Advertisement
ಇದು ತಮ್ಮ ವಿರುದ್ಧದ ಲೈಂಗಿಕ ಕಿರುಕುಳ ಆರೋಪ ಪ್ರಕರಣ ಸಂಬಂಧ ಬಹುಭಾಷಾ ನಟ ಅರ್ಜುನ್ ಸರ್ಜಾ ಕಬ್ಬನ್ ಪಾರ್ಕ್ ಪೊಲೀಸರ ಎದುರು ನೀಡಿರುವ ಹೇಳಿಕೆ.
Related Articles
ಠಾಣೆಗೆ ಹಾಜರಾಗುತ್ತಿದ್ದಂತೆ ಅರ್ಜುನ್ ಸರ್ಜಾ ಮೊದಲೇ ಸಿದ್ಧಪಡಿಸಿಕೊಂಡು ತಂದಿದ್ದ 6 ಪುಟಗಳ ಲಿಖೀತ ಹೇಳಿಕೆಯನ್ನು ಸಲ್ಲಿಸಲು ಮುಂದಾದರು. ಇದನ್ನು ನಿರಾಕರಿಸಿದ ತನಿಖಾಧಿಕಾರಿಗಳು ಯಾವುದೇ ಕಾರಣಕ್ಕೂ ಇದನ್ನು ಒಪ್ಪುವುದಿಲ್ಲ. ತನಿಖಾಧಿಕಾರಿ ಎದುರೇ ಹೇಳಿಕೆ ದಾಖಲಿಸಬೇಕೆಂದು ಸೂಚಿಸಿದರು.
Advertisement
ತಮ್ಮ ಮೇಲೆ ನಟಿ ಶೃತಿ ಮಾಡಿರುವ ಆರೋಪವನ್ನು ಸಂಪೂರ್ಣವಾಗಿ ತಳ್ಳಿ ಹಾಕಿದ ಸರ್ಜಾ, ಈ ಆರೋಪ ಶುದ್ಧ ಸುಳ್ಳು. ಇದೊಂದು ಕಟ್ಟು ಕಥೆ.
ಅನಗತ್ಯವಾಗಿ ತಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಉದ್ದೇಶ ಪೂರ್ವಕವಾಗಿ ನನ್ನ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಇದರ ಹಿಂದೆ ಕೆಲ ಪ್ರಭಾವಿಗಳಿರುವ ಅನುಮಾನವಿದ್ದು, ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
“ವಿಸ್ಮಯ’ ಸಿನಿಮಾ ಚಿತ್ರೀಕರಣದ ವೇಳೆ ನಿರ್ದೇಶಕರು ರೋಮ್ಯಾಂಟಿಕ್ ದೃಶ್ಯಗಳನ್ನು ಹೆಚ್ಚಾಗಿ ಚಿತ್ರೀಕರಿಸಬೇಕು ಎಂದಿದ್ದರು. ಆದರೆ, ನಾನೇ ಅದು ಸಾಧ್ಯವಿಲ್ಲ. ನನಗೆ ಮುಜುಗರ ಆಗುತ್ತದೆ. ಆದಷ್ಟು ಕತ್ತರಿ ಹಾಕಿ ಎಂದು ಮನವಿ ಮಾಡಿಕೊಂಡಿದ್ದೆ. ಹೀಗಾಗಿ ನಿರ್ದೇಶಕ ಸೂಚನೆ ಮೇರೆಗೆ ಅಭಿನಯ ಮಾಡಿದ್ದೇನೆ ಹೊರತು ಯಾವುದೇ ದುರುದ್ದೇಶ ಹೊಂದಿಲ್ಲ. ರಿಹರ್ಸಲ್ ನಡೆಯುವಾಗ ನಾವಿಬ್ಬರೇ ಇರುವುದಿಲ್ಲ. ಸಾಕಷ್ಟು ಮಂದಿ ನಮ್ಮ ಜತೆ ಇರುತ್ತಾರೆ. ಅವರ ಎದುರು ಹೇಗೆ ತಪ್ಪಾಗಿ ನಡೆದುಕೊಳ್ಳಲು ಸಾಧ್ಯ? ಸಿನಿಮಾ ಸೆಟ್‌ನಲ್ಲಿ ಬಹಳಷ್ಟು ಮಂದಿ ಜತೆ ಊಟ ಮಾಡಿದ್ದೇನೆ. ಶೃತಿ ಒಬ್ಬರನ್ನೇ ಎಲ್ಲಿಗೂ ಕರೆದಿಲ್ಲ. ದೇವನಹಳ್ಳಿ ಸಿಗ್ನಲ್ ಬಳಿ ಕಾರಿನಲ್ಲಿ ಹೋಗುವಾಗ ನಾನು ಆಕೆಯನ್ನು ಕಂಡು ನಗು ಬೀರಿದೆ ಅಷ್ಟೇ. ಆಕೆಯನ್ನು ಯಾವ ರೆಸಾರ್ಟ್‌ಗೂ ಕರೆದಿಲ್ಲ. ಶೃತಿಯನ್ನು ಸಿನಿಮಾಗೆ ಆಯ್ಕೆ ಮಾಡುವ ಆಡಿಷನ್‌ನಲ್ಲೂ ನಾನು ಇರಲಿಲ್ಲ. ನಿರ್ದೇಶಕ ಅರುಣ್ ಹೇಳಿದ ಬಳಿಕವಷ್ಟೇ ನನಗೆ ಆಕೆಯ ಬಗ್ಗೆ ತಿಳಿಯಿತು. ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ಮಾತ್ರ ನಾನು ಆಕೆಯನ್ನು ನೋಡಿದ್ದು. ಅದಕ್ಕೂ ಮೊದಲು ಎಂದಿಗೂ ನೋಡಿಲ್ಲ. ಪರಿಚಯ ಕೂಡ ಇಲ್ಲ. ಶೃತಿಯನ್ನು ಒಬ್ಬ ಕಲಾವಿದೆಯಾಗಿ ನೋಡಿದ್ದೇನೆಯೇ ಹೊರತು ಬೇರೆ ಯಾವ ದೃಷ್ಟಿಯಿಂದ ನೋಡಿಲ್ಲ,” ಎಂದು ಸರ್ಜಾ ಸ್ಪಷ್ಟನೆ ನೀಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ರಾಜಕೀಯ ತಿರುವುಅರ್ಜುನ್ ಸರ್ಜಾ ಕಬ್ಬನ್ ಠಾಣೆಗೆ ಆಗಮಿಸಿದ ಕೆಲವೇ ಹೊತ್ತಿನಲ್ಲಿ ವಿಧಾನ ಪರಿಷತ್ ಸದಸ್ಯೆ, ಬಿಜೆಪಿ ನಾಯಕಿ ತೇಜಸ್ವಿನಿಗೌಡ ಠಾಣೆಗೆ ಆಗಮಿಸಿ ಅಚ್ಚರಿ ಮೂಡಿಸಿದರು. ಠಾಣೆಯೊಳಗೆ ತನಿಖಾಧಿಕಾರಿ ಎದುರೇ ಅರ್ಜುನ್ ಸರ್ಜಾ ಜತೆ ತೇಜಸ್ವಿನಿಗೌಡ ಕೆಲ ನಿಮಿಷ ಚರ್ಚಿಸಿದರು ಎಂದು ತಿಳಿದು ಬಂದಿದೆ. ಈ ಮೂಲಕ ಇಡೀ ಪ್ರಕರಣ ರಾಜಕೀಯ ತಿರುವು ಪಡೆದುಕೊಳ್ಳುವ ಸಾಧ್ಯತೆಯೂ ದಟ್ಟವಾಗಿದೆ. ಬಳಿಕ ಸುದ್ದಿಗಾರರ ಜತೆ ಮಾತನಾಡಿದ ತೇಜಸ್ವಿನಿಗೌಡ, ಶೃತಿ ಹರಿಹರನ್ ಯಾವ ಕಾರಣಕ್ಕೆ ಈ ದೂರು ದಾಖಲಿಸಿದ್ದಾರೆ ಎಂಬುದು ಗೊತ್ತಿಲ್ಲ. ಶೃತಿ ಹಿಂದೆ ಬಹಳಷ್ಟು ಮಂದಿ ಇದ್ದಾರೆ. ಈ ವಿಚಾರವಾಗಿ ಭಾರಿ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿದರು. ನಟ ಅರ್ಜುನ್ ಸರ್ಜಾ 37 ವರ್ಷಗಳಿಂದ ಚಿತ್ರರಂಗದಲ್ಲಿದ್ದು, ಸರ್ಜಾ ಹನುಮಂತನ ಭಕ್ತ. ಚೆನ್ನೈನಲ್ಲಿ ಆಂಜನೇಯಸ್ವಾಮಿ ಬೃಹತ್ ಮೂರ್ತಿ ಪ್ರತಿಷ್ಠಾಪಿಸುತ್ತಿದ್ದಾರೆ. ಸಂಗೊಳ್ಳಿ ರಾಯಣ್ಣನ ಪರಂಪರೆಗೆ ಸೇರಿದ ಹಿನ್ನೆಲೆಯಲ್ಲಿ ನಾನು ಸರ್ಜಾ ಪರ ನಿಂತಿದ್ದೇನೆ. ಸರ್ಜಾ ಅವರ ತೇಜೋವಧೆ ಮಾಡುವ ದುರುದ್ದೇಶದಿಂದಲೇ ಅವರ ಮೇಲೆ ಈ ರೀತಿಯ ಆರೋಪ ಹೊರಿಸಿದ್ದಾರೆ ಎಂದರು. ವಿಡಿಯೋ ತರಿಸಿ
ವಿಚಾರಣೆ ಸಂದರ್ಭದಲ್ಲಿ ಅರ್ಜುನ್ ಸರ್ಜಾ, ಚಿತ್ರೀಕರಣದ ವೇಳೆ ಶೃತಿ ಅವರನ್ನು ನಟನೆಯ ಭಾಗವಾಗಿ ಸ್ಪರ್ಷಿಸಿದ್ದೇನೆ. ಅದು ಚಿತ್ರೀಕರಣ ಸಂದರ್ಭದ ಒಪ್ಪಂದದ ಭಾಗ ಮಾತ್ರ. ಕೆಟ್ಟ ರೀತಿಯಲ್ಲಿ ನಾನು ಸ್ಪರ್ಷಿಸಿಲ್ಲ. ಒಂದು ವೇಳೆ ಅವರು ಆರೋಪಿಸಿದಂತೆ ಮುಟ್ಟಿದ್ದರೆ ವಿಡಿಯೋ ತರಿಸಿ. ಆಗ ಇಬ್ಬರ ಮುಖಭಾವನೆಯೇ ಎಲ್ಲವನ್ನು ಹೇಳುತ್ತದೆ. ಮೂರು ವರ್ಷದ ಬಳಿಕ ಯಾಕೆ ಆರೋಪ ಮಾಡುತ್ತಿದ್ದಾರೆ. ಅವರು ಉದ್ದೇಶ ನಿಜಕ್ಕೂ ನನಗೆ ತಿಳಿಯುತ್ತಿಲ್ಲ. ಈಗ ಆರೋಪ ಮಾಡುವ ಶೃತಿ, ಈ ಮೊದಲು ನನ್ನ ಹಾಡಿ ಹೊಗಳಿದ್ದೇಕೆ ಎಂದು ಸರ್ಜಾ ಪೊಲೀಸರನ್ನೇ ಪ್ರಶ್ನಿಸಿದ್ದಾರೆ. ಠಾಣೆ ಎದುರು ಅಭಿಮಾನಿಗಳ ಜಮಾವಣೆ
ಅರ್ಜುನ್ ಸರ್ಜಾ ಕಬ್ಬನ್‌ಪಾರ್ಕ್ ಠಾಣೆಗೆ ಆಗಮಿಸುತ್ತಿರುವ ವಿಚಾರ ತಿಳಿದ ಕೂಡಲೇ ಸರ್ಜಾ ಅವರ ನೂರಾರು ಮಂದಿ ಅಭಿಮಾನಿಗಳು ಠಾಣೆ ಮುಂದೆ ಜಮಾಯಿಸಿದರು. ಸರ್ಜಾ ಪರ ಘೋಷಣೆ ಕೂಗಿದರು. ಇದೇ ವೇಳೆ ಮಧ್ಯಪ್ರವೇಶಿಸಿದ ಪೊಲೀಸರು ವಿಚಾರಣೆಗೆ ಯಾವುದೇ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಅಭಿಮಾನಿಗಳನ್ನು ಸ್ಥಳದಿಂದ ಚದುರಿಸಿ ಠಾಣೆ ಎದುರು ಬಿಗಿ ಭದ್ರತೆ ವಹಿಸಿದರು.