ಗುಂಡ್ಲುಪೇಟೆ(ಚಾಮರಾಜನಗರ): ಕೌಟುಂಬಿಕ ಕಲಹದ ಹಿನ್ನಲೆ ಇಬ್ಬರು ಪುಟ್ಟ ಮಕ್ಕಳೊಂದಿಗೆ ತಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ಹೊರ ವಲಯದ ಜಮೀನೊಂದರಲ್ಲಿ ಸೆ.14ರ ಗುರುವಾರ ತಡರಾತ್ರಿ ನಡೆದಿದೆ.
ತಾಯಿ ಮೇಘ(24) ಹಾಗೂ ಮಕ್ಕಳಾದ ಪುನ್ವಿತಾ(6), ಮನ್ವಿತಾ(3) ಮೃತ ದುರ್ದೈವಿಗಳು.
ಪತಿ ಧನಂಜಯ್ ಹಾಗೂ ಅತ್ತೆ ನಿರ್ಮಲಮ್ಮ ಮೃತ ಮೇಘಾಳಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದರು ಎನ್ನಲಾಗುತ್ತಿದ್ದು, ಇದರಿಂದ ಬೇಸತ್ತ ಮೇಘ ತನ್ನ ಎರಡು ಮಕ್ಕಳೊಂದಿಗೆ ನೇಣಿಗೆ ಶರಣಾಗಿದ್ದಾರೆ ಎಂದು ತೆರಕಣಾಂಬಿ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಮಧ್ಯೆ ಗುರುವಾರ ಬೆಳಗ್ಗೆಯೂ ಕೂಡ ಗಲಾಟೆ ನಡೆದಿತ್ತು ಎನ್ನಲಾಗಿದೆ.
ಎಂಟು ವರ್ಷದ ಹಿಂದೆ ಧನಂಜಯ ಮತ್ತು ಮೇಘ ಅವರ ವಿವಾಹವಾಗಿದ್ದು, ಪ್ರಾರಂಭದ ದಿನಗಳಿಂದಲೂ ಕುಟುಂಬದವರೆಲ್ಲಾ ಸೇರಿ ಚಿತ್ರಹಿಂಸೆ ನೀಡುತ್ತಿದ್ದರು ಎಂದು ಮೇಘಳ ಪೋಷಕರು ಆರೋಪಿಸಿದ್ದಾರೆ.
ಮಾಹಿತಿ ಅರಿತ ಕೂಡಲೇ ಡಿವೈಎಸ್ಪಿ ಲಕ್ಷ್ಮಯ್ಯ ಹಾಗೂ ಸರ್ಕಲ್ ಇನ್ಸ್ ಪೆಕ್ಟರ್ ವನರಾಜು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆ ಸಂಬಂಧ ಮೇಘ ಪತಿ ಧನಂಜಯ, ಅತ್ತೆ ನಿರ್ಮಲಮ್ಮ ಹಾಗೂ ಮಾವ ಮಲ್ಲಿಕಾರ್ಜುನ ಮೂವರನ್ನು ವಶಕ್ಕೆ ಪಡೆಯಲಾಗಿದೆ ಎಂದು ತೆರಕಣಾಂಬಿ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಈಶ್ವರ್ ತಿಳಿಸಿದ್ದಾರೆ.