“”ಆರು ಹೊಡದ್ರೇನಾತು, ಸುಮ್ಮನೆ ಮಲಗು ಇನ್ನೊಂದ್ ತಾಸು”
“”ನಾ ಮಲಗ್ತಿನಿ ಬಿಡ್ರಿ, ನೀವು ವಾಕಿಂಗ್‌ಗೆ ಹೋಗೋದಿಲ್ಲೇನು?”
“”ಆರು ಗಂಟೆಗೆ ವಾಕಿಂಗ್ ಹೋಗ್ಬೇಕು ಅಂತ ನೇಮಿಲ್ಲ. ಸುಮ್ಮನೆ ಮಲಗು” ಇದು ಬಹಳಷ್ಟು ನಿವೃತ್ತ ಜನರ ಮನೆಗಳಲ್ಲಿ ಕೇಳಿಬರುವ ಉದಯರಾಗ ಅಥವಾ ಬೆಳಗಿನ ನಿದ್ದೆಗಣ್ಣಲ್ಲೇ ನಡೆಯುವ ಜುಗಲಬಂದಿ! ಈಗ, ಆರು ಗಂಟೆಗೇನೇ ವಾಕಿಂಗ್ ಹೊರಡಬೇಕು ಅಂತ ನೇಮವಿಲ್ಲ, ಸುಮ್ಮನೆ ಮಲಗು ಎಂದು ಮಡದಿಯನ್ನು ಜಬರಿಸಿಕೊಳ್ಳುವ ಈ ಮಹಾಶಯರು ಬೆಳಗಿನ ಆರು ಗಂಟೆಯ ಮೊದಲೇ ಮುಖಮಾರ್ಜನ ಮಾಡಿ, ಬಟ್ಟೆ ಬದಲಿಸಿ, ಅಂಗಳಕ್ಕಿಳಿಯುವ ಕಾಲವೊಂದಿತ್ತು! ಈಗ ಬೆಳಗಿನ ಆರು ಹೊಡೆದು ಹೋದರೂ ತಾನು ಮಲಗುವುದಲ್ಲದೆ, ಮಡದಿಯೂ ಮಲಗುವಂತೆ ಒತ್ತಾಯಿಸುವ ಈ ಸಜ್ಜನರು ಇಷ್ಟೊತ್ತಿಗಾಗಲೇ ಹತ್ತು-ಹತ್ತು “ಗುಡ್ ಮಾರ್ನಿಂಗ್ ಸಾರ್’ ಎಂಬ ಶುಭಾಶಯಗಳನ್ನು ಸ್ವೀಕರಿಸಿ, ತಾವೂ ಅಷ್ಟೇ ಹುರುಪಿನಿಂದ ಅವರಿಗೆ ಉತ್ತರ ನೀಡಿ, ವೇಗದಿಂದಲೇ ಮುಂದುವರಿಯುತ್ತಿದ್ದ ಆ “ಜಮಾನಾ’ ಎಲ್ಲಿ ಹೋಯ್ತು? ಆ ದಿನಗಳನು ನೆನೆದುಕೊಂಡು ಈ ನಿವೃತ್ತ ಮಹಾಶಯರು ಒಮ್ಮೊಮ್ಮೆ ಮನಸ್ಸಿನಲ್ಲೇ ಮುಗುಳು ನಗುತ್ತಾರೆ. ವಾಕಿಂಗ್ ಮಾಡುವಾಗ ಎದುರಾಗುತ್ತಿದ್ದ ಪರಿಚಿತ ಗಂಡು-ಹೆಣ್ಣು ಚಹರೆಗಳನ್ನು ನೆನಪಿಸಿಕೊಂಡು, ಅವರೊಡನೆ ನಡೆದ ಸಂಭಾಷಣೆಗಳನ್ನು ಪೆಪ್ಪರಮೆಂಟಿನಂತೆ ಮುದದಿಂದಲೇ ಮೆಲುಕು ಹಾಕುತ್ತಾರೆ! ಆದರೆ, ಈಗೀಗ “”ಬೆಳಗಾತು ಏಳ್ರಿ” ಎಂದು ಮಡದಿ ಎಬ್ಬಿಸಿದರೆ ಮಾತ್ರ ಬೇಸರಪಟ್ಟು, ಆಕಾಶವನ್ನೇ ನುಂಗುವ ಹಾಗೆ ದೊಡ್ಡದಾಗಿ ಆಕಳಿಸಿ, ಮಗ್ಗಲು ಬದಲಾಯಿಸಿ, ಮುಖದ ಮೇಲೆ ಮತ್ತಿಷ್ಟು ಚದ್ದರ್ ಎಳೆದುಕೊಳ್ಳುತ್ತಾರೆ!
Advertisement
ಹೀಗೆ, ಬೆಳಗಾದರೂ ಕಣ್ಣು ಬಿಡದ ಸೂರ್ಯವಂಶಜರು ಕೇವಲ ಪಿಂಚಣಿದಾರರೇ ಎಂದು ಭಾವಿಸಬೇಕಾಗಿಲ್ಲ. ತಡಮಾಡಿ ಎದ್ದು , ತಾನು ತಡವಾಗಿ ಎದ್ದುದಕ್ಕೆ ಇತರರ ಮೇಲೆಯೇ ತಪ್ಪು ಹೊರಿಸುವ ಬುದ್ಧಿವಂತರಿಗೇನು ಕಡಿಮೆಯಿಲ್ಲ. ಬದುಕಿನಲ್ಲಿ ಉತ್ಸಾಹವೇ ಇಲ್ಲದ ಆಲಸಿಗಳ ವರ್ಗವೇ ಉಂಟು. ಬೆಳಿಗ್ಗೆ ಏಳುವುದರಲ್ಲಿ ಮಾತ್ರವಲ್ಲ , ಎದ್ದ ನಂತರದ ಪ್ರತಿಯೊಂದು ಕೆಲಸ-ಕಾರ್ಯದಲ್ಲೂ ಅವರು ನಿಧಾನ. ಮಾಡುವ ಕೆಲಸದಲ್ಲಿ ತನ್ಮಯತೆಯಿಲ್ಲದೆ, ಕೆಲಸದ ಗುಣಮಟ್ಟದ ಬಗ್ಗೆ ಗಮನವಿಲ್ಲದೆ, ಅಂತಿಮ ಪರಿಣಾಮದ ಬಗ್ಗೆ ಕಾಳಜಿಯಿಲ್ಲದೆ, ಕೀಲಿ ಕೊಟ್ಟೊಡನೆ ಕೆಲಸಕ್ಕೆ ತೊಡಗುವ ಯಂತ್ರದಂತೆ ದುಡಿದು ಮನೆ ಸೇರುವ ಜನರ ಖಾನೇಸುಮಾರಿಯನ್ನು ಯಾರೂ ಮಾಡಿಲ್ಲ, ಮಾಡುವುದು ಸಾಧ್ಯವೂ ಇಲ್ಲ. ಯಾಕೆಂದರೆ, ಹಾಗೆ ಆಲಸಿಗಳ ಖಾನೇಸುಮಾರಿ ಮಾಡಬೇಕಾದವರೇ ಆಲಸಿಗಳಾಗಿದ್ದರೆ ಅವರ ಪರಿಶ್ರಮದ ಪರಿಣಾಮ ಹೊರಬೀಳುವುದು ಯಾವ ಜನ್ಮದಲ್ಲಿಯೋ!
Related Articles
Advertisement
ಮಾನವನ ಬದುಕನ್ನು ತೀರ ಹಗುರಾಗಿ ಭಾವಿಸಿಕೊಂಡವರ ಕುರಿತಾಗಿಯೇ ನಾನೆಂದೋ ಒಂದು ಕವಿತೆ ಬರೆದದ್ದು ಇಲ್ಲಿ ಪ್ರಸ್ತುತವೆನಿಸುತ್ತದೆ. ಅದರ ಆರಂಭದ ಸಾಲುಗಳು ಹೀಗಿವೆ:“ಆದೇಶ ಬಂದೊಡನೆ “ಆ’ ಎಂದು ಆಕಳಿಸಿ
ಜೈ ಎಂದು ಮೆರವಣಿಗೆ ಹೊರಡುವವರು
ಯಾ ದೇಶದುದ್ಧಾರ ಮಾಡುವವರು?
ಗಡಿಯಾರ ಹೊಡೆಯದೆಯೆ ಗಂಟೆ ಏಳೆಂದು
ರವಿಯುದಯ ಕಣ್ಣಾರೆ ಕಂಡರೂ ಮಲಗುವರು
ಎದ್ದ ಮೇಲೇನು ಮಹಾ ಸಾಧಿಸುವರು?
ಪ್ರಕೃತಿಯಂಗಳದಲ್ಲಿ ಮಧುಮಾಸ ರಂಗವಲಿ
ಹಾಕಿದರೂ ಕೆಲೆಂಡರದಂಕಿ ಎಣಿಸುವವರು
ಆದೇಶ ಬಂದೊಡನೆ “ಆ’ ಎಂದು ಆಕಳಿಸಿ
ಜೈ ಎಂದು ಮೆರವಣಿಗೆ ಹೊರಡುವವರು
ಯಾ ದೇಶದುದ್ಧಾರ ಮಾಡುವವರು?”
ಸ್ವಯಂಪ್ರೇರಣೆ, ಸ್ವಯಂ ಕಾರ್ಯೋತ್ಸಾಹ ಹಾಗೂ ಸ್ವಯಂ ಸಂಕಲ್ಪವಿಲ್ಲದೆ ನಮ್ಮ ಯಾವ ಕೆಲಸವೂ ಸಿದ್ಧಿಸಲಾರದು. ಯಾರೋ ಹೇಳಿದ್ದೆಂದು, ಹೇಗಾದರೂ ಮಾಡಿ ಮುಗಿಸುವ ಯಾವ ಕಾರ್ಯವೂ ಸಫಲವೆನಿಸಲಾರದು. ಮುಖ್ಯವಾಗಿ, ಮನುಷ್ಯ ತನ್ನ ಶಾರೀರಿಕ ಮತ್ತು ಮಾನಸಿಕ ಆಲಸ್ಯತನವನ್ನು ತೊಡೆದು ಹಾಕದೆ ಅವನಲ್ಲಿ ತನ್ನ ಕಾರ್ಯ-ಚಟುವಟಿಕೆಗಳ ಕುರಿತು ಲವಲವಿಕೆ ಹುಟ್ಟುವುದೇ ಸಾಧ್ಯವಿಲ್ಲ! ಆತ ಸಾಧ್ಯವಿದ್ದಲ್ಲೆಲ್ಲ ಆಲಸ್ಯತನ ಅಥವಾ ಸೋಮಾರಿತನವನ್ನೇ ಹಾಸಿ ಹೊದ್ದು ಬೆಚ್ಚಗೆ ಮಲಗುವುದೇ “ಸುಖದ ಗುಟ್ಟು’ ಎಂದು ಭಾವಿಸುತ್ತಾನೆ! ಬಿ. ಎ. ಸನದಿ