Advertisement

Puttur: ಮಳೆ ಬರಲಿ, ಬರ ದೂರ ಇರಲಿ… ಕುಸಿದ ನೀರಿನ ಹರಿವಿನ ಪ್ರಮಾಣ, ಬರದ ಛಾಯೆ

01:14 PM Sep 02, 2023 | Team Udayavani |

ಪುತ್ತೂರು: ಕುಮಾರಧಾರಾ -ನೇತ್ರಾವತಿ ನದಿಗಳೆರಡು ಹರಿಯುವ, ಸಂಗಮಿಸುವ ಉಪ್ಪಿನಂಗಡಿಯಲ್ಲೂ ನೀರಿನ ಹರಿವು ಕಳೆದ ವರ್ಷಕ್ಕಿಂತ ಕಡಿಮೆ ಇದೆ. ಬರದ ಛಾಯೆ ಆವರಿಸಿದೆ. ಮುಂದೆ ಮಳೆ ಬಾರದಿದ್ದರೆ ಮುಂಬರುವ ದಿನಗಳಲ್ಲಿ ಪುತ್ತೂರು ನಗರದಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಲೂ ಬಹುದು.

Advertisement

ಪ್ರತಿ ಮಳೆಗಾಲದಲ್ಲಿ ನೇತ್ರಾವತಿ-ಕುಮಾರಾಧಾರಾ ನದಿ ಸಂಗಮಿಸುವುದು ವಾಡಿಕೆ. ಆಗಸ್ಟ್‌ನಲ್ಲೇ ಹೆಚ್ಚಾಗಿ ಸಂಗಮಿಸಿದ ಉದಾಹರಣೆಗಳಿವೆ. ಆದರೆ ಈ ಬಾರಿ ಸಪ್ಟೆಂಬರ್‌ ಬಂದರೂ ಸಂಗಮ ಆಗಿಲ್ಲ. ಅಂದರೆ ಅಷ್ಟೊಂದು ಮಳೆಯೇ ಸುರಿದಿಲ್ಲ.

ಹಲಗೆ ಅಳವಡಿಕೆ
ಕುಮಾರಧಾರೆಗೆ ನೆಕ್ಕಿಲಾಡಿ ಬಳಿ ನಿರ್ಮಿಸಿರುವ ಡ್ಯಾಂ ಬಳಿ ನೀರಿನ ಹರಿವು ತೀರಾ ಕ್ಷೀಣಿಸಿದೆ. ಪ್ರತೀ ವರ್ಷ ಡ್ಯಾಂಗೆ ಜನವರಿಯಲ್ಲಿ ಹಲಗೆ ಜೋಡಿಸಿ ನೀರು ಸಂಗ್ರಹಿಸಲಾಗುತ್ತದೆ. 2022ರಲ್ಲಿ ಜನವರಿಯಲ್ಲಿ, 2023ರಲ್ಲಿ ಫೆಬ್ರವರಿಯಲ್ಲಿ ಹಲಗೆ ಹಾಕಲಾಗಿತ್ತು. 2024ರ ಜನವರಿಗಿಂತ ಮೊದಲೇ, ಅಂದರೆ ನವೆಂಬರ್‌ನಲ್ಲಿಯೇ ಹಲಗೆ ಹಾಕಲು ನಗರಸಭೆ ನಿರ್ಧರಿಸಿದೆ. 2022ರಲ್ಲಿ ಜೂನ್‌, ಜುಲೈಯಲ್ಲಿ ಕುಮಾರಾಧಾರೆಯ ಡ್ಯಾಂನಲ್ಲಿ ನೀರು ಓವರ್‌ಪುಲ್‌ ಆಗಿ ಹರಿದಿತ್ತು. ಈ ವರ್ಷ ಹಾಗಿಲ್ಲ. ಇದು ಸಮಸ್ಯೆಯ ತೀವ್ರತೆಯನ್ನು ಹೆಚ್ಚಿಸಿದೆ.

ಮಳೆಕೊಯ್ಲುವಿಗೆ ಅಸಡ್ಡೆ: ಮಳೆಕೊಯ್ಲು ಪದ್ಧತಿ ಬಗ್ಗೆ ತಾಲೂಕಿನಲ್ಲಿ ಅಷ್ಟೊಂದು ಆಸಕ್ತಿ ಇಲ್ಲ. ಸರಕಾರದ ಸೂಚನೆಗಳಿದ್ದರೂ ಕಟ್ಟಡಗಳಲ್ಲಿ ಮಳೆ ನೀರಿನ ಕೊಯ್ಲು ಅನುಷ್ಠಾನ ಆಗಿಲ್ಲ. ಖಾಸಗಿ ಕಟ್ಟಡಕ್ಕಿಂತಲೂ ಸ್ವತಃ ಬಹುತೇಕ ಸರಕಾರಿ ಕಟ್ಟಡಗಳಲ್ಲೂ ಇದರ ಅಳವಡಿಕೆ ಆಗಿಲ್ಲ ಅನ್ನುವುದು ನಿರ್ಲಕ್ಷéಕ್ಕೊಂದು ಉದಾಹರಣೆ. ಇದೂ ಸಹ ಮುಂದಿನ ನೀರಿನ ಕೊರತೆಗೆ ಕಾರಣವಾಗಲೂ ಬಹುದು.

ಕೃಷಿ ಪ್ರಧಾನ ತಾಲೂಕು
ಪುತ್ತೂರು ತಾಲೂಕು ಕೃಷಿ ಆಧಾರಿತ ಪ್ರದೇಶ. ಇಲ್ಲಿ ಅಡಿಕೆ ಬೆಳೆ ಗರಿಷ್ಟ ಪ್ರಮಾಣದಲ್ಲಿ ಇದೆ. ಭತ್ತದ ಕೃಷಿಯೂ ಇದೆ. ನದಿ, ಹೊಳೆಗಳಲ್ಲಿನ ಕಿಂಡಿ ಅಣೆಕಟ್ಟುಗಳೇ ನೀರಿನ ಮೂಲ. ಪ್ರಸ್ತುತ ಬಿಸಿಲಿಗೆ ಭತ್ತದ ಗದ್ದೆಗಳು ಒಣಗುತ್ತಿದ್ದು ಈ ಬಾರಿ ಅರ್ಧಕ್ಕರ್ಧ ಫಸಲು ನಷ್ಟವಾಗುವ ಭೀತಿ ಇದೆ. ಈಗ ಮಳೆ ಬಾರದೆ ನವೆಂಬರ್‌, ಡಿಸೆಂಬರ್‌ ಬಳಿಕ ಮಳೆ ಬಂದರೆ ಅಡಿಕೆಯನ್ನು ಒಣಗಿಸಲಾಗದಂಥ ಪರಿಸ್ಥಿತಿಯೂ ಎದುರಾಗಬಹುದು. ಹೀಗಾಗಿ ಒಟ್ಟು ಕೃಷಿ ವ್ಯವಸ್ಥೆಗೆ ತೊಂದರೆ ಉಂಟಾಗಲಿದೆ ಅನ್ನುತ್ತಾರೆ ಕೃಷಿಕರು.

Advertisement

ಒಳ ಹರಿವು ಕ್ಷೀಣ
ನೆಕ್ಕಿಲಾಡಿ ಕುಮಾರಧಾರಾ ಡ್ಯಾಂನಿಂದಲೇ ಪುತ್ತೂರು ನಗರಕ್ಕೆ ನೀರು ಪೂರೈಕೆ ಆಗುತ್ತದೆ. ಪ್ರಸ್ತುತ ನದಿಯ ಒಳ ಹರಿವು ಕ್ಷೀಣಿಸಿರುವ ಕಾರಣ ಹಲಗೆ ಜೋಡಣೆಯ ಅನಿವಾರ್ಯತೆ ಉಂಟಾಗಿದೆ. ಹತ್ತು ದಿನ ಪರಿಸ್ಥಿತಿ ಅವಲೋಕಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು.
– ಮಧು ಎಸ್‌ ಮನೋಹರ್‌ ಪೌರಯುಕ್ತ ನಗರಸಭೆ, ಪುತ್ತೂರು

ಇದನ್ನೂ ಓದಿ: Shimoga; ಆಪರೇಷನ್ ಕಮಲ ಗ್ಯಾರಂಟಿ; ಎಲ್ಲಾ ಶಾಸಕರು ಬಿಜೆಪಿಗೆ ಬರುತ್ತಾರೆ: ಕೆ.ಎಸ್.ಈಶ್ವರಪ್ಪ

Advertisement

Udayavani is now on Telegram. Click here to join our channel and stay updated with the latest news.

Next