Advertisement

ವಿಮೆಯಿಂದ ಕುಟುಂಬ ರಕ್ಷಣೆ: ಸಿದ್ಧಲಿಂಗಪ್ಪ

04:04 PM Oct 01, 2018 | |

ನಾಯಕನಹಟ್ಟಿ: ವಿಮೆ ಮಾಡಿಸುವುದರಿಂದ ಉಳಿತಾಯದ ಜತೆಗೆ ಕುಟುಂಬದ ರಕ್ಷಣೆಯೂ ಸಾಧ್ಯ ಎಂದು ಆರ್ಥಿಕ ಸಲಹೆಗಾರ ಟಿ. ಸಿದ್ಧಲಿಂಗಪ್ಪ ಹೇಳಿದರು.

Advertisement

ಭಾನುವಾರ ಪಟ್ಟಣದ ಮೈರಾಡ ಸಂಪನ್ಮೂಲ ಕೇಂದ್ರದಲ್ಲಿ ಏರ್ಪಡಿಸಿದ್ದ ಸಮುದಾಯ ನಿರ್ವಹಿತ ಸಂಘದ ಏಳನೇ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು. ಕೇಂದ್ರ ಸರ್ಕಾರ ಕುಟುಂಬ ವಿಮೆ ಸೌಲಭ್ಯ ನೀಡುತ್ತಿದೆ. ಜತೆಗೆ ದೇಶದ ಪ್ರತಿ ವ್ಯಕ್ತಿ ಉಳಿತಾಯ ಖಾತೆ ಹೊಂದಿರಬೇಕು ಎನ್ನುವ ಉದ್ದೇಶದಿಂದ ಜನಧನ್‌ ಯೋಜನೆಯನ್ನು
ಜಾರಿಗೊಳಿಸಲಾಗಿದೆ. ಅಲ್ಲದೆ ಪಿಂಚಣಿ ಯೋಜನೆಯನ್ನೂ ಅನುಷ್ಠಾನಗೊಳಿಸಲಾಗಿದೆ. 

ಸಂಘಗಳು ಇದರ ಸದುಪಯೋಗ ಪಡೆಯಬೇಕು. ಕೇವಲ ಸಾಲ ಪಡೆಯುವ ಉದ್ದೇಶವನ್ನು ಹೊಂದಿರಬಾರದು. ಜತೆಗೆ ಕುಟುಂಬಕ್ಕಾಗಿ ಉಳಿತಾಯವನ್ನು ರೂಢಿಸಿಕೊಳ್ಳಬೇಕು. ವೈಯಕ್ತಿಕ ಹಾಗೂ ಕುಟುಂಬದ ಹಿತಕ್ಕಾಗಿ ಉಳಿತಾಯ
ಮಾಡಬೇಕು. ಇದರಿಂದ ದಿಢೀರ್‌ ಎದುರಾಗುವ ಆರ್ಥಿಕ ಸಮಸ್ಯೆಗಳನ್ನು ಎದುರಿಸಬಹುದು ಎಂದು ಅಭಿಪ್ರಾಯಪಟ್ಟರು.

ವೈಯಕ್ತಿಕವಾಗಿ ಬ್ಯಾಂಕ್‌ಗಳು ಸಾಲ ನೀಡಲು ಸಾಧ್ಯವಿಲ್ಲ. ಆದರೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಸಂಘಗಳಿಗೆ ಸಾಲವನ್ನು ನಿರಾಕರಿಸಲು ಸಾಧ್ಯವಿಲ್ಲ. ಹೀಗಾಗಿ ಸ್ವಸಹಾಯ ಸಂಘಗಳು ಸಾಲ ಪಡೆದ ಹಣವನ್ನು ಲಾಭ ಆಗುವ ಕಾರ್ಯಗಳಿಗೆ ಮಾತ್ರ ಬಳಸಿಕೊಳ್ಳಬೇಕು.

ನಿಯಮಿತವಾಗಿ ಸಾಲ ಮರುಪಾವತಿ ಮಾಡುವುದರಿಂದ ಬ್ಯಾಂಕ್‌ಗಳಿಗೆ ಸಾಲ ಪಡೆದ ವ್ಯಕ್ತಿಗಳ ಮೇಲೆ ನಂಬಿಕೆ ಉಂಟಾಗುತ್ತದೆ. ಪ್ರಧಾನಮಂತ್ರಿಯವರ ಜನಧನ್‌ ಹಾಗೂ ಆಯುಷ್ಮಾನ್‌ ಯೋಜನೆಗಳಲ್ಲಿ ಮಹಿಳೆಯರು ಹೆಸರು ನೋಂದಾಯಿಸಿಕೊಳ್ಳಬೇಕು ಎಂದರು. 

Advertisement

ಮೈರಾಡ ಕಾರ್ಯಕ್ರಮಾಧಿಕಾರಿ ಸಿ.ಎಸ್‌. ಗೌಡರ್‌ ಮಾತನಾಡಿ, ಸಮಾಜದಲ್ಲಿ ಸಂಘಗಳ ಮಹತ್ವ ಹೆಚ್ಚುತ್ತಿದೆ. ಹೀಗಾಗಿ ಸಂಘಗಳನ್ನು ನಿರ್ವಹಿಸುತ್ತಿರುವ ಸಂಸ್ಥೆಗಳು ಹೆಚ್ಚಾಗುತ್ತಿವೆ. ಆದರೆ ಮಹಿಳೆಯರು ಎರಡು ಸಂಘಗಳಿಗೆ ಸದಸ್ಯರಾಗಬಾರದು.

ಸಾಲ ಪಡೆಯುವ ಉದ್ದೇಶಕ್ಕಾಗಿ ಈ ರೀತಿ ಮಾಡುವುದು ಸರಿಯಲ್ಲ. ಇದರಿಂದ ಎರಡೂ ಸಂಘಗಳಲ್ಲಿ ಅಂತಹ ಸದಸ್ಯರ ಬಗ್ಗೆ ನಂಬಿಕೆ ಹಾಗೂ ವಿಶ್ವಾಸಾರ್ಹತೆ ಇರುವುದಿಲ್ಲ. ಸಂಘದ ಸದಸ್ಯರು ವಿಮೆ ಮಾಡುವುದಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಇದರಿಂದ ಅಕಸ್ಮಿಕ ಘಟನೆಗಳಲ್ಲಿ ಕುಟುಂಬಕ್ಕೆ ಆರ್ಥಿಕ ಸಹಾಯ ದೊರೆಯುತ್ತದೆ. ಕೇಂದ್ರ ಸರ್ಕಾರದ
ಪಿಂಚಣಿ ಯೋಜನೆಯ ಬಗ್ಗೆ ಮಹಿಳೆಯರು ಮಾಹಿತಿ ಹೊಂದಬೇಕು. ವಿಮೆ, ಉಳಿತಾಯ ಸೇರಿದಂತೆ ಸೌಲಭ್ಯ ಹೊಂದುವ ಯೋಜನೆಗಳನ್ನು ಸಂಘದ ಸಭೆಯಲ್ಲಿ ಚರ್ಚಿಸಬೇಕು ಎಂದು ಸಲಹೆ ನೀಡಿದರು.

ಪಪಂ ಅಧ್ಯಕ್ಷೆ ನೀಲಮ್ಮ, ಮೈರಾಡ ಸಂಪನ್ಮೂಲ ಕೇಂದ್ರದ ವ್ಯವಸ್ಥಾಪಕ ಆಶೋಕ್‌ ಹಗೆದಾಳ್‌, ಪದಾಧಿಕಾರಿಗಳಾದ ಎಂ. ಗೀತಾ, ಭಾಗ್ಯಮ್ಮ, ಹೇಮಲತಾ, ಸಿಬ್ಬಂದಿಗಳಾದ ಎಚ್‌.ಬಿ. ತಿಪ್ಪೇಸ್ವಾಮಿ, ಟಿ.ಒ. ಲಕ್ಷ್ಮೀ, ಎ.ಬಿ. ಕೇಶವರಾಜು, ಬಿ.ಸಿ. ಬಾಲಯ್ಯ, ವಿಜಯಮ್ಮ ಮತ್ತಿತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next