ಪಿರಿಯಾಪಟ್ಟಣ: ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಂದು ಹಬ್ಬಗಳಿಗೂ ವಿಶೇಷವಾದ ಕಾರಣಗಳಿದ್ದು ಅವುಗಳನ್ನು ವೈಶಿಷ್ಟ ಪೂರ್ಣವಾಗಿ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಇಥಿಯೋಪಿಯಾ ಗೊಂಡಾರ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಅಭಿಲಾಷ್ ಸೋಮೇನಹಳ್ಳಿ ತಿಳಿಸಿದರು.
ಪಟ್ಟಣದ ಸಾಯಿ ಸಮುದಾಯ ಭವನದಲ್ಲಿ ಹೌಸಿಂಗ್ ಬೋರ್ಡ್ ಬಡಾವಣೆ ವಿನಾಯಕ ಗೆಳೆಯರ ಬಳಗ ಹಮ್ಮಿಕೊಂಡಿದ್ದ ಹುತಾತ್ಮ ಯೋಧರ ಕುಟುಂಬಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣಕಾರರಾಗಿ ಮಾತನಾಡಿದರು. ಹಿಂದೂ ಧರ್ಮ ವಿಶ್ವದ ಶ್ರೇಷ್ಠ ಧರ್ಮವಾಗಿದ್ದು ಸಹಿಷ್ಣುತೆ ಮತ್ತು ಸಹೋದರತೆ ಮುಖ್ಯ ಉದ್ದೇಶ.
ಮಹಾ ರಾಷ್ಟ್ರದ ಛತ್ರಪತಿ ಶಿವಾಜಿ ಆಳ್ವಿಕೆ ಕಾಲದಲ್ಲಿ ಗಣೇಶ ಹಬ್ಬದ ಆಚರಣೆ ಆರಂಭಿಸಿದ ಇತಿಹಾಸವಿದ್ದು, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಲೋಕಮಾನ್ಯ ಬಾಲ ಗಂಗಾಧರ ತಿಲಕರು ಭಾರತೀಯರಲ್ಲಿ ಏಕತೆ ತರಬೇಕೆನ್ನುವ ಉದ್ದೇಶದಿಂದ ವಿನಾಯಕ ಚತುರ್ಥಿ ಆಚರಿಸಲು ಪ್ರಾರಂಭಿಸಿದರು ಎಂದರು.
ಸ್ವಾತಂತ್ರ್ಯ ಪೂರ್ವದಲ್ಲಿ ಗಣೇಶ ಹಬ್ಬದ ಆಚರಣೆಯನ್ನು ಬ್ರಿಟೀಷರನ್ನು ದೇಶದಿಂದ ತೊಲಗಿಸುವ ಉದ್ದೇಶದಿಂದ ಮಾಡಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವೆಡೆ ಆಡಂಬರಕ್ಕಾಗಿ ಆಚರಿಸುತ್ತಿರುವುದು ಬೇಸರದ ಸಂಗತಿ ಎಂದು ವಿಷಾದಿಸಿದರು. ಸಾರ್ವಜನಿಕರು ಗಣೇಶೋತ್ಸವ ಆಚರಿಸುವುದರ ಮೂಲಕ ಪ್ರತಿಯೊಬ್ಬರಲ್ಲಿಯೂ ರಾಷ್ಟ್ರೀಯ ಚಿಂತನೆ ಬಗ್ಗೆ ಅರಿವು ಮೂಡಿಸಿ ಭಾವೈಕ್ಯತೆ ಹೊಂದಬೇಕಿದೆ ಎಂದು ಅಭಿಪ್ರಾಯಪಟ್ಟರು.
ತಾಲೂಕಿನ ಹುತಾತ್ಮ ಯೋಧರ ಕುಟುಂಬಗಳಿಗೆ ಗೌರವ ಸಮರ್ಪಿಸಿ ಮಾತನಾಡಿದ ರೋಟರಿ ಮಾಜಿ ಅಧ್ಯಕ್ಷ ಡಾ.ಪ್ರಕಾಶ್ ಬಾಬುರಾವ್, ಯುವಕರಲ್ಲಿ ಸೇನೆಗೆ ಸೇರುವ ಮನೋಭಾವ ಹೆಚ್ಚಾಗಬೇಕಿದ್ದು ಈಗಾಗಲೇ ದೇಶದ ರಕ್ಷಣೆಯಲ್ಲಿ ನಿರತರಾಗಿರುವ ಯೋಧರಿಗೆ ಪ್ರತಿಯೊಬ್ಬರೂ ಕೃತಜ್ಞತೆ ಸಲ್ಲಿಸಬೇಕಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಯುವ ಬ್ರಿಗೇಡ್ ಸದಸ್ಯರಿಂದ ದೇಶಭಕ್ತಿ ಗೀತೆಗಳ ಗಾಯನ ನಡೆಯಿತು. ಪರಿಸರವಾದಿ ಕೆ.ಎನ್.ಸೋಮಶೇಖರ್, ರಾಜ್ಯ ಸರ್ಕಾರಿ ನೌಕರರ ಸಂಘದ ಪರಿಷತ್ ಸದಸ್ಯ ಶಿವಯೋಗ, ಅಕ್ಷರ ಚಿಟ್ ಫಂಡ್ಸ್‌ನ ವ್ಯವಸ್ಥಾಪಕ ಕುಮಾರಸ್ವಾಮಿ, ಎಸ್‌ವಿಎಸ್ ಮೆಡಿಕಲ್ಸ್ ಮಂಜುನಾಥ್, ಮುಖಂಡರಾದ ರಮೇಶ್, ಪಿ.ಜೆ.ರವಿ, ನಿರಂಜನ್, ಮಂಜು ಕೋಗಿಲವಾಡಿ, ಚಲುವರಾಯಿ ಮತ್ತಿತರರು ಉಪಸ್ಥಿತರಿದ್ದರು.