Advertisement

ಸುಳ್ಳು ವಿಳಾಸ ಕೊಟ್ಟವರ ಪತ್ತೆಯೇ ಈಗ ಸವಾಲು!

12:58 AM May 30, 2020 | Sriram |

ಬೆಂಗಳೂರು: ಕೋವಿಡ್ 19 ಸೋಂಕು ಭೀತಿಯ ನಡುವೆ ಕಳ್ಳದಾರಿ ಹಿಡಿದು ಊರು ಪ್ರವೇಶಿಸುತ್ತಿರುವ ವಲಸಿಗರ ಪತ್ತೆಯ ಸವಾಲು ಒಂದೆಡೆ ಯಾದರೆ,ರಾಜಮಾರ್ಗ ದಿಂದಲೇ ಬಂದು ಊರು ಸೇರಿರುವವರನ್ನು ಕಂಡು ಹಿಡಿಯುವುದು ಕೂಡ ಈಗ ತಲೆನೋವಾಗಿ ಪರಿಣಮಿಸಿದೆ!

Advertisement

ಯಾಕೆಂದರೆ, ಹೀಗೆ ಬಂದವರಲ್ಲಿ ಕೆಲವರು ಚೆಕ್‌ಪೋಸ್ಟ್‌ ಗಳಲ್ಲಿ ಸುಳ್ಳು ವಿಳಾಸ, ವಿವರ ನೀಡಿದ್ದಾರೆ. ಅದರ ಆಧಾರದಲ್ಲಿ ಸ್ಥಳಕ್ಕೆ ಭೇಟಿ ನೀಡಿದಾಗ, ಅಂತಹ ಹೆಸರಿನ ವ್ಯಕ್ತಿಗಳೇ ಅಲ್ಲಿಲ್ಲ. ಇದು ಕೋವಿಡ್‌-19 ಕರ್ತವ್ಯಕ್ಕೆ ನಿಯೋಜಿಸಿದ ಸಿಬಂದಿಯನ್ನು ತಬ್ಬಿಬ್ಬುಗೊಳಿಸುತ್ತಿದೆ.
ಅಂತಾರಾಜ್ಯ, ಅಂತರ್‌ ಜಿಲ್ಲೆ ಸಂಚಾರಕ್ಕೆ ಅನುಮತಿ ಸಿಕ್ಕಿದ ಬಳಿಕ ಜನ ವಿವಿಧೆಡೆಗಳಿಂದ ತಮ್ಮ ಊರುಗಳಿಗೆ ಬಂದಿದ್ದಾರೆ. ಹೀಗೆ ಬರುವಾಗ ಸಿಗುವ ಚೆಕ್‌ಪೋಸ್ಟ್‌ಗಳಲ್ಲಿ ವಿವರ ಒದಗಿಸ ಬೇಕಾಗುತ್ತದೆ. ಕೆಲವರು ಕ್ವಾರಂಟೈನ್‌ನಿಂದ ತಪ್ಪಿಸಿಕೊಳ್ಳಲು ವಿಳಾಸ ಸಹಿತ ತಪ್ಪು ಮಾಹಿತಿ ನೀಡಿದ್ದಾರೆ. ಈ ವಿವರ ಹಿಡಿದು ಹುಡುಕಿದರೆ ಆ ಹೆಸರಿನ ವ್ಯಕ್ತಿ ಅಲ್ಲಿರುವುದಿಲ್ಲ. ಇಂಥವರನ್ನು ಹುಡುಕಿ, ಸರಕಾರಕ್ಕೆ ವರದಿ ಒಪ್ಪಿಸುವುದು ಸವಾಲಾಗುತ್ತಿದೆ ಎಂದು ಸಿಬಂದಿ ಅಸಹಾಯ ಕತೆ ವ್ಯಕ್ತಪಡಿಸುತ್ತಿದ್ದಾರೆ.

ಆಧಾರ್‌ ಮೂಲಕ
ಪತ್ತೆ ಸಾಧ್ಯವಿದೆ
ತಪ್ಪು ಮಾಹಿತಿ ನೀಡಿದವರನ್ನು ಆಧಾರ್‌ ಮೂಲಕ ಸುಲಭವಾಗಿ ಪತ್ತೆಹಚ್ಚಲು ಸಾಧ್ಯವಿದೆ. ಹೆಸರು ನಮೂದಿಸಿದ್ದು, ತಾಲೂಕು ಸರಿಯಿರುತ್ತದೆ. ಆದರೆ ವಿಳಾಸ ಬೇರೆ ಆಗಿರುತ್ತದೆ. ಆಯಾ ತಾಲೂಕು ವ್ಯಾಪ್ತಿಯಲ್ಲಿ ಬರುವ ಆ ವ್ಯಕ್ತಿಯ ಹೆಸರಿನ ಆಧಾರ್‌ ಸಂಖ್ಯೆಗಳನ್ನು ವರ್ಗೀಕರಿಸಿ, ಪತ್ತೆಹಚ್ಚಬಹುದಾಗಿದೆ. ಅಲ್ಲದೆ ಮೊಬೈಲ್‌ ನೆಟ್‌ವರ್ಕ್‌ ಲೊಕೇಷನ್‌ ಮೂಲಕವೂ ಕಂಡುಹಿಡಿಯಬಹುದಾಗಿದೆ ಎಂದು ತಜ್ಞರು ಸಲಹೆ ನೀಡುತ್ತಾರೆ.

ಮಾಹಿತಿ ಯಾಕೆ ಮುಖ್ಯ?
ಲಾಕ್‌ಡೌನ್‌ ಸಂದರ್ಭದಲ್ಲಿ ಬೆಂಗಳೂರು, ಮಂಗಳೂರು, ದಾವಣಗೆರೆ, ಮೈಸೂರು ಸಹಿತ ಕೆಂಪು ವಲಯಗಳಿಂದ ಸಾವಿರಾರು ಜನ ಹಳ್ಳಿಗಳಿಗೆ ತೆರಳಿದ್ದಾರೆ. ಇವರಲ್ಲಿ ಯಾರಿಗಾದರೂ ಸೋಂಕು ತಗಲಿದ್ದರೆ ಹಳ್ಳಿಗಳಿಗೆ ಸಮಸ್ಯೆಯಾಗುತ್ತದೆ. ಹೀಗಾಗಿ ಪ್ರತೀ ಚೆಕ್‌ಪೋಸ್ಟ್‌ನಲ್ಲಿ ಸಂಗ್ರಹಿಸಿದ ಮಾಹಿತಿಯನ್ನು ಜಿಲ್ಲಾ ಮಟ್ಟದಿಂದ ತಾಲೂಕುಗಳಿಗೆ ರವಾನಿಸಲಾಗಿದೆ. ಅಲ್ಲಿಂದ ಸಂಬಂಧಪಟ್ಟ ಪಿಡಿಒ, ಆಶಾ ಕಾರ್ಯಕರ್ತೆಯರ ಸಹಯೋಗದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳಿಗೆ ನೀಡಲಾಗಿದೆ. ಇದನ್ನು ಆಧರಿಸಿ ಬಂದವರನ್ನು ಪತ್ತೆ ಮಾಡಿ, ಅವರ ಆರೋಗ್ಯದ ಬಗ್ಗೆ ವರದಿ ನೀಡಬೇಕಾಗುತ್ತದೆ. ತಪ್ಪು ಮಾಹಿತಿಯಿಂದ ಸಮಸ್ಯೆ, ದಿನಗಟ್ಟಲೆ ಸಮಯ ವ್ಯಯ ಆಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next