್ಪ. ಇತ್ತ ಮನೆಯೂ ಇಲ್ಲ, ಪಡಿತರವೂ ಇಲ್ಲ. ಬೆಳಗ್ಗೆ ಬಸ್ ನಿಲ್ದಾಣ, ರಾತ್ರಿ ಗ್ರಾಪಂ ಆವರಣವೇ ಮನೆ!.
ಜತೆಯಲ್ಲೇ ಶಿಶು: ಹೌದು, ತಾಲೂಕಿನ ಹೆಮ್ಮನಹಳ್ಳಿ ಗ್ರಾಮದ ಗ್ರಾಪಂ ಆವರಣದಲ್ಲಿ ಕುಣಿಗಲ್ ಮೂಲದವರಾದ ಅನ್ನಪೂರ್ಣ ಮತ್ತು ಈಕೆಯ ತಂದೆ ಸುರೇಶ್ ಸೇರಿದಂತೆ 5 ವರ್ಷದ ಹೆಣ್ಣು, 3 ವರ್ಷದ ಗಂಡು ಮಗು, ಹಾಗೂ 11 ದಿನಗಳ ಹಿಂದೆ ಜನಿಸಿದ ಶಿಶುವಿನೊಂದಿಗೆ ನೆಲೆಸಿದ್ದಾರೆ.
ಪರದಾಟ: ಮಹಿಳೆ ಅನ್ನಪೂರ್ಣ 2 ತಿಂಗಳ ಗರ್ಭಿಣಿ ಆಗಿದ್ದ ವೇಳೆ ಕಾರು ಚಾಲಕನಾಗಿದ್ದ ಪತಿ ಬಿಟ್ಟು ಹೋಗಿದ್ದನು. ಇನ್ನು ಬಟ್ಟೆ ವ್ಯಾಪಾರಕ್ಕೆಂದು ಬಂದಿದ್ದ ತಂದೆ ಸುರೇಶ್‌ಗೆ ನಷ್ಟ ಉಂಟಾದ್ದರಿಂದ ಮಗಳು, ಮೊಮ್ಮಕ್ಕಳ ಪಾಲನೆಯಲ್ಲಿ ತೊಡಗಿದ್ದಾರೆ. ಒಪ್ಪೊತ್ತಿನ ಊಟಕ್ಕೂ ಪರದಾಡುತ್ತಿದ್ದು ಅವರಿವರನ್ನು ಬೇಡುವ ಸ್ಥಿತಿಯಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕ್ರಮ ಕೈಗೊಳ್ಳಿ: ಈ ಕುಟುಂಬಕ್ಕೆ ಪಡಿತರ ಚೀಟಿ ಸೇರಿದಂತೆ ಸರ್ಕಾರದ ಯಾವೊಂದು ಸೌಲಭ್ಯವೂ ಸಿಗುತ್ತಿಲ್ಲ. ಹೆಮ್ಮನಹಳ್ಳಿ ಗ್ರಾಮಸ್ಥರೇ ಆಹಾರ ನೀಡುತ್ತಿದ್ದಾರೆ. ಸರ್ಕಾರ ಬಾಣಂತಿಯರಿಗೆ ಹಲವಾರು ಯೋಜನೆ ಜಾರಿಗೊಳಿಸಿದ್ದರೂ ಸೌಲಭ್ಯ ವಂಚಿತರಾಗಿದ್ದಾರೆ. ಈ ಕೂಡಲೇ ಸ್ಥಳೀಯ ಗ್ರಾಪಂ, ಅಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕಾಗಿದೆ.
ಸಂಘ-ಸಂಸ್ಥೆಗಳು ನೆರವಿಗೆ ಬರಬೇಕಿದೆ: ಕಳೆದ 11 ದಿನಗಳ ಹಿಂದೆ ಮಂಡ್ಯದ ವಿಮ್ಸ್ ಆಸ್ಪತ್ರೆಯಲ್ಲಿ ಮಗು ಜನಿಸಿದ ಬಳಿಕ ಗ್ರಾಪಂ ಆವರಣ ಸೇರಿರುವ ಹಸಿ ಬಾಣಂತಿ, ಮಳೆ-ಚಳಿ, ಗಾಳಿ ಎನ್ನದೆ ಜೀವನ ನಡೆಸುತ್ತಿರುವುದು ನೋಡುಗರ ಮನ ಕಲಕುತ್ತಿದೆ. ಗ್ರಾಪಂ ಆವರಣದಲ್ಲಿ ಸೊಳ್ಳೆ ಕಾಟ, ನಿತ್ಯ ಸುರಿಯುತ್ತಿರುವ ಮಳೆ, ಚಳಿ ನಡುವೆಯೂ ತನ್ನ 3 ಮಕ್ಕಳೊಂದಿಗೆ ಹಸಿ ಬಾಣಂತಿ ದಿನದೂಡುತ್ತಿದ್ದಾರೆ. ಕೂಡಲೇ ಸ್ಥಳೀಯ ಸಂಘ, ಸಂಸ್ಥೆಗಳು ಈಕೆಯ ನೆರವಿಗೆ ಬರಬೇಕಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿದೆ.
ಜಿಲ್ಲಾ ಹಾಗೂ ತಾಲೂಕು ಆಡಳಿತ ತಮ್ಮ ಕುಟುಂಬಕ್ಕೆ ಸರ್ಕಾರದಿಂದ ಸಿಗುವ ಸೌಲಭ್ಯ ಕಲ್ಪಿಸುವ ಮೂಲಕ ನಮ್ಮ ನೆರವಿಗೆ ಬರಬೇಕು. ಮಕ್ಕಳ ಶಿಕ್ಷಣ, ವಯಸ್ಸಾದ ತಂದೆಯೊಟ್ಟಿಗೆ ಜೀವನ ಸಾಗಿಸಲು ವಸತಿ ಸೌಕರ್ಯ ಕಲ್ಪಿಸಿದರೆ ಅನುಕೂಲವಾಗುತ್ತದೆ.
-ಅನ್ನಪೂರ್ಣ, ನೊಂದ ಮಹಿಳೆ
ಹೆಮ್ಮನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಮಹಿಳೆ ಮತ್ತು ಮಕ್ಕಳನ್ನು ದತ್ತು ಸ್ವೀಕಾರ ಕೇಂದ್ರಕ್ಕೆ ಕಳುಹಿಸಿ ಮಗುವಿನ ಹಾರೈಕೆ ಮತ್ತು ಮಕ್ಕಳ ಲಾಲನೆ ಪಾಲನೆ ಬಗ್ಗೆ ಕ್ರಮ ವಹಿಸಲಾಗುತ್ತದೆ. ಅಲ್ಲದೇ, ಸರ್ಕಾರದ ಸೌಲಭ್ಯ ಕಲ್ಪಿಸಲು ಅಗತ್ಯ ಕ್ರಮ ವಹಿಸಲಾಗುವುದು.
-ಜಿ.ಪ್ರದೀಪ್, ಸಿಡಿಪಿಒ, ಮದ್ದೂರು
-ಪುಟ್ಟಸ್ವಾಮಿ ಎಸ್.