Advertisement

ಮುರುಕು ಮನೆಗೆ ಸಿಹಿ ತಂದ ಕೂಡು ಕುಟುಂಬ

09:55 PM Oct 07, 2020 | Karthik A |

ಜೇನು ಸವಿಯನ್ನು ಎಲ್ಲರೂ ಸವಿದಿರುತ್ತಾರೆ. ನನ್ನ ಅಪ್ಪ ಹೊಟೇಲ್‌ ಕಾಯಕದೊಂದಿಗೆ, ಹವ್ಯಾಸವಾಗಿ ಜೇನು ಕೃಷಿ ಮಾಡುತ್ತಿದ್ದರು. ಹೀಗಾಗಿ ಶುದ್ಧ ಜೇನು ಯಥೇಚ್ಛವಾಗಿ ಸಿಗುತ್ತಿತ್ತು. ನಾನು ಅಜ್ಜಿ ಮನೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರಿಂದ ಅಪ್ಪನ ಜೇನು ಪ್ರೀತಿ ನನ್ನ ಅರಿವಿಗೆ ಬಂದಿರಲಿಲ್ಲ.

Advertisement

ಅಪ್ಪ ವರುಷಕ್ಕೆ ಎರಡು ಬಾರಿ ಕಲಬೆರಕೆ ರಹಿತ ಪರಿಶುದ್ಧ ಜೇನು ತೆಗೆದು ಮಾರಾಟ ಮಾಡುತ್ತಿದ್ದರು. ಕ್ರಮೇಣ ಜೇನು ಪೆಟ್ಟಿಗೆಗಳು ಹಳತಾದಂತೆ ಜೇನು ಕೃಷಿಗೆ ಅಂತ್ಯ ಹಾಡಿ, ಆ ಪೆಟ್ಟಿಗೆಗಳನ್ನು ಗೋಣಿಯಲ್ಲಿ ಕಟ್ಟಿ ಅಟ್ಟಕ್ಕೆ ಏರಿಸಿದ್ದರು. ಕೆಲವು ವರ್ಷಗಳ ಹಿಂದೆ ತಂದೆ ತೀರಿಕೊಂಡ ಅನಂತರ ಯಾರೂ ಜೇನಿನ ಗೋಜಿಗೆ ಹೋಗಿರಲಿಲ್ಲ.

ಲಾಕ್‌ಡೌನ್‌ ವೇಳೆ ಕಾಲೇಜಿಗೆ ರಜೆ ಇದ್ದಿದ್ದರಿಂದ ಊರಿನಲ್ಲೇ ಇದ್ದೆ. ಒಂದು ದಿನ ಮನೆ ಸ್ವಚ್ಛಗೊಳಿಸಲೆಂದು ಅಟ್ಟ ಏರಿದಾಗ ಗೋಣಿಯಲ್ಲಿ ಏನನ್ನೋ ಕಟ್ಟಿಟ್ಟದ್ದು ಕಂಡಿತು. ತೆರೆದು ನೋಡಿದರೆ ಮುರುಕಲು ಫ್ರೇಮ್‌ಗಳು. ಈ ಬಗ್ಗೆ ಅಮ್ಮನಲ್ಲಿ ಕೇಳಿದಾಗ ಅಪ್ಪನ ಜೇನು ಪ್ರೀತಿಯ ಬಗ್ಗೆ ಹೇಳಿದರು. ಮುರುಕಲು ಫ್ರೇಮ್‌ಗಳನ್ನು ಜೋಡಿಸಲು ಆರಂಭಿಸಿದೆ.

ನನಗೆ ಫ್ರೇಮ್‌ ಜೋಡಣೆಯ ಬಗ್ಗೆ ಏನೂ ತಿಳಿದಿರಲಿಲ್ಲ. ಅಮ್ಮನಿಗೂ ಅಲ್ಪಸ್ವಲ್ಪ ತಿಳಿದಿತ್ತು. ಅಲ್ಲದೆ ಮುರುಕಲು ಫ್ರೇಮ್‌ನಲ್ಲಿ ಕೆಲವು ಭಾಗಗಳು ಕಳೆದುಹೋಗಿತ್ತು. ಕೆಲವೆಡೆ ಮುರಿದಿತ್ತು. ಸಂಪೂರ್ಣ ಪೆಟ್ಟಿಗೆ ತಯಾರಿ ಕಷ್ಟಸಾಧ್ಯದ ಮಾತಾಗಿದ್ದರೂ ಚಿಕ್ಕ ಮೊಳೆಗಳನ್ನು ಹೊಡೆದು ಜೋಡಿಸಿದೆ.

ಫ್ರೇಮ್‌ ಏನೋ ರೆಡಿ ಆಯ್ತು. ಆದರೆ ಜೇನು ಕೃಷಿಯ ಬಗ್ಗೆ ಸ್ವಲ್ಪ ಜ್ಞಾನವೂ ನನ್ನಲ್ಲಿರಲಿಲ್ಲ. ಯೂ ಟ್ಯೂಬ್‌ನಲ್ಲಿ ಮಾಹಿತಿ ಹುಡುಕಿದೆ. ತೋಟಗಾರಿಕೆ ಇಲಾಖೆಯಲ್ಲಿ ಕೆಲಸ ಮಾಡುವ ಹರೀಶಣ್ಣನಿಗೆ ಫೋಟೋಗಳನ್ನು ಕಳಿಸಿ ಸಲಹೆ ಪಡೆದೆ. ಪೆಟ್ಟಿಗೆಯ ಒಳಗೆ ಫ್ರೇಮ್‌ ಜೋಡಿಸಿ ಜೇನುತುಪ್ಪ ಸವರಿ ಅಪ್ಪ ಅವತ್ತು ಇಡುತ್ತಿದ್ದ ಗೂಟ ಹುಡುಕಿ ಸ್ವಚ್ಛ ಮಾಡಿ ಬೂದಿ ಹರವಿ, ಹಲಗೆ ಹೊಡೆದು ಟೈಲ್ಸ್‌ ಇಟ್ಟು ಪೆಟ್ಟಿಗೆ ಕದಡದಂತೆ ಹಗ್ಗ ಕಟ್ಟಿ ಇಟ್ಟೆ.

Advertisement

ಸಂಜೆ ಆಟವಾಡಲು ಬರುವ ಅಣ್ಣ ತಮ್ಮಂದಿರು ತಮಾಷೆ ಮಾಡುತ್ತಿದ್ದರು. ಆದರೂ ನನಗೆ ಜೇನು ಬರಬಹುದೇನೋ ಎಂಬ ನಿರೀಕ್ಷೆ. ಅಂಗಳದಲ್ಲಿ ನಿಂತು ವಲಸೆ ಹೋಗುವ ಜೇನುಸಮೂಹವನ್ನು ಚಪ್ಪಾಳೆ ತಟ್ಟಿ ಕರೆಯುತ್ತಿದೆ. ಅಮ್ಮ ನಗುತ್ತಿದ್ದರು. ಕ್ರಮೇಣ ಜೇನುಗೂಡು ಸುತ್ತ ಇರುವೆ ಸಾಲು ಹೋಗುತ್ತಿತ್ತು. ಇನ್ನು ಜೇನು ಬರವುದಿಲ್ಲ ಎಂದು ಅಮ್ಮ ಹೇಳಿದಾಗ ಜೇನು ಕೃಷಿಯ ಆಶಾಭಾವನೆ ಮುದುಡಿತು.

ಇತ್ತ ಹೂವಿನ ಗಾರ್ಡನ್‌ ಸಿದ್ಧ ಮಾಡುವಲ್ಲಿ ತೊಡಗಿ ಜೇನಿನ ಪೆಟ್ಟಿಗೆಯನ್ನು ಮರೆತೇಬಿಟ್ಟಿದ್ದೆ. ನೀರಿಗಾಗಿ ಬರುತ್ತಿದ್ದ ಸಣ್ಣ ಜೇನು ಹುಳುಗಳನ್ನು ಒಂದೆರಡುಬಾರಿ ಹಿಡಿದು ಕಚ್ಚಿಸಿಕೊಂಡು ಗೂಡಿಗೆ ಹಾಕುವ ಪೆದ್ದುತನದ ಕೆಲಸವನ್ನು ಮಾಡಿದ್ದೆ. ತಿಂಗಳ ಬಳಿಕ ಹೂಗಿಡಗಳಲ್ಲಿ ಹೂ ಅರಳಿ ಸುಗಂಧ ಬೀರತೊಡಗಿತು. ಮಳೆ ಶುರುವಾದಾಗ ಜೇನು ಪೆಟ್ಟಿಗೆ ಒದ್ದೆಯಾಯಾಗದಂತೆ ಪ್ಲಾಸ್ಟಿಕ್‌ ಹಾಳೆ ಹೊದಿಸಿದೆ.

ಒಂದು ದಿನ ಅಮ್ಮ ಕರೆದು ಜೇನು ಗೂಡು ಬಿದ್ದಿದೆ ನೋಡು ಎಂದರು. ಓಡಿ ಹೋಗಿ ನೋಡಿದಾಗ ಆಶ್ಚರ್ಯ ಕಾದಿತ್ತು. ಜೇನು ಕೂತು ಹಳೆಯ ಮುರುಕಲು ಪೆಟ್ಟಿಗೆ ಈಗ ಭವ್ಯ ಅರಮನೆಯ ರೂಪ ಪಡೆದಿತ್ತು. ತುಂಬಾ ಖುಷಿಯಾಯ್ತು. ಅನಂತರ ದಿನವೂ ನೋಡಿ ಬರೊದೇ ಕೆಲಸವಾಯ್ತು. ಈಗ ಜೇನುಗೂಡೇ ನನ್ನ ಕುಟುಂಬ. ನಾನದರ ಒಡನಾಡಿ. ಅಪ್ಪನ ಬಳಸುತ್ತಿದ್ದ ಜೇನುಪೆಟ್ಟಿಗೆಗೆ ಜೀವ ಕೊಟ್ಟ ಸಾರ್ಥಕತೆ.

ದಿನ ಬೆಳಗ್ಗೆ, ಸಂಜೆ ಅದರ ಮುಂದೆ ಕುಳಿತು ಸುಮ್ಮನೆ ನೋಡುವುದು. ಗೂಡಿಗೆ ಕಿವಿಯಾನಿಸುವುದು. “ಗುಂಯ್‌ ಗುಂಯ್‌’ ಶಬ್ದದೊಂದಿಗೆ ಹುಳುಗಳು ನನ್ನ ಮುತ್ತಿಕ್ಕುವಾಗ ತುಂಬಾ ಖುಷಿಯಾಗುತ್ತಿತ್ತು. ಕೆಲವು ಹುಳುಗಳು ಹೂವಿನ ಗಿಡಗಳಲ್ಲಿ ಕುಳಿತು ಹೂವಿನ ಮಕರಂದವನ್ನು ಹೀರಿ ಜೇನು ತಯಾ ರಿಯಲ್ಲಿ ತೊಡಗಿವೆ. ನನಗೂ ಅವುಗಳಂತೆ ಜೇನು ಹುಳುವಾಗುವ ಬಯಕೆ. ಮಕರಂದ ಹೀರಿ ಹೂವಿಂದ ಹೂವಿಗೆ ಹಾರುವ ಆಸೆ.

 ಶರಣ್ಯಾ ಕೋಲ್ಚಾರ್‌, ಆಲೆಟ್ಟಿ ಗ್ರಾಮ, ಸುಳ್ಯ ತಾಲೂಕು 

 

Advertisement

Udayavani is now on Telegram. Click here to join our channel and stay updated with the latest news.

Next