ಕೊಪ್ಪಳ: ಲೋಕಸಭಾ ಚುನಾವಣಾ ಕಾವು ಚುರುಕುಗೊಂಡಿದೆ. ಅದರಲ್ಲೂ ರಾಜ್ಯ ರಾಜಕೀಯದಲ್ಲಿ ಕುಟುಂಬ ರಾಜಕಾರಣದ್ದೇ ಸದ್ದು. ಕೊಪ್ಪಳದ ರಾಜಕಾರಣವೂ ಇದಕ್ಕೆ ಹೊರತಾಗಿಲ್ಲ. ವಿಧಾನಸಭಾ ಕ್ಷೇತ್ರದಿಂದ ಹಿಡಿದು ಲೋಕಸಭಾ ಕ್ಷೇತ್ರದವರೆಗೂ ಟಿಕೆಟ್‌ಗೆ ಕರಡಿ-ಹಿಟ್ನಾಳ ಕುಟುಂಬವೇ ಪಾರುಪತ್ಯ ಹೊಂದಿದೆ.
ಕೊಪ್ಪಳದಲ್ಲಿ ಕಳೆದ 20 ವರ್ಷಗಳಿಂದ ಕರಡಿ-ಹಿಟ್ನಾಳ ಕುಟುಂಬವೇ ಹೆಚ್ಚಾಗಿ ರಾಜಕಾರಣ ಮಾಡುತ್ತಿದೆ. ಇಲ್ಲಿನ ರಾಜಕಾರಣ ಈ ಎರಡೇ ಕುಟುಂಬದ ಹಿಡಿತದಲ್ಲಿದೆ. ಅಲ್ಲದೇ ಇವರು ಪ್ರಬಲ ಸಮುದಾಯದವರಾಗಿದ್ದರಿಂದ ಹಿಡಿತ ಇನ್ನೂ ಸಡಿಲಗೊಳಿಸಿಲ್ಲ.
ಕರಡಿ ಕುಟುಂಬದ ಲೆಕ್ಕಾಚಾರ ಗಮನಿಸಿದರೆ, ಈ ಹಿಂದೆ ಸಂಗಣ್ಣ ಕರಡಿ ಅವರು ನಾಲ್ಕು ಬಾರಿಕೊಪ್ಪಳ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ ಯಾಗಿದ್ದಾರೆ. ಪ್ರಸ್ತುತ ಬಿಜೆಪಿಯಿಂದ ಸಂಸದರಾಗಿ ಆಯ್ಕೆಯಾಗಿ ಅವಧಿ ಪೂರ್ಣ ಗೊಳಿಸಿದ್ದಾರೆ. ಆದರೆ, ಅವರ ಪುತ್ರ ಅಮರೇಶ ಕರಡಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿದು ಅಲ್ಪ ಮತಗಳ ಅಂತರದಲ್ಲಿ ಸೋತಿದ್ದರು. ಮತ್ತೋರ್ವ ಪುತ್ರ ಗವಿಸಿದ್ದಪ್ಪ ಕರಡಿ ಪ್ರಸ್ತುತ ಜಿಪಂಸದಸ್ಯರಾಗಿದ್ದಾರೆ. ಕಾಂಗ್ರೆಸ್‌ನಲ್ಲಿ ಹಿಟ್ನಾಳ ಕುಟುಂಬದ ಲೆಕ್ಕಾಚಾರ ಗಮನಿಸಿದರೆ ಕೊಪ್ಪಳದಲ್ಲಿ 2004ರಲ್ಲಿ ಬಸವರಾಜ ಹಿಟ್ನಾಳ ಅವರು ಶಾಸಕರಾಗಿ ಒಂದು ಬಾರಿ ಆಯ್ಕೆಯಾಗಿದ್ದರು. ಆದರೆ ನಾಲ್ಕು ಬಾರಿ ವಿಧಾನಸಭೆ ಹಾಗೂ ಒಂದು ಬಾರಿ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದಾರೆ. ಕಳೆದ ಎರಡು ಅವಧಿಗೆ ಅವರ ಪುತ್ರ ರಾಘವೇಂದ್ರ ಹಿಟ್ನಾಳ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಮತ್ತೋರ್ವ ಪುತ್ರ ರಾಜಶೇಖರ ಹಿಟ್ನಾಳ ಜಿಪಂ ಸದಸ್ಯರಾಗಿ, ಅಧ್ಯಕ್ಷರಾಗಿಯೂ ಆಡಳಿತ ನಡೆಸಿ ಪ್ರಸ್ತುತ ಲೋಕಸಭಾ ಚುನಾವಣಾ ಆಕಾಂಕ್ಷಿ ಯಾಗಿದ್ದಾರೆ.
ತಂದೆ-ಮಗ ಫೈಟ್: ಕಾಂಗ್ರೆಸ್‌ನಲ್ಲಿ ಮಾಜಿ ಶಾಸಕ ಬಸವರಾಜ ಹಿಟ್ನಾಳ ಮತ್ತೆ ಲೋಕಸಭಾ ಚುನಾವಣಾ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಕಳೆದ ಎಂಪಿ ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಲ್ಲಿ ಸೋತಿದ್ದೇನೆ. ಈ ಬಾರಿ ಅವಕಾಶ ಕೊಡಿ ಎನ್ನುತ್ತಿದ್ದಾರೆ. ಅಲ್ಲದೇ ಅವರ ಪುತ್ರ ರಾಜಶೇಖರ ಹಿಟ್ನಾಳ ಸಹಿತ ಹೈಕಮಾಂಡ್ ಮಟ್ಟದಲ್ಲಿ ಟಿಕೆಟ್‌ಗೆ ಬೆನ್ನತ್ತಿದ್ದಾರೆ. ಸೀನಿಯರ್ ಕೋಟಾದಡಿ ತಂದೆ ಕೆ. ಬಸವರಾಜ ಹಿಟ್ನಾಳ ಅವರಿಗೆ ಕೊಟ್ಟರೂ ಸಂತೋಷ. ಒಂದು ವೇಳೆ ಯೂತ್ ಕೋಟಾಲೆಕ್ಕಾಚಾರವಾದರೆ ನನಗೇ ಟಿಕೆಟ್ ಕೊಡಿ ಎಂದು ಹೈಕಮಾಂಡ್ ಮಟ್ಟದಲ್ಲಿ ಭಾರೀ ಪ್ರಯತ್ನ ನಡೆಸುತ್ತಿದಾರೆ.
ದತ್ತು ಕುಮಾರ