ಕಾರ್ಕಳ: ಸಾಣೂರು ಗ್ರಾಮದ ಶುಂಠಿಗುಡ್ಡೆಯ ರಬ್ಬರ್ ತೋಟದಲ್ಲಿ ಸುಟ್ಟ ಸ್ಥಿತಿಯಲ್ಲಿ ಕೂಲಿ ಕಾರ್ಮಿಕ ಕೇರಳ ಮೂಲದ ಮಲಪ್ಪುರಂ ಗೋಪಿ (60) ಎಂಬವರ ಶವ ಅ.19ರಂದು ಪತ್ತೆಯಾಗಿದೆ.
ಘಟನೆ ವಿವರ:
ಉದ್ಯಮಿ ವಿವೇಕಾನಂದ ಶೆಣೈ ಎಂಬವರು ಸಾಣೂರು ಗ್ರಾಮದ ಶುಂಠಿಗುಡ್ಡೆ ಎಂಬಲ್ಲಿ ಕೇರಳದ ಬಿಜು ಥೋಮಸ್ ಎಂಬವರ ಜೊತೆ ಕರಾರು ಮೂಲಕ ರಬ್ಬರ್ ಪ್ಲಾಂಟೇಶನ್ ಪಡೆದುಕೊಂಡು ವ್ಯವಹಾರ ನಡೆಸುತ್ತಿದ್ದರು. ಪ್ಲಾಂಟೇಶನ್‌ನ ಉಸ್ತುವಾರಿಯನ್ನು ಹವಾಲ್ದಾರ್ ಬೆಟ್ಟುವಿನ ದಿಲೀಪ್ ನೋಡಿಕೊಳ್ಳುತ್ತಿದ್ದರು. ಅ.19ರಂದು ಬೆಳಗ್ಗೆ 9 ಗಂಟೆಗೆ ವಸಂತ ಎಂಬವರು ಗ್ರಾಸ್ ಕಟ್ಟಿಂಗ್ ಮಾಡಲು ರಬ್ಬರ್ ತೋಟಕ್ಕೆ ಹೋದಾಗ ಅಲ್ಲಿನ ಶೆಡ್ ಅನ್ನು ಒಳಗಿನಿಂದ ಬೀಗ ಹಾಕಲಾಗಿತ್ತು. ಕೆಲಸದವರನ್ನು ಕೂಗಿ ಕರೆದಾಗ ಯಾರು ಕಂಡುಬರಲಿಲ್ಲ. ಈ ಬಗ್ಗೆ ದಿಲೀಪರಿಗೆ ಕರೆ ಮಾಡಿ ಬೀಗ ಹಾಕಿಕೊಂಡಿರುವುದಾಗಿ ಇಲ್ಲಿ ಯಾರು ಇಲ್ಲ ಎಂಬುದಾಗಿ ತಿಳಿಸಿದ್ದರು. ಸ್ವಲ್ಪ ದೂರದಲ್ಲಿ ರಸ್ತೆಯಲ್ಲಿ ಹೋದಾಗ ಪಕ್ಕದ ದಾರಿ ಮಧ್ಯೆ ಸುಟ್ಟ ಗಾಯಗಳೊಂದಿಗೆ ಮೃತದೇಹವೊಂದು ಕಂಡು ಬಂದಿದೆ. ಅವರಿಂದ ದಿಲೀಪರಿಗೆ ಮಾಹಿತಿ ಹೋಗಿ ಅವರು ಠಾಣೆಗೆ ಮಾಹಿತಿ ನೀಡಿದ ಮೇರೆಗೆ ಪೊಲೀಸರು ಸ್ಥಳಕ್ಕೆ ವಿವೆಕಾನಂಧ ಶೆಣೈ ಜತೆಗೆ ತೆರಳಿ ಬೀಗ ತೆಗೆದು ಒಳ ಹೋಗಿ ಪರಿಶೀಲಿಸಿದಾಗ ಅದು ಕಾರ್ಮಿಕ ಗೋಪಿರವರ ಮೃತದೇಹ ಎನ್ನುವುದು ತಿಳಿದು ಬಂದಿದೆ. ಮೃತದೇಹದ ಹತ್ತಿರ ಸಿಗರ್ ಲೈಟರ್ ಹಾಗೂ ಪೆಟ್ರೋಲ್ ಕ್ಯಾನ್ ಮುಚ್ಚಳ ಕಂಡು ಬಂದಿದೆ. ದಿಲೀಪರವರು ಹಿಂದಿನ ದಿನ ಅ.18ರಂದು ಸಂಜೆ 5.30ಕ್ಕೆ ಗೋಪಿಗೆ ಕರೆ ಮಾಡಿದ್ದು ಆರಂಭದಲ್ಲಿ ಆತ ಕರೆ ಸ್ವೀಕರಿಸಿರಲಿಲ್ಲ. ಸ್ವಲ್ಪ ಹೊತ್ತಿನಲ್ಲಿ ಹಿಂತುರುಗಿ ಕರೆ ಮಾಡಿ ಮಾತನಾಡಿದ್ದ.
ಸಹಚರ ಹೆದರಿ ಓಡಿ ಹೋದನೆ? :
ಗೋಪಿ ಹಾಗೂ ಬಾಹುಲೇಯನ್ ಒಂದೆ ಕಡೆ ಕೆಲಸಕ್ಕಿದ್ದರು. ವಾರದ ಹಿಂದೆ ಇಬ್ಬರು ಊರಿಗೆ ಹೋಗಿದ್ದು ಕಳೆದ ಮಂಗಳವಾರ ವಾಪಾಸ್ ಬಂದು ಕೆಲಸಕ್ಕೆ ಹಾಜರಾಗಿದ್ದರು ಎನ್ನಲಾಗಿದೆ. ಇಬ್ಬರು ಕೇರಳ ರಾಜ್ಯದವರಾದರೂ ಪ್ರತ್ಯೇಕ ಜಿಲ್ಲೆಯವರು. ಬಾಹುಲೇಯನ್ ವಯನಾಡ್ ಜಿಲ್ಲೆಯವನು. ಗೋಪಿ ಶವ ಕಂಡು ಬಂದ ಬೆನ್ನಲ್ಲೆ ಬಾಹುಲೇಯನ್ ನಾಪತ್ತೆಯಾಗಿದ್ದು ಘಟನೆ ಬಳಿಕ ಆತನ ಮೋಬೈಲ್ ಸ್ವಿಚ್ ಆಫ್ ಆಗಿರುವುದು ಕಂಡು ಬಂದಿದೆ. ಇದು ಆತನ ಮೇಲೆ ಅನುಮಾನ ಬರುವಂತೆ ಮಾಡಿದ್ದರೂ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಆತ ಘಟನೆ ವೇಳೆ ಭಯದಿಂದ ಓಡಿ ಹೋಗಿರುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗಿದೆ.
ಕೌಟುಂಬಿಕ ಸಮಸ್ಯೆ, ಆತ್ಮಹತ್ಯೆ ಶಂಕೆ:
ಗೋಪಿ ಶವದ ಮಹಜರು ನಡೆಸಿದ ವೈದ್ಯರು ಮೃತ ದೇಹದಲ್ಲಿ ಯಾವುದೇ ಗಾಯಗಳಿಲ್ಲ ಎಂದು ತಿಳಿಸಿದ್ದಾರೆ. ಇದು ಕೊಲೆಯ ಬದಲು ಆತ್ಮಹತ್ಯೆ ಎಂದು ಅಂದಾಜಿಸಲಾಗುತ್ತಿದೆ. ಗೋಪಿ ಕೌಟುಂಬಿಕ ಸಮಸ್ಯೆಗೆ ಒಳಗಾಗಿದ್ದು ಪತ್ನಿ ಕ್ಯಾನ್ಸರ್‌ನಿಂದ ಬಳಲುತ್ತಿರುವುದು ಹಾಗೂ ಪುತ್ರಿಯ ಡೈವರ್ಸ್ ಪ್ರಕರಣದಿಂದ ಆತ ನೊಂದಿದ್ದ ಎನ್ನಲಾಗಿದೆ. ಕುಟುಂಬಸ್ಥರ ಜತೆ ಈ ಹಿಂದೆಯೇ ಹಲವು ಬಾರಿ ಆತ್ಮಹತ್ಯೆ ಬಗ್ಗೆ ಹೇಳಿಕೊಂಡಿದ್ದ. ಎಂದು ತಿಳಿದು ಬಂದಿದ್ದು ಮನನೊಂದು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಮೃತನಿಗೆ ಓರ್ವ ಪುತ್ರನಿದ್ದಾನೆ. ಘಟನೆ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.