ಚಿತ್ರರಂಗಕ್ಕೆ ಬರುವ ನವನಿರ್ದೇಶಕರು ಹೊಸ ಬಗೆಯ ಕಥೆಗಳೊಂದಿಗೆ ಪ್ರೇಕ್ಷಕರನ್ನು ಸೆಳೆಯಬೇಕೆಂದು ಪ್ರಯತ್ನಿಸುತ್ತಲೇ ಇರುತ್ತಾರೆ. ಈ ನಿಟ್ಟಿನಲ್ಲಿ ಸಾಕಷ್ಟು ಶ್ರಮ ಹಾಕುತ್ತಾರೆ ಕೂಡಾ. ಅದೇ ಕಾರಣದಿಂದ ಈಗ ಕನ್ನಡದಲ್ಲಿ ಒಂದಷ್ಟು ಹೊಸ ಬಗೆಯ ಸಿನಿಮಾಗಳು ಮೂಡಿಬರುತ್ತಿವೆ. ಈ ವಾರ ತೆರೆಕಂಡಿರುವ “ಫ್ಯಾಮಿಲಿ ಡ್ರಾಮಾ’ ಕೂಡಾ ಇಂತಹ ಒಂದು ಪ್ರಯತ್ನ. ನಿರ್ದೇಶಕ ಆಕರ್ಷ್ ಒಂದು ಮಧ್ಯಮ ವರ್ಗದ ಕಥೆಯನ್ನು ಆಯ್ಕೆ ಮಾಡಿಕೊಂಡು ಅದನ್ನು ಲವಲವಿಕೆಯಿಂದ ನಿರೂಪಿಸುತ್ತಾ ಸಾಗಿದ್ದಾರೆ.
“ಫ್ಯಾಮಿಲಿ ಡ್ರಾಮಾ’ ಬಗ್ಗೆ ಒಂದೇ ಮಾತಲ್ಲಿ ಹೇಳಬೇಕಾದರೆ ಇದೊಂದು ಜಾಲಿರೈಡ್ ಎನ್ನಬಹುದು. ಪ್ರೇಕ್ಷಕ ಆರಂಭದಿಂದ ಕೊನೆಯವರೆಗೆ ನಗು ನಗುತ್ತಲೇ ಸಿನಿಮಾ ನೋಡಬೇಕು ಎಂಬುದು ನಿರ್ದೇಶಕರ ಪರಮ ಉದ್ದೇಶ. ಆ ನಿಟ್ಟಿನಲ್ಲಿ ಕಥೆ, ಚಿತ್ರಕಥೆಯಲ್ಲಿನ ನಿರ್ದೇಶಕರ ಶ್ರಮ ಎದ್ದು ಕಾಣುತ್ತದೆ.
ಕಥೆಯ ಬಗ್ಗೆ ಹೇಳುವುದಾದರೆ ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳ ಜೊತೆ ಜೀವನ ಸಾಗಿಸುತ್ತಿರುತ್ತಾಳೆ. ಅದು ಕಷ್ಟದ ಜೀವನ. ಹೀಗಿರುವಾಗ ಅವರ ಕುಟುಂಬಕ್ಕೊಂದು ಕೆಲಸ ಸಿಗುತ್ತದೆ. ಆ ಕೆಲಸವನ್ನು ಮೂವರು ಮಾಡಲು ಮುಂದಾಗುತ್ತಾರೆ. ಆದರೆ, ರಹಸ್ಯವಾಗಿ. ಅಷ್ಟಕ್ಕೂ ಆ ಕೆಲಸವೇನು, ಅದನ್ನು ವಹಿಸಿದವರು ಮತ್ತು ಅದರ ಹಿಂದಿನ ಉದ್ದೇಶವೇನು ಎಂಬುದೇ ಸಿನಿಮಾ “ಮಜ’. ಅದನ್ನು ನೀವು ತೆರೆಮೇಲೆಯೇ ನೋಡಬೇಕು. ಇಲ್ಲಿನ ಕುಟುಂಬ ಸಂಕಷ್ಟ ಪಡುತ್ತಿದ್ದರೇ ಪ್ರೇಕ್ಷಕ ನಗುತ್ತಿರುತ್ತಾನೆ. ಅದೇ ಈ ಸಿನಿಮಾದ ಹೈಲೈಟ್ ಕೂಡಾ.
ಇನ್ನು, ಸಿನಿಮಾದ ಅವಧಿ ತುಸು ಹೆಚ್ಚಿದೆ. ಅದಕ್ಕೆ ಕತ್ತರಿ ಹಾಕುವ ಅವಕಾಶವಿತ್ತು. ಅದರ ಹೊರತಾಗಿ ಒಂದು ಪ್ರಯತ್ನವಾಗಿ ಮೆಚ್ಚಬಹುದು. ಚಿತ್ರದಲ್ಲಿ ನಟಿಸಿರುವ ಸಿಂಧೂ ಶ್ರೀನಿವಾಸಮೂರ್ತಿ, ಅಭಯ್, ರೇಖಾ ಸೇರಿದಂತೆ ಇತರ ಕಲಾವಿದರು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಚಿತ್ರದ ಪ್ಲಸ್‌ಗಳಲ್ಲಿ ಸಂಭಾಷಣೆ ಹಾಗೂ ಸಂಗೀತವೂ ಸೇರುತ್ತದೆ.
ಆರ್ ಪಿ