ಔರಂಗಾಬಾದ್ (ಮಹಾರಾಷ್ಟ್ರ): ಕಳೆದ ವಾರ ನಾಂದೇಡ್ ಜಿಲ್ಲೆಯ ಜಲಪಾತಕ್ಕೆ ಪಿಕ್ನಿಕ್ ಗೆ ಹೋಗಿ ಅನಂತರ ನಾಪತ್ತೆಯಾಗಿದ್ದ ದಂಪತಿ ಮತ್ತು ಅವರ ಅಪ್ರಾಪ್ತ ವಯಸ್ಕ ಮಗ ಜಲಪಾತದ ತಟದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಘಟನೆಯಲ್ಲಿ ನಾಪತ್ತೆಯಾಗಿದ್ದ ನಾಂದೇಡ್ ಮೂಲದ ದುರ್ದೈವಿ ದಂಪತಿಯ ಇಬ್ಬರು ಹೆಣ್ಣುಮಕ್ಕಳು ಇನ್ನೂ ಪತ್ತೆಯಾಗಿಲ್ಲ.
ದಂಪತಿ ತಮ್ಮ ಮೂವರು ಮಕ್ಕಳೊಂದಿಗೆ (11 ವರ್ಷದ ಮಗ ಹಾಗೂ 20 ಮತ್ತು 13 ವರ್ಷ ವಯಸ್ಸಿನ ಇಬ್ಬರು ಪುತ್ರಿಯರು) ಸೆ. 25 ರಂದು ನಾಂದೇಡ್‌ನ ಜನಪ್ರಿಯ ಪಿಕ್ನಿಕ್ ತಾಣವಾದ ಸಹಸ್ತ್ರಕುಂಡ್ ಜಲಪಾತಕ್ಕೆ ಹೋಗಿದ್ದು, ಅಲ್ಲಿಂದ ಕಾಣೆಯಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಮೊದಲಿಗೆ ನಾಂದೇಡ್ ಜಿಲ್ಲೆಯ ಇಸ್ಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶವವೊಂದು ಪತ್ತೆಯಾಗಿದ್ದು, ಅದನ್ನು ಪ್ರವೀಣ್ ವಲ್ಲಮ್‌ಶೇತ್ವಾರ್ (45) ಎಂದು ಗುರುತಿಸಲಾಗಿದೆ.
ಇದನ್ನೂ ಓದಿ:ಯುಪಿಯಲ್ಲಿ ರಾಕ್ಷಸಿ ಸರ್ಕಾರ,ಹಿಟ್ಲರ್ ಪ್ರವೃತ್ತಿ ಆಡಳಿತ ಮತ್ತೆ ಬರುತ್ತಿದೆ:ರಾಮಲಿಂಗಾರೆಡ್ಡಿ
ಯವತ್ಮಾಳ್ ಜಿಲ್ಲೆಯ ಬಿಟರ್ಗಾಂವ್ ಮತ್ತು ದಾರಡಿ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರದೇಶಗಳಿಂದ ಸೆ. 28 ಮತ್ತು 29 ರಂದು ಮತ್ತೆರಡು ಶವಗಳು ಪತ್ತೆಯಾಗಿದ್ದು,ಈ ಶವಗಳನ್ನು ವಲ್ಲಮ್‌ಶೇತ್ವಾರ್ ಅವರ ಪತ್ನಿ (40) ಮತ್ತು ಅಪ್ರಾಪ್ತ ಮಗ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದಂಪತಿಯ ಇಬ್ಬರು ಹೆಣ್ಣುಮಕ್ಕಳು ಇನ್ನೂ ಪತ್ತೆಯಾಗದೆ ಉಳಿದಿದ್ದಾರೆ ಎಂದವರು ಹೇಳಿದ್ದಾರೆ. ಪೇಣಗಂಗಾ ನದಿಯಲ್ಲಿನ ಈ ಜಲಪಾತವು ನಾಂದೇಡ್ ಮತ್ತು ಯವತ್ಮಾಳ್ ಜಿಲ್ಲೆಗಳಲ್ಲಿ ವ್ಯಾಪಿಸಿದೆ.