Advertisement

ನಿರಾಶ್ರಿತರಿಗೆ ಆಶ್ರಯ ನೀಡದ ಕುಟುಂಬಶ್ರೀ ಆಶ್ರಯ ಯೋಜನೆ

09:42 PM May 13, 2019 | Sriram |

ವಿದ್ಯಾನಗರ: ಹಿಂದುಳಿದ ವರ್ಗ ಹಾಗೂ ಬಡತನ ರೇಖೆಗಿಂತ ಕೆಳಗಿರುವ ಜನರ ಪ್ರಾಥಮಿಕ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಸರಕಾರ ಹತ್ತು ಹಲವು ಯೋಜನೆಗಳನ್ನು ಕೈಗೊಳ್ಳುತ್ತಿದೆಯಾದರೂ ಅವುಗಳಲ್ಲಿ ಹೆಚ್ಚಿನವೂ ಕಾರಣಾಂತರಗಳಿಂದ ಸಕಾಲಕ್ಕೆ ಜನರಿಗೆ ತಲುಪುವುದಿಲ್ಲ ಎನ್ನುವುದು ವಾಸ್ತವ.ವಹಿಸಿಕೊಂಡವರಿಗೆ ಪ್ರಾರಂಭದಲ್ಲಿ ಇದ್ದ ಆಸಕ್ತಿ ಹಾಗೂ ಉತ್ಸಾಹ ಜವಾಬ್ದಾರಿ ಕ್ರಮೇಣ ಮಾಯವಾಗಿ ಪದ್ಧತಿಯ ಕಾಮಗಾರಿ ಕೆಲಸಗಳು ಅರ್ಧದಲ್ಲೇ ಸ್ಥಗಿತಕೊಂಡು ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗುವುದಕ್ಕೆ ಅದೆಷ್ಟೋ ಉದಾಹರಣೆಗಳಿವೆ.ಜಿಲ್ಲೆಯ ಜೆ.ಪಿ. ಕಾಲನಿ ಸಮೀಪ ಕುಟುಂಬಶ್ರೀಯ ನೇತೃತ್ವದಲ್ಲಿ ಆರಂಭಿಸಿದ ಆಶ್ರಯ ಯೋಜನೆಯೂ ಇದಕ್ಕೆ ಹೊರತಾಗಿಲ್ಲ.

Advertisement

ಬಡತನ ರೇಖೆಗಿಂತ ಕೆಳಗಿರುವ ವಿಧವೆಯರಿಗೆ, ಶಾರೀರಿಕ ಬೌದ್ಧಿಕ ಅನಾರೋಗ್ಯದಿಂದ ಹಾಸಿಗೆ ಹಿಡಿದ ಮಕ್ಕಳಿಗೆ ಭದ್ರತೆಯನ್ನು ಒದಗಿಸುವ ನಿಟ್ಟಿನಲ್ಲಿ ಕುಟುಂಬಶ್ರೀಯ ಆಶ್ರಯ ವಸತಿ ಯೋಜನೆಯ ಕೈಕೆಳಗೆ ಮನೆಗಳನ್ನು ನಿರ್ಮಿಸಿ ನೀಡಲಾಗುತ್ತದೆ. ಇದಕ್ಕಾಗಿ ಪ್ರತಿ ಪಂಚಾಯತಿ ಹಾಗೂ ನಗರಾಡಳಿತ ಪ್ರದೇಶಗಳಲ್ಲಿ ಪ್ರತ್ಯೇಕ ಸರ್ವೆ ನಡೆಸಿ ಈ ಪದ್ಧತಿಯ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆದರೆ ಕಾಸರಗೋಡು ಜಿಲ್ಲೆಯ ಮೀಪುಗುರಿ ಜೆ.ಪಿ. ಕಾಲನಿಯ ಪಕ್ಕದಲ್ಲಿ ನಿರ್ಮಿಸಲಾದ 14 ಮನೆಗಳು ಇನ್ನೂ ಅರ್ಹರಿಗೆ ಆಶ್ರಯ ನೀಡುವಲ್ಲಿ ವಿಫಲವಾಗಿದೆ. ಈ ಮನೆಗಳ ಕಾಮಗಾರಿಯು ಅರ್ಧದಲ್ಲೇ ಸ್ಥಗಿತಗೊಂಡಿರುವುದೇ ಇದಕ್ಕೆ ಪ್ರಧಾನ ಕಾರಣ. ಮನೆ ನಿರ್ಮಾಣ ಕೆಲಸವು ಪೂರ್ಣಗೊಂಡಿದೆಯಾದರೂ ಸಾರಣೆ ಹಾಗೂ ವಿದ್ಯುತ್‌ ಸಂಪರ್ಕ ನೀಡುವ ಕೆಲಸ ಬಾಕಿಯಿದೆ. ಬಾಗಿಲುಗಳನ್ನು ಅಳವಡಿಸುವ ಕೆಲಸವೂ ಬಾಕಿಯಿದೆ.

ಆಶ್ರಯ ವಸತಿ ಯೋಜನೆಯ ಗುತ್ತಿಗೆ ಪಡೆದ ಗುತ್ತಿಗೆದಾರರು ಮಂಜೂರಾದ ಮೊತ್ತದಲ್ಲಿ ಆಗುವಷ್ಟು ಕಾಮಗಾರಿಯನ್ನು ನಾಲ್ಕು ವರ್ಷಗಳ ಹಿಂದೆಯೇ ಪೂರ್ತಿಗೊಳಿಸಿದ್ದು ಬಾಕಿ ಕೆಲಸಕ್ಕಾಗಿ ಒಂದೊಂದು ಮನೆಗಳಿಗೆ ಅಂದಾಜು ಒಂದೊಂದು ಲಕ್ಷದಂತೆ ಸರಿಸುಮಾರು 14ಲಕ್ಷದಷ್ಟು ಮೊತ್ತ ಕುಟುಂಬಶ್ರೀ ನೀಡಿದಲ್ಲಿ ಮಾತ್ರವೇ ಮನೆಯ ಕಾಮಗಾರಿಯನ್ನು ಪೂರ್ತಿಗೊಳಿಸಲು ಸಾಧ್ಯ ಎನ್ನುತ್ತಿದ್ದಾರೆ. ಆದರೆ ಅಗತ್ಯದ ಹಣವನ್ನು ಮಂಜೂರು ಮಾಡುವಲ್ಲಿ ತೋರುವ ನಿರಾಸಕ್ತಿ ಹಾಗೂ ನಗರ ಸಭೆಯ ಅನಾಸ್ಥೆಯಿಂದಾಗಿ ಇದರ ಫಲಾನುಭವಿಗಳು ಕಷ್ಟಪಡುವಂತಾಗಿದೆ.

ಆಶ್ರಯ ಯೋಜನೆಯ ಸಮರ್ಥ ನಿರ್ವಹಣೆಗಾಗಿ ಫಲಾನುಭವಿಗಳ ಸಮಿತಿಯನ್ನೂ ರೂಪೀಕರಿಸಲಾಗಿದೆಯಾದರೂ ಅದರಿಂದ ಏನೂ ಪ್ರಯೋಜನ ಇರುವಂತೆ ತೋರುವುದಿಲ್ಲ. ಈ ಮನೆಗಳ ಸುತ್ತ ಹುಲ್ಲು ಹಾಗೂ ಗಿಡಗಳು ಬೆಳೆದಿದ್ದು ಮಳೆ ಪ್ರಾರಂಭವಾದರೆ ಈ ಪ್ರದೇಶ ಗಿಡಮರಗಳಿಂದ ಮರೆಯಾಗಿ ಅಸ್ತಿತ್ವವನ್ನೇ ಕಳೆದುಕೊಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲ. ಒಟ್ಟಿನಲ್ಲಿ ನಿರಾಶ್ರಿತರ ಪಾಲಿಗೆ ಇನ್ನೂ ಇದೊಂದು ಕನಸಾಗಿ ಕಾಡುತ್ತಿದೆ.ಮುಂದಿನ ದಿನಗಳಲ್ಲಾದರೂ ಈ ಆಶ್ರಯ ಯೋಜನೆಯ ಕೆಲಸ ಪೂರ್ತಿಯಾಗಿ ಭರವಸೆಯೇ ಬತ್ತಿದ ನೊಂದ ಕುಟುಂಬಗಳಿಗೆ ನೆಮ್ಮದಿಯ ನೆರಳು ನೀಡಬಹುದೇ?

ಕ್ರಮ ಕೈಗೊಂಡಿಲ್ಲ
ನಗರ ಸಭೆಯಲ್ಲಿ ಹಲವಾರು ಬಾರಿ ಈ ಮನೆಗಳ ಬಗ್ಗೆ ಪ್ರಸ್ತಾವಿಸಲಾಗಿದೆಯಾದರೂ ಇವುಗಳ ಬಾಕಿ ಉಳಿದಿರುವ ಕೆಲಸ ಪೂರ್ತಿಗೊಳಿಸುವಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಸ್ಪಷ್ಟ ಉತ್ತರವನ್ನೂ ಸಂಬಂಧಪಟ್ಟವರು ನೀಡುವುದಿಲ್ಲ. ಹಾಗೆಯೇ ಬೆನಿಫಿಶಿಯರಿ ಸಮಿತಿಯ ಮೌನ ಆಶ್ರಯ ಯೋಜನೆ ಫಲಾನುಭವಿಗಳಿಗೆ ದೊರಕುವಲ್ಲಿ ವಿಳಂಬವಾಗಲು ಕಾರಣವಾಗಿದೆ.
– ಶಂಕರ, ವಾರ್ಡ್‌ ಸದಸ್ಯರು

Advertisement

-ವಿದ್ಯಾಗಣೇಶ್‌ ಅಣಂಗೂರು

Advertisement

Udayavani is now on Telegram. Click here to join our channel and stay updated with the latest news.

Next