Advertisement

ಬಾವಲಿ ಭಯಕ್ಕೆ ಮರಗಳಿಗೆ ಕುತ್ತು!

08:05 AM Apr 30, 2020 | Hari Prasad |

ಬೆಂಗಳೂರು: ಬಾವಲಿಗಳಿಂದ ಕೋವಿಡ್ 19 ವೈರಸ್ ಹರಡುತ್ತದೆ ಎಂಬ ವದಂತಿಯ ಹಿನ್ನೆಲೆಯಲ್ಲಿ ಅವು ವಾಸಿಸುವ ಮರಗಳು ಮತ್ತು ರೆಂಬೆಗಳನ್ನು ಕಡಿದುರುಳಿಸುವ ಘಟನೆಗಳು ಕಂಡುಬರುತ್ತಿವೆ. ಇದು ಅರಣ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.

Advertisement

ಹಣ್ಣು ಬಿಡುವ ಮರಗಳು ಬಾವಲಿಗಳ ಆವಾಸ ಸ್ಥಾನ. ಆದರೆ ಕೋವಿಡ್ 19 ವೈರಸ್ ಹರಡುವ ಮೂಢ ಭೀತಿಯಿಂದ ಅಂತಹ ಕಡೆಗಳಲ್ಲಿ ಸುತ್ತಲಿನ ನಿವಾಸಿಗಳು ಆ ಮರಗಳಿಗೆ ಕೊಡಲಿ ಪೆಟ್ಟು ಹಾಕುತ್ತಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿರುವ ಮರಗಳನ್ನು ಕಡಿಯಲು ಅನುಮತಿ ನೀಡುವಂತೆ ಅರಣ್ಯ ಇಲಾಖೆಗೆ ದುಂಬಾಲು ಬೀಳುವುದೂ ಇದೆ. ಅರಣ್ಯ ಇಲಾಖೆ ಇದನ್ನು ನಿರಾಕರಿಸುತ್ತಿರುವುದರಿಂದ ರೆಂಬೆ ಕಡಿಯುವುದು ವರದಿಯಾಗುತ್ತಿದೆ.

ಬಾವಲಿಗಳ ಜೊಲ್ಲು ತಗಲಬಹುದು ಅಥವಾ ತಿಂದೆಸೆಯುವ ಹಣ್ಣುಗಳಿಂದ ಕೋವಿಡ್ 19 ವೈರಸ್ ಸೋಂಕು ತಗಲಬಹುದು ಎಂಬ ಭೀತಿಯಿಂದ ಜನ ಹೀಗೆ ಮಾಡುತ್ತಿದ್ದಾರೆ. ಅದರಲ್ಲೂ ಇದುವರೆಗೆ ಕೋವಿಡ್‌-19 ಪ್ರಕರಣಗಳು ವರದಿಯಾಗದ ಹಾಸನ, ಚಿಕ್ಕಮಗಳೂರಿನಂತಹ ಮಲೆನಾಡು ಭಾಗಗಳಿಂದಲೂ ಮರ ಕಡಿಯಲು ಅನುಮತಿ ಕೋರಿ ಕರೆಗಳು ಇಲಾಖೆಗೆ ಬರುತ್ತಿವೆ.

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಈಚೆಗೆ ರಾಜ್ಯದ ಎಲ್ಲ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದ್ದು, ಬಾವಲಿಗಳಿಂದಾಗಲೀ ಮರಗಳ ಸಹಿತ ಅವುಗಳ ಆವಾಸ ಸ್ಥಾನದಿಂದಾಗಲೀ ಕೋವಿಡ್ 19 ವೈರಸ್ ಹರಡುವುದಿಲ್ಲ.

Advertisement

ಒಂದು ವೇಳೆ ಬಾವಲಿ ಕೊಲ್ಲುವುದು ಮತ್ತು ಮರ ಕಡಿಯುವುದು ಕಂಡುಬಂದರೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಸ್ಥಳೀಯರಲ್ಲಿ ಜಾಗೃತಿ ಮೂಡಿಸಿ ಬಾವಲಿಗಳು ಮತ್ತು ಮರಗಳನ್ನು ರಕ್ಷಿಸಬೇಕು ಎಂದು ನಿರ್ದೇಶಿಸಿದ್ದಾರೆ.

ಸಾವಿರಾರು ವರ್ಷಗಳಿಂದ ಬಾವಲಿಗಳು ನಮ್ಮಲ್ಲಿ ಇವೆ. ಅವುಗಳಿಂದ ಮನುಷ್ಯನಿಗೆ ಯಾವುದೇ ತೊಂದರೆ ಆಗಿಲ್ಲ ಮತ್ತು ಆಗುವುದೂ ಇಲ್ಲ. ಬಾವಲಿಗಳಿಂದ ಕೋವಿಡ್‌-19 ಸೋಂಕು ತಗಲುವುದಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನ ಸಂಸ್ಥೆ (ಐಸಿಎಂಆರ್‌) ಕೂಡ ಇದನ್ನು ದೃಢಪಡಿಸಿದೆ. ಹಾಗಾಗಿ ವದಂತಿಗಳಿಗೆ ಕಿವಿಗೊಟ್ಟು, ಬಾವಲಿಗಳನ್ನು ಕೊಲ್ಲುವುದು ಮತ್ತು ಮರಗಳನ್ನು ತೆರವುಗೊಳಿಸುವುದರಲ್ಲಿ  ಅರ್ಥವಿಲ್ಲ.
– ಸಂಜಯ್‌ ಮೋಹನ್‌, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ

— ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next