Advertisement

ಬೆಳಗಾವಿ ಸಾಹುಕಾರರ ಹಠಕ್ಕೆ ಸರ್ಕಾರ ಪತನ

11:04 PM Jul 23, 2019 | Team Udayavani |

ಬೆಂಗಳೂರು: ರಾಜ್ಯದ ಮೈತ್ರಿ ಸರ್ಕಾರ ಪತನವಾಗಲು ಒಂದು ಸಣ್ಣ ಪಿಎಲ್‌ಡಿ ಬ್ಯಾಂಕ್‌ ಚುನಾವಣೆ ಕಾರಣವಾಯಿತು ಎನ್ನುವುದು ರಾಜ್ಯ ರಾಜಕಾರಣದ ಇತಿಹಾಸದಲ್ಲಿ ದಾಖಲಾಗುವಂತಾಯಿತು. ಸುಮಾರು ಮೂರು ಕೋಟಿ ಬಂಡವಾಳ ಹೊಂದಿರುವ ಬೆಳಗಾವಿಯ ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷರ ಹುದ್ದೆಯ ಚುನಾವಣೆಯಲ್ಲಿ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್‌ ಜಾರಕಿಹೊಳಿ ಅವರ ನಡುವಿನ ಸಂಘರ್ಷದಲ್ಲಿ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಮಧ್ಯಸ್ಥಿಕೆ ವಹಿಸಿ ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ತಲೆ ಹಾಕಿದ್ದು, ಮೈತ್ರಿ ಸರ್ಕಾರ ಅಂತ್ಯ ಕಾಣುವ ಮಟ್ಟಿಗೆ ತಂದು ನಿಲ್ಲಿಸಿತು.

Advertisement

ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ಪರವಾದ ವ್ಯಕ್ತಿಯನ್ನು ಪಿಎಲ್‌ಡಿ ಬ್ಯಾಂಕ್‌ನ ಅಧ್ಯಕ್ಷರನ್ನಾಗಿ ಮಾಡಲು ಸಚಿವ ಡಿ.ಕೆ. ಶಿವಕುಮಾರ್‌ ಬಹಿರಂಗ ಬೆಂಬಲ ನೀಡಿದ್ದು, ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ರಮೇಶ್‌ ಜಾರಕಿಹೊಳಿ ಅಸಮಾಧಾನಕ್ಕೆ ಕಾರಣವಾಯಿತು. ಅದನ್ನು ಬಹಿರಂಗವಾಗಿಯೇ ವಿರೋಧಿಸಿದ ರಮೇಶ್‌ ಜಾರಕಿಹೊಳಿಯವರು, ಡಿ.ಕೆ.ಶಿವಕುಮಾರ್‌ ಹಸ್ತಕ್ಷೇಪವನ್ನು ತಡೆಯುವಂತೆ ಪಕ್ಷದ ನಾಯಕರಿಗೆ ಮನವಿ ಮಾಡಿದರೂ, ಅದನ್ನು ಯಾರೂ ಗಂಭೀರವಾಗಿ ಪರಿಗಣಿಸದೇ ನಿರ್ಲಕ್ಷ್ಯ ಮಾಡಿದರು. ಈ ಬೆಳವಣಿಗೆಯಿಂದ ಬೇಸತ್ತ ಸಚಿವ ರಮೇಶ್‌ ಜಾರಕಿಹೊಳಿ ಸಚಿವನಾಗಿ ಜಿಲ್ಲೆಯಲ್ಲಿ ಯಾವುದೇ ಕೆಲಸಗಳನ್ನೂ ಮಾಡಲಿಲ್ಲ. ಸಂಪುಟ ಸಭೆಗಳಿಂದಲೂ ಅಂತರ ಕಾಯ್ದುಕೊಂಡರು.

ಅವರ ನಡೆಯನ್ನು ಪಕ್ಷದ ನಾಯಕರು ಗಂಭೀರವಾಗಿ ಪರಿಗಣಿಸಿ ಅವರನ್ನು ಸಂಪುಟದಿಂದ ಕಿತ್ತು ಹಾಕಿ ಅವರ ಸಹೋದರ ಸತೀಶ್‌ ಜಾರಕಿ ಹೊಳಿಯನ್ನು ಸಚಿವರನ್ನಾಗಿ ಮಾಡಿದರು. ಇದು ರಮೇಶ್‌ ಜಾರಕಿಹೊಳಿಯವರು ಸರ್ಕಾರದ ವಿರುದ್ಧ ಬಹಿರಂಗ ಬಂಡಾಯ ಸಾರುವಂತೆ ಮಾಡಿತು. ಸಚಿವ ಸ್ಥಾನದ ಕಳೆದುಕೊಂಡ ನಂತರ ರಮೇಶ್‌ ಜಾರಕಿಹೊಳಿ ಬಹಿರಂಗವಾಗಿ ಬಂಡಾಯ ಸಾರಿ ಕಾಂಗ್ರೆಸ್‌ನ ಕೆಲವು ಅತೃಪ್ತ ಶಾಸಕರನ್ನು ಕಟ್ಟಿಕೊಂಡು ಮೈತ್ರಿ ಸರ್ಕಾರದ ವಿರುದ್ಧ ಕಾರ್ಯತಂತ್ರ ಆರಂಭಿಸಿ ದರು. ಆ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರೂ ಪರೋಕ್ಷವಾಗಿ ಅತೃಪ್ತರ ಬಂಡಾಯಕ್ಕೆ ನೀರೆರೆಯುವ ಪ್ರಯತ್ನ ಮಾಡಿದರು ಎನ್ನುವ ಮಾತುಗಳು ಕಾಂಗ್ರೆಸ್‌ ವಲಯದಲ್ಲಿಯೇ ಕೇಳಿ ಬರುವಂತಾಯಿತು.

ವಿಫ‌ಲವಾದ ಮೊದಲ ಯತ್ನ: ರಾಜ್ಯದ ಮೈತ್ರಿ ಸರ್ಕಾರದ ವಿರುದ್ಧ ಕಾಂಗ್ರೆಸ್‌ನ ಆರು ಶಾಸಕರು ಬಹಿರಂಗ ಬಂಡಾಯ ಸಾರಿ ರಮೇಶ್‌ ಜಾರಕಿಹೊಳಿ ನೇತೃತ್ವದಲ್ಲಿ ಮುಂಬೈನ ಹೋಟೆಲ್‌ನಲ್ಲಿ ಸೇರಿಕೊಂಡಾಗ ಬಿಜೆಪಿಯೂ ಪರೋಕ್ಷವಾಗಿ ಅವರ ಬಂಡಾಯಕ್ಕೆ ಸಹಕಾರ ನೀಡುತ್ತ ಬಂತು. ಅಲ್ಲದೇ ಮೈತ್ರಿ ಸರ್ಕಾರದ ಮೇಲೆ ಅಸಮಾಧಾನ ಇರುವ ಶಾಸಕರನ್ನು ಸಂಪರ್ಕಿಸಿ ಬಿಜೆಪಿಗೆ ಸೆಳೆಯುವ ಪ್ರಯತ್ನವನ್ನೂ ಮಾಡಿತು. ಗುರಮಿಠ್ಕಲ್‌ ಶಾಸಕ ನಾಗನಗೌಡ ಕಂದಕೂರ್‌ ಅವರನ್ನು ಪಕ್ಷಕ್ಕೆ ಸೆಳೆಯಲು ಹಣದ ಆಮಿಷ ಒಡ್ಡಿರುವ ಟೇಪ್‌ ಪ್ರಕರಣ ಹಾಗೂ ಕೋಲಾರ ಶಾಸಕ ಶ್ರೀನಿವಾಸಗೌಡ ತಮಗೂ ಐದು ಕೋಟಿ ಆಫ‌ರ್‌ ನೀಡಿದ್ದರು ಎಂದು ಬಹಿರಂಗವಾಗಿಯೇ ಆರೋಪ ಮಾಡಿದ್ದು, ಬಿಜೆಪಿ, ಮೈತ್ರಿ ಪಕ್ಷಗಳ ಅತೃಪ್ತ ಶಾಸಕರನ್ನು ಸೆಳೆಯಲು ಪ್ರಯತ್ನ ನಡೆಸಿತ್ತು ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂಬ ಮಾತುಗಳು ಕೇಳಿ ಬಂದವು.

ಸುಮಾರು 18 ಅತೃಪ್ತ ಶಾಸಕರನ್ನು ಮುಂಬೈಗೆ ಕಳುಹಿಸಿ, ಮೈತ್ರಿ ಸರ್ಕಾರವನ್ನು ಬಜೆಟ್‌ ಅಧಿವೇಶನದಲ್ಲಿಯೇ ಪತನಗೊಳಿಸುವ ಕಾರ್ಯತಂತ್ರವನ್ನಿ ಬಿಜೆಪಿ ಮೊದಲಿಗೆ ರೂಪಿಸಿತ್ತು. ಆದರೆ, ಬಿಜೆಪಿಯ ಪ್ರಯತ್ನ ಸಫ‌ಲವಾಗಲಿಲ್ಲ. ನಿರೀಕ್ಷಿತ ಮಟ್ಟದಲ್ಲಿ ಶಾಸಕರು ಅತೃಪ್ತರ ಗುಂಪು ಸೇರದ ಹಿನ್ನೆಲೆಯಲ್ಲಿ ಅವರ ಪ್ರಯತ್ನ ವಿಫ‌ಲವಾಗಿ ಮೈತ್ರಿ ಸರ್ಕಾರ ಉಳಿದುಕೊಳ್ಳುವಂತಾಯಿತು.  ಲೋಕಸಭೆ ಚುನಾವಣೆಯಲ್ಲಿನ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ಪಕ್ಷದಲ್ಲಿ ಬಂಡಾಯ ಹೆಚ್ಚಾಗುತ್ತದೆ ಎನ್ನುವ ಕಾರಣಕ್ಕೆ ಕಾಂಗ್ರೆಸ್‌ ನಾಯಕರು ಸಂಪುಟ ಪುನಾರಚನೆ ಮಾಡುವ ಕಸರತ್ತು ನಡೆಸಿ, ಕಡೆಗೆ ಇಬ್ಬರು ಪಕ್ಷೇತರರನ್ನು ಮಾತ್ರ ಸಚಿವರನ್ನಾಗಿ ಮಾಡಿದ್ದು ಕಾಂಗ್ರೆಸ್‌ನಲ್ಲಿ ಅತೃಪ್ತರು ಮತ್ತಷ್ಟು ಅಸಮಾಧಾನಗೊಳ್ಳಲು ಕಾರಣವಾಯಿತು.

Advertisement

ಅದು ರಮೇಶ್‌ ಜಾರಕಿಹೊಳಿ ತೆರೆ ಮರೆಯಲ್ಲಿ ನಡೆಸುತ್ತಿದ್ದ ಬಂಡಾಯ ಚಟುವಟಿಕೆಗಳಿಗೆ ಮತ್ತಷ್ಟು ಪ್ರೇರಣೆ ನೀಡಿತು. ಜಾರಕಿಹೊಳಿಯ ಬಂಡಾಯಕ್ಕೆ ಬಿಜೆಪಿಯೂ ಪರೋಕ್ಷವಾಗಿ ಬೆಂಬಲ ನೀಡಿತು. ಅದರ ಪರಿಣಾಮ ಜೆಡಿಎಸ್‌ನ ಮೂವರು ಶಾಸಕರು ಸೇರಿದಂತೆ ಮೈತ್ರಿ ಪಕ್ಷಗಳ ಹದಿನೈದು ಶಾಸಕರು ಸಾಮೂಹಿಕ ರಾಜೀನಾಮೆ ಸಲ್ಲಿಸಲು ಕಾರಣವಾಯಿತು. ಮೌನವಾಗಿಯೇ ಪಟ್ಟು ಹಿಡಿದ ರಮೇಶ್‌ ಜಾರಕಿಹೊಳಿಗೆ ಪರೋಕ್ಷವಾಗಿ ಬಿಜೆಪಿ ನಾಯಕರು ಬೆಂಬಲ ನೀಡಿದರು. ಮೈತ್ರಿ ಪಕ್ಷಗಳ ಅತೃಪ್ತ ಶಾಸಕರ ಸಂಖ್ಯೆ ಬಲಗೊಳಿಸಿ ಕಡೆಗೂ ಮೈತ್ರಿ ಅಂತ್ಯಗೊಳ್ಳಲು ಜಾರಕಿಹೊಳಿ ಮೂಲಕವೇ ಬಿಜೆಪಿ ಕಾರ್ಯ ಸಾಧಿಸುವಂತಾಯಿತು. ಬೆಳಗಾವಿಯಿಂದಲೇ ಸರ್ಕಾರ ಪತನವಾಗುತ್ತದೆ ಎಂಬ ಸಂಸದ ಪ್ರಭಾಕರ ಕೋರೆ ಅವರ ಮಾತು ನಿಜವಾಗುವಂತಾಯಿತು.

ಛಲಬಿಡದ ಜಾರಕಿಹೊಳಿ ಸಾಹುಕಾರ: ಮೈತ್ರಿ ಸರ್ಕಾರದಲ್ಲಿ ಮಾತನಾಡದೇ ಮೌನವಾಗಿಯೇ ತಮ್ಮ ಕಾರ್ಯವನ್ನು ಹಠ ಹಿಡಿದು ಸಾಧಿಸಿದ್ದು ಗೋಕಾಕ್‌ ಶಾಸಕ ರಮೇಶ್‌ ಜಾರಕಿಹೊಳಿ. ರಾಜ್ಯ ರಾಜಕಾರಣದಲ್ಲಿಯೇ ಬೆಳಗಾವಿ ಸಾಹುಕಾರ ಎಂದೇ ಪ್ರಚಲಿತರಾಗಿರುವ ರಮೇಶ್‌ ಜಾರಕಿಹೊಳಿ, ಮೈತ್ರಿ ಸರ್ಕಾರದ ವಿರುದ್ದ ತಮ್ಮ ಅಸಮಾಧಾನವನ್ನು ಯಾವುದೇ ಕಾರಣಕ್ಕೂ ಸಡಿಲಗೊಳಿಸದೆ ಪಟ್ಟು ಹಿಡಿದು ಹಠ ಸಾಧಿಸಿದ್ದು ಮಾತ್ರ ರಾಜ್ಯ ರಾಜಕಾರಣದಲ್ಲಿ ದಾಖಲೆಯಾಗುವಂತಾಯಿತು. ಲೋಕಸಭೆ ಚುನಾವಣೆಗೂ ಮುಂಚೆಯೇ ಮೈತ್ರಿ ಸರ್ಕಾರವನ್ನು ಪತನಗೊಳಿಸುವ ಪ್ರಯತ್ನದಲ್ಲಿ ವಿಫ‌ಲರಾದರೂ, ಚುನಾವಣೆಯಲ್ಲಿ ಕಾಂಗ್ರೆಸ್‌ ವಿರುದ್ದವೇ ಕೆಲಸ ಮಾಡಿ ತಾವು ಮೈತ್ರಿ ಸರ್ಕಾರದ ವಿರುದ್ಧ ಇರುವುದನ್ನು ಸಾಬೀತು ಪಡಿಸಿದರು. ಅಲ್ಲದೆ ಚುನಾವಣೆ ಬಳಿಕ ಮತ್ತೆ ತಮ್ಮ ಬಂಡಾಯ ಶಾಸಕರ ಪಡೆಯನ್ನು ಗಟ್ಟಿಗೊಳಿಸುವ ಪ್ರಯತ್ನ ಮುಂದುವರಿಸಿದರು. ಎಲ್ಲರೂ ಸಾಮೂಹಿಕವಾಗಿಯೇ ರಾಜೀನಾಮೆ ಸಲ್ಲಿಸುತ್ತೇವೆ ಎಂದು ಬಹಿರಂಗವಾಗಿಯೇ ಘೋಷಣೆ ಮಾಡಿದರು. ಅದರಂತೆ ತಮ್ಮ ಕಾರ್ಯತಂತ್ರವನ್ನು ನಿರಂತರ ಮುಂದುವರಿಸಿದರು.

ಮುಂಬೈ ಪ್ರವಾಸ: ಐದಾರು ಜನ ಅತೃಪ್ತರ ಪಡೆ ಕಟ್ಟಿಕೊಂಡು ರಮೇಶ್‌ ಜಾರಕಿಹೊಳಿ ಮುಂಬೈಗೆ ತೆರಳಿದ ನಂತರ ರಾಜ್ಯ ಮೈತ್ರಿ ಸರ್ಕಾರದಲ್ಲಿ ಎರಡೂ ಪಕ್ಷಗಳ ನಾಯಕರಲ್ಲಿ ಮತ್ತಷ್ಟು ಅನುಮಾನಗಳು ಹೆಚ್ಚಾದವು. ಕುಮಾರಸ್ವಾಮಿ ಹಾಗೂ ದೇವೇಗೌಡರ ಅನುಮಾನ ನೇರವಾಗಿ ಸಿದ್ದರಾಮಯ್ಯ ಅವರ ಮೇಲೆಯೇ ಮೂಡುವಂತಾಯಿತು. ರಮೇಶ್‌ ಜಾರಕಿಹೊಳಿ ಸಿದ್ದರಾಮಯ್ಯ ಅವರ ಆಪ್ತರಾಗಿದ್ದರೂ ಅವರನ್ನು ಕರೆದು ಸಮಾಧಾನ ಪಡಿಸುವ ಪ್ರಯತ್ನ ಮಾಡದೇ ಮೌನ ವಹಿಸಿದ್ದು, ಜೆಡಿಎಸ್‌ ನಾಯಕರಿಗೆ ಸಿದ್ದರಾಮಯ್ಯ ಮೇಲೆ ಮತ್ತಷ್ಟು ಅನುಮಾನ ಬಲಗೊಳ್ಳಲು ಕಾರಣವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next